ರಾಜ್ಯ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆ ಮುಗಿದ ಮೇಲೆ ಪತನವಾಗಲಿದೆ ಎನ್ನುವುದು ಹಲವರ ನಿರೀಕ್ಷೆ. ಈ ಬಗ್ಗೆ ಯಡಿಯೂರಪ್ಪ, ವಿಜಯೇಂದ್ರ, ಕುಮಾರಸ್ವಾಮಿ ಸೇರಿದಂತೆ ಹಲವರು ಹೇಳಿದ್ಧಾರೆ. ಈಗ ಹೊಸ ಹೆಸರು ದೇವೇಗೌಡರು ಮತ್ತು ಯಡಿಯೂರಪ್ಪ ಅವರದ್ದು. ಇವರ ಈ ಹೇಳಿಕೆಗಳಿಗೆ ಕಾರಣ.. ನನ್ನ ಪರ ಯಾರೂ ಬೀದಿಗೆ ಬಂದು ಹೋರಾಟ ಮಾಡಬೇಡಿ. ಎಲೆಕ್ಷನ್ ಮುಗಿದ ಮೇಲೆ ಏನಾಗುತ್ತೋ.. ಅದು ಆಗುತ್ತೋ. ಎಲ್ಲವೂ ದೆಹಲಿಯಲ್ಲಿ ನಿರ್ಧಾರವಾಗಿದೆ ಎಂದ ಡಿಕೆಶಿ ಅವರ ಮಾರ್ಮಿಕ ಮಾತು.
ಬಸನಗೌಡ ಪಾಟೀಲ ಯತ್ನಾಳ್ ಪ್ರಕಾರ..
ಕರ್ನಾಟಕದ ಇಂದಿನ ಪರಿಸ್ಥಿತಿ ನೋಡಿದರೆ ಲೋಕಸಭೆ ನಂತರ ಸಿಎಂ, ಡಿಸಿಎಂ, ಸಚಿವರು ಸೇರಿ ಎಲ್ಲರ ತಲೆದಂಡ ಆಗಲಿದೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಹತಾಶರಾಗಿದ್ದಾರೆ. ತಾವು ಲೋಕಸಭಾ ಚುನಾವಣೆ ನಂತರ ಇರುವುದಿಲ್ಲ ಎಂಬುದು ಸಿಎಂ ಹಾಗೂ ಡಿಸಿಎಂ ಅವರಿಗೂ ಗೊತ್ತಿದೆ.
ಮಾಜಿ ಪ್ರಧಾನಿ ದೇವೇಗೌಡರ ಪ್ರಕಾರ..
ಸತ್ಯ ಹೇಳೋದಾದ್ರೆ ಇಡೀ ದೇಶದಲ್ಲಿ ಕರ್ನಾಟಕ ಸೇರಿದಂತೆ 3 ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು ಉಳಿದೆಲ್ಲ ಕಡೆ ಚೆಲ್ಲಾಪಿಲ್ಲಿಯಾಗಿ ದಿನೇ ದಿನೇ ಕಾಂಗ್ರೆಸ್ ಕುಸಿಯುತ್ತಿದೆ. ಇದನ್ನ ಮೇಲೆತ್ತಲು ಯಾರಿಂದಲೂ ಸಾಧ್ಯವಿಲ್ಲ. ಈ ಲೋಕಸಭಾ ಚುನಾವಣೆ ಕಳೆದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ.
ಛಲವಾದಿ ನಾರಾಯಣ ಸ್ವಾಮಿ ಪ್ರಕಾರ..
ದೇಶದಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದ್ದು ಈಗಾಗಲೇ ಕಾಂಗ್ರೆಸ್ ಪಕ್ಷ ಕತ್ತಿನ ತನಕ ಮುಳುಗಿಹೋಗಿದೆ ತಲೆ ಮುಳುಗುವುದು ಒಂದು ಬಾಕಿ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಐಸಿಯು ನಲ್ಲಿದೆ ಸ್ವಲ್ಪ ಎದೆ ಡವ ಡವ ಅಂತ ಬಡಿತ ಇದೇ ಈ ಲೋಕಸಭಾ ಚುನಾವಣೆ ಕಳೆದ ಮೇಲೆ ಅದು ಸಹ ನಿಂತು ಹೋಗುತ್ತದೆ.
ಮಾಜಿ ಸಿಎಂ ಕುಮಾರಸ್ವಾಮಿ ಪ್ರಕಾರ..
ಡಿಸೆಂಬರ್ ಒಳಗೆ ರಾಜ್ಯ ಸರ್ಕಾರ ಪತನವಾಗುತ್ತದೆ. ಅಸೆಂಬ್ಲಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಣ ಪೈಪೋಟಿಯಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇನ್ನು ಮುಂದೆ ಹಾಗಾಗುವುದಿಲ್ಲ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಕಾರ..
ಸಿದ್ದರಾಮಯ್ಯ ಇದು ನನ್ನ ಕೊನೆಯ ಚುನಾವಣೆ ಎಂದು ಕಳೆದ 10 ವರ್ಷಗಳಿಂದ ಹೇಳುತ್ತಿದ್ದಾರೆ. ಇದು ರಾಜಕೀಯದ ಗಿಮಿಕ್ ಎಂದು ಟೀಕಿಸಿದ ಅವರು, ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ. ನಮಗೆ ಯಾವುದೇ ಆಪರೇಷನ್ ಕಮಲದ ಅಗತ್ಯವೇ ಇಲ್ಲ. ಏಕೆಂದರೆ, ಸರ್ಕಾರ ತಾನಾಗಿಯೇ ಪತನಗೊಳ್ಳಲಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರಕಾರ..
ಈ ಕಾಂಗ್ರೆಸ್ ಬಹಳದಿನ ಉಳಿಯಲ್ಲ. ಅಧಿಕಾರದ ಆಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಧ್ಯೆ ಜಗಳ ಇದ್ದೇ ಇದೆ. ಇಬ್ಬರ ಮಧ್ಯೆ ಸಂಶಯವಿದೆ. ಅವರ ಮಧ್ಯೆ ಪರಸ್ಪರ ವಿರುದ್ಧದ ಪ್ಲಾನ್ ಇವೆ. ರಾಜ್ಯ ಸರ್ಕಾರದಲ್ಲಿ ಈ ಇಬ್ಬರ ಮಧ್ಯೆಯೂ ಒಬ್ಬರಿಗೊಬ್ಬರಿಗೆ ಪರಸ್ಪರ ನಂಬಿಕೆ, ವಿಶ್ವಾಸವಿರದೇ ಸಂಶಯ ಇದೆ. ಹೀಗಾಗಿ ಈ ಕಾಂಗ್ರೆಸ್ ಸರ್ಕಾರ ತುಂಬ ದಿನ ಉಳಿಯುವುದಿಲ್ಲ.
ಹೀಗೆ.. ಈ ರೀತಿಯ ಹೇಳಿಕೆ ನೀಡುತ್ತಿರುವುದು ಒಬ್ಬಿಬ್ಬರಲ್ಲ. ಆದರೆ.. ಇದು ಸಾಧ್ಯವೇ ಎಂದು ನೋಡಿದರೆ.. ಮೇಲ್ನೋಟಕ್ಕೆ ಇದು ಅಸಾಧ್ಯ ಎಂದೇ ಹೇಳಬಹುದು. ಏಕೆಂದರೆ.. ಕಾಂಗ್ರೆಸ್ ಗೆದ್ದಿರುವುದು 135 ಸ್ಥಾನಗಳನ್ನು. ಸರ್ಕಾರ ಪತನ ಎಂದರೆ ಸುಮ್ಮನೆ ಮಾತಲ್ಲ. ಡಿಕೆ ಆಗಲೀ.. ಸಿದ್ದು ಅವರಾಗಲೀ.. ರಾಜಕೀಯ ತಂತ್ರಗಾರಿಕೆ ಅರಿಯದವರೇನಲ್ಲ. ಪಕ್ಷದ ಶಾಸಕರನ್ನು ತಡೆಯಲು ಶಕ್ತಿ ಇಲ್ಲದವರೂ ಅಲ್ಲ. ಹೀಗಾಗಿ.. ಇದು ಪೊಲಿಟಿಕಲ್ ಹೇಳಿಕೆಯೇ ಹೊರತು.. ಯಾವುದೇ ವಿಶೇಷಗಳಿಲ್ಲ. ಸೌಂಡ್ ಮಾತ್ರ ಬೊಂಬಾಟು.



