ಜುಲೈ 10ರಿಂದ ಅನ್ನಭಾಗ್ಯ (Annabhagya) ಯೋಜನೆ ಜಾರಿಯಾಗುತ್ತಿದೆ. ಬಿಪಿಎಲ್ ಕಾರ್ಡ್ (BPL Card) ಇರುವ ಪ್ರತಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಲಾ 10 ಕೆಜಿ ಅಕ್ಕಿ ಕೊಡುವ ಗ್ಯಾರಂಟಿ ಸ್ಕೀಮ್ ಅದು. ಹಾಗಾದರೆ ಎಲ್ಲರಿಗೂ ಸಿಗುತ್ತೆ ಬಿಡು ಅಂದ್ಕೋಬೇಡಿ. ಕೆಲವು ನಿಯಮಗಳು ಹಾಗೂ ಷರತ್ತುಗಳಿವೆ. ಯೋಜನೆಯ ಲಾಭ ಎಲ್ಲರಿಗೂ ಇದೆ, ಆದರೆ ಕೆಲವು ಷರತ್ತುಗಳಿಗೆ ಬದ್ಧರಾಗಿದ್ದರೆ ಮಾತ್ರ. ಒಟ್ಟು ಹದಿನೈದು ಮಾರ್ಗಸೂಚಿಗಳನ್ನು ನೀಡಿರುವ ರಾಜ್ಯ ಸರ್ಕಾರ ಅದನ್ನು ಅಧಿಕೃತವಾಗಿ ಪ್ರಕಟಿಸಿದೆ. ಸದ್ಯಕ್ಕೆ ಸಿಗುವುದು ಮೋದಿಯ ಅಕ್ಕಿ ಮತ್ತು ಸಿದ್ದರಾಮಯ್ಯ ಹಣ ಮಾತ್ರ. ಆದರೆ..
ಸಿದ್ದರಾಮಯ್ಯ ಹಣ ಪಡೆಯೋಕೆ ಪಡಿತರ ಚೀಟಿದಾರರು ಹಿಂದಿನ ಮೂರೂ ತಿಂಗಳು ರೇಷನ್ ಪಡೆದುಕೊಂಡಿರಲೇಬೇಕು.
3 ತಿಂಗಳಿಂದ ರೇಷನ್ ಪಡೆದಿದ್ದರೆ ಮಾತ್ರ 170 ರೂ. ದುಡ್ಡು :
ಮಾರ್ಗಸೂಚಿ ಪ್ರಕಾರ ರೇಷನ್ ತೆಗೆದುಕೊಂಡಿರುವವರಿಗೆ ಮಾತ್ರ ಪ್ರತಿ ವ್ಯಕ್ತಿಗೆ 170 ರೂ. ಸಿಗಲಿದೆ. ಇಲ್ಲದಿದ್ದರೆ ಇಲ್ಲ. ಕಳೆದ ತಿಂಗಳು 1,28,23,868 ಪೈಕಿ 1,17,29,296 ಕುಟುಂಬಗಳು ಅಕ್ಕಿ ಪಡೆದಿದ್ದವು. ಉಳಿದ 10.94 ಲಕ್ಷ ಬಿಪಿಎಲ್ ಕುಟುಂಬಗಳು ಪಡಿತರ ಅಕ್ಕಿ ಪಡೆದಿರಲಿಲ್ಲ. 10.94 ಲಕ್ಷ ಕುಟುಂಬಗಳು ಅಂದರೆ, ಅಂದಾಜು 20 ಲಕ್ಷ ಜನ ಅಕ್ಕಿ ಪಡೆದಿಲ್ಲ. 20 ಲಕ್ಷ ಜನರಿಗೆ ಹಣ ಹಾಕದಿದ್ದರೆ 76 ಕೋಟಿ ರೂ. ಹಣ ಉಳಿತಾಯ ಆಗುತ್ತದೆ. ಕೆಲವರು ಬಿಪಿಎಲ್ ಕಾರ್ಡ್ ಹೊಂದುವ ಉದ್ದೇಶದಿಂದ ಪಡಿತರ ಪಡೆಯುವುದಿಲ್ಲ. ಉಚಿತ ಆರೋಗ್ಯ ಸೇವೆ ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ. ಇಂತಹವರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ನೀಡುವುದು ಅನಗತ್ಯ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ. ಕಳೆದ 3 ತಿಂಗಳಿನಿಂದ 5,37,213 ಬಿಪಿಎಲ್ ಕುಟುಂಬಸ್ಥರು ಅಕ್ಕಿ ಪಡೆದಿಲ್ಲ. ಅವರು ಕೇಂದ್ರ ಸರ್ಕಾರ ನೀಡುವ ಅಕ್ಕಿ ಪಡೆಯಲು ಅರ್ಹರು. ಆದರೆ ಸಿದ್ದರಾಮಯ್ಯ ಹಣಕ್ಕೆ ಅಲ್ಲ.
ಅಂತ್ಯೋದಯ ಕಾರ್ಡುಗಳ ನಿಯಮಗಳೇ ಬೇರೆ :
ಅಂತ್ಯೋದಯ (Anthyodaya Card) ಅನ್ನ ಯೋಜನೆ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು 35 ಕೆ.ಜಿ, ಆಹಾರ ಧಾನ್ಯವನ್ನು ಪಡೆಯುತ್ತಿರುವುದರಿಂದ ಅಂತಹ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಕುಟುಂಬಗಳಿಗೆ ನಗದು ವರ್ಗಾವಣೆಯ ಸೌಲಭ್ಯವನ್ನು ನೀಡಲಾಗುವುದಿಲ್ಲ. ಆದರೆ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯ ಕುಟುಂಬದಲ್ಲಿ. 04 ಸದಸ್ಯರಿದ್ದರೆ ಸದರಿ ಕುಟುಂಬವ 170 ರೂಪಾಯಿಗಳನ್ನು, 5 ಸದಸ್ಯರನ್ನು ಹೊಂದಿರುವ ಕುಟುಂಬವು 510 ರೂಪಾಯಿ ಗಳನ್ನು 06 ಸದಸ್ಯರನ್ನು ಹೊಂದಿರುವ ಕುಟುಂಬವು 850 ರೂಪಾಯಿಗಳನ್ನು ಪಡೆಯುತ್ತದೆ. ಇದೇ ರೀತಿ ಸದಸ್ಯರಿಗೆ ಅನುಗುಣವಾಗಿ ಇದು ಏರುತ್ತ ಸಾಗುತ್ತದೆ. ಅಂತ್ಯೋದಯ ಕಾರ್ಡುದಾರರಿಗೆ ಕೇಂದ್ರ ಸರ್ಕಾರವೇ ಮಾಸಿಕ 35 ಕೆಜಿ ಅಕ್ಕಿ ನೀಡುತ್ತದೆ. ಅಂತಹ ಕಾಡಿನಲ್ಲಿ ನಾಲ್ವರು ಸದಸ್ಯರಿದ್ದರೆ ಮಾತ್ರ, ನಾಲ್ಕನೇಯವರಿಗೆ ಈ ಹಣ ಸಿಗುತ್ತದೆ. ಕಾರ್ಡಿನ ಸದಸ್ಯರ ಸಂಖ್ಯೆ 3ಕ್ಕಿಂತ ಕಡಿಮೆ ಇದ್ದರೆ, ಅಕ್ಕಿ ಕೇಂದ್ರ ಸರ್ಕಾರದ್ದೇ 35 ಕೆಜಿ ಸಿಗುವ ಕಾರಣ, ಅವರಿಗೆ ಹಣ ಇಲ್ಲ.
ಕುಟುಂಬದ ಮುಖ್ಯಸ್ಥರನ್ನ ಫೈನಲ್ ಮಾಡಿ :
ಪಡಿತರ ಚೀಟಿಯಲಿ, ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು, ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳನ್ನು ನಗದು ವರ್ಗಾವಣೆ ಸೌಲಭ್ಯದಿಂದ ಹೊರಗಿಡಲಾಗಿದೆ, ಕುಟುಂಬದ ಮುಖ್ಯಸ್ಥರನ್ನು ನಿಗದಿಪಡಿಸದ ಪಡಿತರ ಕುಟುಂಬಗಳು ಮುಖ್ಯಸ್ಥರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ ಹಾಗೂ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಲ್ಲಿ ಕಡಾಯಗೊಳಿಸಿರುವಂತೆ ಮಹಿಳಾ ಸದಸ್ಯರಿರುವ ಪಡಿತರ ಚೀಟಿಯಲ್ಲಿನ ಹಿರಿಯ ಮಹಿಳೆಯನ್ನು ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸುವುದು ಅಗತ್ಯ. ಇಲ್ಲದಿದ್ದರೆ ನಗದು ವರ್ಗಾವಣೆ ಇಲ್ಲ. ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಗೆ ಸಮಸ್ಯೆ ಇಲ್ಲ.
ಆಧಾರ್ ಕಾರ್ಡ್ ಲಿಂಕ್ ಮಾಡಿಸಿ, ಇಲ್ಲದಿದ್ದರೆ ರೇಷನ್ ಸಿಗುತ್ತೆ. ಆದರೆ 170 ರೂ. ಹಣ ಸಿಗುವುದಿಲ್ಲ. ಇನ್ನು ಬಯೋಮೆಟ್ರಿಕ್ ಪರಿಶೀಲನೆ ಕಡಿಮೆ ಮಾಡಿ, ಮೊಬೈಲ್ ಒಟಿಪಿಯನ್ನೂ ಸ್ಥಗಿತಗೊಳಿಸುವ ಯೋಜನೆ ರೂಪುಗೊಳ್ಳುತ್ತಿದೆ. ನಿಮ್ಮ ಕಾರ್ಡ್ ಚೆಕ್ ಮಾಡಿಕೊಳ್ಳಿ.



