ಬಸನಗೌಡ ಪಾಟೀಲ ಯತ್ನಾಳ್. ಬಿಜೆಪಿಯ ರೆಬಲ್ ಲೀಡರ್. ಬಿಜೆಪಿಯಲ್ಲಿರುವ ರಮೇಶ್ ಜಾರಕಿಹೊಳಿ, ಸಿದ್ದೇಶ್ವರ, ಲಿಂಬಾವಳಿ, ಬಿಪಿ ಹರೀಶ್, ಕುಮಾರ್ ಬಂಗಾರಪ್ಪ.. ಹೀಗೆ ದೊಡ್ಡ ದೊಡ್ಡವರೆಲ್ಲ ಯತ್ನಾಳ್ ಅವರನ್ನು ತಮ್ಮ ಲೀಡರ್ ಎಂದು ಬಹಿರಂಗವಾಗಿ ಹೇಳಿಕೊಳ್ಳುವಂತೆ ಮಾಡಿದ್ದವರು. ಓಪನ್ ಆಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ತೊಡೆತಟ್ಟಿದ್ದರು.
ಹೈಕಮಾಂಡ್ ನಾಯಕರೂ ಕೂಡಾ ಆರಂಭದಲ್ಲಿ ತಣ್ಣಗೆ ಕುಳಿತು ನೋಡಿದ್ದರು. ಒಂದಿಷ್ಟು ಹೈಕಮಾಂಡ್ ಲೀಡರ್ಸ್, ಒಳಗೊಳಗೇ ಯತ್ನಾಳ್ ಬೆನ್ನು ತಟ್ಟಿದ್ದರು. ಇದೀಗ ಹೈಕಮಾಂಡ್ ನೋಟಿಸ್ ಕೊಟ್ಟಿದ್ದಾಗಿದೆ. ಯತ್ನಾಳ್ ಡೋಂಟ್ ಕೇರ್ ಎಂದಿದ್ದೂ ಆಗಿದೆ.
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ಗೆ ಫೆ.10 ರಂದು ಬಿಜೆಪಿ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮಾಡಿರುವ ಆರೋಪಗಳಿಗೆ 72 ಗಂಟೆಯೊಳಗೆ ಸ್ಪಷ್ಟನೆ ನೀಡಬೇಕೆಂದು ನೋಟಿಸ್ ನೀಡಿತ್ತು. ಆದ್ರೆ ಶೋಕಾಸ್ ನೋಟೀಸ್‌ಗೆ ಕ್ಯಾರೇ ಎನ್ನದ ರೆಬಲ್ ನಾಯಕ ಯತ್ನಾಳ್, ಅವಧಿ ಮುಗಿದ್ರೂ ಉತ್ತರವೇ ನೀಡಿಲ್ಲ. ಈ ಮಧ್ಯೆ ಹೈಕಮಾಂಡ್ ಮುಂದಿನ ನಿರ್ಧಾರದ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಈಗ ಯತ್ನಾಳ್ ಅವರ ಬೆನ್ನುತಟ್ಟಿದ್ದ ಹೈಕಮಾಂಡ್ ಜೊತೆಗಿದ್ದ ನಾಯಕರು ಕೈಕೈ ಹಿಸುಕಿಕೊಳ್ತಿದ್ದಾರಂತೆ. ಯತ್ನಾಳ್ ಮಾತನಾಡಲಿ, ಯಡಿಯೂರಪ್ಪ, ವಿಜಯೇಂದ್ರ ಪವರ್ ಕಡಿಮೆಯಾಗಲಿ ಎಂದು ಬಯಸಿದ್ದ ನಾಯಕರಿಗೆ ಯತ್ನಾಳ್ ʻತಮ್ಮ ಮಾತನ್ನೂ ಡೋಂಟ್ ಕೇರ್ʼ ಎನ್ನುವ ಮಟ್ಟಿಗೆ ಬೆಳೆಯುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಯಾಕಾದರೂ ಯತ್ನಾಳ್ ಜೊತೆಗೆ ನಿಂತೆವೋ ಎಂದು ಮರುಗುವಂತಾಗಿದೆ.
ವಿಚಿತ್ರ ಎಂದರೆ ಯಡಿಯೂರಪ್ಪ ವಿರುದ್ಧ ಯಾವ ಯಾವ ನಾಯಕರನ್ನು ಎತ್ತಿಕಟ್ಟಿದ್ದರೋ, ಆ ನಾಯಕರೆಲ್ಲ ಬಿಜೆಪಿ ಹೈಕಮಾಂಡಿಗೇ ಮುಳುಗುನೀರು ತಂದವರೇ. ಜಗದೀಶ್ ಶೆಟ್ಟರ್, ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋಗಿ ಅಲ್ಲಿ ಶಾಸಕರಾಗಿ ಹಾದಿಬೀದಿಯಲ್ಲಿ ಬೈದಿದ್ದರು. ಇನ್ನು ಲಕ್ಷ್ಮಣ್ ಸವದಿ ಬಿಜೆಪಿಯಲ್ಲಿ ಡಿಸಿಎಂ ಆಗಿ, ಈಗ ಕಾಂಗ್ರೆಸ್ಸಿನಲ್ಲಿ ಶಾಸಕ. ಶ್ರೀರಾಮುಲು ಕೂಡಾ ಯಾವಾಗ ತಿರುಗಿಬೀಳ್ತಾರೋ.. ಗೊತ್ತಿಲ್ಲ. ಡಿವಿ ಸದಾನಂದ ಗೌಡ ಮತ್ತು ಬಸವರಾಜ ಬೊಮ್ಮಾಯಿ ಅವರಿಂದ ಪಕ್ಷಕ್ಕೆ ಲಾಭವಾಗಲಿಲ್ಲ ಎನ್ನುವುದು ಗೊತ್ತು. ಇದೆಲ್ಲವೂ ವಿಜಯೇಂದ್ರ ಅವರಿಗೆ ವರವಾಗುವ ಸಾಧ್ಯತೆಯೇನೋ ಇದೆ.
ಇನ್ನು ಯತ್ನಾಳ್ ಜೊತೆಗೆ ಪರೋಕ್ಷವಾಗಿ ನಿಂತಿದ್ದ ಪ್ರತಾಪ್ ಸಿಂಹ, ಸಿಟಿ ರವಿ, ಒಳಗೊಳಗೇ ಸಪೋರ್ಟ್ ಮಾಡುತ್ತಿದ್ದ ಬೊಮ್ಮಾಯಿ, ಆರ್. ಅಶೋಕ್, ವಿ.ಸೋಮಣ್ಣ ದಿಢೀರ್ ಯು-ಟರ್ನ್ ಹೊಡೆದಿದ್ದಾರಂತೆ. ಒಟ್ಟಿನಲ್ಲಿ ಯತ್ನಾಳ್ ಅವರ ಜೊತೆಗೆ ನಿಂತಿದ್ದ ಬಹುತೇಕರು ಯತ್ನಾಳ್ ಸಹವಾಸ ಸಾಕಪ್ಪಾ ಸಾಕು ಎನ್ನುವ ಹಂತಕ್ಕೆ ಬಂದಿದ್ದಾರೆ. ಏಕೆಂದರೆ ಯತ್ನಾಳ್ ಜೊತೆಗಿದ್ದರೆ ಹೈಕಮಾಂಡ್ ತಮ್ಮ ಮಾತು ಕೇಳಬೇಕು ಎಂಬ ನಿರೀಕ್ಷೆ ಇತ್ತೇ ಹೊರತು, ಹೈಕಮಾಂಡ್ ʻಹೋಗಾಚೆʼ ಎನ್ನಬಹುದು ಎಂಬ ಸಣ್ಣ ಲೆಕ್ಕಾಚಾರವೂ ಇರಲಿಲ್ಲ. ಸದ್ಯಕ್ಕೆ ಮುಂದೇನಾಗುತ್ತೆ ಅನ್ನೋದೇ ದೊಡ್ಡ ಸಸ್ಪೆನ್ಸ್.



