ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಜಗಳಕ್ಕೆ ಇತಿಹಾಸವೇ ಇದೆ. ಸಿದ್ದರಾಮಯ್ಯ ಜೆಡಿಎಸ್ ಬಿಟ್ಟ ಮೇಲೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಿತ್ರರಂತೆ ಕಾಣಿಸಿಕೊಂಡಿದ್ದು, ಸಮ್ಮಿಶ್ರ ಸರ್ಕಾರ ಅಸ್ಥಿತ್ವದಲ್ಲಿದ್ದಾಗ ಮಾತ್ರ. ಈಗ ಮುಡಾ ಹಗರಣ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಿದ್ದರೆ, ಕುಮಾರಸ್ವಾಮಿ ಅವರ ಹಳೆಯ ಕೇಸುಗಳಿಗೆ ಜೀವ ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ವಾಗ್ಯುದ್ಧವಂತೂ ಪ್ರತಿನಿತ್ಯ ಎಂಬಂತೆ ನಡೆಯುತ್ತಲೇ ಇದೆ. ಹೀಗಿರುವಾಗಲೇ ಎಚ್.ಡಿ.ಕುಮಾರಸ್ವಾಮಿಗೆ ನನ್ನ ಬಗ್ಗೆ ಭಯ ಇದೆ. ನಾನು ಅಧಿಕಾರದಲ್ಲಿ ಇದ್ದರೆ ಅವರ ಪಕ್ಷ ದುರ್ಬಲವಾಗುತ್ತದೆ ಎನ್ನುವ ಭಯ ಕಾಡುತ್ತಿದೆ ಎಂದು ಹೇಳಿದ್ದರು.
ಸಿದ್ದರಾಮಯ್ಯ ಮಾತಿಗೆ ರಿಯಾಕ್ಟ್ ಮಾಡಿರುವ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಅವರು ದೆವ್ವ ಆಗಿದ್ದರೆ ಭಯ ಬೀಳಬೇಕು. ಅವರೇನು ದೆವ್ವ ಅಲ್ಲವಲ್ಲ, ಹಾಗಾಗಿ ನಾನ್ಯಾಕೆ ಅವರಿಗೆ ಭಯ ಬೀಳಬೇಕು? ಎಂದು ಟಾಂಗ್ ನೀಡಿದ್ದಾರೆ.
ನಮ್ಮ ಜೆಡಿಎಸ್ ಪಕ್ಷ ದುರ್ಬಲವಾಗುತ್ತೋ? ಅಥವಾ ಬಲವಾಗುತ್ತೋ? ಎನ್ನುವುದನ್ನು ಆ ದೇವರು ನೋಡಿಕೊಳ್ಳುತ್ತಾನೆ. ಈ ಕುಮಾರಸ್ವಾಮಿ ಹೆದರುವುದು ಕೇವಲ ದೇವರಿಗೆ ಮತ್ತು ಜನರಿಗೆ ಮಾತ್ರ. ಮೊದಲು ಅವರು ಸಮಸ್ಯೆಯಲ್ಲಿರುವುದನ್ನು ಬಗೆಹರಿಸಿಕೊಳ್ಳಲಿ. ಸಿದ್ದರಾಮಯ್ಯ ಅವರಂತಹ ಲಕ್ಷ ಜನ ಬಂದರೂ ನಾನು ಹೆದರುವುದಿಲ್ಲ. ನಾನೇನು ಸಿದ್ದರಾಮಯ್ಯ ಅವರಿಂದ ರಾಜಕೀಯಕ್ಕೆ ಬಂದಿದ್ದೀನಾ? ನನ್ನ ಸ್ವಂತ ದುಡಿಮೆ ಹಾಗೂ ಕಾರ್ಯಕರ್ತರಿಂದಾಗಿ ಈ ಮಟ್ಟಕ್ಕೆ ಬಂದಿದ್ದೇನೆ. ನಾನು ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ದೇವೇಗೌಡರ ನೆರಳಿನಲ್ಲಿ ಬೆಳೆದು ಬಂದಿರುವ ನಾನು ನಾಡಿನ ಜನರಿಗೆ ಮಾತ್ರ ಹೆದರುತ್ತೇನೆ ಎಂದು ಹೇಳಿದ್ದಾರೆ.
ಅಂದಹಾಗೆ ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿಯೇ ಜೆಡಿಎಸ್‌ನಲ್ಲಿದ್ದ ಜಮೀರ್ ಅಹ್ಮದ್, ಚೆಲುವರಾಯ ಸ್ವಾಮಿ, ಮಾಗಡಿ ಬಾಲಕೃಷ್ಣ, ಸಿಎಂ ಇಬ್ರಾಹಿಂ (ಅವರೀಗ ಕಾಂಗ್ರೆಸ್ಸಿನಲ್ಲೂ ಇಲ್ಲ), ಹೆಚ್‌ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಇಕ್ಬಾಲ್ ಅನ್ಸಾರಿ, ಶಿವಲಿಂಗೇ ಗೌಡ, ಮಧು ಬಂಗಾರಪ್ಪ, ದೇಶಪಾಂಡೆ.. ಹೀಗೆ ದೊಡ್ಡ ಸೈನ್ಯವೇ ಕಾಂಗ್ರೆಸ್ ಸೇರ್ಪಡೆಯಾಗಿತ್ತು. ಸಿದ್ದರಾಮಯ್ಯ ಪ್ರಸ್ತಾಪ ಮಾಡಿರುವುದು ಇದೇ ವಿಷಯ.
ಇದಕ್ಕೆ ಉತ್ತರ ಕೊಟ್ಟಿರೋ ಕುಮಾರಸ್ವಾಮಿ ಕುಮಾರಸ್ವಾಮಿ ಹತ್ತಿರ ಯಾರ ಆಟವೂ ನಡೆಯುವುದಿಲ್ಲ. ಎಫ್‌ಐಆರ್ ಮಾಡಿದಕ್ಕೆ ಹೆದರುವ ವ್ಯಕ್ತಿ ನಾನಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ. ಎಲ್ಲವನ್ನೂ ಬಿಟ್ಟಿರುವ ಸರ್ಕಾರ ಇದು. ಭಯ ಭಕ್ತಿಯೇ ಇಲ್ಲದ ಭಂಡ ಸರ್ಕಾರ. ಇವತ್ತಿನ ರಾಜಕೀಯ ಬೆಳವಣಿಗೆಗೆ ಕಾಲವೇ ಉತ್ತರ ಕೊಡುತ್ತೆ ಎಂದು ಹೇಳಿದ್ದಾರೆ.



