ಸಿಎಂ ಸಿದ್ದರಾಮಯ್ಯ ಅವರ ವಿರೋಧಿಗಳಿಗೆ ಆಗಾಗ ಸಿಗುವ ಅಸ್ತ್ರಗಳಲ್ಲಿ ಒಂದು ಸಿದ್ದರಾಮಯ್ಯ ಕುಂಕುಮ ಹಚ್ಚಿಕೊಳ್ಳೋದಿಲ್ಲ, ದೇವರ ಪೂಜೆ ಮಾಡಿಸುವವರಲ್ಲ ಅನ್ನೋದು. ಹಲವು ಬಾರಿ ಸಿದ್ದರಾಮಯ್ಯ ದೇವಸ್ಥಾನಗಳಲ್ಲಿ ಇಂತಹವುಗಳಿಗೆ ವಿರೋಧ ಮಾಡುತ್ತ ಬಂದಿದ್ದಾರೆ. ಹಾಗೆಯೇ ಕೆಲವು ಬಾರಿ ಅರ್ಚನೆ ಮಾಡಿಸುವ, ಕುಂಕುಮ ಧರಿಸುವ ಪದ್ಧತಿಯನ್ನೂ ಮಾಡಿಸ್ತಾರೆ. ಎಲ್ಲವೂ ಸಿದ್ದರಾಮಯ್ಯ ಅವರ ಮೂಡಿಗೆ ಸಂಬಂಧ ಪಟ್ಟಿರುತ್ತದೆ. ಇದೀಗ ಸವದತ್ತಿ ಯಲ್ಲಮ್ಮನ ದೇಗುಲದಲ್ಲಿ ಸಿದ್ದರಾಮಯ್ಯ ಅವರೇ ಪತ್ನಿ ಪಾರ್ವತಿ ಅವರ ಹೆಸರಲ್ಲಿ ಅರ್ಚನೆ ಮಾಡಿಸಿರುವುದು ವಿಶೇಷ.
ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಿನ್ನೆಲೆಯಲ್ಲಿ ಸವದತ್ತಿಗೆ ಬಂದಿದ್ದ ಸಿದ್ದರಾಮಯ್ಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದು ಅಪರೂಪ ಎನ್ನಬಹುದು. ಏಕೆಂದರೆ ಸಿದ್ದರಾಮಯ್ಯ ಅವರು ನಾಸ್ತಿಕರಾದರೂ ಹೆಂಡತಿ ದೇವಸ್ಥಾನಕ್ಕೆ ಕರೆದಾಗ ʻಎಲ್ಲ ಗಂಡಂದಿರಂತೆʼ ಹಿಂಬಾಲಿಸುವವರೇ. ತಮ್ಮ ಹುಟ್ಟುಹಬ್ಬ, ಪಾರ್ವತಿಯವರ ಹುಟ್ಟುಹಬ್ಬಗಳಲ್ಲಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗುತ್ತಲೇ ಇರ್ತಾರೆ.
ಪತ್ನಿ ಪಾರ್ವತಿ ಅವರ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಯಲ್ಲಮ್ಮ ದೇವಿಗೆ ಆರತಿ ಆಗುವವರೆಗೂ ದೇವ ಸನ್ನಿಧಾನದಲ್ಲಿಯೇ ನಿಂತು ದರ್ಶನ ಪಡೆದುಕೊಂಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯನವರು ತಾವೇ ಕುಂಕುಮ ಹಚ್ಚಿಕೊಂಡಿದ್ದಾರೆ. ಬಳಿಕ ಆರತಿ ತಟ್ಟೆಗೆ 500 ರೂಪಾಯಿ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ನಾಗಮುದ್ರಿಕೆ ಇಟ್ಟು ಅರ್ಚಕರು ಆಶೀರ್ವಾದ ಮಾಡಿದ್ದಾರೆ. ಇನ್ನೂ ಸಿಎಂ ಜೊತೆಗೆ ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಹೆಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಭರಮಗೌಡ ಕಾಗೆ, ಆಸೀಫ್ ಸೇಠ್, ಎನ್.ಹೆಚ್. ಕೋನರೆಡ್ಡಿ, ಚನ್ನರಾಜ ಹಟ್ಟಿಹೊಳಿ ಸೇರಿ ಮತ್ತಿತರರು ಸಿಎಂ ಸಿದ್ದರಾಮಯ್ಯ ಅವರ ಜೊತೆ ನಿಂತಿದ್ದರು.
ದೇವಿ ದರ್ಶನ ಪಡೆದು ವಾಪಸ್ ಆಗುವಾಗ ಸಿಎಂ ಸಿದ್ದರಾಮಯ್ಯ ಅವರಿಗೆ ಸವದತ್ತಿ ಯಲ್ಲಮ್ಮ ದೇವಿಯ ಅರ್ಚಕರು ರಾಜ್ಯದಲ್ಲಿರುವ ಅರ್ಚಕರ ವೇತನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ವೇತನ ಬಿಡುಗಡೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.
ಸಿದ್ದರಾಮಯ್ಯ ಪರಮ ನಾಸ್ತಿಕರೇನಲ್ಲ. ತೀರಾ ಆಸ್ತಿಕರೂ ಅಲ್ಲ. ಬಹುತೇಕರು ಅಧಿಕಾರ ಸ್ವೀಕರಿಸುವ ಮುನ್ನ ದೇವಸ್ಥಾನಗಳನ್ನು ಸುತ್ತಿ ಬಂದರೆ, ಸಿದ್ದರಾಮಯ್ಯ ಹಾಗೆಲ್ಲ ಮಾಡುವವರಲ್ಲ. ಹಾಗಂತ ದೇವಸ್ಥಾನ, ಪೂಜೆಗಳು ತಪ್ಪು ಎನ್ನುವವರೂ ಅಲ್ಲ. ತಮಗೆ ಇಷ್ಟವಿಲ್ಲ ಅಷ್ಟೇ ಎನ್ನುವ ಸಿದ್ದರಾಮಯ್ಯ, ಹಲವು ಬಾರಿ ಕುಂಕುಮ ಹಚ್ಚಲು ಬಂದಾಗ ಬೇಡ ಎಂದು ಹೇಳಿ ವಿವಾದ ಮಾಡಿಕೊಂಡಿದ್ದಾರೆ. ಹೀಗಾಗಿ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ. ಆದಕ್ಕೆ ತಾವಿರೋದೇ ಹೀಗೆ ಎನ್ನುವ ಸಿದ್ದರಾಮಯ್ಯ ಈಗ ನೋಡಿದರೆ ಪತ್ನಿ ಪಾರ್ವತಿಯವರ ಹೆಸರಲ್ಲಿ ವಿಶೇಷ ಅರ್ಚನೆ ಮಾಡಿಸಿದ್ದಾರೆ. ಇದಕ್ಕೆಲ್ಲ ಮುಡಾ ಹಗರಣದಲ್ಲಿ ಪತ್ನಿ ಪಾರ್ವತಿ ಸಿಲುಕಿಕೊಂಡಿರುವುದು ಕಾರಣ ಎನ್ನಲಾಗುತ್ತಿದೆ. ಜೊತೆಗೆ ಪತ್ನಿಯ ಬಗ್ಗೆ ಸಿದ್ದರಾಮಯ್ಯ ತೋರಿಸಿರುವ ಪ್ರೀತಿಯೂ ಚರ್ಚೆಯಾಗುತ್ತಿದೆ.



