ಸಿಎಂ ಸಿದ್ದರಾಮಯ್ಯ ನಾಯಕತ್ವದ ಸರಕಾರಕ್ಕೆ 2.5 ವರ್ಷ ತುಂಬುತ್ತಿದ್ದಂತೆ ಶುರುವಾದ ತಂತ್ರ ಮತ್ತು ಪ್ರತಿತಂತ್ರದ ಆಟದಿಂದಾಗಿ ಉದ್ಭವವಾಗಿರುವ ಗೊಂದಲ.. ಈಗ ತೆರೆಮರೆಯ ಹೋರಾಟವಾಗಿ ಉಳಿದಿಲ್ಲ. ಹೈಕಮಾಂಡ್ ಹೌದೋ.. ಅಲ್ಲವೋ.. ಅದು ಬೇರೆಯ ಪ್ರಶ್ನೆ. ಅಧಿಕೃತವಾಗಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಹುದ್ದೆಯಲ್ಲಿರೋದ್ರಿಂದ ಮಾಧ್ಯಮಗಳು ಖರ್ಗೆ ಅವರನ್ನೂ ಸುತ್ತುವರೆದಿವೆ. ಖರ್ಗೆಯವರಿಗೆ ಈ ಹೋರಾಟದ ಬಿಸಿ ತಟ್ಟಿದ್ದು ಮಾಧ್ಯಮಗಳಿಂದ. ಅದೂವರೆಗೆ ಖರ್ಗೆ ಅವರು ಈ ಹಿಂದಿನ ಕಥೆಗಳಂತೆಯೇ ಈ ಭಾರಿಯೂ ನಡೆಯುತ್ತದೆ.. ಎಂದಷ್ಟೇ ಭಾವಿಸಿದ್ದರು. ಅದು ಹಾಗಿಲ್ಲ ಎಂಬುದು ಅರ್ಥವಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೆಹಲಿಯಲ್ಲಿಯೇ ಇದರ ಬಿಸಿ ತಾಗಿತ್ತು. ದೆಹಲಿಗೆ ಬಂದಿದ್ದ ಚೆಲುವರಾಯ ಸ್ವಾಮಿ ಮೊದಲಾದವರಿಗೆ ಬೈದು ಬುದ್ದಿ ಹೇಳಿದ್ದರು. ನೀವ್ಯಾಕೆ ಬರೋಕೆ ಹೋದ್ರಿ.. ಸಿಎಂ ಕುರ್ಚಿ ವಿಷಯ ಮಾತನಾಡೋಕೆ ಅವರೇ ಬಂದಿಲ್ಲ. ನೀವ್ಯಾಕೆ.. ಅವರವರು ಕ್ಲಿಯರ್ ಮಾಡಿಕೊಳ್ಳಬೇಕು. ನೀವು ಹೀಗೆಲ್ಲ ಬರಬಾರದು. ರಾಜ್ಯದಲ್ಲಿ ಕೆಟ್ಟ ಮೆಸೇಜ್ ರವಾನೆ ಆಗುತ್ತದೆ. ರಾಷ್ಟ್ರೀಯ ಮಟ್ಟದಲ್ಲೂ ಬ್ಯಾಡ್ ಮೆಸೇಜ್ ಹೋಗುತ್ತದೆ. ರಾಷ್ಟ್ರೀಯ ಅಧ್ಯಕ್ಷರ ರಾಜ್ಯದಲ್ಲೇ ಹೀಗೆಲ್ಲ ನಡೆಯುತ್ತದೆ ಎಂದರೆ ನನ್ನ ಗೌರವವೂ ಹಾಳು. ವಾಪಸ್ ಹೋಗಿ.. ನಿರ್ಧಾರ ಮಾಡುವುದು ನಾನಲ್ಲ. ಹೈಕಮಾಂಡ್ ಎಂದಿದ್ದಾರೆ ಖರ್ಗೆ. ಸ್ವಲ್ಪ ಸೀರಿಯಸ್ ಆಗಿಯೇ ಬುದ್ದಿ ಹೇಳಿದ್ದಾರೆ.
ಇತ್ತ ಬೆಂಗಳೂರಿಗೆ ಬಂದ ಖರ್ಗೆ ಅವರಿಗೆ ಇದರ ಬಿಸಿ ತಟ್ಟಿರೋದು ಮನೆಯ ಬಳಿ ಬಂದಾಗ. ಏಕೆಂದರೆ.. ಖರ್ಗೆ ಅವರು ಬಂದಾಗ ಮೂರೋ.. ನಾಲ್ಕೋ ಮೀಡಿಯಾ ಲೋಗೋಗಳು ಇರ್ತಾ ಇದ್ವು. ಆದರೆ ದೆಹಲಿಯಿಂದ ಖರ್ಗೆ ಅವರ ಎದುರು 40ಕ್ಕೂ ಹೆಚ್ಚು ಮೈಕ್‌ಗಳನ್ನು ನೋಡಿ ಶಾಕ್ ಆದರಂತೆ ಖರ್ಗೆ. ಓಹೋ.. ಇದು ಸಿಕ್ಕಾಪಟ್ಟೆ ಸೀರಿಯಸ್ ಆಗಿದೆ ಎಂದು ಅರ್ಥ ಮಾಡಿಕೊಂಡರಂತೆ. ಅಲ್ಲಿಗೆ ಖರ್ಗೆ ಯಥಾವತ್ ವರದಿಯನ್ನು ಹೈಕಮಾಂಡ್‌ಗೆ ಮುಟ್ಟಿಸಿದ್ದಾರೆ.
ತೆರೆಮರೆಯಲ್ಲಿ ಇಷ್ಟು ದಿನ ನಡೆದಿದ್ದ ಗದ್ದುಗೆ ಗುದ್ದಾಟ ತೀವ್ರಗೊಂಡಿದೆ. ಸಿಎಂ ಆಪ್ತ ಬಳಗ ಸಿದ್ದರಾಮಯ್ಯನವರ ಮುಂದುವರಿಕೆಗೆ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಡಿಸಿಎಂ ಪರ ತಂಡ ಕೂಡ ಇದೇ ಪ್ರಯತ್ನವನ್ನು ಚುರುಕುಗೊಳಿಸಿದೆ. ಎರಡೂ ತಂಡಗಳು ಸಹಿ ಸಂಗ್ರಹ ಮಾಡಿ.. ತಮಗೆಷ್ಟು ಶಾಸಕರ ಬೆಂಬಲ ಇದೆ ಎಂದು ಒಂದು ಮನವಿ ಪತ್ರ ಸಿದ್ಧ ಮಾಡಿ, ಖರ್ಗೆಯವರಿಗೆ ಕೊಡಲಿದ್ದಾರೆ. ಅದಕ್ಕಾಗಿ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಭೇಟಿಗೆ ಸಮಯಾವಕಾಶ ಪಡೆಯುವ ಜವಾಬ್ದಾರಿಯನ್ನು ಹಿರಿಯ ಸಚಿವರೊಬ್ಬರಿಗೆ ನೀಡಲಾಗಿದೆ.
ಸಿಎಂ ಆಪ್ತ ಬಣದ ಈ ತಂತ್ರಗಾರಿಕೆಗೆ ಪ್ರತಿಯಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಬಳಗವೂ ಸದ್ದಿಲ್ಲದೆ ಪ್ರತಿತಂತ್ರ ಹೂಡಿದಂತಿದೆ. ಈ ಬೆಳವಣಿಗೆ ಮಧ್ಯೆ, ಎಐಸಿಸಿ ನಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ಸಿಎಂ ಸಿದ್ದರಾಮಯ್ಯ ಅವರು ಗೊಂದಲಕ್ಕೆ ಇತಿಶ್ರೀ ಹಾಡುವ ತೀರ್ಮಾನ ಪ್ರಕಟಿಸುವಂತೆ ಕೋರಿಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.



