ಒಂದು ವಿಡಿಯೋ. ಆ ವಿಡಿಯೋದಲ್ಲಿ ಇದ್ದದ್ದು ಯತೀಂದ್ರ ಸಿದ್ದರಾಮಯ್ಯ (Yatheendrs siddaramaiah). ಶಾಸಕರಲ್ಲ, ಮಾಜಿ ಶಾಸಕರು. ಆದರೆ ತಂದೆ ಸಿದ್ದರಾಮಯ್ಯ ಸಿಎಂ. ಆ ವಿಡಿಯೋದಲ್ಲಿ ಯತೀಂದ್ರ ನಾನು ಹೇಳಿದ್ದ ಫೈಲುಗಳನ್ನಷ್ಟೇ ಕ್ಲಿಯರ್ ಮಾಡಿ ಎಂದ ಮೆಸೇಜ್ ಕೊಡುತ್ತಾರೆ. ಅದನ್ನೇ ಟಾರ್ಗೆಟ್ ಮಾಡಿದ ಕುಮಾರಸ್ವಾಮಿ (HD Kumaraswamy) ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರಿಗೆ ಆತ್ಮಸಾಕ್ಷಿ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅವರ ಪುತ್ರ ಯತೀಂದ್ರ ಮಾತನಾಡಿದ್ದಾರೆ ಎನ್ನಲಾದ ಬಗ್ಗೆ ತನಿಖೆ ನಡೆಸಬೇಕು ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಎಂದೆಲ್ಲ ಆರೋಪಿಸಿದ್ದಾರೆ.
ಕಾಸಿಗಾಗಿ ಹುದ್ದೆ ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. ನಾನು ಹೇಳಿದವರಷ್ಟನ್ನೇ ಮಾಡಿ ಎನ್ನುವ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗಾ ಅಥವಾ ಒಳಾಡಳಿತ ಸಚಿವಾಲಯ ಮಾದರಿಯ ಒಳ ವಸೂಲಿ ಸಚಿವಾಲಯದ ಸಚಿವರಾ? ಯತೀಂದ್ರ ಅವರಿಗೆ ಕರೆ ಮಾಡಿದ್ದು ಯಾರು? ಹೇಳಿ ಅಪ್ಪ ಎಂದಿದ್ದು ಯಾರಿಗೆ? ವಿವೇಕಾನಂದ ಯಾರು? ಮಹದೇವನಿಗೆ ಫೋನ್ ಕೊಡಿ ಅಂತ ಹೇಳಿದ್ದು ಯಾಕೆ ? ನಾಲ್ಕೈದು ಲಿಸ್ಟ್ ಯಾವುದು? ನಾನು ಹೇಳಿದ ನಾಲ್ಕೈದು ಬಿಟ್ಟು ಬೇರೆ ಮಾಡಬೇಡ ಅಂದಿದ್ದು ಯಾಕೆ? ಇದು ವರ್ಗಾವಣೆ ದಂಧೆ ಹೊರತುಪಡಿಸಿ ಬೇರೆ ಯಾವ ವಿಷಯಕ್ಕೆ ಸಂಬಂಧಿಸಿದ್ದು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅಪ್ಪ- ಮಗನ ನಡುವೆ ನಡೆದ ಫೋನ್ ಚರ್ಚೆ ವ್ಯವಹಾರ ಜನರಿಗೆ ಗೊತ್ತಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮೊದಲು ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರ ಬಗ್ಗೆ ಮಾತನಾಡಿದ್ದು ಮರೆತಿದ್ದರೆ ನೆನಪು ಮಾಡಿಕೊಂಡು ಮಾತನಾಡಿ ಎಂದೂ ಟೀಕಿಸಿದ್ದಾರೆ. ಈ ಬಗ್ಗೆ ಯತೀಂದ್ರ ಅವರ ನೆರವಿಗೆ ಇಡೀ ಸರ್ಕಾರ ಬಂದಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರದ ಸಚಿವರೆಲ್ಲ ಒಟ್ಟಿಗೇ ಆಕ್ರಮಣ ಮಾಡಿದ್ದಾರೆ.
ವಿಡಿಯೋದಲ್ಲಿ ಇದ್ದದ್ದೇನು?
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ತಮ್ಮ ತಂದೆಯೊಂದಿಗೆ ಮಾತನಾಡುತ್ತಾ ಯಾರು ನಿಮಗೆ ಆ ಪಟ್ಟಿಯನ್ನು ಕೊಟ್ಟಿದ್ದು, ಮಹದೇವು ಯಾರಪ್ಪಾ? ಕೊಡಿ ಅವರಿಗೆ ಮಾತಾಡ್ತೀನಿ. ರೀ ನಾನು ಕೊಟ್ಟ ಪಟ್ಟಿಯನ್ನಷ್ಟೇ ಕೊಡಿ ಬೇರೆಯದ್ದು ಕೊಡಬೇಡಿ ಎಂದು ಹೇಳುತ್ತಾರೆ.
ಮಗನ ವಿರುದ್ಧ ಆರೋಪ ಮಾಡಿದ್ದಕ್ಕೆ ಸಿಡಿದೆದ್ದ ಸಿದ್ದರಾಮಯ್ಯ
‘ತಾ ಕಳ್ಳ ಇತರರ ನಂಬ’ ಎಂಬ ಗಾದೆ ಮಾತನ್ನು ಒಬ್ಬಮಾಜಿ ಮುಖ್ಯಮಂತ್ರಿ ಬಗ್ಗೆ ಬಳಸಬೇಕಾಗಿ ಬಂದದ್ದಕ್ಕೆ ನನಗೆ ವಿಷಾದ ಇದೆ. ಡಾ.ಯತೀಂದ್ರ ಅವರ ಜೊತೆಗಿನ ಫೋನ್ ಸಂಭಾಷಣೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ ನಂತರವೂ ಹೆಚ್.ಡಿ. ಕುಮಾರಸ್ವಾಮಿಯವರು ಮತ್ತೆ ತಮ್ಮ ಸಡಿಲ ನಾಲಿಗೆಯಲ್ಲಿ ಸುಳ್ಳುಗಳನ್ನು ಹರಿಯಬಿಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ ಸಿದ್ದರಾಮಯ್ಯ. ಫೋನ್ ಸಂಭಾಷಣೆಯಲ್ಲಿ ಡಾ.ಯತೀಂದ್ರ ಹೆಸರಿಸಿದ ವಿವೇಕಾನಂದ ಅವರು ವರುಣ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ). ವರುಣ ಕ್ಷೇತ್ರಕ್ಕೆ ಸೇರಿರುವ ಹಾರೋಹಳ್ಳಿ, ಕೀಳನಪುರ, ದೇವಲಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 5 ಸರ್ಕಾರಿ ಶಾಲೆಗಳ ರಿಪೇರಿಯಾಗಬೇಕಾಗಿರುವ ಕೊಠಡಿಗಳ ವಿವರದ ಪಟ್ಟಿಯನ್ನು ಬಿಇಒ ಅವರೇ ನನ್ನ ಕಚೇರಿಯ ಜಂಟಿ ಕಾರ್ಯದರ್ಶಿಗಳಿಗೆ ಕಳಿಸಿದ್ದರು. ಇದರ ಬಗ್ಗೆಯೇ ನಾನು ಡಾ.ಯತೀಂದ್ರ ಅವರ ಜೊತೆಯಲ್ಲಿ ಮಾತನಾಡಿದ್ದು. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಇಲ್ಲಿ ಲಗತ್ತಿಸಿದ್ದೇನೆ. ‘ಸುಳ್ಳುಕೋರರ ನಂಜಿನ ಆರೋಪಗಳಿಗೆ ವಿವರಣೆ ನೀಡಬೇಕಾದ ಅಗತ್ಯ ಖಂಡಿತ ಇಲ್ಲ. ಆದರೆ ಮಾಧ್ಯಮಗಳಲ್ಲಿ ಪ್ರಸಾರ, ಪ್ರಕಟವಾಗುತ್ತಿರುವ ಸುಳ‍್ಳು ಸುದ್ದಿಗಳನ್ನು ಅಮಾಯಕ ಜನ ನಂಬಿ ತಪ್ಪು ತಿಳಿದುಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ವಿವರವನ್ನು ನೀಡಿದ್ದೇನೆ. ಸುಳ್ಳು, ಮೋಸ, ದ್ರೋಹ, ವಚನಭ್ರಷ್ಟತೆಗಳನ್ನೇ ಅಸ್ತ್ರಮಾಡಿಕೊಂಡು ಗಳಿಸಿದ ಅಧಿಕಾರವನ್ನು ಕೇವಲ ಹಣದ ಲೂಟಿಗಾಗಿ ದುರ್ಬಳಕೆ ಮಾಡಿಕೊಂಡ ಕುಮಾರಸ್ವಾಮಿಯವರಿಗೆ ಅಭಿವೃದ್ದಿಯ ವಿಚಾರ ಅರ್ಥವಾಗುವಂತಹದ್ದಲ್ಲ’ ಟ್ವೀಟ್ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ.
ಅಷ್ಟೇ ಅಲ್ಲ ಕುಮಾರಸ್ವಾಮಿ ಅವರ ಮೇಲಿರುವ ಜಂತಕಲ್ ಮೈನಿಂಗ್ ಅಕ್ರಮ ಆರೋಪದ ತನಿಖೆಗೆ ಚುರುಕು ಮುಟ್ಟಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಅಷ್ಟೇ ಅಲ್ಲ, ಕುಮಾರಸ್ವಾಮಿ ಏನೇ ಮಾತನಾಡಿದರೂ ರಿಯಾಕ್ಟ್ ಮಾಡಬೇಡಿ ಎಂದು ಸಚಿವರು, ಶಾಸಕರು ಹಾಗೂ ಪಕ್ಷದ ನಾಯಕರಿಗೆ ಹೇಳಿದ್ದಾರೆ.



