ಸಿದ್ದರಾಮಯ್ಯ ಅವರು 2028ಕ್ಕೆ ಎಲೆಕ್ಷನ್ ಎದುರಿಸ್ತಾರಾ.. ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗಳ ಮಧ್ಯೆ ಒಂದು ಕುತೂಹಲದ ಮಾಹಿತಿ ಹೊರಬಿದ್ದಿದೆ. ಅದೇನು ಎಂದರೆ ಸಿದ್ದರಾಮಯ್ಯ ಅವರು 2028ಕ್ಕೆ ಎಸ್ ಎಂ ಕೃಷ್ಣ ಮಾಡೆಲ್ ಫಾಲೋ ಮಾಡ್ತಾರಂತೆ. ಅಂದರೆ ಬೆಂಗಳೂರಿನಲ್ಲೇ ಒಂದು ಸೇಫ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳೋ ಪ್ಲಾನ್ ಮಾಡಿದ್ದಾರಂತೆ ಸಿದ್ದರಾಮಯ್ಯ. ಆದರೆ.. ಸದ್ಯಕ್ಕೆ ಸಿದ್ದರಾಮಯ್ಯ ಅವರ ಟೀಂ ಈ ಕುರಿತು ಉತ್ಸುಕವಾಗಿದೆ. ಅದಕ್ಕೆ ಸಿದ್ದರಾಮಯ್ಯ ಹೂಂಗುಟ್ಟಿದ್ದಾರೆ.
ಸಿದ್ದರಾಮಯ್ಯ ಅವರು 2028ಕ್ಕೆ ವರುಣಾದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಆ ಕ್ಷೇತ್ರವನ್ನು ಪುನಃ ತಮ್ಮ ಪುತ್ರ ಯತೀಂದ್ರ ಅವರಿಗೇ ಬಿಟ್ಟು ಕೊಡ್ತಾರೆ. ಹಾಗಂತ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಹೋಗೋದಿಲ್ಲ. ಏಕೆಂದರೆ ಅದು ಸುಲಭವಾದ ಕ್ಷೇತ್ರವಲ್ಲ. ಗೆಲುವಿನ ಆರಂಭ ನೀಡಿದ ಕ್ಷೇತ್ರವೂ ಅದೇ.. ಜೊತೆಗೆ ಮತ್ತೆ ಮತ್ತೆ ಸೋಲು ನೀಡಿದ ಕ್ಷೇತ್ರ ಅದು. ಮುಖ್ಯಮಂತ್ರಿಯಾಗಿದ್ದವರನ್ನೂ ಸೋಲಿಸಿದ ಕ್ಷೇತ್ರ ಚಾಮುಂಡೇಶ್ವರಿ. ಅಲ್ಲಿ ಮತ್ತೆ ಸೋತುಬಿಟ್ಟರೆ.. ಎಂಬ ಆತಂಕ ಸಿದ್ದರಾಮಯ್ಯ ಅವರಿಗೆ ಇದೆ. ಹೀಗಾಗಿಯೇ ವರುಣಾವನ್ನು ಮಗನಿಗೆ ಬಿಟ್ಟ ನಂತರವೂ, ಚಾಮುಂಡೇಶ್ವರಿಗೆ ಹೋಗುತ್ತಿಲ್ಲ. ಹಾಗಂತ 2018ರಲ್ಲಿ ಮರ್ಯಾದೆ ಉಳಿಸಿದ್ದ ಬಾದಾಮಿ ಕ್ಷೇತ್ರಕ್ಕೂ ಕಾಲಿಡುತ್ತಿಲ್ಲ. ಬಾದಾಮಿಯಲ್ಲಿ ಗೆದ್ದಿದ್ದರೂ, ತುಸು ಯಾಮಾರಿದ್ದರೆ ತಮ್ಮ ರಾಜಕೀಯ ಜೀವನಕ್ಕೆ ಫುಲ್ ಸ್ಟಾಪ್ ಬೀಳುತ್ತಿತ್ತು ಎಂಬ ಆತಂಕ ಸಿದ್ದರಾಮಯ್ಯ ಅವರಿಗೆ ಇದೆ. ಹೀಗಾಗೀಯೇ ಸಿದ್ದರಾಮಯ್ಯ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಪ್ರಾಬಲ್ಯ ಇದ್ದರೂ, ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇದೆ. ಅಂತಹ ಕ್ಷೇತ್ರಗಳು ಯಾವುವು ಎಂದು ಹುಡುಕಾಟ ನಡೆಸಿದಾಗ ಎರಡು ಕ್ಷೇತ್ರಗಳು ಕಣ್ಣಿಗೆ ಬಿದ್ದಿವೆ. ಒಂದು ಚಿಕ್ಕಪೇಟೆ ಹಾಗೂ ಎರಡನೆಯದ್ದು ಪದ್ಮನಾಭನಗರ ಕ್ಷೇತ್ರ.
ಪದ್ಮನಾಭನಗರ ಕ್ಷೇತ್ರ ಅಚ್ಚರಿ ಹುಟ್ಟಿಸುತ್ತಿರುವುದು ನಿಜ. ಏಕೆಂದರೆ ಇದು ಆರ್ ಅಶೋಕ್ ಅವರ ಭದ್ರ ಕೋಟೆ. ಗೆಲ್ಲುವುದು ಸುಲಭ ಅಲ್ಲ. ಪದ್ಮನಾಭನಗರ ಕ್ಷೇತ್ರದಲ್ಲಿ ಅಶೋಕ್ ಕಾಲಿಟ್ಟಿದಾಗಿನಿಂದ ಸೋತೇ ಇಲ್ಲ. ಇಂತಹ ರಿಸ್ಕ್ ಸಿದ್ದರಾಮಯ್ಯ ಅವರಿಗೆ ಬೇಕಿತ್ತಾ ಅನ್ನೋದು ಪ್ರಶ್ನೆ. ಆದರೆ ಅದಕ್ಕೆ ಸಿದ್ದು ಬಣದವರು ನೀಡುವ ಉತ್ತರವೇ ಬೇರೆ. ಪದ್ಮನಾಭನಗರಲ್ಲಿ ಒಟ್ಟಾರೆ ಶೇ.50ಕ್ಕಿಂತ ಹೆಚ್ಚು ಮತದಾರರು ಮುಸ್ಲಿಂ, ಕುರುಬ ಮತ್ತು ದಲಿತರು. ಹೀಗಾಗಿ ಪದ್ಮನಾಭನಗರ ಅಸಾಧ್ಯ ಕ್ಷೇತ್ರ ಅಲ್ಲ. ಸಿದ್ದರಾಮಯ್ಯ ನಿಂತರೆ ಕ್ಲೀನ್ ಸ್ವೀಪ್ ಮಾಡಬಹುದು ಎಂಬ ಲೆಕ್ಕಾಚಾರ ಮುಂದಿಡ್ತಾರೆ.
ಇನ್ನು ಚಿಕ್ಕಪೇಟೆಯೂ ಅಷ್ಟೇ.ಈ ಹಿಂದೆ ಎಸ್ ಎಂ ಕೃಷ್ಣ ಅವರಿಗೆ ರಿಲ್ಯಾಕ್ಸ್ ನೀಡಿದ್ದ ಕ್ಷೇತ್ರ. ಇತ್ತೀಚೆಗೆ ನಿಧನರಾದ ಆರ್ ವಿ ದೇವರಾಜ್, ಕ್ಷೇತ್ರವನ್ನು ಕೃಷ್ಣ ಅವರಿಗೆ ಬಿಟ್ಟುಕೊಟ್ಟಿದ್ದರು. ಮುಸ್ಲಿಮರು ಹೆಚ್ಚಿರುವ ಕ್ಷೇತ್ರ. ಹೀಗಾಗಿ ಚಿಕ್ಕಪೇಟೆಯ ಮೇಲೂ ಸಿದ್ದರಾಮಯ್ಯ ಬಣದವರು ಕಣ್ಣಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಸ್ಪರ್ಧೆ ಮಾಡಿದರೆ ಜಿಬಿಎ ವ್ಯಾಪ್ತಿ ಹಾಗೂ ಬೆಂಗಳೂರು ಸುತ್ತಮುತ್ತ ಅನುಕೂಲವಾಗಲಿದೆ ಎಂದು ಅವರ ಲೆಕ್ಕಾಚಾರ.



