ಸಿಎಂ ಸೀಟಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಟೀಂ ಒಳಗೊಳಗೇ ಫೈಟ್ ಮಾಡುತ್ತಿರುವುದು ಗುಟ್ಟಿನ ವಿಷಯ ಅಲ್ಲ. ಮೀಡಿಯಾಗಳ ಎದುರು ನಾವೆಲ್ಲರೂ ಒಂದೇ ಎಂದು ಹೇಳುವ ನಾಯಕರು, ಶಾಸಕರು.. ತಮ್ಮ ತಮ್ಮ ನಾಯಕರ ಪರವಾಗಿ ಮಾಡುತ್ತಿರುವ ಸರ್ಕಸ್ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಈ ಮಧ್ಯೆ ಈ ಇಬ್ಬರೂ ನಾಯಕರು ʻಹಾಲು ಸಕ್ಕರೆ ಒಂದಾದ ಹಾಗೆ ನನ್ನಾ ನಿನ್ನಾ ಜೀವನ..ʼ ಎಂದು ಹಾಡುತ್ತಿದ್ದಾರೆ. ಈ ಚರ್ಚೆಗಳಿಗೆ ನಾಂದಿ ಹಾಡಿದುದ ʻಧೈರ್ಯವಂತ ಒಬ್ಬನೇ ಬಹುಮತ ಸಾಧಿಸಬಲ್ಲʼʼ ಎಂಬ ಡಿಕೆ ಶಿವಕುಮಾರ್ ಅವರ ಒಂದು ಟ್ವೀಟ್.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದಾಗ ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಭಿನ್ನಾಭಿಪ್ರಾಯ ವಿಚಾರ ಪ್ರಸ್ತಾಪವಾಗಿದೆ. ಇದೆಕ್ಕೆ ರಿಯಾಕ್ಟ್ ಮಾಡಿರುವ ಸಿದ್ದರಾಮಯ್ಯ ʻʻಸಿಎಂಗೂ ಡಿಕೆ ಶಿವಕುಮಾರ್‌ಗೂ ಜಗಳ ಇದೆ ಅಂತೀರಲ್ಲ, ನೋಡಪ್ಪ ನೀನೂ ಹಾಲಂತೆ, ನಾನು ಸಕ್ಕರೆಯಂತೆ. ಆದರೆ ಹಾಲಾಹಲ ಅಂತ ಅವರು ಹೇಳ್ತಾರೆʼʼ ಎಂದು ಡಿಕೆಶಿ ಕಡೆ ಕೈತೋರಿಸಿ ಮಾತನಾಡಿದ್ದಾರೆ. ʻʻಅದಕ್ಕೆ ಟೈಮ್ ಉತ್ತರ ಕೊಡುತ್ತೆ ಬಿಡಿʼʼ ಎನ್ನುವುದು ಡಿಕೆ ಶಿವಕುಮಾರ್ ಉತ್ತರ.
ಇಬ್ಬರ ಮಾತಿಗೆ ಕೌಂಟರ್ ಕೊಟ್ಟ ಆರ್ ಅಶೋಕ್ ʻʻ”ಡಿಕೆ ಶಿವಕುಮಾರ್ ಸಮಯ ಉತ್ತರ ಕೊಡುತ್ತೆ ಅಂತಾರೆ.
ಆ ಸಮಯ ಯಾವಾಗ ಅಂತ ಹೇಳಿದ್ರೆ ಒಳ್ಳೆಯದುʼʼ ಎಂದು ಕೆಣಕಿದ್ದಾರೆ. 56 ಜನ ಡಿಕೆ ಶಿವಕುಮಾರ್ ಜೊತೆಗೆ ಇದ್ದಾರೆ ಎಂದಿದ್ದರು. ಆದರೆ ಸಿದ್ದರಾಮಯ್ಯ ಬಣಕ್ಕೆ ಕೇಳಿದರು ಅವರಲ್ಲೇ ಬೆಳಗ್ಗೆ ಮನೆಗೆ ಬಂದಿದ್ದರು ಎಂದು ಹೇಳುತ್ತಾರೆ. ಹಾಗಾಗಿ ಯಾರು ಯಾವ ಕಡೆ ಇದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಾ ಅಶೋಕ್ ಸಂತೋಷ್ ಲಾಡ್ ಅವರ ಹೇಳಿಕೆಯನ್ನು ನೆನಪಿಸಿದ್ದಾರೆ. ಇದಕ್ಕೆ ಕೆರಳಿದ ಲಾಡ್ ʻʻಬೆಳಗ್ಗೆ ರಾತ್ರಿ ವ್ಯವಸ್ಥೆಯಲ್ಲಿ ನಾವಿಲ್ಲ. ನನಗೆ ಆ ಅವಶ್ಯಕತೆ ಇಲ್ಲ. ನೀವು ಆ ರೀತಿಯಲ್ಲಿ ಸದನದಲ್ಲಿ ಮಾತನಾಡಬಾರದು. ಆದರೆ 16 ಜನರನ್ನು ಖರೀದಿ ಮಾಡಿದವರು ನೀವುʼʼ ಎಂದು ಉತ್ತರ ನೀಡಿದ್ದಾರೆ.
ಕೊನೆಗೆ ಇಡೀ ಗಲಾಟೆಗೆ ಒಂದು ಹಂತಕ್ಕೆ ಸುದೀರ್ಘವಾದ ಉತ್ತರವನ್ನೇ ಕೊಟ್ಟಿರುವ ಡಿಕೆ ಶಿವಕುಮಾರ್ ʻʻ139 ಜನ ಹಾಗೂ ಸಿದ್ದರಾಮಯ್ಯ ನನ್ನ ಜೊತೆಗಿದ್ದಾರೆ. ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದಾರೆ. ನಾನು ಎಲ್ಲಾ ಸಂದರ್ಭದಲ್ಲಿ ಸಿದ್ದರಾಮಯ್ಯ ಜೊತೆಗೆ ನಿಂತಿದ್ದೇನೆ, ಅವರು ನನ್ನ ಜೊತೆಗೆ ನಿಲ್ಲುತ್ತಾರೆʼʼ ಎಂದಿದ್ದಾರೆ. ಇದಕ್ಕೆ ತಕ್ಷಣ ಉತ್ತರ ಕೊಟ್ಟ ಸಿದ್ದರಾಮಯ್ಯ ʻʻಡಿಕೆ ಶಿವಕುಮಾರ್ ವಾಸ್ತವವಾಗಿ ಹೇಳಿದ್ದಾರೆʼʼ ಎಂದಿದ್ದಾರೆ.
ಅಶೋಕ್ ಅವರ ಮಾತಿಗೆ ಉತ್ತರ ನೀಡಿರುವ ಡಿಕೆ ಶಿವಕುಮಾರ್ ʻʻಅಶೋಕ್ ಅವರೇ, ನೀವು ಹಿರಿಯ ರಾಜಕಾರಣಿ. ಯಾರು ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ವಿದ್ಯಾರ್ಥಿ ನಾಯಕನಿಂದ ಬೆಳೆದು ಬಂದವನು. ನನ್ನದೇ ಆದ ಮೌಲ್ಯಗಳನ್ನು ಪಾಲಿಸಿಕೊಂಡು, ಉಳಿಸಿಕೊಂಡು ಬಂದಿದ್ದೇನೆ. ಪಕ್ಷ ನನಗೆ ಚಿಕ್ಕ ವಯಸ್ಸಿಗೆ ಟಿಕೆಟ್ ಕೊಟ್ಟಿದ್ದು, ಇಲ್ಲಿಯವರೆಗೂ ಬೆಳೆದಿದ್ದೇನೆ. ರಾಜಕೀಯದಲ್ಲಿ ಏಳು ಬೀಳು ಸಹಜ. ನಾನು ಎಂತೆಂಥಹವರ ಏಳು ಬೀಳು ನೋಡಿದ್ದೇನೆ. ನಾನು ಬಿದ್ದಿದ್ದೇನೆ, ಎದ್ದಿದ್ದೇನೆ, ಜೈಲುವಾಸ ಎಲ್ಲವನ್ನೂ ಅನುಭವಿಸಿದ್ದೇನೆ. ಇನ್ನು ಒಂದು ತಿಂಗಳು ಕಳೆದರೆ ನಾನು ಪಕ್ಷದ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತದೆʼʼ ಎಂದು ಉತ್ತರ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ʻʻನಮ್ಮ ಪಕ್ಷದಲ್ಲೂ ಅಷ್ಟೇ, ನಿಮ್ಮ ಪಕ್ಷದಲ್ಲೂ ಅಷ್ಟೇ. ಸಂಖ್ಯಾಬಲಕ್ಕಿಂತ ಪಕ್ಷವೇ ತೀರ್ಮಾನ ಮಾಡುತ್ತದೆ. ನಿಮ್ಮ ಸರ್ಕಾರದಲ್ಲಿ ಎಷ್ಟೋ ಸಿಎಂ ಬದಲಾದರು, ಸಚಿವ ಸಂಪುಟಗಳೇ ಬದಲಾದವು. ಹೀಗಾಗಿ ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ, ನೀವು ಸುಮ್ಮನೇ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ ಡಿಕೆ ಶಿವಕುಮಾರ್. ಅಂದಹಾಗೆ ಇದಕ್ಕೆಲ್ಲ ಕಾರಣವಾಗಿದ್ದು ಧೈರ್ಯವಂತ ಒಬ್ಬನೇ ಬಹುಮತ ಸಾಧಿಸಬಲ್ಲ ಎಂಬ ಡಿಕೆ ಶಿವಕುಮಾರ್ ಒಂದು ಟ್ವೀಟ್.



