ಪುನೀತ್ ರಾಜ್ ಕುಮಾರ್ (Puneetha Rajkumar) ಅವರನ್ನು ಕನ್ನಡಿಗರು ಮರೆತಿಲ್ಲ. ಮರೆಯುವಂತೆಯೂ ಇಲ್ಲ. ಈ ಹೃದಯವಂತನ ಸಾವು, ಕೋಟ್ಯಂತರ ಕನ್ನಡಿಗರಿಗೆ ಆಘಾತ ಎಂದರೂ ತಪ್ಪಾಗಲಿಕ್ಕಿಲ್ಲ. 46ನೇ ವಯಸ್ಸಿಗೆ ಮೃತಪಟ್ಟರು. ಹಠಾತ್ ಹೃದಯಾಘಾತ ಎಂದು ವೈದ್ಯರು ಕಾರಣ ಕೊಟ್ಟರು. ಏನೋ ಎದೆನೋವು ಎಂದು ಚಡಪಡಿಸುತ್ತಿದ್ದ ಪುನೀತ್ ಅವರನ್ನು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ.. ಅಶ್ವಿನಿ ಅವರ ಮಡಿಲಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಫಿಟ್ ಆಗಿರಬೇಕು.. ದೇಹವನ್ನು ಚೆನ್ನಾಗಿಟ್ಟುಕೊಳ್ಳಬೇಕು.. ಟೆನ್ಷನ್ ಇಟ್ಟುಕೊಳ್ಳಬಾರದು, ನಗು ನಗ್ತಾ ಇರಬೇಕು.. ಮನಸ್ಸಿನಲ್ಲಿ ಯಾವುದನ್ನೂ ಇಟ್ಟುಕೊಳ್ಳಬಾರದು.. ಇನ್ನೊಬ್ಬರಿಗೆ ಕೆಡುಕು ಬಯಸಬಾರದು.. ಹೀಗೆ ಸಂತನಂತೆಯೇ ಸಂದೇಶ ಸಾರುತ್ತಿದ್ದ, ಹಾಗೆಯೇ ಬದುಕಿದ್ದ ಪುನೀತ್ ಎಂಬ ಹೃದಯ ಕಣ್ಮರೆಯಾಗಿದ್ದನ್ನು ಇವತ್ತಿಗೂ ಅಭಿಮಾನಿ ದೇವರುಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹಠಾತ್ ಹೃದಯಾಘಾತ ಎಷ್ಟು ಅಪಾಯಕಾರಿ ಎಂಬುದು ಸಾಮಾನ್ಯ ಜನರಿಗೂ ಗೊತ್ತಾಗಿದ್ದು ಆಗ.
ಈಗ ಆ ನೆನಪಿನಲ್ಲೇ ಸಿದ್ದರಾಮಯ್ಯ (Siddaramaiah budget) ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯ ಬಜೆಟ್ಟಿನಲ್ಲೂ ಅಪ್ಪು ಅಕಾಲಿಕ ಮರಣ ನೆನಪಾಗಿ ಕಾಡಿದೆ. ಪುನೀತ್ ರಾಜಕುಮಾರ್ ಸ್ಮರಣಾರ್ಥ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators (AED) ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ 6 ಕೋಟಿ ರೂಪಾಯಿ ಅನುದಾನ ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ.
ಸಿದ್ದರಾಮಯ್ಯ (Siddaramaiah) ಅವರನ್ನು ಪುನೀತ್ ಪ್ರೀತಿಯಿಂದ ನೊಡುತ್ತಿದ್ದವರು. ಕುಟುಂಬದ ಸದಸ್ಯರಂತೆಯೇ ಇದ್ದವರು. ಸಿದ್ದರಾಮಯ್ಯ ಅವರಿಗೂ ಹಾಗೇ. ಶಕ್ತಿಧಾಮದಲ್ಲಿ ಶಿವಣ್ಣ-ಗೀತಾ (Shiva Rajkumar) ಹೊಸ ಕಟ್ಟಡ ನಿರ್ಮಾಣ ಮಾಡಿದಾಗಲೂ ಸಿದ್ದರಾಮಯ್ಯ ನೆರವು ನೀಡಿದ್ದರು. ರಾಘವೇಂದ್ರ ರಾಜಕುಮಾರ್ ಅವರ ಕನಸು, ಈಗ ಯುವರಾಜ್ ಕುಮಾರ್ (Yuva Rajkumar) ನಡೆಸುತ್ತಿರುವ ಡಾ.ರಾಜ್ ಅಕಾಡೆಮಿ ಜೊತೆಯಲ್ಲೂ ಸಿದ್ದರಾಮಯ್ಯ ಇದ್ದರು. ಸಿದ್ದರಾಮಯ್ಯ ಅವರಿಗೂ ಪುನೀತ್ ಸಾವು ಒಂದು ಆಘಾತವೇ.
ಹೀಗಾಗಿಯೇ ಪುನೀತ್ ಹೆಸರಿನಲ್ಲೇ ಹೃದಯ ಸಂಬಂಧಿ ಚಿಕಿತ್ಸೆಗಳಿಗೆ ಬೇಕಾದ ವ್ಯವಸ್ಥೆಯನ್ನು ಕೊಡಮಾಡಿದ್ದಾರೆ ಸಿದ್ದರಾಮಯ್ಯ. ಅದಕ್ಕಾಗಿ ಅನುದಾನವನ್ನೂ ಒದಗಿಸಿದ್ದಾರೆ. ಸಿದ್ದರಾಮಯ್ಯ ಹಣಕಾಸು ಸಚಿವರಾಗಿ ದಾಖಲೆಯ 14ನೇ ಹಣಕಾಸು ಬಜೆಟ್ ಮಂಡಿಸಿದ್ದಾರೆ. ಎರಡನೇ ಬಾರಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಇದು 7ನೇ ಬಜೆಟ್. ಮಾಜಿ ಸಿಎಂ ಬೊಮ್ಮಾಯಿ, ಲೇಖಾನುದಾನ ಮಂಡಿಸಿದ್ದರು. ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ.
ಒಂದು ಹಠಾತ್ ಸಾವು.. ಹಠಾತ್ ಸಾವು ಮೂಡಿಸಿದ ಜಾಗೃತಿ.. ಎರಡನ್ನೂ ಸಿದ್ದರಾಮಯ್ಯ ಬಜೆಟ್ಟಿನಲ್ಲಿ ತಂದಿದ್ದಾರೆ. ಪುನೀತ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕ ರತ್ನ ಪುರಸ್ಕಾರ ಘೋಷಿಸಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸ್ವೀಕರಿಸಿದ್ದರು. ತಂದೆ ಮತ್ತು ಮಗ ಇಬ್ಬರೂ ಕರ್ನಾಟಕ ರತ್ನವಾದ ಅಪರೂಪದ ಪ್ರಕರಣ ಇದು. ಪುನೀತ್ ಅವರು ನಿಧನಾನಂತರ ನೇತ್ರದಾನ ಜಾಗೃತಿಯೂ ಮೂಡಿ, ಲಕ್ಷಾಂತರ ಜನ ಕಣ್ಣು ದಾನ ಮಾಡಿದರು. ಈಗ ಹೃದಯ ಜಾಗೃತಿಗೂ ಪುನೀತ್ ಬಂದಿದ್ದಾರೆ. ಪುನೀತ್ ಇಲ್ಲದೇ ಇರಬಹುದು, ಆದರೆ ಇಂತಹ ಜಾಗೃತಿ ಕೆಲಸಗಳ ಮೂಲಕ ಪುನೀತ್ ಜೀವಂತವಾಗಿಯೇ ಇದ್ದಾರೆ.



