ಸಿದ್ಧರಾಮಯ್ಯ ಇತ್ತೀಚೆಗೆ ಎಲ್ಲಿಗೇ ಹೋಗಲಿ.. ಅಲ್ಲಿ ತಮ್ಮ ಮೊಮ್ಮಗ ಧವನ್ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಆರಂಭ ಅಷ್ಟೇ. 2023ರಲ್ಲಿ ವರುಣಾ ಕ್ಷೇತ್ರದಲ್ಲಿ ತಾತನ ಪರವಾಗಿ, ವರುಣಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದ ಧವನ್ ಅವರಿಗೆ, ಸಿದ್ಧರಾಮಯ್ಯ ಮೊಮ್ಮಗ ಎಂಬುದಷ್ಟೇ ಅರ್ಹತೆ.
ಬೆಂಗಳೂರಿನಲ್ಲಿ RCB ಕಪ್ ಗೆದ್ದಾಗ ನಡೆದ ಕಾರ್ಯಕ್ರಮದಲ್ಲಿ ಧವನ್ ಇದ್ದರು. ಸಿಎಂ ಸಿದ್ಧರಾಮಯ್ಯ ಜೊತೆ ವೇದಿಕೆಯಲ್ಲೇ ಇದ್ದರು. ಮೈಸೂರು ದಸರಾದಲ್ಲೂ ಇದ್ದರು. ತಾತನ ಜೊತೆಯಲ್ಲೇ ಓಡಾಡಿಕೊಂಡಿದ್ದರು. ಮೊಮ್ಮಗನನ್ನ ಪ್ರಮೋಟ್ ಸಿದ್ದು ಪ್ರಮೋಟ್ ಮಾಡ್ತಿದ್ದಾರೆ ಎನ್ನುವುದು ರಹಸ್ಯವೇನೂ ಅಲ್ಲ. ಆದರೆ.. ಅದಕ್ಕೊಂದು ಸಕಾರಣ ಇತ್ತು. ಏಕೆಂದರೆ ಧವನ್ ಇನ್ನೂ ಹರೆಯದ ಯುವಕ. ವಯಸ್ಸಿನ್ನೂ 20ರ ಆಸುಪಾಸು ಅಷ್ಟೇ. 25 ಕೂಡಾ ದಾಟಿಲ್ಲ.
ಏನೋ.. ಕ್ರಿಕೆಟರ್ಸ್ ಜೊತೆ ಕಾಣಿಸಿಕೊಳ್ಳುವ ಹುಚ್ಚು, ದಸರಾದಲ್ಲಿ ಮಿಂಚಬೇಕು ಎನ್ನುವ ಹರೆಯದ ಕ್ರೇಜು.. ಎಂದುಕೊಂಡು ಸುಮ್ಮನಾಗಿದ್ದರು. ಆದರೆ.. ಹಾಗಾಗಿಲ್ಲ. ಧವನ್ ಅವರನ್ನು ರಾಜಕೀಯವಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲಾಗ್ತಾ ಇದೆ. ರಾಹುಲ್ ಗಾಂಧಿ ಅವರ ಜೊತೆ ಇರುವ ಫೋಟೋವನ್ನು ಖುದ್ದು ಧವನ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಧವನ್ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದು, ರಾಹುಲ್ ಗಾಂಧಿ ಜೊತೆ ನಿಂತಿರುವ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ. ರಾಜಕೀಯ ಬಗೆಗಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.
ಧವನ್ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದು, ರಾಹುಲ್ ಗಾಂಧಿ ಜೊತೆ ನಿಂತಿರುವ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ. ರಾಜಕೀಯ ಬಗೆಗಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.
ಇದು ಧವನ್ ಅವರ ಮಾತು. ಯಾರ್ ಯಾರು ರಾಜಕೀಯಕ್ಕೆ ಬರಬೇಕು.. ಯಾರು ಬರುವುದ ಬೇಡ ಎನ್ನುವುದನ್ನು ಯಾರೂ ನಿರ್ಧರಿಸಬೇಕಿಲ್ಲ. ಅವರವರ ಆಯ್ಕೆ ಅವರವರಿಗೆ ಇರುತ್ತದೆ. ಆದರೆ.. ಪ್ರಶ್ನೆ ಹುಟ್ಟುತ್ತಿರುವುದು ಸಿದ್ಧರಾಮಯ್ಯನವರ ಬಗ್ಗೆ. ಸಿದ್ಧರಾಮಯ್ಯ ಅವರು ದೇವೇಗೌಡರನ್ನು ವಿರೋಧಿಸಿದ್ದೇ ವಂಶ ರಾಜಕೀಯದ ಬಗ್ಗೆ.
ಮೊದಲು ನೀವು.. ನಿಮ್ಮ ನಂತರ ಅವರ ಮಗ.. ಆನಂತರ ಅವರ ಮಗ.. ಹೀಗೆ ನಿಮ್ಮ ಕುಟುಂಬಕ್ಕೆ ನಾವು ದುಡಿಯುತ್ತಲೇ ಇರಬೇಕಾ.. ಎಂದು ಪ್ರಶ್ನೆ ಮಾಡಿದ್ದವರು ಸಿದ್ಧರಾಮಯ್ಯ. ಕುಮಾರಸ್ವಾಮಿ ಸಿಎಂ ಆಗುವುದು ಖಚಿತವಾಗುತ್ತಿದ್ದಂತೆಯೇ.. ಪಕ್ಷದಿಂದ ಹೊರಬಂದು, ಕಾಂಗ್ರೆಸ್ ಗೂಡು ಸೇರಿದ್ದರು.
ವಿಶೇಷ ಅಂದರೆ.. ಕಾಂಗ್ರೆಸ್ಸಿಗೆ ಬಂದ ನಂತರ ಮಗ ರಾಕೇಶ್ ಅವರನ್ನು ಬೆಳೆಸಲು ಪ್ರಯತ್ನ ಆಯಿತು. ಆದರೆ, ರಾಕೇಶ್ ಅಕಾಲಿಕ ಸಾವಿಗೀಡಾದರು. ಆನಂತರ.. ರಾಜಕೀಯದ ಸಹವಾಸವೇ ಬೇಡ ಎಂದು ದೂರ ಇದ್ದ ಯತೀಂದ್ರ ಅವರನ್ನು ರಾಜಕೀಯಕ್ಕೆ ಕರೆತಂದು.. ಶಾಸಕನನ್ನಾಗಿ ಮಾಡಿದ್ದಾಗಿದೆ. ಈಗ ಮೊಮ್ಮಗ ಧವನ್ ಅವರನ್ನು ಪ್ರಮೋಟ್ ಮಾಡಲಾಗುತ್ತಿದೆ. ಹಾಗಾದರೆ.. ಸಿದ್ಧರಾಮಯ್ಯ ಅಂದು ವಿರೋಧ ಮಾಡಿದ್ದು ಯಾಕೆ..? ಇವತ್ತಿಗೂ ದೇವೇಗೌಡರ ಜೊತೆ ನಿಂತಿರುವವರು ಕೇಳುತ್ತಿರುವ ಪ್ರಶ್ನೆ ಇದು.
ಅಂದಹಾಗೆ.. ವಂಶ ಪಾರಂಪರ್ಯ ರಾಜಕಾರಣ.. ದೇಶದ ರಾಜಕೀಯಕ್ಕೆ ಹೊಸದಲ್ಲ. ಹೊಸ ನಾಯಕರನ್ನು ಹುಟ್ಟಿ ಹಾಕುವುದಕ್ಕೆ ಸಿದ್ಧರಾಮಯ್ಯ ಅವರೇನೂ ದೇವರಾಜ ಅರಸು ಅಲ್ಲ. ಇದು ವಾಸ್ತವ.



