ರಾಜೀನಾಮೆ ಮಾತೇ ಇಲ್ಲ. ಪ್ರತ್ಯೇಕ ಸಭೆ ನಿಲ್ಲಿಸಿ. ಆಮೇಲೆ ಪಕ್ಷದ ಹೈಕಮಾಂಡ್ ಶಿಸ್ತು ಕ್ರಮ ಕೈಗೊಂಡರೆ ನಾನು ರಕ್ಷಣೆಗೂ ಬರಲ್ಲ. ಜವಾಬ್ದಾರಿಯೂ ಅಲ್ಲ. ಹೀಗೊಂದು ಎಚ್ಚರಿಕೆಯನ್ನು ಕ್ಯಾಬಿನೆಟ್ ಸಭೆಯಲ್ಲೇ ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಅಥವಾ ತಮ್ಮ ಪರ ನಡೆಯುವ ಯಾವ ಸಭೆಗಳಿಗೂ ನೋ ರಿಯಾಕ್ಷನ್ ಅಂತಿರ್ತಾರೆ. ಅಂಥಾದ್ದರಲ್ಲಿ ‘ಪ್ರತ್ಯೇಕ ಸಭೆ, ವಿವಾದಾತ್ಮಕ ಹೇಳಿಕೆಗಳ ಮೂಲಕ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹುಟ್ಟು ಹಾಕುತ್ತಿದ್ದೀರಿ. ಇಷ್ಟಕ್ಕೂ ಮುಖ್ಯಮಂತ್ರಿ ಹುದ್ದೆ ಖಾಲಿ ಇದೆ ಎಂದು ಹೇಳಿದ್ದು ಯಾರು? ನಾನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ’ ಎಂದು ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಸಚಿವರಿಗೆ ಈ ಎಚ್ಚರಿಕೆ ಕೊಟ್ಟಿದ್ದು ಏಕೆ ಅನ್ನೋದು ಪ್ರಶ್ನೆ. ಇದಲ್ಲದೆ ಈ ಪ್ರಕರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರವೇಶವಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಒಂದು ಸಂದೇಶವೂ ರವಾನೆಯಾಗಿದೆ.
ಮೈಸೂರು ಸಭೆಗೆ ಟೆನ್ಷನ್ ಆದರಾ ಸಿದ್ದು..?
ಇತ್ತೀಚೆಗೆ ಮೈಸೂರಿನಲ್ಲಿ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಹಾಗೂ ಎಚ್‌ಸಿ ಮಹದೇವಪ್ಪ ಸಭೆ ಮಾಡಿದ್ದರು. ಆ ಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ಇರೋಣ. ಆದರೆ ಅನಿವಾರ್ಯವಾದರೆ ತಮ್ಮ ಮೂವರಲ್ಲಿಯೇ ಯಾರಾದರೂ ಒಬ್ಬರು ಸಿಎಂ ಆಗೋಣ. ಯಾರಿಗೆ ಅವಕಾಶ ಬಂದರೂ ಅವರಿಗೆ ಬೆಂಬಲ ಕೊಡೋಣ. ರಾಜ್ಯದಲ್ಲಿ ಇದುವರೆಗೆ ದಲಿತ ಸಮುದಾಯದವರು ಸಿಎಂ ಆಗಿಲ್ಲ. ದಲಿತರೊಬ್ಬರು ಸಿಎಂ ಪೀಠದ ಮೇಲೆ ಕೂರುವುದಾದರೆ, ಆ ನಿಟ್ಟಿನಲ್ಲಿ ಹೋರಾಡೋಣ ಎಂದು ನಿರ್ಧಾರ ಮಾಡಿದ್ದರು ಎಂದು ವರದಿಗಳು ಹೇಳಿದ್ದವು.
ಹಂಗೆಲ್ಲ ಏನೂ ಇಲ್ಲ. ಮೈಸೂರಿಗೆ ದಸರಾ ಕಾರಣಕ್ಕೆ ಹೋಗಿದ್ದೆವು, ಅಷ್ಟೇ ಎಂದು ಸತೀಶ್ ಜಾರಕಿಹೊಳಿ, ಪರಮೇಶ್ವರ್, ಎಚ್‌ಸಿ ಮಹದೇವಪ್ಪ ಹೇಳಿದ್ದರು. ಅಷ್ಟೇ ಅಲ್ಲ, ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಎಂದೂ ಹೇಳಿದ್ದರು. ಆದರೆ ಹೀಗೆ ಮಾತನಾಡುವ ಹಂತದಲ್ಲಿ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ 3 ವರ್ಷ ಇರ್ತಾರೋ.. 5 ವರ್ಷ ಇರ್ತಾರೋ ಗೊತ್ತಿಲ್ಲ ಎಂದುಬಿಟ್ಟಿದ್ದರು. ಸಿದ್ದರಾಮಯ್ಯ ಅವರಿಗೆ ಟೆನ್ಷನ್ ಕೊಟ್ಟಿದ್ದ ಹೇಳಿಕೆಯೇ ಇದು ಎನ್ನಲಾಗಿದೆ.
ಕ್ಯಾಬಿನೆಟ್ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದಾದರೂ ಏನು..?
‘ಸಿಎಂ ಬದಲಾವಣೆ ಚರ್ಚೆ ಹುಟ್ಟು ಹಾಕುವಂತೆ ಪ್ರತ್ಯೇಕ ಸಭೆ, ರಾಜಕೀಯ ಅಸ್ಥಿರತೆ ಉಂಟಾಗುವಂತೆ ಬಹಿರಂಗ ಹೇಳಿಕೆ ನೀಡುತ್ತಿದ್ದೀರಿ. ಇದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಕೂಡಲೇ ಇಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಹೈಕಮಾಂಡ್ ಯಾವುದೇ ಕಠಿಣ ಕ್ರಮ ಕೈಗೊಂಡರೂ ನಾನು ಹೊಣೆಯಲ್ಲ’ ಇದು ಪರೋಕ್ಷವಾಗಿ ಅಂತಹವರನ್ನು ಸಂಪುಟದಿಂದಲೇ ಹೊರಹಾಕುವ ಎಚ್ಚರಿಕೆ ಎನ್ನಲಾಗಿದೆ.
ಇದೇ ವೇಳೆ ಮುಡಾ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಇದು ಪ್ರತಿಪಕ್ಷಗಳ ಷಡ್ಯಂತ್ರ ಎನ್ನುವುದು ಹೈಕಮಾಂಡ್ ಸೇರಿದಂತೆ ಎಲ್ಲರಿಗೂ ಗೊತ್ತಿದೆ. ಹೀಗಾಗಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ‘ಎಲ್ಲಾ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಿಲ್ಲಲು ಎಲ್ಲರೂ ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.
ಡಿಕೆಶಿಗೆ ಖರ್ಗೆ ಕೊಟ್ಟ ಸೂಚನೆ ಏನು..?
ಪ್ರತ್ಯೇಕ ಸಭೆಗಳ ಬಗ್ಗೆ ಹೈಕಮಾಂಡ್ ಅಸಮಾಧಾನಗೊಂಡಿದೆ. ಹೀಗಾಗಿ ಶಿಸ್ತು ಉಲ್ಲಂಘಿಸುವ ನಾಯಕರಿಗೆ ನೋಟಿಸ್ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ. ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಸೂಚಿಸಿದ ಹೊರತಾಗಿಯೂ ಕೆಲ ನಾಯಕರು ಸುಮ್ಮನಾಗಿಲ್ಲ. ಹೀಗಾಗಿ ಶಿಸ್ತು ಉಲ್ಲಂಘಿಸಿದರೆ ನೋಟಿಸ್ ಜಾರಿ ಮಾಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರು ಡಿಕೆಶಿ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.



