ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗಿ ಕಾಡಿದ್ದವರು ಹಾಗೂ ಸರ್ಕಾರದ ಪತನಕ್ಕೆ ಕಾರಣವಾಗಿದ್ದವರು ರಮೇಶ್ ಜಾರಕಿಹೊಳಿ. ಇದೇ ಸತೀಶ್ ಜಾರಕಿಹೊಳಿಯವರಿಗೆ ಅಣ್ಣ. ಆಗ ಕಾಂಗ್ರೆಸ್ಸಿನಲ್ಲಿದ್ದ ರಮೇಶ್ ಜಾರಕಿಹೊಳಿ ಗಟ್ಟಿಯಾಗಿ ನಿಲ್ಲದೇ ಹೋಗಿದ್ದರೆ ಕುಮಾರಸ್ವಾಮಿ ಸರ್ಕಾರದ ಪತನ ಸಾಧ್ಯವಿರಲಿಲ್ಲ ಎನ್ನುವುದು ಸತ್ಯ. ಆಗ ರಮೇಶ್ ಜಾರಕಿಹೊಳಿ ಕೆಂಗಣ್ಣಿಗೆ ಗುರಿಯಾಗಿದ್ದವರು ಲಕ್ಷ್ಮೀ ಹೆಬ್ಬಾಳ್ಕರ್. ಲಕ್ಷ್ಮೀ ಹೆಬ್ಬಾಳ್ಕರ್ ಪರ ಗಟ್ಟಿಯಾಗಿ ನಿಂತಿದ್ದವರು ಡಿಕೆ ಶಿವಕುಮಾರ್. ಇದೀಗ ಕಾಂಗ್ರೆಸ್ ಏಕಾಂಗಿಯಾಗಿಯೇ ಅಧಿಕಾರಕ್ಕೆ ಬಂದಿದೆ. ರಮೇಶ್ ಜಾರಕಿಹೊಳಿ ಈಗ ಬಿಜೆಪಿಯಲ್ಲಿದ್ದಾರೆ. ಅಣ್ಣ ಬಿಜೆಪಿಗೆ ಹೋಗಿದ್ದರು, ತಮ್ಮ ಸತೀಶ್ ಜಾರಕಿಹೊಳಿ ಕಾಂಗ್ರೆಸ್ಸಿನಲ್ಲೇ ಇದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿಯವರ ಸಮಸ್ಯೆಯೂ ಮೂಲತಃ ಲಕ್ಷ್ಮೀ ಹೆಬ್ಬಾಳ್ಕರ್ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು. ಅವತ್ತು ಅಣ್ಣ.. ಇವತ್ತು ತಮ್ಮ.
ಡಿಕೆಶಿಗೂ ತಟ್ಟಿದ ಬಂಡಾಯದ ಬಿಸಿ :
ಡಿಕೆ ಶಿವಕುಮಾರ್ ಬೆಳಗಾವಿಗೆ ಹೋಗಿದ್ದರೂ, ಅವರನ್ನು ಸ್ವಾಗತಿಸುವುದಕ್ಕೆ ಕಾಂಗ್ರೆಸ್ಸಿನ ಒಬ್ಬ ಶಾಸಕರೂ ಬರಲಿಲ್ಲ. ಬೆಳಗಾವಿಯಲ್ಲಿ ಕಾಂಗ್ರೆಸ್ ಒಟ್ಟು 11 ಸ್ಥಾನಗಳನ್ನು ಗೆದ್ದಿದೆ. ಈ ಮೂಲಕ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ತಮ್ಮ ಇರಾದೆ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರೇ ಈಗ ತಮ್ಮ ಶಾಸಕರಿಗೆ ಮಾಹಿತಿ ಇರಲಿಲ್ಲ ಎಂದು ಸಮುಜಾಯಿಷಿ ಕೊಡುವಂತಾಗಿದೆ. ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಕೆಗೆ ಇದು ಉಗುಳಲಾಗದ ನುಂಗಲಾಗದ ಅವಮಾನ. ಸ್ವಾಗತಿಸಿದ್ದು ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಪ್ರಕಾಶ್ ಹುಕ್ಕೇರಿ ಮತ್ತು ಕಾಂಗ್ರೆಸ್ಸಿನ ಕೆಲವೇ ಕಾರ್ಯಕರ್ತರು ಮಾತ್ರ.
ನಿನ್ನೆ, ಮೊನ್ನೆ ಸತೀಶ್ ಅವರು ಮತ್ತು ನಾನು ಜೊತೆಯಲ್ಲಿಯೇ ಕುಳಿತು ಮಾತನಾಡಿದ್ದೇವೆ. ನಾನು ಬಂದಿರುವುದು ಖಾಸಗಿ ಕಾರ್ಯಕ್ರಮಕ್ಕೆ. ಲಕ್ಷ್ಮೀ ಹೆಬ್ಬಾಳಕರ್ ಅವರು ನಾಮಕರಣ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿದ್ದಾರೆ. ಕೌಜಲಗಿ ಅವರಿಗೆ ಆರೋಗ್ಯ ಸರಿಯಿಲ್ಲ. ದಿಢೀರ್ ಎಂದು ನಿನ್ನೆ ರಾತ್ರಿ ಈ ಕಾರ್ಯಕ್ರಮ ನಿಗದಿಯಾದ ಕಾರಣಕ್ಕೆ ಬಂದಿದ್ದೇನೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಕೆಲಸಗಳು ಇರುತ್ತವೆ . ಎಲ್ಲ ಸಚಿವ, ಶಾಸಕರು ಮೈಸೂರು, ಬೆಂಗಳೂರುನಲ್ಲಿದ್ದಾರೆ ಎಂದು ಸಮರ್ಥನೆ ಕೊಟ್ಟರು.
ಲಕ್ಷ್ಮೀ ಹೆಬ್ಬಾಳ್ಕರ್ ಮೇಲೇಕೆ ಜಾರಕಿಹೊಳಿ ಸಿಟ್ಟು..?
ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಉಸ್ತುವಾರಿ ಸಚಿವರಾಗಿದ್ದರೂ, ಅಧಿಕಾರಿಗಳ ವರ್ಗಾವರ್ಗಿ ವಿಚಾರದಲ್ಲಿ ಜಾರಕಿಹೊಳಿ ಮಾತು ನಡೆಯುತ್ತಿಲ್ಲ. ನಡೆಯಬೇಕೆಂದರೆ ಪ್ರತಿಯೊಂದಕ್ಕೂ ಪಟ್ಟು ಹಿಡಿದೇ ಮಾಡಿಸಿಕೊಳ್ಳಬೇಕು. ಇದು ಕಿರಿ ಕಿರಿಯಾಗುತ್ತಿದೆ ಎನ್ನುವುದು ಜಾರಕಿಹೊಳಿ ಪರ ಇರುವ ಶಾಸಕರ ಕಡೆಯ ಮಾತು.
ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವ ಹೆಚ್ಚತ್ತಿದ್ದು, ಹೀಗೇ ಮುಂದುವರಿದರೆ ಹಿಡಿತ ಕೈತಪ್ಪಿ ಹೋಗಬಹುದು, ಭವಿಷ್ಯ ಕಷ್ಟ ಎನ್ನುವುದು ಕೆಲವರ ಆತಂಕ. ಅಲ್ಲದೆ ಲೋಕಸಭೆಯಲ್ಲೂ ಲಕ್ಷ್ಮೀ ಹೆಬ್ಬಾಳ್ಕರ್ ಪರ ಇದ್ದವರಿಗೆ ಟಿಕೆಟ್ ಕೊಡಿಸುವ ತಂತ್ರಗಾರಿಕೆ ನಡೆಯುತ್ತಿದೆ.
ಸರ್ಕಾರದ ಕಾರ್ಯಕ್ರಮಗಳಲ್ಲಿಯೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿಗುತ್ತಿರುವ ಮನ್ನಣೆ ಪ್ರಚಾರ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಇದೆಲ್ಲದರ ನಡುವೆ ಸತೀಶ್ ಜಾರಕಿಹೊಳಿಯವರ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷವೂ ಇದೆ ಎನ್ನುವುದು ಒಂದು ಕಥೆ. ಇನ್ನೊಂದು ಕಥೆಯೇ ಇಂಟ್ರೆಸ್ಟಿಂಗ್. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಇರುವುದು ಬಿಜೆಪಿಯಲ್ಲಿ. ಇನ್ನೊಬ್ಬ ಶಾಸಕ ಲಖನ್ ಜಾರಕಿಹೊಳಿ ಪಕ್ಷೇತರರಾಗಿಯೇ ಇದ್ದಾರೆ. ಸತೀಶ್ ಜಾರಕಿಹೊಳಿ ಕಾಂಗ್ರೆಸ್ಸಿನಲ್ಲೇ ಇದ್ದಾರಾದರೂ, ಬಹಿರಂಗವಾಗಿ ರಮೇಶ್ ಅವರನ್ನ ಟೀಕೆ ಮಾಡ್ತಾರಾದರೂ.. ಒಳಗೊಳಗೇ ಅಣ್ಣ ತಮ್ಮಂದಿರೆಲ್ಲ ಒಂದೇ. ಅವರನ್ನು ಇವರು ಬಿಟ್ಟು ಕೊಡಲ್ಲ, ಇವರನ್ನು ಅವರು ಬಿಟ್ಟುಕೊಡಲ್ಲ ಎನ್ನುವುದು ಮತ್ತೊಂದು ಮಾತು. ಈ ಮಾತಿನಲ್ಲಿ ಸತ್ಯವಿದ್ದಂತೆ ಕಾಣುತ್ತಿದೆ.



