ರಾಜ್ಯದಲ್ಲಿ ಕಾಂಗ್ರೆಸ್ ಅದ್ಭುತವಾಗಿ ಗೆದ್ದಾಗ ತಮ್ಮ ಅಣ್ಣ ಡಿಕೆ ಶಿವಕುಮಾರ್ ಅವರೇ ಸಿಎಂ ಆಗಬೇಕು ಎಂದು ಹೋರಾಡಿದ್ದವರು ಡಿಕೆ ಸುರೇಶ್. ಅಣ್ಣ ಡಿಸಿಎಂ ಆದರೂ, ಡಿಕೆ ಶಿವಕುಮಾರ್ ಅದೇನೇ ಬ್ಯಾಲೆನ್ಸ್ ಮಾಡೋಕೆ ನಿಂತರೂ, ಸುರೇಶ್ ಅವರನ್ನು ಸಮಾಧಾನ ಮಾಡಲು ಆಗಲಿಲ್ಲ. ಅಣ್ಣ-ತಮ್ಮಂದಿರ ಬಾಂಧವ್ಯ ಗೊತ್ತಿದ್ದವರು, ಸುರೇಶ್ ಅವರ ಹೇಳಿಕೆಯ ಹಿಂದೆ ರಾಜಕೀಯಕ್ಕಿಂತ ಹೆಚ್ಚು, ಬಾಂಧವ್ಯವನ್ನೇ ಗುರುತಿಸಿದ್ದರು. ಬಹಿರಂಗವಾಗಿಯೂ ಅಣ್ಣನೇ ಸಿಎಂ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎನ್ನುತ್ತಿದ್ದ ಡಿಕೆ ಸುರೇಶ್, ತಮ್ಮ ಅಸಮಾಧಾನವನ್ನು ಮುಚ್ಚಿಟ್ಟುಕೊಂಡವರಲ್ಲ. ಅಂತಹ ಡಿಕೆ ಸುರೇಶ್ ಈಗ ಇದ್ದಕ್ಕಿದ್ದಂತೆ ಸಿದ್ಧರಾಮಯ್ಯ ಅವರೇ 5 ವರ್ಷ ಸಿಎಂ ಆಗಿರ್ತಾರೆ ಎಂದು ಹೇಳಿಬಿಟ್ಟಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಕೇಳುವುದರಲ್ಲಿ ತಪ್ಪಿಲ್ಲ. ಮುಂದೆ ನಾನು ಮುಖ್ಯಮಂತ್ರಿ ಆಗುತ್ತೇನೆ ಅಂತ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಇದು ರಾಜಕೀಯ ತಂತ್ರ. ತಮ್ಮ ಪಕ್ಷ ಉಳಿಸಿಕೊಳ್ಳಲು ಉಳಿಸಿಕೊಳ್ಳಲು ಹಾಗೆ ಹೇಳುತ್ತಾರೆ. ರಾಜ್ಯದಲ್ಲಿ ಬಲಿಷ್ಠ ಸರ್ಕಾರವಿದೆ, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಸಮರ್ಥ ನಾಯಕತ್ವವಿದೆ. ಕಾಂಗ್ರೆಸ್ ಸರ್ಕಾರದ ಇರುತ್ತದೆ, ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಇದು ಡಿಕೆ ಸುರೇಶ್ ಮಾತು. ಅಷ್ಟೇ ಅಲ್ಲ, ಈ ಮಾತನ್ನು ಡಿಕೆ ಶಿವಕುಮಾರ್ ಅವರೇ ಹೇಳಿದ ಮೇಲೆ ಇನ್ನೇನಿದೆ ಅನ್ನೋ ಅರ್ಥದಲ್ಲಿ ಮಾತನಾಡ್ತಾರೆ ಡಿಕೆ ಸುರೇಶ್.
ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಎಐಸಿಸಿ ಅಧ್ಯಕ್ಷರು ಸೇರಿದಂತೆ ದೆಹಲಿ ಹೈಕಮಾಂಡ್ ಸ್ಪಷ್ಟ ಸಂದೇಶ ಕಳುಹಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕರು ಕೂಡ ಇದನ್ನೇ ಹೇಳಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರೇ ಐದು ವರ್ಷವೂ ಮುಖ್ಯಮಂತ್ರಿ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲ. ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲು ಯಾವುದೇ ದಾಖಲೆ ಇಲ್ಲ. ಎಷ್ಟು ಜನ ತನಿಖೆ ಎದುರಿಸಿಲ್ಲ, ಅಮಿತ್ ಶಾ, ಪ್ರಧಾನಮಂತ್ರಿ ತನಿಖೆ ಎದುರಿಸುತ್ತಿಲ್ಲವಾ? ಎಂದು ಪ್ರಶ್ನೆ ಮಾಡಿರುವ ಡಿಕೆ ಸುರೇಶ್ ಸರ್ಕಾರಕ್ಕೆ ಯಾವ ಭಯವೂ ಇಲ್ಲ. ಪತನವಾಗುವುದೂ ಇಲ್ಲ ಎಂದಿದ್ದಾರೆ.
ಡಿಕೆ ಸುರೇಶ್ ಈ ರೀತಿ ಹೇಳಿಕೆ ಕೊಡುತ್ತಿದ್ದರೆ, ಅತ್ತ ಸಿಎಂ ರೇಸಿನಲ್ಲಿದ್ದ ಆರ್.ವಿ.ದೇಶಪಾಂಡೆ ತಾವು ರೇಸಿನಲ್ಲಿಲ್ಲ ಎಂದು ಹಿಂದೆ ಸರಿದಿದ್ದಾರೆ. ನನಗೆ ಸಿಎಂ ಆಗಬೇಕು ಎನ್ನುವ ಆಸೆಯೂ ಇಲ್ಲ. ನಾನು ರೇಸಿನಲ್ಲೂ ಇಲ್ಲ ಎಂದಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿ, ಪರಮೇಶ್ವರ್ ಅವರ ಕುರಿತಾದ ಹೇಳಿಕೆಯ ಬಗ್ಗೆಯೂ ಜಾರಿಕೆಯ ಉತ್ತರ ನೀಡಿದ್ದಾರೆ.
ಆದರೆ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ಕೊಡುವುದು ನಿಶ್ಚಿತ ಎನ್ನುವುದು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿಶ್ವಾಸ. ಮುಡಾ ಹಗರಣ ಸಂಬಂಧ ಸಿದ್ಧರಾಮಯ್ಯ ತಾವಾಗಿಯೇ ರಾಜೀನಾಮೆ ನೀಡುವ ಪರಿಸ್ಥಿತಿ ಬರಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಯ ನಡುವೆಯೇ ಕಳೆದೆರಡು ದಿನಗಳ ಹಿಂದೆ ದೆಹಲಿಗೆ ಭೇಟಿ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ವಾಪಾಸಾದ ನಂತರದಿಂದ ಮೌನವಹಿಸಿದ್ದು, ಅವರ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ. ಸತೀಶ್ ಅವರು ದೆಹಲಿ ಭೇಟಿ ವೇಳೆ ಕೇವಲ ಇಲಾಖೆ ಕೆಲಸಗಳನ್ನಷ್ಟೆ ಮಾಡದೆ, ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಿಂದ ವಾಪಾಸದ ನಂತರದಿಂದ ಸತೀಶ್ ಜಾರಕಿಹೊಳೆ ಮಾಧ್ಯಮಗಳೊಂದಿಗೆ ಕಾಯ್ದುಕೊಂಡಿದ್ದು, ಅಂತರ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.



