ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಗರಣದಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯನವರು ತಾವು ಪಡೆದಿದ್ದ 14 ಸೈಟುಗಳನ್ನೂ ಸರ್ಕಾರಕ್ಕೆ ವಾಪಸ್ ಕೊಟ್ಟಿದ್ದರು. ಆ ಮೂಲಕ ಪತಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಂಟಿಕೊಂಡಿದ್ದ ಕಳಂಕ ತೊಡೆದು ಹಾಕಲು ಮುಂದಾಗಿದ್ದರು. ಇದೀಗ ಭಾರತೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಕೂಡಾ. ಪಾರ್ವತಿಯವರ ಮಾರ್ಗದಲ್ಲೇ ಹೆಜ್ಜೆ ಇಟ್ಟಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದ ಟ್ರಸ್ಟ್ಗೆ ಕೆಐಎಡಿಬಿಯಿಂದ 5 ಎಕರೆ ಭೂಮಿಯನ್ನ ನೀಡಲಾಗಿತ್ತು. ಬೆಂಗಳೂರಿನ ಏರೋಸ್ಪೇಸ್ ಬಳಿ ಭೂಮಿ ಮಂಜೂರು ಮಾಡಿದ್ದ ಕೆಐಎಡಿಬಿ. ಆದ್ರೀಗ ಭೂಮಿ ನೀಡಿದ ಕ್ರಮ ವಿವಾದದ ಸ್ವರೂಪ ಪಡೆದ ಹಿನ್ನೆಲೆ, ಸಿದ್ದಾರ್ಥ ವಿಹಾರ್ ಟ್ರಸ್ಟ್ಗೆ ನೀಡಲಾದ 5 ಎಕರೆ ಕೆಐಎಡಿಬಿ ಭೂಮಿಯನ್ನ ಕೆಐಎಡಿಬಿಗೆ ಹಿಂದಿರುಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಟ್ರಸ್ಟ್ ಕೆಐಎಡಿಬಿಗೆ ಪತ್ರ ಬರೆದು ಆಡಳಿತಾತ್ಮಕ ಕ್ರಮಕ್ಕೆ ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಿಯಾಂಕ್ ಖರ್ಗೆ, ನಮಗೆ ಕೊಟ್ಟ ಸಿಎ ಸೈಟ್ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ರಾಜಕೀಯದಿಂದ ಬೇಸರವಾಗಿ ಸಿಎ ಸೈಟ್ ಬೇಡವೆಂಬ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಅಲ್ಲದೆ, ಸೈಟ್ ವಾಪಸ್ ಕೊಡೋದಾಗಿ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಾತ್ರ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಭಾರತೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವೂ 5 ಎಕರೆ ಭೂಮಿಯನ್ನು ಕೆ.ಎ.ಎ.ಡಿ.ಬಿ ಸಂಸ್ಥೆ ಅಕ್ರಮವಾಗಿ ಪಡೆದುಕೊಂಡಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಇಲಾಖೆಯಿಂದ ತನಿಖೆ ಆರಂಭಿಸುವ ಮುನ್ನವೇ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಭೂಮಿಯನ್ನು ವಾಪಸ್ ನೀಡಿದೆ.
ಎಲ್ಲಾ ಲೀಗಲ್ ಆಗಿಯೇ ಇದ್ದರೆ ಯಾಕೆ ವಾಪಸ್ ಕೊಟ್ಟರು? ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಹಾಗಾಯಿತು ಇದು. ಸಿಎಂ ಸಿದ್ದರಾಮಯ್ಯ ಕೂಡ 14 ಸೈಟ್ ವಾಪಸ್ ಕೊಟ್ಟಿದ್ದಾರೆ. ಸಿಎಂಗೂ ಸಹ ಸೈಟ್ ವಾಪಸ್ ಕೊಡುವ ಅವಶ್ಯಕತೆ ಇರಲಿಲ್ಲ. ವಿಚಾರಣೆ ವೇಳೆ ವಾಪಸ್ ಕೊಟ್ಟು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿರುವ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ಬಿಟ್ಟು ಮೈಸೂರು ಸುತ್ತಲು ಸಿಎಂ ಹೋಗಿದ್ದಾರೆ. ಕ್ಲೀನ್ಚೀಟ್ ಪಡೆದುಕೊಳ್ಳಲು ಸಿಎಂ ಸುತ್ತಾಡುತ್ತಿದ್ದಾರೆ. ಅಂತಹ ಪರಿಸ್ಥಿತಿ ಬಂದರೆ ಸಿಬಿಐ ಎಂಟ್ರಿಯಾಗುತ್ತೆ ಎಂದಿದ್ದಾರೆ.
ತಪ್ಪು ಮಾಡಿ ಮೈ ಪರಚಿಕೊಳ್ಳೋದು ಪ್ರಿಯಾಂಕ್ ಖರ್ಗೆಗೆ ಗೊತ್ತಿದೆ. ಎಲ್ಲದಕ್ಕೂ ನನ್ನನ್ನು ಬಿಟ್ಟರೆ ಪ್ರವೀಣರೇ ಇಲ್ಲ ಅಂದುಕೊಂಡಿದ್ದಾರೆ. ನಾವೆಲ್ಲ ಗ್ರಾಸ್ ರೂಟ್ನಿಂದ ಬಂದಂತಹವರು. ತೊಡೆ ತಟ್ಟಿದ್ರೆ ಈಗ ಆಗಿರುವ ಪರಿಸ್ಥಿತಿಯೇ ಆಗುವುದು. ಆನೆ ನಡೆದುಕೊಂಡು ಹೋಗುವಾಗ ನಾಯಿ ಬೊಗಳಿದ್ರೆ ಭಯ ಪಡುತ್ತಾ? ಈಗಲೇ ಪ್ರಿಯಾಂಕ್ ಖರ್ಗೆ ಸಿಎಂ ರೀತಿ ಆಡುವುದು ಬೇಡ. ಮಾತಾಡೋದನ್ನು ಮೈಗೂಡಿಸಿಕೊಂಡರೆ ಒಳ್ಳೇ ನಾಯಕ ಆಗಬಹುದು ಎಂದು ವಾಗ್ದಾಳಿ ಮಾಡಿದ್ದಾರೆ.
ಒಟ್ಟಿನಲ್ಲಿ ಸಿಎಂ ಬೆನ್ನಲ್ಲೇ ಅಕ್ರಮದ ತೂಗುಕತ್ತಿಯಿಂದ ತಪ್ಪಿಸಿಕೊಳ್ಳೋಕೆ ಖರ್ಗೆ ಕುಟುಂಬ ಕೂಡ ಸೈಟ್ ವಾಪಸ್ ಮಾಡೋಕೆ ನಿರ್ಧರಿಸಿದ್ದು. ಇದು ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆಯಾ ಅನ್ನೋ ಅನುಮಾನಗಳು ಕೂಡ ದಟ್ಟವಾಗಿವೆ.



