ಸಿಎಂ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಕನಸಿನ ಯೋಜನೆ ಅನ್ನಭಾಗ್ಯ ಯೋಜನೆ ಜಾರಿಗೆ ಒಂದಲ್ಲ ಒಂದು ವಿಘ್ನ ಎದುರಾಗುತ್ತಲೇ ಇದೆ. ಕೇಂದ್ರದಿಂದ 5 ಕೆಜಿ ಅಕ್ಕಿಯೇನೋ ಸಿಗುತ್ತಿದೆ. ಆದರೆ, ರಾಜ್ಯದಲ್ಲಿ ಸಮಸ್ಯೆ ಎದುರಾಗುತ್ತಿದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದ 2.36 ಲಕ್ಷ ಟನ್ ಅಕ್ಕಿ ನೀಡಿದರೂ, ಅನ್ನಭಾಗ್ಯ ಯೋಜನೆಗೆ ಮತ್ತೆ ಅಕ್ಕಿ ಕೊರತೆ ಎದುರಾಗಿದೆ. ಈ ತಿಂಗಳು ಡಿಬಿಟಿ ಹಣದ ಬದಲು ಅಕ್ಕಿಯನ್ನೆ ಕೊಡಲು ನಿರ್ಧರಿದ್ದ ಆಹಾರ ನಾಗರೀಕ ಸರಬರಾಜು ಇಲಾಖೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಒಂದೂವರೆ ಕೋಟಿ ಬಿಪಿಎಲ್ ಫಲಾನುಭವಿಗಳ ಪೈಕಿ 13 ಲಕ್ಷದ 45 ಸಾವಿರ ಫಲಾನುಭವಿಗಳಿಗೆ ಅಕ್ಕಿಯ ಕೊರತೆ ಎದುರಾಗಿದೆ.
2.36 ಲಕ್ಷ ಟನ್ ಅಕ್ಕಿಯ ಜೊತೆಗೆ ಮತ್ತೆ 20% ರಷ್ಟು ಹೆಚ್ಚು ಅಕ್ಕಿಯನ್ನ ಕೇಂದ್ರ ಸರ್ಕಾರ ಕೊಟ್ರೆ ಸೆಪ್ಟೆಂಬರ್ ತಿಂಗಳಿನಿಂದಲೇ ಅನ್ನಭಾಗ್ಯದ 5 ಕೆಜಿ ಅಕ್ಕಿಭಾಗ್ಯವು ಆರಂಭವಾಗಲಿದೆ. ಇನ್ನು, ಅಕ್ಕಿ ಕೊಡ್ತೀವಿ ಅಂತ ಹೇಳಿ ಹಣ ಆರಂಭಮಾಡಿದ್ರು. ಆದ್ರೆ ಎರಡು ತಿಂಗಳಿಂದ ಡಿಬಿಟಿ ಹಣವು ಬಂದಿಲ್ಲ. ಹೀಗಾಗಿ ಅನ್ನಭಾಗ್ಯದ ಹಣವನ್ನಾದ್ರು ಹಾಕಿ. ಈ ಹಣ ಹಾಕಿದ್ರೆ ತುಂಬ ಅನುಕೂಲವಾಗುತ್ತೆ ಅಂತ ಬಿಪಿಎಲ್ ಫಲಾನುಭವಿಗಳು ಹೇಳ್ತಿದ್ದಾರೆ.
ಈ ನಡುವೆ ರಾಜ್ಯ ಸರ್ಕಾರ ಅನ್ನಭಾಗ್ಯದಡಿ ಫಲಾನುಭವಿಗಳಿಗೆ ಇನ್ನು ಮುಂದೆ ನಗದು ಬದಲಿಗೆ ಫುಡ್ ಕಿಟ್ ವಿತರಿಸಲು ಮುಂದಾಗಿದೆ ಅಕ್ಟೋಬರ್ ತಿಂಗಳಿಂದಲೇ ನೂತನ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನಲಾಗಿತ್ತು. ಆದರೆ, ಈಗ ಅದನ್ನೂ ಕೈಬಿಡಲಾಗಿದೆ. ಈಗ ಜಾರಿಯಲ್ಲಿರುವ 170 ರೂ. ಹಣವನ್ನೇ ನೀಡಲು ಸರ್ಕಾರ ನಿರ್ಧರಿಸಿದೆ.
ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರ ಈಗ ಪ್ರಸ್ತಾವನೆ ಸಲ್ಲಿಸಿದರೆ, ಅಕ್ಕಿ ನೀಡಲು ಸಿದ್ಧ ಎಂದು ಹೇಳಿದ್ದರು. ಕಳೆದ ಬಾರಿ ಏಕೆ ನೀಡಲಿಲ್ಲ ಎಂಬ ಪ್ರಶ್ನೆಗೂ ಉತ್ತರ ಕೊಟ್ಟಿದ್ದರು. ಕಳೆದ ಬಾರಿ ರಾಜ್ಯ ಸರ್ಕಾರ ಕೇಳಿದಾಗ ದೇಶದ ಹಲವು ರಾಜ್ಯಗಳಲ್ಲಿ ಅಹಾರದ ಕೊರತೆ ಇತ್ತು. ಆ ಸಂದರ್ಭದಲ್ಲಿ ಕರ್ನಾಟಕ ಕೇಳಿದಷ್ಟು ಅಕ್ಕಿ ಕೊಟ್ಟಿದ್ದರೆ, ಬೇರೆ ಕಡೆ ಅಸಮತೋಲನ ಎದುರಾಗುತ್ತಿತ್ತು. ಹೀಗಾಗಿ ನಿರಾಕರಿಸಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶಾದ್ಯಂತ ಒಳ್ಳೆಯ ಮಳೆ ಆಗುತ್ತಿದೆ. ಒಳ್ಳೆಯ ಫಸಲಿನ ನಿರೀಕ್ಷೆ ಇದೆ. ಈಗ ಸಮಸ್ಯೆ ಇಲ್ಲ ಎಂದಿದ್ದರು ಪ್ರಹ್ಲಾದ್ ಜೋಶಿ.
ಆದರೆ, ಇದಕ್ಕೆ ನೋಡುತ್ತೇವೆ ಎಂಬ ಉತ್ತರ ನೀಡಿದ್ದ ರಾಜ್ಯ ಸರ್ಕಾರ, ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುವ ವಿಷಯವನ್ನೇ ಚರ್ಚೆಗೆ ತೆಗೆದುಕೊಂಡಿಲ್ಲ. ಸಿದ್ಧರಾಮಯ್ಯ ನೇತೃತ್ವದ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದು, 170 ಹಣವನ್ನು ನೀಡಲು ನಿರ್ಧರಿಸಲಾಗಿದೆ.
ಕಾರಣ ಏನೆಂದು ಹುಡುಕಿದರೆ ಸರ್ಕಾರದ ಬಳಿ ಖರೀದಿ ಮಾಡಬೇಕು ಎಂದರೆ ಕೇಂದ್ರಕ್ಕೆ ಕೂಡಲೇ ಹಣ ನೀಡಬೇಕು. ಆದರೆ, ಫಲಾನುಭವಿಗಳ ವಿಷಯದಲ್ಲಿ ಹಾಗಲ್ಲ. ಸ್ವಲ್ಪ ವಿಳಂಬ ಮಾಡಬಹುದು. ಹೇಗಿದ್ದರೂ ಕಳೆದ ಎರಡು ತಿಂಗಳಿಂದ ಹಣ ನೀಡಿಲ್ಲ. ಅಲ್ಲದೆ ಕೇಂದ್ರದಿಂದ ಅಕ್ಕಿ ಖರೀದಿ ಮಾಡಿದರೆ, ರೇಷನ್ ಅಂಗಡಿ ಮಾಲೀಕರಿಗೆ ಅದನ್ನು ತಲುಪಿಸುವ ವೆಚ್ಚವೂ ಸೇರಿ ಜಾಸ್ತಿಯೇ ಹಣ ಖರ್ಚಾಗುತ್ತದೆ. ಈ ಎಲ್ಲ ಕಾರಣಗಳಿಂದ ಸದ್ಯಕ್ಕೆ ಕೇಂದ್ರದಿಂದ ಅಕ್ಕಿ ಖರೀದಿಸುವ ಬದಲು, 170 ರೂ. ಹಣ ನೀಡುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿದೆ.



