ಮುಡಾ ಹಗರಣ ಈಗ ಕೇವಲ ಮೈಸೂರು, ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅದೀಗ ರಾಷ್ಟ್ರಮಟ್ಟಕ್ಕೂ ವ್ಯಾಪಿಸಿದೆ. ಏಕೆಂದರೆ ಸಿದ್ಧರಾಮಯ್ಯ ಅವರನ್ನು ಅಟ್ಯಾಕ್ ಮಾಡುತ್ತಿರುವುದು ಕೇವಲ ವಿಜಯೇಂದ್ರ, ಕುಮಾರಸ್ವಾಮಿ ಅವರಷ್ಟೇ ಅಲ್ಲ, ಮೋದಿಯೂ ಟಾರ್ಗೆಟ್ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ರಕ್ಷಣೆಗೆ ನಿಂತಿರುವುದು ಅವರ ಬೆಂಬಲಿಗ ಸಚಿವರಷ್ಟೇ ಅಲ್ಲ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಂತಹವರೂ ಇದ್ದಾರೆ. ಈ ನಡುವೆ ಹರಿಯಾಣ ಚುನಾವಣೆಯಲ್ಲಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಸ್ತಾಪ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಹರ್ಯಾಣದ ಸೋನಿಪತ್‌ನಲ್ಲಿ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ ‘ಕರ್ನಾಟಕ ಸರ್ಕಾರ ಬಂದು ಕೇವಲ 2 ವರ್ಷಗಳು ಕಳೆದಿವೆ. ಅಲ್ಲಿನ ಕಾಂಗ್ರೆಸ್ ಸರ್ಕಾರವನ್ನು ನೋಡಿ. ಮುಖ್ಯಮಂತ್ರಿ ಭೂ ಹಗರಣದ ಆರೋಪ ಎದುರಿಸುತ್ತಿದ್ದಾರೆ. ತನಿಖೆ ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಸೂಕ್ತ ತನಿಖೆ ಅಗತ್ಯ ಎಂದು ಕೋರ್ಟ್ ಹೇಳಿದೆ. ಎಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೋ ಅಲ್ಲಿ ಅಸ್ಥಿರತೆ ಇರುತ್ತದೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಜಟಾಪಟಿ ನಡೆದಿದೆ. ತೆಲಂಗಾಣ ಹಾಗೂ ಹಿಮಾಚಲದಲ್ಲೂ ಇದೇ ಕತೆ’ ಎಂದಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಸ್ತಾಪಿಸಿದ ಮೋದಿ, ‘ದಲಿತ ನಾಯಕರಾದ ಖರ್ಗೆ ಅವರ ತವರಿನಲ್ಲಿ ದಲಿತರ ಉದ್ಧಾರಕ್ಕೆ ನೀಡಲಾದ ಹಣವನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಂಥ ಸರ್ಕಾರಹರ್ಯಾಣಕ್ಕೂ ಬೇಕೇ’ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಕೌಂಟರ್ ಕೊಟ್ಟಿರುವ ಸಿದ್ಧರಾಮಯ್ಯ ಓಪನ್ ಚಾಲೆಂಜ್ ಹಾಕಿದ್ದಾರೆ. ಮೋದಿಯವರೇ ದೂರದ ಊರಲ್ಲಿ ಕೂತು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ನೇರಾನೇರ ಚರ್ಚೆ ಮಾಡಲು ನೀವು ಸಿದ್ದ ಇದ್ದರೆ ನಾನು ಸದಾ ಸಿದ್ದ. ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ತೋರಿಸಿದರೆ, ಮೋದಿ ಅವರನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದಿದ್ದಾರೆ.
ಅಷ್ಟೇ ಅಲ್ಲ, ಮತ್ತೂ ಮುಂದುವರಿದು ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿರುವ, ನೂರಾರು ಕೋಟಿ ರು. ಹಗರಣದ ಆರೋಪ ಎದುರಿಸುತ್ತಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಮೋದಿ ಅವರಿಗೆ ಭ್ರಷ್ಟಾಚಾರದ ಆರೋಪ ಮಾಡುವಾಗ ಆತ್ಮಸಾಕ್ಷಿಯೂ ಚುಚ್ಚುವುದಿಲ್ಲವೇ? ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಕರ್ನಾಟಕದ ಲೋಕಾಯುಕ್ತರು ಕೋರಿರುವ ಅನುಮತಿ ಬಗ್ಗೆ ರಾಜ್ಯಪಾಲರು ಕಣ್ಣುಮುಚ್ಚಿಕೊಂಡಿರುವುದೇಕೇ? ಅವರ ಮೇಲೆ ಒತ್ತಡ ಹೇರುತ್ತಿರುವರು ಯಾರು? ತಮ್ಮ ಪಕ್ಷದ ಮುಖ್ಯಮಂತ್ರಿ ಹುದ್ದೆಯನ್ನು ಮಾರಾಟ ಮಾಡಲಾಗಿದೆ ಎಂದು ರಾಜ್ಯದ ಶಾಸಕರೊಬ್ಬರು ಬಹಿರಂಗವಾಗಿ ಆರೋಪಿಸಿದ್ದರೂ ಅವರ ಮೇಲೆ ಕ್ರಮ ಇಲ್ಲ. ದಿನ ಬೆಳಗಾದರೆ ಭ್ರಷ್ಟಾಚಾರದ ಆರೋಪದ ಕೆಸರೆರಚಾಟದಲ್ಲಿ ತೊಡಗಿರುವ ಬಿಜೆಪಿ ಶಾಸಕರ ವಿರುದ್ದವೂ ಯಾವ ಕ್ರಮವೂ ಇಲ್ಲ. ನರೇಂದ್ರ ಮೋದಿ ಅವರೇ ಈ ಮೌನಕ್ಕೆ, ಈ ನಿಷ್ಕ್ರಿಯತೆಗೆ ಏನು ಕಾರಣ ಎಂದಿದ್ದಾರೆ ಸಿದ್ಧರಾಮಯ್ಯ.
ಸಿದ್ಧರಾಮಯ್ಯ ಮೋದಿ ಸೂತ್ರ ಫಾಲೋ ಮಾಡ್ತಿದ್ದಾರಾ..?
ಹೌದು ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು. ಏಕೆಂದರೆ ಮೋದಿ ಸಂಪುಟದಲ್ಲೂ ಅಕ್ರಮ, ಹಗರಣಗಳ ಆರೋಪ ಕೇಳಿ ಬಂದಿವೆ. ಆದರೆ ಮೋದಿ ಸೂತ್ರ ಏನೆಂದರೆ ಆರೋಪ ಬಂದವರೆನ್ನೆಲ್ಲ ತಕ್ಷಣ ತೆಗೆಯುವುದಿಲ್ಲ. ಅತ್ತ ಸಮರ್ಥನೆಗೂ ಇಳಿಯುವುದಿಲ್ಲ. ಹಾಗೆ ಆರೋಪ ಹೊತ್ತವರನ್ನು ಮುಂದಿನ ಕೆಲ ದಿನ ಅಥವಾ ತಿಂಗಳುಗಳಲ್ಲಿ ಸಂಪುಟ ವಿಸ್ತರಣೆ ಹೆಸರಲ್ಲಿ ತೆಗೆಯುತ್ತಾರೆ. ಆಮೇಲೆ ಆ ವ್ಯಕ್ತಿಯನ್ನು ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಅದಾದ ಮೇಲೆ ಕೆಲವರಿಗೆ ಸ್ಪರ್ಧೆ ಮಾಡುವುದಕ್ಕೆ ಟಿಕೆಟ್ ಕೂಡಾ ನೀಡುವುದಿಲ್ಲ. ಅಲ್ಲಿಗೆ ಆ ವ್ಯಕ್ತಿಯ ರಾಜೀನಾಮೆ ಮುಗಿಯಿತೆಂದೇ ಅರ್ಥ.
ರಾಜೀವ್ ಪ್ರತಾಪ್ ರೂಢಿ, ಬ್ರಿಜ್ ಭೂಷಣ್ ಸಿಂಗ್, ಅಜಯ್ ಮಿಶ್ರಾ ಸೇರಿದಂತೆ ಹಲವು ಸಚಿವರಿಗೆ ಇದೇ ಸೂತ್ರ ಅನುಸರಿಸಿದ್ದರು ಮೋದಿ. ಇನ್ನು ಸಂಸದರಾಗಿ ಭ್ರಷ್ಟಾಚಾರದ ಕಳಂಕ ಹೊತ್ತ ಬಹುತೇಕರಿಗೆ ಟಿಕೆಟ್ ಕೂಡಾ ಕೊಟ್ಟಿಲ್ಲ. ಇದೇ ಸೂತ್ರ ಅನುಸರಿಸುತ್ತಿದ್ದಾರೆಯೇ ಸಿಎಂ ಸಿದ್ಧರಾಮಯ್ಯ..? ಇದು ಈ ಕಾಡ್ತಿರೋ ಪ್ರಶ್ನೆ.



