ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಮುಡಾದಿಂದ ತಮಗೆ ಬಂದಿದ್ದ 14 ಸೈಟುಗಳನ್ನೂ ವಾಪಸ್ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದು, ಮುಡಾದವರನ್ನು ತಕ್ಷಣ ಅದನ್ನು ಸೈಟುಗಳನ್ನು ರದ್ದು ಮಾಡಿದ್ದರ ಹಿಂದೆ ಬೇರೆಯದೇ ಕಥೆ ಕೇಳಿಬರುತ್ತಿದೆ. ಸೈಟು ಹಿಂಪಡೆಯುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಆ 14 ನಿವೇಶನಗಳ ಖಾತೆಯನ್ನು ಮುಡಾ ರದ್ದುಗೊಳಿಸಿದೆ. ಆದರೆ ಈ ಸೈಟುಗಳನ್ನು ರದ್ದು ಮಾಡಿದ್ದರ ಕಾರಣದ ಜೊತೆ ಜೊತೆಗೇ ಮತ್ತೊಮ್ಮೆ ಸಿದ್ದರಾಮಯ್ಯ ತಪ್ಪು ಹೆಜ್ಜೆ ಇಟ್ಟರಾ ಎಂದು ಅನಿಸುವುದಕ್ಕೂ ಕಾರಣ ಇದೆ.
ಪಿಎಂಎಲ್‌ಎ ಆಕ್ಟ್ ಸೆಕ್ಷನ್ 15-2003 : ಈ ಸೆಕ್ಷನ್ ಅಡಿಯಲ್ಲಿ ಸಿಎಂ ವಿರುದ್ಧ ಇಡಿ (ಜಾರಿ ನಿರ್ದೇಶನಾಲಯ) ತನಿಖೆ ಶುರು ಮಾಡಿದೆ. ಈ ಕಾಯ್ದೆಯ ಅಡಿಯಲ್ಲಿ ಇಡಿಯವರು ತನಿಖೆ ಮಾಡುತ್ತಿರುವ ಬೆನ್ನಲ್ಲೇ ಪಾರ್ವತಿ ಸಿದ್ದರಾಮಯ್ಯ ಸೈಟು ವಾಪಸ್ ಮಾಡಿದ್ದಾರೆ. ಏಕೆಂದರೆ ಸೈಟು ಪಡೆದಿದ್ದರ ಹಿಂದೆ ಯಾವುದಾದರೂ ಭ್ರಷ್ಟಾಚಾರ ನಡೆದಿದೆಯೇ.. ಅಕ್ರಮ ಹಣದ ವಹಿವಾಟು ನಡೆದಿದೆಯೇ ಎಂಬುದರ ಬಗ್ಗೆ ಇಡಿ ಪರಿಶೀಲನೆ ಮಾಡಲಿದೆ. ಅಂದರೆ ಅಕ್ರಮ ಹಣ ಬಳಸಿ ಈ ಸೈಟುಗಳನ್ನು ಅಥವಾ ಸೈಟಿನ ಮೂಲ ಆಸ್ತಿಯನ್ನು ಖರೀದಿ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ಮಾಡುವುದಕ್ಕೆ ಅವಕಾಶ ಇದೆ.
ಪಿಎಂಎಲ್‌ಎ ಆಕ್ಟ್ ಸೆಕ್ಷನ್ 15-2003ರ ಪ್ರಕಾರ ಇಡಿಯವರು ಸಿದ್ದರಾಮಯ್ಯ, ಪಾರ್ವತಿ, ಯತೀಂದ್ರ ಮೊದಲಾದವರಿಗೆ ಸಮನ್ಸ್ ನೀಡಬಹುದು. ವಿಚಾರಣೆ ನಡೆಸಬಹುದು. ಸಂಬಂಧಿತ ಜಾಗಗಳಲ್ಲಿ ರೇಡ್ ಮಾಡಬಹುದು. ಆಸ್ತಿ, ಹಣ ಮತ್ತಿತರ ದಾಖಲೆಗಳನ್ನು ಸೀಝ್ ಮಾಡಬಹುದು ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಪಡೆದಿರುವ ಎಲ್ಲ 14 ಸೈಟುಗಳನ್ನೂ ಮೂರು ತಿಂಗಳ ಕಾಲ ಮುಟ್ಟುಗೋಲು ಹಾಕಿಕೊಳ್ಳಬಹುದು. ಅಕಸ್ಮಾತ್ ಇದು ಜರುಗಿದರೆ ಇನ್ನಷ್ಟು ಅಪಾಯಕ್ಕೆ ಸಿಲುಕುತ್ತೇವೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ದಿಢೀರನೆ 14 ಸೈಟುಗಳನ್ನೂ ವಾಪಸ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮತ್ತೆ ತಪ್ಪು ಮಾಡಿದರಾ ಸಿಎಂ ಸಿದ್ದರಾಮಯ್ಯ..?
ನಿವೇಶನ ವಾಪಸ್ ನೀಡಿರುವುದು ಮುಡಾ ಪ್ರಕರಣದ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಿದ್ದರಾಮಯ್ಯ ದಂಪತಿಗೆ ಯಾವುದೇ ಅನುಕೂಲವಾಗುವುದೂ ಇಲ್ಲ. ಮುಡಾ ಹೆಸರಿಗೆ ನಿವೇಶನಗಳನ್ನು ನೋಂದಣಿ ಮಾಡಿಕೊಟ್ಟರೂ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎನ್ನುವುದು ಹಿರಿಯ ವಕೀಲರ ವಾದ. ಆದರೆ ಇಲ್ಲಿ ಇನ್ನೊಂದು ತಪ್ಪು ಏನಾಗಿದೆ ಎಂದರೆ, ಸೈಟು ಹಿಂಪಡೆಯುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಆ 14 ನಿವೇಶನಗಳ ಖಾತೆಯನ್ನು ಮುಡಾ ರದ್ದುಗೊಳಿಸಿದೆ.
1991ರ ನಿಯಮದಡಿ ಸ್ವಇಚ್ಛೆಯಿಂದ ಸೈಟ್ ವಾಪಸ್ ಮಾಡುವ ಅವಕಾಶ ಇದೆಯಾದರೂ, ಕಚೇರಿಗೆ ಬರಲೇಬೇಕು ಎನ್ನುವುದು ನಿಯಮ. ಆದರೆ ಇಲ್ಲಿ ಕಚೇರಿಗೆ ಹೋಗಿರುವುದು ಸಿದ್ದರಾಮಯ್ಯ ಪಾರ್ವತಿ ದಂಪತಿಯ ಪುತ್ರ ಶಾಸಕರೂ ಆಗಿರುವ ಯತೀಂದ್ರ ಸಿದ್ದರಾಮಯ್ಯ. ಅಂತಹ ಮನವಿಯನ್ನು ಪುರಸ್ಕರಿಸುವುದಕ್ಕೂ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಇಲ್ಲಿ ಪ್ರಕರಣ ನ್ಯಾಯಾಲಯದಲ್ಲಿದೆ. ಇದು ನ್ಯಾಯಾಲಯದ ಆದೇಶ ಉಲ್ಲಂಘಿಸುವ ಅಥವಾ ವಿಚಾರಣೆ ಮೇಲೆ ಪ್ರಭಾವ ಬೀರುವ ಅವಕಾಶ ಇದೆ. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣದಲ್ಲಿ, ನ್ಯಾಯಾಲಯದ ಗಮನಕ್ಕೆ ತಾರದೇ ಮುಡಾದವರು ಅಧಿಕಾರ ಕ್ರಮ ಕೈಗೊಂಡರೆ ಅದು ಇನ್ನೊಂದು ತಪ್ಪಿಗೆ ಮುನ್ನುಡಿಯಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾಗೆ ಬರೆದ ಒಂದು ಪತ್ರದ ಆಧಾರದ ಮೇಲೆ ಪ್ರಾಧಿಕಾರವು ತಕ್ಷಣ 14 ನಿವೇಶನಗಳ ಖಾತೆ ರದ್ದುಮಾಡಿರಬಹುದು. ಆದರೆ ಸ್ವತ್ತಿನ ಖಾತೆಯನ್ನು ರದ್ದುಪಡಿಸಿದ ಮಾತ್ರಕ್ಕೆ ಸ್ವತ್ತಿನ ಮಾಲೀಕತ್ವ ತಕ್ಷಣಕ್ಕೆ ಬದಲಾಗುವುದಿಲ್ಲ. ಆದರೆ ಮುಡಾದವರ ಈ ಕ್ರಮದಿಂದಾಗಿ ಮುಡಾದವರ ಮೇಲೆ ಮತ್ತೊಮ್ಮೆ ಪ್ರಭಾವ ಬೀರಿದ ಆರೋಪವೂ ಸಿದ್ದರಾಮಯ್ಯ ಅವರ ಮೇಲೆಯೇ ಬರುತ್ತದೆ.
ಪಾರ್ವತಿ ಅವರು ವಿವಾದ ಆರಂಭವಾದಾಗಲೇ ವಾಪಸ್ಸು ನೀಡಿದ್ದರೆ, ಆ ನಿರ್ಣಯದಲ್ಲಿ ಸದುದ್ದೇಶವಿದೆ ಎಂದು ಪರಿಗಣನೆಯಾಗುತ್ತಿತ್ತು. ಕರಣದ ಸಂಬಂಧ ಹಲವು ಕಟು ಅಭಿಪ್ರಾಯಗಳನ್ನು ಹೈಕೋರ್ಟ್ ವ್ಯಕ್ತಪಡಿಸಿರುವುದರಿಂದ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ದಂಪತಿ ಪರ ತನಿಖಾಧಿಕಾರಿಗಳು ಬಿ ರಿಪೋರ್ಟ್ ಸಹ ಸಲ್ಲಿಸಲು ಸಾಧ್ಯವಿಲ್ಲ. ತನಿಖೆ ನಡೆದು ವಿಚಾರಣೆಯೂ ಆಗಿ ತೀರ್ಪು ಕೊಡುವಾಗ ಸೈಟು ವಾಪಸ್ ಮಾಡಿದ್ದನ್ನು ಪರಿಗಣನೆಗೆ ತೆಗೆದುಕೊಳ್ಳಬಹುದೇ ಹೊರತು, ಆರೋಪ ಮುಕ್ತರಾಗಲು ಸಾಧ್ಯವಿಲ್ಲ ಎನ್ನುವುದು ವಕೀಲರ ವಾದ.



