ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರದ ಜಟಾಪಟಿ ಈಗಿನ್ನೂ ಸೋನಿಯಾ ಗಾಂಧಿ ಅವರ ಕಿವಿಗೆ ತಲುಪಿದೆ. ಹಾಗೆಂದು ಅವರಿಗೆ ಗೊತ್ತಿರಲೇ ಇಲ್ಲ ಎಂದಲ್ಲ. ಆದರೆ, ಅವರಿಗೆ ದಿಢೀರ್ ಪ್ರವೇಶ ಮಾಡುವ ಆಸಕ್ತಿ ಇರಲಿಲ್ಲ. ಈಗ ಕೊನೆಗೂ ಸೋನಿಯಾ ಗಾಂಧಿ ಅವರ ಮಡಿಲಿಗೇ ಹೋಗಿ ಕುಳಿತಿದೆ ಅಧಿಕಾರ ಹಸ್ತಾಂತರದ ಗಲಾಟೆ. ಸದ್ಯಕ್ಕೆ ಎಲ್ಲವನ್ನೂ ಕಿವಿಗೆ ಹಾಕಿಕೊಂಡಿರುವ ಸೋನಿಯಾ ಗಾಂಧಿ.. ಈಗಿರುವ ವ್ಯವಸ್ಥೆಗೆ ಡಿಸ್ಟರ್ಬ್ ಮಾಡುವುದು ಬೇಡ ಎಂದು ಹೇಳಿದ್ದಾರಂತೆ. ಆದರೆ ಇದೇ ಅಂತಿಮವಾ..?
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಹೇಳಿರೋ ಪ್ರಕಾರ ʻʻ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆದಿದೆ. ಆದರೆ, ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟು ಇದೆ. ಯಾವುದೇ ರೀತಿಯ ಗೊಂದಲಗಳಿಲ್ಲʼʼ ಇಷ್ಟನ್ನೇ ಅವರು ಹೇಳ್ತಿರೋದು.
ಈ ಮಧ್ಯೆ ಎರಡು ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ.. ಅದರಲ್ಲಿಯೂ ಡಿಕೆ ಶಿವಕುಮಾರ್ ಮನೆಯಲ್ಲಿ ಬೆಳಗಿನ ಉಪಾಹಾರದ ನಂತರ ಸಿಎಂ ಸಿದ್ದರಾಮಯ್ಯ ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ ಎಂದು ಯಾವಾಗ ಹೇಳಿದರೋ.. ಆಗ ಮತ್ತೆ ಡಿಕೆ ಪಾಳೆಯದಲ್ಲಿ ಉತ್ಸಾಹ ಮೂಡಿದಂತೆ ಕಾಣಿಸುತ್ತಿದೆ. ಆದರೆ ಸಮಸ್ಯೆ ಆಗಿರುವುದು ಎಲ್ಲಿ ಗೊತ್ತೇ.. ಡಿಕೆ ಶಿವಕುಮಾರ್ ಅವರಿಗೆ ಭರವಸೆ ಕೊಟ್ಟಿದ್ದ ಸುರ್ಜೇವಾಲಾ ಅವರು ಸಡನ್ ಆಗಿ ಸೈಲೆಂಟ್ ಆಗಿರುವುದು.
ಡಿಕೆ ಶಿವಕುಮಾರ್ ಅವರಿಗೆ ಬೂಸ್ಟ್ ಕೊಟ್ಟವರಲ್ಲಿ ಸುರ್ಜೇವಾಲ ಅವರದ್ದೇ ಮೊದಲ ಹೆಸರು. ಎರಡೂವರೆ ವರ್ಷ ಆಗುತ್ತಿದ್ದಂತೆಯೇ ಎಲ್ಲವನ್ನೂ ರೆಡಿ ಮಾಡಿಡುತ್ತೇನೆ. ಹೈಕಮಾಂಡ್ ಜೊತೆ ನಾನು ಮಾತನಾಡಿರುತ್ತೇನೆ. ನಿಮ್ಮ ಪಾಡಿಗೆ ನೀವು ಮಿಕ್ಕಿದ್ದನ್ನು ರೆಡಿ ಮಾಡಿಟ್ಟುಕೊಳ್ಳಿ ಎಂದಿದ್ದವರೇ ಸುರ್ಜೇವಾಲ. ಅದರಲ್ಲಿಯೂ ಕಳೆದ ಬಾರಿ ಬೆಂಗಳೂರಿಗೆ ಬಂದಿದ್ದಾಗ ಸಿಎಂ ಕೂಡಾ ನೋಡದಷ್ಟು ಸೀರಿಯಸ್ ಆಗಿ ಮಂತ್ರಿಗಳ ರಿಪೋರ್ಟ್ ಕಾರ್ಡ್ ಮಾಡಿಸಿದ್ದರು. ಇದು ಸಿಎಂ ಆಗಿರುವ ಸಿದ್ದರಾಮಯ್ಯ ಅವರೂ ಗರಂ ಆಗುವಂತೆ ಮಾಡಿತ್ತು. ಸರ್ಜೇವಾಲ ಅವರನ್ನು ವಾಪಸ್ ಕರೆಸಿಕೊಳ್ಳಿ ಎಂದು ನೇರವಾಗಿಯೇ ಸಿಎಂ ಸಿದ್ಧರಾಮಯ್ಯ ಹೈಕಮಾಂಡಿಗೆ ಹೇಳಿದ್ದರು. ಆಗ ಸಿದ್ದರಾಮಯ್ಯ ಅವರನ್ನು ಖರ್ಗೆಯವರೇ ಸಮಾಧಾನ ಮಾಡಿದ್ದರಂತೆ. ಕೊನೆಗೆ ಹೈಕಮಾಂಡ್ ಮೂಲಕವೇ ʻಸುರ್ಜೇವಾಲ ಅವರಿಗೆ ಸೈಲೆನ್ಸರ್ʼ ಫಿಕ್ಸ್ ಮಾಡಲಾಗಿತ್ತು. ಈಗ ಅದೇ ಸುರ್ಜೇವಾಲ ಅವರನ್ನು ಡಿಕೆ ನಂಬಿಕೊಂಡಿದ್ದರೆ, ಸುರ್ಜೇವಾಲ ಸೈಲೆಂಟ ಆಗಿದ್ದಾರೆ.
ಮಾತನಾಡುತ್ತಿರುವುದು ವೇಣುಗೋಪಾಲ್. ಅವರು ಸಿದ್ದರಾಮಯ್ಯ ಅವರಿಗೆ ಆಪ್ತರು. ಹೀಗಾಗಿ ತಮ್ಮ ಬೇಳೆ ಬೇಯುವುದಿಲ್ಲ ಎಂದು ಆತಂಕಗೊಂಡಿದ್ದ ಡಿಕೆಗೆ ಗುಡ್ ನ್ಯೂಸ್ ಎಂಬಂತೆ ಕಾಣಿಸುತ್ತಿರುವುದು ಸೋನಿಯಾ.
ಸೋನಿಯಾ ಅವರಿಗೆ ಡಿಕೆ ಶಿವಕುಮಾರ್ ಮೇಲೆ ವಿಶೇಷ ಪ್ರೀತಿ, ಅಂತಃಕರಣ ಇದೆ. ತಮಗೆ ಕಷ್ಟ ಬಂದಾಗಲೆಲ್ಲ ಜೊತೆಗೆ ನಿಂತ ಹುಡುಗ ಎಂಬ ಪ್ರೀತಿ ಇದೆ. ಮಮಕಾರ ಇದೆ. ಸೋನಿಯಾ ಈ ಹಿಂದೆ ಪ್ರಾಮಿಸ್ ಮಾಡಿದ್ದಂತೆ ತಮ್ಮನ್ನು ಸಿಎಂ ಪಟ್ಟಕ್ಕೇರಿಸುತ್ತಾರೆ ಎಂಬ ನಂಬಿಕೆ ಡಿಕೆಗೆ ಇದೆ. ಆದರೆ, ರಾಹುಲ್ ಗಾಂಧಿ ಅವರಿಗೆ ಡಿಕೆಯವರ ಮೇಲೆ ಅಷ್ಟಾಗಿ ಮನಸ್ಸು ಇಲ್ಲವಂತೆ. ರಾಜಕೀಯ ಅರ್ಥವಾಗುವುದೇ ಕಷ್ಟ.



