ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲು ಅಲ್ಲ.. ಮನೆಯೊಂದು ನೂರು ಬಾಗಿಲು ಎನ್ನುವಂತಾಗಿ ಹೋಗಿದೆ. ಹಾಗೆ ನೋಡಿದರೆ ರಾಜ್ಯ ಬಿಜೆಪಿ ಯಾವತ್ತಿಗೂ ನೆಮ್ಮದಿಯಾಗಿಲ್ಲ. ಸದಾ ಕಿತ್ತಾಟ, ಬಣ ಬಡಿದಾಟಗಳು ಅಲ್ಲಿ ನಿಂತಿದ್ದೇ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಲೂ ಅಷ್ಟೇ, ಅವರನ್ನು ಹೇಗಾದರೂ ಕೆಳಗಿಳಿಸಬೇಕು ಎಂದು ಒಂದು ಬಣ ಬಡಿದಾಡುತ್ತಲೇ ಇತ್ತು. ಯಡಿಯೂರಪ್ಪ ಕೆಳಗಿಳಿದರೆ ನಾವು ಸಿಎಂ ಆಗಬಹುದು ಎಂದು ಒಂದಷ್ಟು ನಾಯಕರು ಹೊಂಚು ಹಾಕುತ್ತಲೇ ಇದ್ದರು. ಸಿಎಂ ಆಗುವುವುದು ಬಿಡಿ, ಪ್ರತಿಪಕ್ಷವಾಗಿದ್ದೇ ದೊಡ್ಡದು ಎನ್ನುವ ಪರಿಸ್ಥಿತಿಗೆ ಬಂದಿದೆ. ಈಗಲೂ ಬಿಜೆಪಿಯಲ್ಲಿ ಬಣ ಬಡಿದಾಟ ತಪ್ಪಿಲ್ಲ. ಮುಂದಿನ ಚುನಾವಣೆ ಹೊತ್ತಿಗೆ ಬಿಜೆಪಿ ಗೆದ್ದೇ ಗೆಲ್ಲುತ್ತೆ.. ಸಿಎಂ ಆಗಬಹುದು, ಅಷ್ಟು ಹೊತ್ತಿಗೆ ವಿಜಯೇಂದ್ರ ಅವರನ್ನು ಕೆಳಕ್ಕೆ ಇಳಿಸಿಬಿಡಬೇಕು, ಆತ ರಾಜ್ಯಾಧ್ಯಕ್ಷರಾಗಿ ಇರಬಾರದು ಎನ್ನುವ ಪ್ಲಾನ್ ಬಿಜೆಪಿಯಲ್ಲೇ ಇದೆ.
ಆದರೆ, ಕಾಂಗ್ರೆಸ್ಸಿನಲ್ಲಿ ಇದಕ್ಕೆ ತದ್ವಿರುದ್ಧ. ಒಂದು ಕಾಲದಲ್ಲಿ ಕಾಂಗ್ರೆಸ್ ಕೂಡಾ ಹೀಗೆಯೇ ಇತ್ತು. ಅವರನ್ನು ಸೋಲಿಸಲು ಇವರು.. ಇವರನ್ನು ಸೋಲಿಸಲು ಅವರು.. ಹೋರಾಟ ಮಾಡುತ್ತಲೇ ಇದ್ದರು. ಆದರೆ ಕಳೆದ ಚುನಾವಣೆ ಹೊತ್ತಿಗೆ ಅದೆಲ್ಲದಕ್ಕೂ ಬ್ರೇಕ್ ಹಾಕಿದ್ದು ಸಿದ್ಧರಾಮಯ್ಯ-ಡಿಕೆ ಶಿವಕುಮಾರ್ ಜೋಡಿ. ಮೊದಲು ಗೆಲ್ಲೋಣ, ಆಮೇಲೆ ನೋಡೋಣ ಪಾಲಿಸಿಯನ್ನು ಫಾಲೋ ಮಾಡಿದ ಡಿಕೆ-ಸಿದ್ದು ಜೋಡಿ, ಪಕ್ಷವನ್ನು ಅಭೂತಪೂರ್ವವಾಗಿ ಗೆಲ್ಲಿಸಿದರು. ಗೆದ್ದ ಮೇಲೂ ಕೂಡಾ ಒಳಗಿನ ಅಭಿಪ್ರಾಯ ಏನೇ ಇರಲಿ, ಡಿಕೆ ಶಿವಕುಮಾರ್ ಇವತ್ತಿನ ಈ ಕ್ಷಣದವರೆಗೆ ಸಿದ್ದರಾಮಯ್ಯ ಅವರ ಬಗ್ಗೆ ಒಂದು ಕೆಟ್ಟ ಮಾತನಾಡಿಲ್ಲ. ಮುಂದೊಂದು ದಿನ ಅವಕಾಶ ಬರುತ್ತೆ. ಆಗ ಸಿಎಂ ಆಗುತ್ತೇನೆ, ಈಗ ನಮ್ಮ ನಾಯಕ ಸಿದ್ದರಾಮಯ್ಯ ಎನ್ನುತ್ತಾರೆ.
ಯತ್ನಾಳ್ ಅವರಿಗೆ ವಿಜಯೇಂದ್ರ ಅವರನ್ನು ವಿರೋಧಿಸುವುದಕ್ಕೆ ಇರುವ ಕಾರಣಗಳೆಂದರೆ ವಿಜಯೇಂದ್ರ, ಯಡಿಯೂರಪ್ಪನವರ ಮಗ ಮತ್ತು ಇದೇ ಮೊದಲ ಬಾರಿಗೆ ಶಾಸಕನಾಗಿರುವ ವ್ಯಕ್ತಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಆತ ಹೇಳಿದಂತೆ ನಾವು ಕೇಳಬೇಕಾ ಎನ್ನುವ ಕಾರಣಗಳಿವೆ.
ಅತ್ತ ಕಾಂಗ್ರೆಸ್ಸಿನಲ್ಲಿ ಅದನ್ನೂ ಮೀರಿದ ಕಾರಣಗಳಿವೆ. ವಿರೋಧಿಸುವುದಾದರೆ ವಿರೋಧಕ್ಕೆ ಏನೂ ಕೊರತೆ ಇಲ್ಲ. ಸಿದ್ದರಾಮಯ್ಯ ಮೂಲತಃ ಕಾಂಗ್ರೆಸ್ಸಿಗರೇ ಅಲ್ಲ. ಕಾಂಗ್ರೆಸ್ ಸೇರಿದ ದಿನದಿಂದಲೂ ಒಂದೋ ಪ್ರತಿಪಕ್ಷ ನಾಯಕರಾಗಿ, ಇಲ್ಲವೇ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿರುವ ಸಿದ್ದರಾಮಯ್ಯ ಅವರನ್ನು, ಕಾಂಗ್ರೆಸ್ಸಿಗರು ವಿರೋಧಿಸುವುದಕ್ಕೆ ಹಲವು ಕಾರಣಗಳಿವೆ. ಸಿದ್ದರಾಮಯ್ಯ ಅವರ ಅಕ್ಕಪಕ್ಕ ಈಗಲೂ ಇರುವುದು ಅವರ ಜನತಾ ಪರಿವಾರದ ಕಾಲದಲ್ಲಿ ಜೊತೆಯಲ್ಲಿದ್ದ ಈಗ ಕಾಂಗ್ರೆಸ್ಸಿನಲ್ಲಿರುವ ನಾಯಕರೇ. ಮೂಲ ಕಾಂಗ್ರೆಸ್ಸಿಗರು ಕಾಣುವುದೇ ಇಲ್ಲ.
ಹೀಗಿದ್ದರೂ ಸಿದ್ದರಾಮಯ್ಯ ಅವರ ಬಗ್ಗೆ ಡಿಕೆ ಶಿವಕುಮಾರ್ ಆಗಲೀ, ಪರಮೇಶ್ವರ್ ಅವರಾಗಲೀ ಮಾತನಾಡುವುದಿಲ್ಲ. ಆದರೆ ಬಿಜೆಪಿ ಪರಿಸ್ಥಿತಿ ಹಾಗಲ್ಲ. ಅಲ್ಲಿ ಯಡಿಯೂಪ್ಪ ವಿರುದ್ಧವೂ ಮಾತನಾಡ್ತಾರೆ. ಪಕ್ಷದ ವಿರುದ್ಧವೂ ಮಾತನಾಡ್ತಾರೆ.
ಈಗಿನ ಪರಿಸ್ಥಿತಿಯನ್ನೇ ನೋಡಿದರೆ ವಿಜಯೇಂದ್ರ ಅವರು ಮೂಡಾ ವಿರುದ್ಧ ಪಾದಯಾತ್ರೆಗೆ ಜೆಡಿಎಸ್ ನಾಯಕರನ್ನು ಒಪ್ಪಿಸುವಲ್ಲಿ, ಹೈಕಮಾಂಡಿನವರಿಗೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾದರು. ಆದರೆ ತಮ್ಮದೇ ಪಕ್ಷದ ನಾಯಕರನ್ನು ಒಪ್ಪಿಸುವುದಕ್ಕೆ ಆಗಲಿಲ್ಲ. ವಕ್ಫ್ ವಿಚಾರದಲ್ಲೂ ಅಷ್ಟೇ, ವಿಜಯೇಂದ್ರ ಅವರದ್ದು ಒಂದು ದಿಕ್ಕಾದರೆ, ಯತ್ನಾಳ್ ಅವರದ್ದು ಇನ್ನೊಂದು ದಿಕ್ಕು. ವಕ್ಫ್ ವಿರೋಧಿ ಸಮಾವೇಶಗಳಲ್ಲೂ ಯತ್ನಾಳ್ ಮತ್ತು ಅವರ ಬಣದ ನಾಯಕರು ಮಾತನಾಡುವುದು ವಿಜಯೇಂದ್ರ ಅವರ ಬಗ್ಗೆಯೇ ಹೊರತು, ವಕ್ಫ್ ವಿಷಯದ ಬಗ್ಗೆ ಅಲ್ಲ.
ಇತ್ತ ಕಾಂಗ್ರೆಸ್ ಪರಿಸ್ಥಿತಿ ನೋಡಿ. ಅಲ್ಲಿಯೂ ಪ್ರತ್ಯೇಕ ಸಭೆ, ಹೋರಾಟಗಳು ನಡೆಯುತ್ತಲೆ ಇರುತ್ತವೆ. ಅದರೆ ಹೊರಗೆ ಎಲ್ಲರೂ ಒಂದೇ. ಹಾಸನದಲ್ಲಿ ಸಿದ್ದರಾಮಯ್ಯ ನಡೆಸಲು ಉದ್ದೇಶಿಸಿರುವ ಸ್ವಾಭಿಮಾನಿ ಸಮಾವೇಶಕ್ಕೆ ಡಿಕೆ ಶಿವಕುಮಾರ್ ಅವರೇ ಎಸ್ ಎಂದಿದ್ದಾರೆ. ಸ್ಥಳೀಯ ಕಾರ್ಯಕರ್ತರು ವಿರೋಧ ಮಾಡಿದ್ದರಾದರೂ, ಡಿಕೆ ಶಿವಕುಮಾರ್ ಎಸ್ ಎನ್ನುತ್ತಲೇ ಅವರು ಸೈಲೆಂಟ್.
ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ರಹಸ್ಯವೇ ಅದು. ಮೊದಲು ಗೆಲ್ಲೋದು, ಆಮೇಲೆ ನೋಡಿಕೊಳ್ಳೋದು.
ರಾಜ್ಯ ಬಿಜೆಪಿಯಲ್ಲಿನ ಪರಿಸ್ಥಿತಿಯೇ ಬೇರೆ. ಮೊದಲು ತಮ್ಮ ಎದುರಾಳಿಗಳನ್ನ ಸೋಲಿಸೋದು. ಆಮೇಲೆ ತಾಕತ್ತು ಒಗ್ಗೂಡಿಸಿಕೊಂಡು ಹೋರಾಟ ಮಾಡೋಕೆ ಪ್ಲಾನ್ ಮಾಡೋದು. ಫಲಿತಾಂಶ ರಾಜ್ಯ ಬಿಜೆಪಿಯ ಕಣ್ಣ ಮುಂದೆಯೇ ಇದೆ.
ಒಟ್ಟಿನಲ್ಲಿ ಡಿಕೆಶಿ-ಸಿದ್ದು ಜೋಡಿ ನೋಡಿ, ರಾಜ್ಯ ಬಿಜೆಪಿ ನಾಯಕರು ಕಲಿಯುವುದು ಸಾಕಷ್ಟಿದೆ.



