ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಸಿಎಂ ಕುರ್ಚಿ ಹೋರಾಟ, ಗದ್ದಲ, ತಂತ್ರ ಪ್ರತಿತಂತ್ರ, ರಾಜತಂತ್ರಗಳೇನೇ ಇರಲಿ, ಇಬ್ಬರೂ ಸಾರ್ವಜನಿಕವಾಗಿ ಘನತೆಯಿಂದಲೇ ನಡೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಪರ ಮತ್ತು ಡಿಕೆ ಪರ ಇರುವ ಕೆಲವು ನಾಯಕರಷ್ಟೇ ಮಿತಿ ಮೀರಿ ವರ್ತನೆ ತೋರುವುದು. ಆದರೆ, ಈ ನಡುವೆ ಸಿದ್ದರಾಮಯ್ಯ ಅವರು, ಡಿಸಿಎಂ ಡಿಕೆ ಶಿವಕುಮಾರ್ ಪ್ರೀತಿಯಿಂದ ಬಾಯಿಗೇ ಇಟ್ಟ ಲಡ್ಡುವನ್ನು ತೆಗೆದು ಎಸೆದಿದ್ದಾರೆ.
ವಿಜಯಪುರದಲ್ಲಿ ಶುಕ್ರವಾರ ನಡೆದ ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿನ್ನಿಸಿದ ಲಡ್ಡನ್ನು ಬಾಯಿಯಿಂದ ತೆಗೆದು ಬಿಸಾಡಿದ್ದಾರೆ. ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಚಿವ ಎಂಬಿ ಪಾಟೀಲ್ ಮನೆಯಲ್ಲಿ ತಯಾರಿಸಿದ ಲಡ್ಡನ್ನು ಸಿದ್ದರಾಮಯ್ಯನವರಿಗೆ ಮೊದಲು ನೀಡಿದರು. ನಂತರ ಎಂ.ಬಿ. ಪಾಟೀಲ್ ಅವರು ಅದೇ ಲಾಡುವನ್ನು ಡಿಕೆ ಶಿವಕುಮಾರ್ ಕೈಗೆ ಕೊಟ್ಟು ಮುಖ್ಯಮಂತ್ರಿಗೆ ತಿನ್ನಿಸುವಂತೆ ಕೇಳಿದರು. ಒತ್ತಾಯಕ್ಕೆ ಮಣಿದು ಡಿಸಿಎಂ ಡಿಕೆ ಶಿವಕುಮಾರ್ ಸಿಎಂಗೆ ಸಿಹಿ ತಿನ್ನಿಸಿದರು. ಆದರೆ, ಆ ಲಡ್ಡನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಂದ ತೆಗೆದು ಎಸೆದಿದ್ದಾರೆ.
ಸಿದ್ದರಾಮಯ್ಯ ಇತ್ತೀಚೆಗೆ ತಾನೇ ರೆಕಾರ್ಡ್ ರಾಮಯ್ಯ ಆಗಿ ಹೊರಹೊಮ್ಮಿದ್ದಾರೆ. ವಿಶೇಷ ಎಂದರೆ ದಿನದ ಲೆಕ್ಕಕ್ಕೆ ನಾಳೆ ರೆಕಾರ್ಡ್ ಆಗಲಿದೆ. ತಿಂಗಳ ಲೆಕ್ಕಕ್ಕೆ ಜನವರಿ 6ಕ್ಕೆ ರೆಕಾರ್ಡ್ ಸೃಷ್ಟಿಯಾಗಿತ್ತು. ಆ ವಿಷಯ ಬಿಡಿ, ಸಿದ್ದರಾಮಯ್ಯ ಆ ದಾಖಲೆ ಬರೆದ ನಂತರ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿಕೆಗಳ ಮೇಲೆ ಹೇಳಿಕೆ ನೀಡುತ್ತಿದ್ದಾರೆ.
ಡಿಕೆ ಶಿವಕುಮಾರ್ ಮೊನ್ನೆ ಹಾವೇರಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಎದುರೇ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಮಾತು ಕೊಟ್ಟರೆ ಉಳಿಸಬೇಕು. ಅದೇ ಜಗತ್ತಿನ ದೊಡ್ಡ ಶಕ್ತಿ ಎಂಬ ಹೇಳಿಕೆ ನೀಡಿದ್ದರು. ಯಾವಾಗ ಅದು ಸಿದ್ದರಾಮಯ್ಯಗೆ ಕೊಟ್ಟ ಟಾಂಗ್ ಎಂದು ಬಿಂಬಿತವಾಯ್ತೋ, ತಕ್ಷಣ ನಾನು ಆ ಹೇಳಿಕೆ ನೀಡಿದ್ದು ಕೇಂದ್ರ ಸರ್ಕಾರಕ್ಕೆ ಎಂದು ಮಾತು ತಿರುಗಿಸಿದ್ದರು.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿದೇಶದಿಂದ ಬಂದ ಬಳಿಕ ಅಧಿಕಾರ ಹಂಚಿಕೆ ವಿಚಾರ ಮಾತನಾಡೋಣ ಎಂದು ಡಿಕೆಶಿಗೆ ಸೂಚನೆ ಬಂದಿತ್ತು ಎನ್ನಲಾಗಿದೆ. ಹೀಗಾಗಿ ಈಗ ಕೊಟ್ಟ ಮಾತಿನ ಮಾತನಾಡುವ ಮೂಲಕ ಆ ವಿಚಾರವನ್ನು ಡಿಕೆಶಿ ನೆನಪಿಸಿದ್ದಾರಾ ಎಂಬ ಪ್ರಶ್ನೆ ಮೂಡಿತ್ತು.
ಸಿಎಂ ಆಗಿ ಸಿದ್ದರಾಮಯ್ಯ ಇಂದು 2794 ದಿನಗಳನ್ನು ಪೂರ್ತಿ ಮಾಡಿ ದೇವರಾಜ ಅರಸು ಅವರ ದಾಖಲೆ ಮುರಿದ ದಿನ ಹೇಳಿಕೆ ನೀಡಿದ್ದ ಡಿಕೆ ಶಿವಕುಮಾರ್ ಶುಭ ಕೋರಿದ್ದರು. ಅದೇ ದಿನ ಸಿದ್ದರಾಮಯ್ಯ ಸಿಎಂ ಆಗಿ ಪೂರ್ಣಾವಧಿ ಪೂರೈಸುವ ವಿಶ್ವಾಸವಿದೆ ಎಂದು ನೀಡಿದ್ದ ಹೇಳಿಕೆಗೆ ಬಹಳ ಸಂತೋಷ. ನಾನು ಅವರಿಗೆ ಶುಭ ಹಾರೈಸುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನೀವೇ ಗೊಂದಲ ಸೃಷ್ಟಿಸುತ್ತಿದ್ದೀರಿ ಎಂದು ಮಾಧ್ಯಮಗಳನ್ನೇ ವಿಲನ್ ಮಾಡಿದ್ದರು.
ಇದರ ನಡುವೆ ಅಸ್ಸಾಂಗೆ ವೀಕ್ಷಕರಾಗಿ ಆಯ್ಕೆ ಮಾಡಿರುವ ಎಐಸಿಸಿ, ಡಿಕೆ ಶಿವಕುಮಾರ್ ಅವರಿಗೆ ಬೇರೆಯದ್ದೇ ಸಂದೇಶ ಕೊಟ್ಟಿದೆ. ಲಡ್ಡು ಯಾರ ಬಾಯಿಗೆ ಬಿತ್ತು ಅನ್ನೋದೇ ಕುತೂಹಲ.



