ಅಕ್ಟೋಬರ್ ತಿಂಗಳಿಗೆ ಕಾಲಿಟ್ಟಾಗಿದೆ. ಸೆಪ್ಟೆಂಬರ್ ಮುಗಿದಿದೆ. ಸೆಪ್ಟೆಂಬರ್ ಕ್ರಾಂತಿಯ ಕಥೆ ಠುಸ್ ಆಗಿದೆ. ಯಾವ ಕ್ರಾಂತಿಯೂ ಆಗಿಲ್ಲ ಸಿದ್ಧರಾಮಯ್ಯ ನವೆಂಬರ್ ನಂತರ ರಾಜೀನಾಮೆ ಕೊಡ್ತಾರಂತೆ. ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸಿ ರಾಜಕೀಯಕ್ಕೆ ಗುಡ್ ಬೈ ಹೇಳ್ತಾರಂತೆ. ಇಂತಹ ಅಂತೆ ಕಂತೆಗಳ ನಡುವೆಯೇ ಸಿದ್ಧರಾಮಯ್ಯ ʻಇನ್ನೂ ಎರಡೂವರೆ ವರ್ಷ ನಾನೇ ಸಿಎಂʼ ಎಂದಿದ್ದಾರೆ. ಮತ್ತೊಮ್ಮೆ. ಆದರೆ ಪತ್ರಕರ್ತರು ಸುದ್ದಿ ಹುಡುಕ್ತಾ ಇರೋದು.. ಅಷ್ಟೆಲ್ಲ ಹೇಳಿದ ಮೇಲೆ.. ಕೊನೆಯದಾಗಿ ಹೇಳಿರುವ ಮಾತಿದೆಯಲ್ಲ.. ಆ ಒಂದು ಮಾತಿನಲ್ಲಿ.
ಮೈಸೂರಿನಲ್ಲಿ ಮಾತನಾಡಿರುವ ಸಿದ್ಧರಾಮಯ್ಯ ಮಖ್ಯಮಂತ್ರಿಯಾಗಿ ಎರಡೂವರೆ ವರ್ಷ ನಾನೆ ಇರುತ್ತೇನೆ. ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ಧಾರೆ ಸಿಎಂ ಸಿದ್ಧರಾಮಯ್ಯ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು, ಬಜೆಟ್ ಮಂಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಹೇಳಿಕೆ ಕೊಟ್ಟಿದ್ದರು. ಆದರೂ ನಾನೇ ಎರಡನೇ ಬಾರಿಗೂ ಸಿಎಂ ಆಗಿ ಬಜೆಟ್ ಮಂಡಿಸಿದ್ದೇನೆ ಎಂದಿರುವ ಸಿದ್ಧರಾಮಯ್ಯ, ಬಿಜೆಪಿಯವರನ್ನು ರೋಸ್ಟ್ ಮಾಡಿದ್ದಾರೆ. ಹಾಗೆ ರೋಸ್ಟ್ ಮಾಡಿ ಆದ ಮೇಲೆ ಒಂದು ಮಾತು ಹೇಳಿದ್ದಾರೆ. ನಿಜವಾದ ಸುದ್ದಿ ಅಲ್ಲಿದೆ.
ಸಿದ್ಧರಾಮಯ್ಯ ʻʻನನ್ನ ಕಾರಿನ ಮೇಲೆ ಕಾಗೆ ಬಂದು ಕುಳಿತದ್ದಕ್ಕೆ ಅಧಿಕಾರ ಕಳೆದುಕೊಳ್ತಾರೆ ಎಂದರು. ಆದರೆ, ಅವರು ಹೇಳಿದ್ದು ಯಾವುದು ಆಗಿಲ್ಲ ಚಾಮರಾಜನಗರಕ್ಕೆ ಹೋದರೆ ಸಿಎಂ ಪಟ್ಟ ಕಳೆದುಕೊಳ್ತಾರೆ ಎಂದಿದ್ದರು. ಆದರೂ ನಾನು ಹೋಗಿ ಬಂದೆ. ಈಗ ಏನಾಗಿದೆ. ನವೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಕ್ರಾಂತಿಯಾಗತ್ತೆ ಎಂದು ಹೇಳುತ್ತಿದ್ದಾರೆ. ಅವರು ಮಾತನಾಡಲಿ ಸರ್ಕಾರಕ್ಕೆ ನವೆಂಬರ್‌ನಲ್ಲಿ ಎರಡೂವರೆ ವರ್ಷ ತುಂಬುತ್ತದೆ. ಬಿಜೆಪಿಯವರು ಭವಿಷ್ಯ ಹೇಳೋಕೆ ಬರಲ್ಲ. ಅವರು ಭವಿಷ್ಯಕಾರರಲ್ಲ. ಅವರು ಹೇಳೋದೆಲ್ಲ ಎಂದಿಗೂ ಸುಳ್ಳಾಗುತ್ತದೆ..ʼʼ ಎಂದು ಲೇವಡಿ ಮಾಡಿದ್ದಾರೆ.
ಸಿದ್ಧರಾಮಯ್ಯ ಹೇಳೋದೇನೋ ಸರಿ. ಆದರೆ.. ಸಿದ್ಧರಾಮಯ್ಯ ಅಷ್ಟು ಹೇಳಿದ ನಂತರವೂ.. ಹೈಕಮಾಂಡ್ ಏನೂ ಹೇಳ್ತಾರೋ ಅದನ್ನ ನಾವು ಪಾಲನೆ ಮಾಡ್ತೇವೆ ಎಂದು ಹೇಳ್ತಾರಲ್ಲ.. ಅಲ್ಲಿಯೇ ಪತ್ರಕರ್ತರು ಹಿಡನ್ ಸುದ್ದಿ ಹುಡುಕೋದು. ಏಕೆಂದರೆ ಸತ್ಯ ಇರೋದೇ ಅಲ್ಲಿ.
ಪ್ರತಿ ಬಾರಿ ಸಿದ್ಧರಾಮಯ್ಯ ನಾನೇ 5 ವರ್ಷ ಸಿಎಂ ಎಂದು ಹೇಳುವುದು ಮತ್ತು ಕೊನೆಗೆ ಹೈಕಮಾಂಡ್ ಹೇಳಿದಂತೆ ಎನ್ನುವುದು ನಡೆಯುತ್ತಲೇ ಇದೆ. 2013ರಲ್ಲಿ ಸಿಎಂ ಆಗಿದ್ದಾಗ ಇಂತಹ ಚರ್ಚೆಗಳೇ ನಡೆದಿರಲಿಲ್ಲ. ಪ್ರಶ್ನೆಯೂ ಉದ್ಭವವಾಗಿರಲಿಲ್ಲ. ಆದರೆ.. ಈಗ ಹಾಗಲ್ಲ.
ಹೌದು, ಸಿದ್ಧರಾಮಯ್ಯ ಅವರೇ ಐದಕ್ಕೆ ಐದೂ ವರ್ಷ ಸಿಎಂ ಎಂಬ ಮಾತನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಾಗಲೀ.. ಖರ್ಗೆಯವರ ಹೈಕಮಾಂಡ್ ಆಗಿರುವ ಸೋನಿಯಾ, ರಾಹುಲ್ ಗಾಂಧಿ, ಪ್ರಿಯಾಂಕಾ ಆಗಲೀ ಹೇಳುತ್ತಿಲ್ಲ. ಐದಕ್ಕೆ ಐದೂ ವರ್ಷ ಸಿದ್ಧರಾಮಯ್ಯ ಅವರೇ ಸಿಎಂ ಎಂದು ಅವರು ಹೇಳಿಬಿಟ್ಟರೆ.. ಆಗ ಇಡೀ ಪ್ರಶ್ನೆಗೆ ಫುಲ್ ಸ್ಟಾಪ್ ಇಟ್ಟಂತೆ ಆಗುತ್ತದೆ.



