ಸಿದ್ದರಾಮಯ್ಯ ಅವರು ಸಿಎಂ ಆಗಿರ್ತಾರೆ. ಆದರೆ ಅದು 5 ವರ್ಷ ಪೂರ್ತಿ ಇರ್ತಾರೋ.. 3 ವರ್ಷ ಇರ್ತಾರೋ.. ಗೊತ್ತಿಲ್ಲ ಎಂದಿರೋ ಸಚಿವ ಸತೀಶ್ ಜಾರಕಿಹೊಳಿ, ಮತ್ತೊಮ್ಮೆ ಕುತೂಹಲ ಹುಟ್ಟುಹಾಕಿದ್ದಾರೆ. ಆದರೆ ಅಪ್ಪಿತಪ್ಪಿಯೂ ಸಿದ್ದರಾಮಯ್ಯ ವಿರುದ್ಧ ಮಾತನಾಡೋದಿಲ್ಲ. ಯಾವತ್ತಿದ್ದರೂ ಸಿದ್ದರಾಮಯ್ಯ ಅವರೇ ನಮಗೆ ಸಿಎಂ. ಅವರ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡುವುದಕ್ಕೆ ಖುಷಿ ಇದೆ ಎನ್ನುತ್ತಾರೆ.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಐದು ವರ್ಷ ಇರ್ತಾರೋ, ಮೂರು ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ಆ ಕುರಿತು ಮಾಹಿತಿ ಬೇಕಿದ್ದರೆ ಹೈಕಮಾಂಡ್ ಅನ್ನೇ ಕೇಳ ಬೇಕು. ಆದರೆ ಸಿದ್ದರಾ ಮಯ್ಯ ಅವರೇ ನಮ್ಮ ಮುಖ್ಯ ಮಂತ್ರಿಗಳು. ಇದರಲ್ಲಿ ಯಾವುದೇ ಪ್ರಶ್ನೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಿಎಂ ಬದಲಾವಣೆ ಪ್ರಶ್ನೆ ಇಲ್ಲ : ನಾನು ಸಿದ್ದರಾಮಯ್ಯ ಅವರ ಜೊತೆಯಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂಥ ಯಾವುದೇ ಚರ್ಚೆಗಳೂ ನಡೆದಿಲ್ಲ. ವಿಪಕ್ಷಗಳು, ಮಾಧ್ಯಮಗಳು ಚರ್ಚೆ ಮಾಡುತ್ತಿವೆ ಅಷ್ಟೆ.
ನನ್ನ ಹೆಸರು ಹೇಳ್ತಿರೋದು ಅಭಿಮಾನಿಗಳು ಮಾತ್ರ.. : ಇನ್ನು ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರೆ ಅನ್ನೋ ವಾದಗಳಿಗೆ ಉತ್ತರ ಕೊಟ್ಟಿರುವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನದ ಚರ್ಚೆ ಬಂದಾಗ ವಿಪಕ್ಷಗಳ ನಾಯಕರು ಪ್ರೀತಿಯಿಂದ ನಮ್ಮ ಹೆಸರು ಹೇಳುತ್ತಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆಯಾಗಲಿ, ಬೆಳವಣಿಗೆಗಳಾಗಲಿ ನಡೆದಿಲ್ಲ. ನಾನು ಈ ವಿಚಾರವನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಬೆಂಬಲಿಗರು ತಮ್ಮ ನಾಯಕರಿಗೆ ಮುಂದಿನ ಮುಖ್ಯಮಂತ್ರಿ ಎಂದು ಜೈಕಾರ ಹಾಕೋದು ಸಾಮಾನ್ಯ. ಅದನ್ನೇ ಮುಂದಿಟ್ಟುಕೊಂಡು ಏನೋ ಬದಲಾವಣೆ ಆಗುತ್ತದೆ ಅನ್ನುವುದು ಸರಿಯಲ್ಲ ಎಂದಿದ್ದಾರೆ.
ನನ್ನ ತಂದೆ ಸಿಎಂ ಆಗಬೇಕು ಅನ್ನೋದು ಅಭಿಮಾನಿಗಳ ಆಸೆ : ಸತೀಶ್ ಜಾರಕಿಹೊಳಿ ಪುತ್ರಿ
ಆದರೆ ಸತೀಶ್ ಜಾರಕಿಹೊಳಿ ಅಷ್ಟೇ ಅಲ್ಲ, ಮಗಳು ಚಿಕ್ಕೋಡಿ ಕ್ಷೇತ್ರದ ಎಂಪಿ ಪ್ರಿಯಾಂಕಾ ಕೂಡಾ ಇದೇ ಮಾತು ಹೇಳಿದ್ದಾರೆ. ಕಳೆದ ಎಂಟು ವರ್ಷಗಳಿಂದ ಸತೀಶ್ ಅವರು ಮುಖ್ಯಮಂತ್ರಿ ಆಗಬೇಕೆಂದು ಅವರ ಅಭಿಮಾನಿಗಳು ಅಭಿಯಾನ ನಡೆಸುತ್ತಾ ಬಂದಿದ್ದಾರೆ. ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇತ್ತೀಚೆಗೆ ಸತೀಶ್ ಭೇಟಿಯಾಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಅವರು ಆಗಾಗ್ಗೆ ಭೇಟಿಯಾಗುತ್ತಲೇ ಇರುತ್ತಾರೆ ಎನ್ನುವುದು ಪ್ರಿಯಾಂಕಾ ಅವರ ಮಾತು.
ಹರಿಯಾಣ ಸೋಲಿಗೆ ಸಿದ್ದರಾಮಯ್ಯ ಕಾರಣ : ಕೋಳಿವಾಡ
ಮುಡಾ ಪ್ರಕರಣದಿಂದಾಗಿ ಹರಿಯಾಣದಲ್ಲಿ ಕಾಂಗ್ರೆಸ್ ಸೋತಿತು ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ಕೆ.ಬಿ. ಕೋಳಿವಾಡ ಹೇಳಿದ್ದಾರೆ. ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರು ಸಿಎಂ ಸ್ನಾನಕ್ಕೆ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಸಿದ್ದರಾಮಯ್ಯ ಪ್ರಾಮಾಣಿಕತೆಯ ಬಗ್ಗೆ ನನಗೆ ಅನುಮಾನ ಇಲ್ಲ. ಆದರೆ ಇಂತಹ ಆರೋಪ ಬಂದಾಗ ಅದು ಪಕ್ಷಕ್ಕೆ ಹಾನಿ ಮಾಡುತ್ತದೆ. ಮುಡಾ ಪ್ರಕರಣದಲ್ಲಿ ನರೇಂದ್ರ ಮೋದಿ ಕೂಡಾ ಪ್ರಚಾರ ಮಾಡಿದ್ದರು. ಇದೂ ಕೂಡಾ ಹರಿಯಾಣದಲ್ಲಿ ಹಿನ್ನಡೆಗೆ ಕಾರಣವಾಯ್ತು ಎಂದಿದ್ದಾರೆ ಕೋಳಿವಾಡ. ನನ್ನ ಹೇಳಿಕೆಗೆನಾನು ಬದ್ದನಾಗಿದ್ದೇನೆ. ಪಕ್ಷಕ್ಕೆ ಧಕ್ಕೆ ಆಗುವಂತಹ ಹೇಳಿಕೆ ನೀಡಿದ್ದರೆ ನನಗೆ ನೋಟಿಸ್ ಕೊಡುತ್ತಾರೆ. ನಾನು ಪಕ್ಷದ ಹಿತದೃಷ್ಟಿಯಿಂದಷ್ಟೇ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಅಗತ್ಯ ಇಲ್ಲ : ಡಿಕೆ ಶಿವಕುಮಾರ್
ಇನ್ನು ಕೋಳಿವಾಡ ಆರೋಪದ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್ ಯಾವ ಕಾಂಗ್ರೆಸ್ ನಾಯಕರೂ ಚುನಾವಣೆ ಸೋಲಿನ ಕುರಿತು ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೂ ಆ ಸೋಲಿಗೂ ಸಂಬಂಧವಿಲ್ಲ. ಈಗಾಗಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ೫ ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ ಎಂದು ಕೂಡಾ ಹೇಳಿದ್ದಾರೆ. 50-50 ಅಧಿಕಾರ ಹಂಚಿಕೆ ಸಂಗತಿ ಬೇರೆ ವಿಚಾರ. ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವೇ ಇರುತ್ತದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮುಂದುವರೆಯುತ್ತಾರೆ ಎಂದಿದ್ದಾರೆ ಡಿಕೆ ಶಿವಕುಮಾರ್.



