ಸಿಎಂ ಸಿದ್ದರಾಮಯ್ಯ ಪರ ಅಹಿಂದ ಒಕ್ಕೂಟ, ಕೆಲವು ಅಹಿಂದ ಶಾಸಕರು ಬಹಿರಂಗವಾಗಿ ನಿಂತಿದ್ದರೆ, ಡಿಕೆ ಶಿವಕುಮಾರ್ ಪರ ಒಕ್ಕಲಿಗರ ಸಂಘ, ಸ್ವಾಮೀಜಿ ನಿಂತಿದ್ದಾರೆ. ಒಕ್ಕಲಿಗರ ಮಹಾಸಂಸ್ಥಾನ ಆದಿಚುಂಚನಗಿರಿ ಪೀಠದ ನಿರ್ಮಲಾನಂದ ಸ್ವಾಮೀಜಿ ಬ್ಯಾಟಿಂಗ್ ಮಾಡ್ತಾ ಇದ್ರೆ, ಸಿದ್ದರಾಮಯ್ಯ ಪರ ಕುರುಬ ಸಮುದಾಯದ ಕನಕಗುರು ಕಾಗಿನೆಲೆ ಪೀಠದ ಸಿದ್ದರಾಮಾನಂದ ಪುರಿ ನಿಂತಿದ್ದಾರೆ. ಒಟ್ಟಿನಲ್ಲಿ ಈಗ ಸ್ವಾಮೀಜಿಗಳ ನಡುವೆ ವಾರ್ ಶುರುವಾದಂತಿದೆ.
ಡಿಕೆ ಶಿವಕುಮಾರ್ ಅವರು ಉಳಿದ ಅವಧಿಗೆ ಮುಖ್ಯಮಂತ್ರಿಯಾಗಬೇಕು. ಪಕ್ಷಕ್ಕಾಗಿ ಶಿಸ್ತಿನ ಸಿಪಾಯಿಯಾಗಿ ದುಡಿದ ಶಿವಕುಮಾರ್ ಅವರಿಗೆ ಒಂದು ಅವಕಾಶ ನೀಡಬೇಕು. ಇದು ಎಲ್ಲರ ಒಕ್ಕೊರಲ ಕೂಗಾಗಿದ್ದು ಉಳಿದ ಎರಡೂವರೆ ವರ್ಷದ ಅವಧಿಯನ್ನು ಡಿಕೆ ಶಿವಕುಮಾರ್ ಅವರಿಗೆ ಕೊಡಬೇಕು.. ಇದು ನಿರ್ಮಲಾನಂದ ಶ್ರೀಗಳ ಮಾತು.
ಕೆಂಗಲ್ ಹನುಮಂತಯ್ಯ, ಕೆಸಿ ರೆಡ್ಡಿ, ದೇವೇಗೌಡ, ಎಸ್.ಎಂ.ಕೃಷ್ಣ, ಹೆಚ್‌ಡಿಕೆ, ಡಿವಿ ಸದಾನಂದ ಗೌಡ.. ಅವರನ್ನೆಲ್ಲ ನೆನಪಿಸಿಕೊಂಡಿರುವ ನಿರ್ಮಲಾನಂದ ಶ್ರೀಗಳು ಮ್ಮ ಸಮುದಾಯದಿಂದ ರಾಜ್ಯ ಕಟ್ಟಿ ಬೆಳೆಸಲು ಹೋಗಿರುವ ನಾಯಕರಂತೆ ಇವರು ಯಾವುದೇ ಸಂದರ್ಭದಲ್ಲಿ ಪಕ್ಷ ನಿಷ್ಟೆ ಬಿಟ್ಟು ಕೊಟ್ಟವರಲ್ಲ. ಪಕ್ಷದ ಉಳಿವು ಏಳಿಗೆಗಾಗಿ ಎಷ್ಟೋ ನೋವನ್ನು ಏಕಾಂಗಿಯಾಗಿ ನಿಂತು ಸ್ವೀಕರಿಸಿ ಹೋರಾಟ ಮಾಡಿದ್ದಾರೆ. ಅಂತಹ ಸೇವೆ ಮಾಡಿರುವ ಶಿವಕುಮಾರ್ ಸಿಎಂ ಆಗುತ್ತಾರೆ ಎನ್ನುವ ಭಾವನೆ ಎಲ್ಲರಿಗು ಇದೆ, ನಮಗೂ ಇದೆ. ಆ ಭಾವನೆಗೆ ಪೂರಕವಾಗಿ ಅವರ ಹೈಕಮಾಂಡ್ ಕೆಲಸ ಮಾಡಲಿದೆ ಎನ್ನುವ ಭರವಸೆ ಇದೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಶ್ರೀ ಮಠದ ಸದ್ಭಕ್ತರು. ಅವರಿಗೆ ತಮ್ಮ ಇಚ್ಚೆ ಆಗುತ್ತೆ ಎನ್ನುವ ಭರವಸೆ ಇದೆ. ಆಗದೇ ಹೋದ ಸಂದರ್ಭದಲ್ಲಿ ಸಮಸ್ಯೆ ಸೃಷ್ಟಿ ಆದರೆ ನಮ್ಮನ್ನು ಭೇಟಿ ಆಗಬಹುದೇದನೋ? ಎರಡು ವರ್ಷ ಕಾದು ನೋಡಿದ್ದೇವೆ . ಆದರೆ ಈಗ ಆಗುತ್ತಿರುವ ಬೆಳವಣಿಗೆ ನೋಡಿದರೆ ಏನೋ ವ್ಯತ್ಯಾಸ ಆದಂತೆ ಕಾಣುತ್ತಿದೆ ಎನ್ನುವ ಮೂಲಕ ಒಂದು ಪರೋಕ್ಷ ಸಂದೇಶವನ್ನಂತೂ ನೀಡಿದ್ದಾರೆ.
ನಿರ್ಮಲಾನಂದ ಶ್ರೀಗಳು ಹೀಗೆ ಹೇಳುತ್ತಿದ್ದಂತೆ ಹಾವೇರಿ ಜಿಲ್ಲೆಯ ಕಾಗಿನೆಲೆ ಶಾಖಾ ಮಠದ ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ಗುಡುಗಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳಲ್ಲಿ ಸ್ವಾಮೀಜಿಗಳು ಮಧ್ಯಪ್ರವೇಶಿಸಿ ಗೊಂದಲ ಸೃಷ್ಟಿಸುವುದು ಯಾವುದೇ ಮಠಾಧೀಶರಿಗೂ ಸೂಕ್ತವಲ್ಲ. ಪಕ್ಷದ ವಿಚಾರಗಳಲ್ಲಿ ಮಧ್ಯಪ್ರವೇಶಿಸಿ ಗೊಂದಲ ಮಾಡೋದು ಯಾವ ಮಠಾಧೀಶರಿಗೂ ಸೂಕ್ತವಲ್ಲ ಎಂದು ಗುಡುಗಿದ್ದಾರೆ.
ನಾವು ಅವರನ್ನು ಕುರುಬ ಸಮುದಾಯದ ವ್ಯಕ್ತಿಯಾಗಿ ನೋಡುತ್ತಿಲ್ಲ, ಬದಲಿಗೆ ಅವರು ರಾಜ್ಯದ ಪ್ರತಿನಿಧಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದ್ದಾರೆ. ಅಲ್ಲದೆ, ಅವರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ.. ನಾವು ಸಿದ್ದರಾಮಯ್ಯ ಪರವಾಗಿ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಸದಾ ಇರುತ್ತೇವೆ. ಸಾಮಾಜಿಕ ನ್ಯಾಯ ಕಾಪಾಡುವ ರಾಜಕಾರಣಿ ಬಂದರೆ ಅವರ ಜೊತೆಗೆ ನಮ್ಮ ಬೆಂಬಲವಿರುತ್ತದೆ ಎಂದೂ ಹೇಳಿದ್ದಾರೆ.
ಅಂದಹಾಗೆ ಕುರುಬ ಸಮುದಾಯದ ದೊಡ್ಡ ಸ್ವಾಮೀಜಿ ಎಂದು ಗೌರವಿಸುವುದು ನಿರಂಜನಾನಂದಪುರಿ ಶ್ರೀಗಳನ್ನು. ಕಾಗಿನೆಲೆ ಪೀಠದ ಮಹಾಗುರುಗಳೇ. ಅವರು ಮಾತನಾಡಿಲ್ಲ. ಆದರೆ.. ಅದೇ ಮಠಕ್ಕೆ ಸೇರಿದ ಸಿದ್ದರಾಮಾನಂದ ಶ್ರೀಗಳು ಮಾತನಾಡಿದ್ದಾರೆ.



