ದರ್ಶನ್ ಕೇಸಿನಲ್ಲಿ ಎಸ್‌ಪಿಪಿ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಸಿಎಂ ಸಿದ್ದರಾಮಯ್ಯ. ಆದರೆ, ಈ ಪ್ರಕರಣದಲ್ಲಿ ಕಥೆ ಬೇರೆಯೇ ಇದೆ ಎನ್ನುವಂತಿದೆ. ಏಕೆಂದರೆ ಖುದ್ದು ಪರಮೇಶ್ವರ್ ಅವರೇ ನೀಡಿರುವ ಹೇಳಿಕೆ. ಪರಮೇಶ್ವರ್ ಪ್ರಕಾರ ಪ್ರಸ್ತಾಪ ಇದೆ ಎನ್ನುವ ಅರ್ಥ ಬರುತ್ತಿದೆ. ಆದರೆ, ಸಿದ್ದರಾಮಯ್ಯ ಮಾತ್ರ ನೋ ನೋ ಎನ್ನುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕೇಸ್ ತನಿಖೆ ಹಂತದಲ್ಲಿ ಇರುವಾಗಲೇ ವಿಶೇಷ ಅಭಿಯೋಜಕರ ಬದಲಾವಣೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿತ್ತು. ಗೃಹ ಸಚಿವ ಪರಮೇಶ್ವರ್ ಅವರೂ ಕೂಡಾ ಎಸ್ʻಪಿಪಿ ಬದಲಾದರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದರು. ಹೀಗಾಗಿ ಸುದ್ದಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಬಂದಿತ್ತು. ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಎಸ್‌ಪಿಪಿ ಬದಲಾವಣೆಯ ಪ್ರಸ್ತಾಪವೆ ಇಲ್ಲ. ಪ್ರಸನ್ನ ಕುಮಾರ್ ಅವರನ್ನ ಬದಲಾವಣೆ ಮಾಡಿ ಎಂದು ಯಾರು ನನ್ನ ಭೇಟಿ ಮಾಡಿಲ್ಲ. ಒತ್ತಡವನ್ನೂ ಹಾಕಿಲ್ಲ. ತನಿಖೆ ಮಾಡಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಡಲಾಗಿದೆ. ಒಂದು ವೇಳೆ ಯಾರಾದ್ರೂ ಒತ್ತಡ ಹಾಕಿದರು ನಾವು ಕೇಳಲ್ಲ.ಎಸ್‌ಪಿಪಿ ಬದಲಾವಣೆಯ ಪ್ರಸ್ತಾವನೆ ನನ್ನ ಮುಂದೆ ಬಂದಿಲ್ಲ. ಬದಲಾವಣೆ ಬಗ್ಗೆ ನನಗೇನು ಗೊತ್ತಿಲ್ಲ. ಈ ಸಂಬಂಧ ನನ್ನ ಮೇಲೆ ಯಾರು ಒತ್ತಡ ಹಾಕಿಲ್ಲ. ಒತ್ತಡ ಹಾಕಿದ್ರು ನಾನು ಕೇಳಲ್ಲ. ಸಚಿವರು ಒತ್ತಡ ಹಾಕ್ತಿದ್ದಾರೆ ಅನ್ನೋದೆಲ್ಲ ಸತ್ಯವಲ್ಲ. ವಿರೋಧ ಪಕ್ಷದವರು ಹೇಳುವುದೆಲ್ಲ ನಿಜವಾಗಿರುತ್ತಾ?. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರಿಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ಕೊಡಲಾಗಿದೆ. ಇದೆಲ್ಲ ಹೇಳೋದೆಲ್ಲ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..
ಆದರೆ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಎಸ್ʻಪಿಪಿ ಬದಲಾವಣೆ ಸಾಧ್ಯವೇ ಇಲ್ಲ, ಪ್ರಸ್ತಾಪವೂ ಇಲ್ಲ ಎಂದ ಮೇಲೆ ಗೃಹ ಸಚಿವ ಪರಮೇಶ್ವರ್ ಅವರೇಕೆ ಆ ರೀತಿ ಹೇಳಿದರು ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಇದೆ.
ಪ್ರಸನ್ನ ಕುಮಾರ್ ಇತಿಹಾಸ ವ್ಯಕ್ತಿತ್ವ ಎಂಥದ್ದು ?
ರಾಜ್ಯ ಸರ್ಕಾರ ಜೂನ್ 15ರಂದು ಹಿರಿಯ ವಕೀಲ ಪಿ.ಪ್ರಸನ್ನಕುಮಾರ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಿತ್ತು. ಎಸ್‌ಪಿಪಿ ಸಹಾಯಕರಾಗಿ ವಕೀಲ ಸಿ.ಸಚಿನ್ ಅವರನ್ನು ನಿಯೋಜಿಸಿತ್ತು. ಪ್ರಸನ್ನ ಅವರ ಖ್ಯಾತಿಯೇನೆಂದರೆ ಎನ್ʻಐಎ ಹಾಗೂ ಸಿಬಿಐ ಪರ ವಕೀಲರಾಗಿ ಕೆಲಸ ಮಾಡಿದ ಅನುಭವ ಇರುವವರು. ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದರಲ್ಲಿ ಯಶಸ್ವಿಯಾಗಿರುವ ಪ್ರಕರಣಗಳೇ ಹೆಚ್ಚು. ಸೋತಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅವರು ವಕೀಲಿಕೆ ಮಾಡಿದ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿರುವ ಪ್ರಮಾಣ ಶೇ.90ಕ್ಕಿಂತಲೂ ಹೆಚ್ಚು. ಇನ್ನು ಎನ್ʻಐಎ ಪರ ವಾದಿಸಿದ್ದ ಉಗ್ರಗಾಮಿ ಪ್ರಕರಣಗಳಲ್ಲಂತೂ ಪ್ರಸನ್ನ ಅವರ ಸಾಧನೆ ಶೇ.99.99 ಕಾಂಪ್ರಮೈಸ್ ಆಗಲ್ಲ, ಹಾಗೂ ಪ್ರಭಾವಗಳಿಗೆ ಬಗ್ಗಲ್ಲ ಎನ್ನುವುದು ಪ್ರಸನ್ನ ಅವರ ಹಿರಿಮೆ.
ಬಿಜೆಪಿ ಶಾಸಕ, ಸಂಸದರಿಂದ ಸಿಎಂ ಮೇಲೆ ಒತ್ತಡ : ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಿಜೆಪಿಯವರಿಂದ ಒತ್ತಡ ಬಂದಿವೆ. ಆದರೆ ಎಲ್ಲಿಂದ ಒತ್ತಡ ಬಂದಿದ್ದರೂ ಪೊಲೀಸರು ಮಣಿದಿಲ್ಲ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಯಾವುದೇ ಒತ್ತಡಕ್ಕೆ ಮಣಿದಿಲ್ಲ. ಅದಕ್ಕೆ ಅವರಿಗೆ ನಾನು ಅಭಿನಂದನೆ ಸಲ್ಲಿಸಿದ್ದೇನೆ ಎಂದಿದ್ದಾರೆ ಪೊನ್ನಣ್ಣ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಆರೋಪಿಗಳು ಬಿಜೆಪಿ ಶಾಸಕರು ಸಂಸದರೊಂದಿಗೆ ನೇರ ಸಂಬಂಧವಿಟ್ಟುಕೊಂಡಿದ್ದಾರೆ. ಅವರು ಬೇನಾಮಿ ಆಗಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
14 ನೇ ಆರೋಪಿ ಪ್ರದೋಷ್ ಬಿಜೆಪಿಯ ಶಾಸಕರು, ಸಂಸದರೊಂದಿಗೆ ನೇರ ಸಂಬಂಧ ಹೊಂದಿದ್ದಾನೆ. ಬೇನಾಮಿಯಾಗಿ ಅವರು ಕೆಲಸ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು. ತನಿಖೆ ಆದರೆ ಯಾರು ಒತ್ತಡ ಹಾಕಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದಿರುವ ಪೊನ್ನಣ್ಣ ಚುನಾವಣೆಯಲ್ಲಿ ದರ್ಶನ್ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಈತ ಆರೋಪಿ ಅಂತ ಗೊತ್ತಿರಲಿಲ್ಲ, ಆದರೆ ಬಿಜೆಪಿಯವರಿಗೆ ಇದರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ. ಏಕೆಂದರೆ ಪ್ರಜ್ವಲ್ ರೇವಣ್ಣನ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಆತನಿಗೆ ಟಿಕೆಟ್ ಕೊಟ್ಟಿರುವ ಪಕ್ಷ ಅದು. ಪ್ರಜ್ವಲ್ ರೇವಣ್ಣ ಪರವಾಗಿ ಪ್ರಧಾನಿಯವರು ಬಂದು ಪ್ರಚಾರ ಮಾಡಿದ್ದರು ಎಂದು ದೂರಿದ್ದಾರೆ.



