ಸಿದ್ದರಾಮಯ್ಯ ಅವರು ಸಿಎಂ ಆದಾಗಿನಿಂದ ಕೆಲವು ನಾಯಕರು ಅಸಮಾಧಾನದೊಳಗೆ ಮಿಂದೇಳುತ್ತಿದ್ದಾರೆ. ಕೆಲವರಿಗೆ ಸಿದ್ದರಾಮಯ್ಯ ಸಿಎಂ ಆಗಿರುವುದು ಇಷ್ಟವಿಲ್ಲ. ಅವರ ಪ್ರಕಾರ ಡಿಕೆ ಸಿಎಂ ಆಗಬೇಕು. ಇದು ಒಂದು ಬಣವಾದರೆ.. ಇನ್ನೂ ಬಹುತೇಕ ಶಾಸಕರಿಗೆ ಕ್ಷೇತ್ರದಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ. ಹೀಗೇ ಆದರೆ.. ಮುಂದಿನ ಚುನಾವಣೆಯಲ್ಲಿ ಹೀನಾಯವಾಗಿ ಸೋಲುತ್ತೇವೆ ಎಂಬ ಭಯ ಆಗಲೇ ಕೆಲವು ಶಾಸಕರಿಗೆ ಕಾಡೋದಕ್ಕೆ ಶುರುವಾಗಿದೆ. ವಿಚಿತ್ರ ಅಂದ್ರೆ ಈ ಬಾರಿ ಸೊಲ್ಲೆತ್ತಿರುವ ಬಹುತೇಕ ಶಾಸಕರು ಮಂತ್ರಿ ಸ್ಥಾನದ ಆಕಾಂಕ್ಷಿಗಳು ಎನ್ನುವುದು. ಆದರೆ ಈ ಎಲ್ಲದಕ್ಕೂ ಮೂಲ ಕಾರಣ ಯಾರು ಎಂದರೆ ಜಮೀರ್ ಅಹ್ಮದ್.
ಬಿಆರ್ ಪಾಟೀಲ್, ರಾಜು ಕಾಗೆ, ವೈಎನ್ ಗೋಪಾಲಕೃಷ್ಣ, ಬೇಳೂರು ಗೋಪಾಲ ಕೃಷ್ಣ ಎಲ್ಲರೂ ಇದೇ ಮಾತು ಹೇಳುತ್ತಿದ್ದಾರೆ. ಎಲ್ಲರಿಗೂ ಮಂತ್ರಿ ಸ್ಥಾನದ ಮೇಲೆ ಕಣ್ಣಿದೆ ಎನ್ನುವುದು ಗುಟ್ಟೇನಲ್ಲ. ಇನ್ನೂ ವಿಶೇಷ ಎಂದರೆ ಅವರ ಆಕ್ರೋಶ ಇರುವುದು ಸಿದ್ದರಾಮಯ್ಯ ಮೇಲಲ್ಲ, ಅದು ಜಮೀರ್ ಅಹ್ಮದ್ ಅವರ ಮೇಲೆ. ಏಕೆಂದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರಿಂದ ಅತೀ ಹೆಚ್ಚು ಮುದ್ದು ಮಾಡಿಕೊಳ್ಳುತ್ತಿರುವ ನಾಯಕ ಎಂದರೆ ಅದು ಜಮೀರ್ ಅಹ್ಮದ್.
ಜಮೀರ್ ಅಹ್ಮದ್ ಅದೇನೇ ಕಾಂಟ್ರವರ್ಸಿ ಮಾಡಿಕೊಂಡರೂ ಸಿದ್ದರಾಮಯ್ಯ ಸೀರಿಯಸ್ ಆಗಿ ತಗೊಳ್ಳೋದಿಲ್ಲ. ದೇವೇಗೌಡರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಹಲವು ಕಾಂಗ್ರೆಸ್ ಶಾಸಕರು ಸಿಟ್ಟಾಗಿದ್ದರು. ಸಿದ್ದರಾಮಯ್ಯ ಅದನ್ನೂ ಸಮರ್ಥಿಸಿಕೊಂಡರು.
ವಕ್ಫ್ ಆಸ್ತಿ ಕಾಯ್ದೆ ವಶಕ್ಕೆ ತೆಗೆದುಕೊಳ್ಳುವುದು ವಿವಾದವಾಯ್ತು. ಸರ್ಕಾರದ ಹಂತದಲ್ಲಿ ಅದೇನೇ ಸಮರ್ಥನೆ ಮಾಡಿಕೊಂಡರೂ, ಕ್ಷೇತ್ರಗಳಲ್ಲಿ ಎದುರಿಸಿರುವ ವಿರೋಧ ಕಾಂಗ್ರೆಸ್ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಗ್ರಾಮೀಣ ಭಾಗದ ಶಾಸಕರು, ನಗರ ಭಾಗದ ಶಾಸಕರ ಹಾಗೆ ಇರೋದಕ್ಕೆ ಸಾಧ್ಯ ಇಲ್ಲ. ಉತ್ತರ ಕರ್ನಾಟಕದಲ್ಲಂತೂ ಜನ, ಮುಖಾ ಮೂತಿ ನೋಡದೆ ತರಾಟೆಗೆ ತೆಗೆದುಕೊಳ್ತಾರೆ. ಮಂಡ್ಯ ಭಾಗಕ್ಕೆ ಹೋದರೆ.. ಕೊರಳಪಟ್ಟಿ ಹಿಡಿದೇ ಮಾತನಾಡಿಸ್ತಾರೆ. ಹೀಗಿರುವಾಗ ಶಾಸಕರಾಗಿ ಅಸಹಾಯಕತೆ ತೋಡಿಕೊಂಡರೆ, ನಮಗೆ ಮತ್ತೆ ವೋಟು ಹಾಕುತ್ತಾರಾ ಎನ್ನುವುದು ವಿವಾದ ಮೂಲ.
ವಸತಿ ಇಲಾಖೆಯಲ್ಲಿ ದುಡ್ಡು ಕೊಟ್ಟರಷ್ಟೇ ಮನೆ ಎನ್ನವುದು ಹೊಸದೇನಲ್ಲ. ಒಂದು ಗ್ರಾಮಕ್ಕೆ ಇಂತಿಷ್ಟು ಮನೆಗಳು ಮಂಜೂರಾದಾಗ ಶಾಸಕರೇ ಸ್ಥಳೀಯ ನಾಯಕರಿಗೆ ಬಿಟ್ಟು ಕೊಡುತ್ತಾರೆ. ಅದರಲ್ಲೂ ಕೈ ಹಾಕಿದರೆ.. ನಾಳೆ ಚುನಾವಣೆಗೆ ಕೆಲಸ ಮಾಡುವುದು ಯಾರು ಎಂಬ ದೂರಾಲೋಚನೆಯೇ ಇದಕ್ಕೆಲ್ಲ ಕಾರಣ. ಹೀಗಿರುವಾಗ ವಸತಿ ಇಲಾಖೆಯಲ್ಲೂ ಮುಸ್ಲಿಮರ ಕೈ ಮೇಲಾಗಿದೆ.
ವಾಸ್ತವದಲ್ಲಿ ಇತ್ತೀಚೆಗೆ ಹಂಚಿಕೆಯಾಗಿರುವ ಬಹುತೇಕ ಮನೆಗಳಲ್ಲಿ ಮುಸ್ಲಿಮರಿಗೆ ಹೆಚ್ಚು ಹೆಚ್ಚು ಲಾಭವಾಗಿದೆ. ಹೆಚ್ಚು ಹೆಚ್ಚು ಮನೆಗಳು ಸಿಕ್ಕಿವೆ. ಆದರೆ.. ಹಾಗೆ ಹೇಳವುದು ಕಾಂಗ್ರೆಸ್ಸಿನಲ್ಲಿ ಸಾಧ್ಯವಿಲ್ಲ. ಹೀಗಾಗಿಯೇ.. ಈ ರೀತಿಯಾಗಿ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿರುವುದು. ಜಮೀರ್ ಅವರಿಗೆ ಮೂಗುದಾರ ಹಾಕಿದರೆ.. ಬಹುತೇಕ ಭಿನ್ನಮತೀಯರು ಸೈಲೆಂಟ್ ಆಗುತ್ತಾರೆ ಎನ್ನವುದೇ ವಿವಾದದ ಮೂಲ.



