ಜಾತಿ ಗಣತಿ. ಹಾಗಂತ ಅದು ಜಾತಿ ಗಣತಿಯೂ ಅಲ್ಲ. ಅದು ಆರ್ಥಿಕ ಸಮೀಕ್ಷೆ. ‘ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ’ ಇದೀಗ ಆ ವರದಿ ಮಂಡಿಸುವುದಕ್ಕೆ ರಾಜ್ಯ ಸರ್ಕಾರ ರೆಡಿಯಾಗಿದೆ. ಅ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುತ್ತೇವೆ. ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ವರದಿ ಅನುಷ್ಠಾನದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಸೋಮವಾರ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿ ಹಿಂದುಳಿದ ವರ್ಗಗಳ 30 ಮಂದಿ ಸಚಿವರು ಹಾಗೂ ಶಾಸಕರು ಜಾತಿಗಣತಿ ವರದಿ ಜಾರಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ನೀಡಿದ್ದರು. ಬೆನ್ನಲ್ಲೇ ವರದಿ ಮಂಡನೆಗೆ ಸಿದ್ದರಾಮಯ್ಯ ದಿನಾಂಕ ಘೋಷಿಸಿದ್ದಾರೆ.
ಆದರೆ ಇದು ವರದಿಯೇ ಅಲ್ಲ, ಇದೊಂದು ಸಮೀಕ್ಷೆ ಅಷ್ಟೇ. ಅಂದಾಜಿನ ಮೇಲೆ ಮಾಡಲಾಗಿರುವ ಒಂದು ಊಹಾತ್ಮಕ ಸಮೀಕ್ಷೆ ಎಂಬ ಅಭಿಪ್ರಾಯ ಎಲ್ಲರದ್ದೂ. ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿರುವುದೂ ಇದನ್ನೇ. ಜಾತಿ ಗಣತಿ ವರದಿ ಮಂಡನೆಗೆ ಕಾಂಗ್ರೆಸ್ಸಿನ ಲಿಂಗಾಯತ ಮತ್ತು ಒಕ್ಕಲಿಗ ನಾಯಕರೇ ಒಪ್ಪುತ್ತಿಲ್ಲ. ಸೋರಿಕೆಯಾಗಿರುವ ಮಾಹಿತಿಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತರ ಒಟ್ಟಾರೆ ಲೆಕ್ಕವೇ ತಪ್ಪಾಗಿದೆ ಎನ್ನುವುದು ಅವರ ವಾದ. ಈಗಾಗಲೇ ಲಿಂಗಾಯತರ ಬಣದಲ್ಲಿ ಶಾಮನೂರು ಶಿವಶಂಕರಪ್ಪ, ವಿಜಯೇಂದ್ರ ಮೊದಲಾದವರೆಲ್ಲ ವಿರೋಧಿಸಿದ್ದಾರೆ. ಒಕ್ಕಲಿಗರ ಬಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಚೆಲುವರಾಯ ಸ್ವಾಮಿ ಕೂಡಾ ಇದ್ದಾರೆ.
ವಿರೋಧ ಮಾಡುವುದಕ್ಕೆ ಬಹುದೊಡ್ಡ ಕಾರಣ ಜಾತಿ ಗಣತಿ ನಡೆಸಿದೆ ಎನ್ನಲಾಗುತ್ತಿರುವ ಸರ್ಕಾರದ ಬಳಿ ದಾಖಲೆಗಳಿಲ್ಲ ಎನ್ನುವುದು. ಬಹುತೇಕ ಜನರ ಮನೆಗೆ ಸರ್ವೆ ಮಾಡುವವರು ಭೇಟಿಯನ್ನೇ ಮಾಡಿಲ್ಲ. ಭೇಟಿಯನ್ನೇ ಮಾಡದೆ ಸರ್ವೆ ಮಾಡಿದ್ದು ಹೇಗೆ..? ಸರ್ವೆ ಮಾಡಿದ್ದಕ್ಕೆ ದಾಖಲೆ ಕೊಡಿ ಎಂದರೆ ಇಲ್ಲ. ಜನಸಾಮಾನ್ಯರಲ್ಲೂ ಈ ಪ್ರಶ್ನೆ ಇದೆ. ಸಮೀಕ್ಷೆ ನಡೆಯುತ್ತಿದೆ ಎನ್ನೋದನ್ನು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ನೋಡಿದ್ದೇವೆಯೇ ಹೊರತು, ತಮ್ಮ ಮನೆಗೆ ಯಾರೊಬ್ಬರೂ ಬಂದಿಲ್ಲ ಎಂಬ ಆರೋಪ ಬಹುತೇಕ ಜನರಲ್ಲಿದೆ. ಹೀಗಿದ್ದರೂ ಇದನ್ನು ಸರ್ವೆ ಎಂದು ಕರೆಯುವುದು ಏಕೆ, ಜನರನ್ನು ನೋಡದೆ, ದಾಖಲೆ ಸಂಗ್ರಹ ಮಾಡದೆ, ವಿವರಗಳನ್ನು ತಿಳಿದುಕೊಳ್ಳದೆ.. ಕಚೇರಿಯಲ್ಲಿ ಸಿದ್ಧ ಮಾಡಿರುವ ಕಡತವನ್ನು ಸಮೀಕ್ಷೆ ಎನ್ನಬಹುದೇ ಹೊರತು, ಸರ್ವೆ ಎನ್ನಲಾಗುವುದಿಲ್ಲ.
ಪ್ರತಿಪಕ್ಷಗಳು ಹಾಗೂ ಬಹುತೇಕ ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಕಾರಣಕ್ಕೆ. ಜಾತಿ ಗಣತಿ ವರದಿ ಅವೈಜ್ಞಾನಿಕ ಎಂಬುದು ತಪ್ಪು. ಸುಪ್ರೀಂಕೋರ್ಟ್ ಮಾನದಂಡ ಅನುಸರಿಸಿಯೇ ಸಮೀಕ್ಷೆ ನಡೆಸಲಾಗಿದೆ ಅನ್ನೋದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜು ಹೇಳಿಕೆ. ಆ ಹೇಳಿಕೆಯನ್ನು ಅಧ್ಯಕ್ಷರಾಗಿ ಅವರು ನೀಡಬಹುದು. ಆದರೆ ಜನಸಾಮಾನ್ಯರನ್ನು ಕೇಳಿದರೆ ಯಾವಾಗ ಬಂದು ಮಾಹಿತಿ ಪಡೆದುಕೊಂಡಿರಿ ಅನ್ನೋ ಪ್ರಶ್ನೆ ಎತ್ತುತ್ತಾರೆ. ಜನಸಾಮಾನ್ಯರ ಪ್ರಶ್ನೆಗೆ ಹಾಗೂ ವಿರೋಧಿಸುತ್ತಿರುವವರಿಗೆ ಯಾವ ದಾಖಲೆ ತೋರಿಸುತ್ತೆ ಸರ್ಕಾರ..? ಹೇಳಿಕೆ ಕೊಡುವುದಲ್ಲ, ಸರಿಯಾಗಿ ಕೆಲಸ ಮಾಡಿ ಲೆಕ್ಕ ಕೊಡುವುದು ಬೇರೆ. ಮಾಡಿದ್ದೇವೆ.. ಮಾಡಿದ್ದೇವೆ ಎನ್ನುತ್ತಾ ಪ್ರಶ್ನೆ ಮಾಡಿದವರೆಲ್ಲ ರಾಜಕೀಯ ವಿರೋಧಿಗಳು ಎಂದು ಹೀಯಾಳಿಸಿ, ಮಾತಿನ ಯುದ್ಧ ಮಾಡುವುದು ಬೇರೆ. ಕೊನೆಯದಾಗಿ ಉಳಿಯುವ ಒಂದೇ ಪ್ರಶ್ನೆ. ಜಾತಿ ಗಣತಿ ಮಾಡಿದ್ದು ಯಾರು..? ಯಾರ ಬಗ್ಗೆ ಮಾಡಿದರು ಅನ್ನೋದು..



