ಈ ಹಿಂದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವರು ಮಹಾದೇವಪ್ಪ ಪೂಜಾರಿ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನದ ಅರ್ಚಕರು ಈ ಮಹಾದೇವಪ್ಪ ಪೂಜಾರಿ. ಇವರೀಗ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಕೇಂದ್ರದ ಎನ್ಡಿಎ ಸರ್ಕಾರವೂ ಪತನವಾಗಲಿದೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಮಹದೇವಪ್ಪ ಪೂಜಾರಿ ಹೇಳಿದ್ದಾರೆ. ಪೂಜಾರಿಯವರ ಪ್ರಕಾರ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಹಾಗೂ ಕಾಂಗ್ರೆಸ್ನ ಟ್ರಬಲ್ ಶೂಟರ್ ಎಂದೇ ಖ್ಯಾತರಾದ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಈ ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಇದೇ ಮಹದೇವಪ್ಪ ಪೂಜಾರಿ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದರು. ಹಾಗೆಯೇ ಆಗಿತ್ತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್, ಗಡೇ ದುರ್ಗಾದೇವಿಯ ಭಕ್ತರು. ಈ ಮೊದಲು ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗೋದಕ್ಕೂ ತಾಯಿಯ ಪ್ರೇರಣೆ ಸಿಕ್ಕಿತ್ತು. ಕಾಂಗ್ರೆಸ್ ಗೆದ್ದ ಮೇಲೂ ಕೂಡಾ ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎರಡನೇ ಅವಧಿಗೆ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಮಹಾದೇವಪ್ಪ ಪೂಜಾರಿ ಹೇಳಿದ್ದರು.
ಈಗ ಮತ್ತೊಮ್ಮೆ ಸರ್ಕಾರದ ಭವಿಷ್ಯ ಹೇಳಿದ್ದಾರೆ. ಜಾರಕಿಹೊಳಿ ಸಹೋದರರಿಂದ ಸರ್ಕಾರ ಬೀಳುತ್ತದೆ. ಸತೀಶ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಇದೆ ಎಂದು ಪೂಜಾರಿ ಹೇಳಿದ್ದು, ಮೋದಿ ಸರ್ಕಾರವು ಐದು ವರ್ಷದೊಳಗೆ ಬೀಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಡಿಕೆ ಶಿವಕುಮಾರ್ ಗಡೇ ದುರ್ಗಾದೇವಿ ಪರಮಭಕ್ತನಾಗಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಐಟಿ, ಇಡಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಡಿಕೆ ಶಿವಕುಮಾರ್ 2020 ಜನವರಿ 29 ರಂದು ಗಡೇ ದುರ್ಗಾದೇವಿ ಜಾತ್ರೆಗೆ ಆಗಮಿಸಿದ್ದರು. ಆಗ ದೇವಿಯ ಮೂರ್ತಿಗೆ ಪತ್ರ ಬರೆದು ಸಂಕಷ್ಟದಿಂದ ಪಾರಾಗಲು ಪ್ರಾರ್ಥಿಸಿದ್ದರು. ಜೊತೆಗೆ ರಾಜಕೀಯದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಅವಕಾಶ ಕರುಣಿಸುವಂತೆ ಪತ್ರ ಬರೆದಿದ್ದರು. ಆಗ ದೇವಿಯ ಕೃಪೆಯಿಂದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಸ್ಥಾನ ಒಲಿದಿತ್ತು ಎಂದು ಅವರ ಅಭಿಮಾನಿಗಳು ಹೇಳುತ್ತಾರೆ.
ಡಿಕೆಶಿವಕುಮಾರ ಅವರು ಐಟಿ ಹಾಗೂ ಇಡಿ ಪ್ರಕರಣಗಳಲ್ಲಿ ಜೈಲು ಸೇರಿದ್ದಾಗ ಕೂಡ ಮಂದಿರದಲ್ಲಿ ಪೂಜೆ ಮಾಡಲಾಗಿತ್ತು. ನಂತರ ಜೈಲಿನಿಂದ ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಮೇಲೆ ಜಾತ್ರಗೆ ಬಂದಿದ್ದ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ಸಿಗಲಿದೆ ಎಂದು ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದರು. ಅದರಂತೆ ಕೆಪಿಸಿಸಿ ಪಟ್ಟಕ್ಕಾಗಿ ಭಾರಿ ಪೈಪೋಟಿ ನಡೆದಿತ್ತು. ನಂತರ ಕೆಪಿಸಿಸಿ ಪಟ್ಟ ಕನಕಪುರದ ಬಂಡೆಗೆ ಒಲಿದಿತ್ತು.
ಡಿಕೆ ಶಿವಕುಮಾರ್ ಅಷ್ಟೇ ಅಲ್ಲ, ಬಿ.ಶ್ರೀರಾಮುಲು ಕೂಡಾ ಗಡಾ ದುರ್ಗಾದೇವಿಯ ಭಕ್ತರೇ. ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಡಿಸಿಎಂ ಆಗಬೇಕು ಎಂದು ಹರಕೆ ಹೊತ್ತಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿರಲಿ, ಶ್ರೀರಾಮುಲು ಶಾಸಕರಾಗಿಯೂ ಸೋತರು. ಅಷ್ಟೇ ಅಲ್ಲ, ಎಂಪಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿಯೂ ಸೋತರು.



