ಸಿದ್ಧರಾಮಯ್ಯ ರಾಜಕೀಯದ ಪರ್ವಕಾಲ ಮುಗಿಯುತ್ತಾ ಬಂದಿದೆ. ಅವರ ನಂತರ ಅದರ ನೇತೃತ್ವ ವಹಿಸುವ ಶಕ್ತಿ ಸಾಮರ್ಥ್ಯ ಇರುವುದು ಸತೀಶ್ ಜಾರಕಿಹೊಳಿ ಅವರಿಗೆ ಮಾತ್ರ. ಇಂಥಾದ್ದೊಂದು ಹೇಳಿಕೆಯನ್ನು ಯಾರೋ ಕೊಟ್ಟಿದ್ದರೆ ಡಿಕೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ.. ಸ್ಟೇಟ್ ಮೆಂಟ್ ಕೊಟ್ಟಿರುವುದು ಯತೀಂದ್ರ. ಸಿದ್ಧರಾಮಯ್ಯ ಅವರ ಪುತ್ರ. ಇಕ್ಬಾಲ್ ಹುಸೇನ್, ಶಿವಗಂಗಾ ಬಸವರಾಜ್, ಕುಣಿಗಲ್ ರಂಗನಾಥ್, ಶಿವರಾಮೇ ಗೌಡ ಅವರಿಗೆ ಗಪ್ ಚುಪ್ ಎಂದು ಹೇಳಿದಂತೆ ಹೇಳೋಕೆ ಆಗಲ್ಲ. ಏಕೆಂದರೆ ಆತ ಯತೀಂದ್ರ ಸಿದ್ಧರಾಮಯ್ಯ.
ಇತ್ತೀಚೆಗೆ ಸತೀಶ್ ಜಾರಕಿಹೊಳಿ ಅವರಿಗೆ ʻನೀವು ಸಿಎಂ ಕ್ಯಾಂಡಿಡೇಟ್ ಅಂತೆ. ನಿಜಾನಾ..?ʼ ಎಂಬ ಪ್ರಶ್ನೆ ಪತ್ರಕರ್ತರಿಂದ ಪದೇ ಪದೇ ಎದುರಾಗಿತ್ತು. ʻʻನಾನು ಸಿಎಂ ರೇಸಿನಲ್ಲಿಯೇ ಇಲ್ಲ. ಏನೋ ಅಭಿಮಾನಿಗಳು ಕೂಗ್ತಾರೆ. ಅಷ್ಟೆ. ಅದಕ್ಕೂ ನನಗೂ ಸಂಬಂಧ ಇಲ್ಲʼʼ ಎನ್ನುತ್ತಿದ್ದರು ಸತೀಶ್. ʻಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅವರಿಗೆ ಜೈʼ ಎನ್ನುವ ಘೋಷಣೆ ಅಭಿಮಾನಿಗಳಿಂದ ಕಾರಣವೇ ಇಲ್ಲದೆ ಸುಖಾಸುಮ್ಮನೆ ಎದ್ದೇಳುವುದಿಲ್ಲ ಎನ್ನುವುದು ರಾಜಕೀಯದ ಎಬಿಸಿಡಿ ಕಲಿಯುತ್ತಿರುವವರಿಗೂ ಗೊತ್ತು. ಪತ್ರಕರ್ತರು ಕೂಡಾ ಅಷ್ಟೇ. ಇಂತಹ ಪ್ರಶ್ನೆಯನ್ನೊಂದು ಸಲ ಕೇಳಿ ನೋಡಿ ಎನ್ನುವ ಮೆಸೇಜ್ ಕೂಡಾ ಆಗಾಗ್ಗೆ ಮೂಲದಿಂದಲೇ ಬರುತ್ತದೆ. ಈಗ ಅದೇ ಮಾತು ಯತೀಂದ್ರ ಅವರಿಂದ ಬಂದಿದೆ. ಸತೀಶ್ ಜಾರಕಿಹೊಳಿ ಹಳೆಯ ಕೆಸೆಟ್ ರೀ-ಪ್ಲೇ ಹಾಕಿದ್ದಾರೆ.
ಇದಕ್ಕೆಲ್ಲ ಕಾರಣ ಆಗಿದ್ದು ಶಾಸಕರಿಗೆ ದೂರವಾಣಿ ಕರೆ ಮಾಡಿ ಒನ್ ಟು ಒನ್ ಆಗಿ ಮಾತುಕತೆ ನಡೆಸುತ್ತಿದ್ದಾರೆ. ಶಾಸಕರಿಗೆ ದೂರವಾಣಿ ಕರೆ ಮಾಡಿ ಅವರ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದ ನಂತರವಂತೆ. ಶಾಸಕರ ಸಮಸ್ಯೆಗಳನ್ನು ಆಲಿಸುವ ನೆಪದಲ್ಲಿ ದೂರವಾಣಿ ಕರೆ ಮಾಡಿ ಮಾತನ್ನಾಡುತ್ತಿರುವ ಡಿಕೆಶಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ. ಅದರ ಫಲಶೃತಿಯೇ ಸತೀಶ್ ಜಾರಕಿಹೊಳಿ ಅವರನ್ನು ಸಿಎಂ ಸ್ಥಾನಕ್ಕೆ ನಾಮಿನೇಟ್ ಮಾಡುವ ಓಪನ್ ಹೇಳಿಕೆ.
ಡಿಕೆ ರಿಯಾಕ್ಷನ್ ಏನು..?
ಏನು ಹೇಳಿದ್ದಾರೋ ಅವರನ್ನೇ ಕೇಳಬೇಕು, ಅವರ ಬಳಿಯೇ ಹೋಗಿ ಕೇಳಿ. ನನ್ನ ಬಳಿ ಕೇಳಿದರೆ ಏನಾಗಬೇಕು. ನನ್ನ ಬಗ್ಗೆ ಯಾರೂ ಚರ್ಚೆ ಮಾಡುವ ಅಗತ್ಯವಿಲ್ಲ. ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹೇಳಿದ್ದೀವಿ, ಪಕ್ಷ ಏನು ಹೇಳುತ್ತೋ ಅದನ್ನು ಒಟ್ಟಿಗೆ ಮಾಡಿಕೊಂಡು ಹೋಗ್ತೀವೆಂದು ಹೇಳಿದ್ದೇವೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ನೋಟಿಸ್ ಕೊಡುವ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ. ಇಷ್ಟಕ್ಕೂ ತಮ್ಮದೇ ಬೆಂಬಲಿಗರಿಗೆ ನೋಟಿಸ್ ಕೊಟ್ಟಿದ್ದಾರಾದರೂ.. ಅವು ಏನಾದವು ಎಂಬುದು ಯಾರಿಗೂ ಗೊತ್ತಿಲ್ಲ. ಪಂಚಮುಖಿ ಆಂಜನೇಯ ದೇಗುಲದಲ್ಲಿ ಮಧು ಅಭಿಷೇಕ, 108 ಮಂತ್ರಗಳ ಮೂಲಕ ವಿಶೇಷ ಪುಷ್ಪಾರ್ಚನೆ ಸಲ್ಲಿಸಿರುವ ಡಿಕೆ, ದೇವರು ಮತ್ತು ಹೈಕಮಾಂಡ್ ನಂಬಿಕೊಂಡಿದ್ದಾರೆ.
ಆದರೆ.. ಸಿದ್ಧರಾಮಯ್ಯ ಚದುರಂಗ ಪ್ರವೀಣನಂತೆ ದಾಳ ಉರುಳಿಸುತ್ತಿದ್ದಾರೆ. ಮೊದಲಿಗೆ ಸತೀಶ್ ಜಾರಕಿಹೊಳಿ ಹೆಸರನ್ನು ಅವರ ಮಗನಿಂದಲೇ ಹೇಳಿಸಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಪರಮೇಶ್ವರ್ ʻನಾನೇಕೆ ಸಿಎಂ ಆಗಬಾರದುʼ ಎಂದು ಪ್ರಶ್ನೆ ಮಾಡಿದ್ದರು. ಇನ್ನು ಕೆಲವೇ ದಿನಗಳಲ್ಲಿ ಹೆಚ್ ಸಿ ಮಹದೇವಪ್ಪ ಅವರ ಹೆಸರೂ ಬಹಿರಂಗವಾಗಿ ಚರ್ಚೆಯಾಗಬಹುದು. ರಾಜಕೀಯದಲ್ಲಿ ಎಲ್ಲೋ ಸ್ವಿಚ್ ಒತ್ತಿದರೆ.. ಇನ್ನೆಲ್ಲೋ ಬಲ್ಬ್ ಹೊತ್ತಿಕೊಳ್ಳುತ್ತದೆ.



