ರಾಜ್ಯದ 1.28 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳಲ್ಲಿ ಸದ್ಯದ ಲಭ್ಯ ಮಾಹಿತಿ ಪ್ರಕಾರ ಸುಮಾರು 2 ಲಕ್ಷ ಮಹಿಳೆಯರನ್ನು ಐಟಿ, ಜಿಎಸ್‌ಟಿ ಪಾವತಿ ಕಾರಣದಿಂದ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ತುಮಕೂರು ಜಿಲ್ಲೆಯೊಂದರಲ್ಲೇ ಐಟಿ, ಜಿಎಸ್‌ಟಿ ಕಟ್ಟುವ 7,343 ಮಹಿಳೆಯರು ಗೃಹಲಕ್ಷ್ಮೀ’ಯಿಂದ ವಂಚಿತರಾಗಿದ್ದಾರೆ. ಐಟಿ, ಜಿಎಸ್‌ಟಿ ಪಾವತಿದಾರ ಮಹಿಳೆಯರು ‘ಗೃಹಲಕ್ಷ್ಮೀ’ ಹಣ ಬಂದಿಲ್ಲವೆಂದು ಕಚೇರಿಗೆ ಅಲೆಯುತ್ತಿದ್ದರೆ, ಅವರನ್ನು ಆ ಉದ್ದೇಶಕ್ಕಾಗಿ ಅಲೆಸಬಾರದು. ಜಿಎಸ್‌ಟಿ, ಐಟಿ ಪಾವತಿದಾರರಾಗಿರುವುದರಿಂದ ನಿಮಗೆ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಸಿಗುವುದಿಲ್ಲಎಂದು ಅಧಿಕೃತವಾಗಿಯೇ ಹಿಂಬರಹ ನೀಡುವಂತೆ ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶಿಸಿದ್ದಾರೆ.
ರಾಜ್ಯ ಸರಕಾರದ ಪಂಚ ‘ಗ್ಯಾರಂಟಿ’ ಗಳಲ್ಲಿಒಂದಾಗಿರುವ ಗೃಹಲಕ್ಷ್ಮೀ ಯೋಜನೆಗೆ ಸದ್ದಿಲ್ಲದೆ ಐಟಿ (ಆದಾಯ ತೆರಿಗೆ) ಶಾಕ್ ನೀಡಿದೆ. ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮೀ ಹಣ ಸಿಗಲ್ಲ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿದಾರ ಮಹಿಳೆಯರನ್ನು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಐಟಿ – ಜಿಎಸ್‌ಟಿ ಪಾವತಿದಾರರ ಪಟ್ಟಿ ಸಿದ್ಧವಾಗಿದ್ದು, ಅವರಿಗೆ ಯೋಜನೆ ಸ್ಥಗಿತಗೊಳಿಸಲಾಗಿದೆ.
ಗೃಹಲಕ್ಷ್ಮಿಯರು ಏನು ಮಾಡಬೇಕು..?
ಕಳೆದ 2-3 ತಿಂಗಳಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ. ಇವತ್ತು – ನಾಳೆ ಅಷ್ಟೂ ತಿಂಗಳ ಹಣ ಒಟ್ಟಿಗೇ ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿರುವವರು ಸುಮ್ಮನೆ ಟೈಂ ವೇಸ್ಟ್ ಮಾಡುವುದು ಬೇಡ. ಪದೇ ಪದೇ ಬ್ಯಾಂಕ್‌ಗಳಿಗೆ ಅಲೆಯುವುದೂ ಬೇಡ. ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಾಲಯಕ್ಕೆ ಹೋಗಿ, ವಿಚಾರಿಸಿದರೆ ಸಾಕು, ಬರುತ್ತದೋ.. ಇಲ್ಲವೋ.. ಎಂಬುದರು ಸ್ಪಷ್ಟವಾಗಿ ತಿಳಿಯಲಿದೆ.
ಎನ್‌ಪಿಸಿಐ ಇನ್ ಆಕ್ಟಿವ್ ಆದ ಫಲಾನುಭವಿಗಳಿಗೂ ಹಣ ಖಾತೆಗೆ ಜಮೆಯಾಗಿಲ್ಲ. ಆಧಾರ್ ಲಿಂಕ್, ಬ್ಯಾಂಕ್ ಖಾತೆ ಜೋಡಣೆ ಮೊದಲಾದ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಕಾರಣದಿಂದ ಯೋಜನೆ ಹಣ ಬರದಿದ್ದರೆ ಅಪ್‌ಡೇಟ್ ಮಾಡಿಸಿಕೊಂಡ ಹಾಗೂ ಸಮಸ್ಯೆ ಬಗೆಹರಿದ ಕೂಡಲೇ ಗೃಹಲಕ್ಷ್ಮೀ ಹಣ ಖಾತೆಗೆ ಜಮೆ ಆಗಲಿದೆ.
‘ತನ್ನ ಪತ್ನಿಗೂ ಸೇರಿದಂತೆ ಪ್ರತಿಯೊಬ್ಬ ಮಹಿಳೆಯರಿಗೂ ಗ್ಯಾರಂಟಿ ಲಾಭ ಸಿಗಲಿದೆ. ಗೃಹಲಕ್ಷ್ಮೀ ಯೋಜನೆ ಹಣ 2000 ರೂ. ಮಾಸಿಕವಾಗಿ ಬ್ಯಾಂಕ್ ಖಾತೆಗೆ ಸಂದಾಯವಾಗಲಿದೆ’ ಎಂದು ಘೋಷಣೆ ಮಾಡಿಯೇ ಅಧಿಕಾರಕ್ಕೆ ಬಂದಿದ್ದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಷರತ್ತ ಬದ್ಧ ಗ್ಯಾರಂಟಿ ಜಾರಿ ಮಾಡುತ್ತಿದೆ. ಐಟಿ, ಜಿಎಸ್‌ಟಿ ಪಾವತಿದಾರರನ್ನು ಗೃಹಲಕ್ಷ್ಮೀ ಯೋಜನೆಯಿಂದ ಕೈಬಿಡಲಾಗಿದೆ. ಫಲಾನುಭವಿಗಳ ಪಟ್ಟಿಯಿಂದ ಕೈಬಿಟ್ಟವರಿಗೆ ಅಧಿಕೃತವಾಗಿಯೇ ಹಿಂಬರಹ ನೀಡುವಂತೆ ಸೂಚಿಸಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹೇಳಿದ್ದಾರೆ.
ಇತ್ತೀಚೆಗೆ ಐಟಿ ರಿಟರ್ನ್ ಫೈಲ್ ಮಾಡುವವರು, ಜಿಎಸ್ʻಟಿ ದಾರರನ್ನು ಬಿಪಿಎಲ್ ಪಟ್ಟಿಯಿಂದ ಕೈಬಿಡುವುದಾಗಿ ಸರ್ಕಾರ ಹೇಳಿತ್ತು. ಹಾಗೆ ಹೇಳುವ ಮೊದಲೇ ಹಲವು ಬಿಪಿಎಲ್ ಕಾರ್ಡ್‌ದಾರರ ಖಾತೆಗಳಿಗೆ 170 ರೂ. ಹಣ ಹಾಕುವುದನ್ನು ನಿಲ್ಲಿಸಿತ್ತು. ಈಗ 5 ಕೆಜಿ ಅಕ್ಕಿ ಮಾತ್ರ ಖಾಯಮ್ಮಾಗಿ ಬರುತ್ತಿದೆ. ಅಲ್ಲದೆ ಬೇಳೆ ಮತ್ತಿತರ ವಸ್ತುಗಳನ್ನು ಕೊಡುವುದಾಗಿ ಘೋಷಣೆಯಾಗಿದ್ದರೂ, ಅದು ಜನರನ್ನು ತಲುಪಿಲ್ಲ.
ಇದೀಗ ಅನ್ನಭಾಗ್ಯಕ್ಕೂ ಷರತ್ತುಗಳು ಅನ್ವಯ. ಟ್ಯಾಕ್ಸ್ ಕಟ್ಟುತ್ತಿದ್ದರೆ ಅಕ್ಕಿಯೂ ಇಲ್ಲ. ರೇಷನ್ ಕಾರ್ಡೂ ಇಲ್ಲ.
ವಿದ್ಯುತ್ ನೀಡುವುದಕ್ಕೂ ಷರತ್ತುಗಳು ಅನ್ವಯ. ಎಲ್ಲರಿಗೂ 200 ಯೂನಿಟ್ ಫ್ರೀ ಸಿಕ್ಕಲ್ಲ.
ಇದೀಗ ಗೃಹಲಕ್ಷ್ಮಿಯ ಕಥೆಯೂ ಅಷ್ಟೇ ಆಗಿದೆ. ಟ್ಯಾಕ್ಟ್ ಕಟ್ಟುತ್ತಿದ್ದರೆ ಗೃಹಲಕ್ಷ್ಮಿ ಬರಲ್ಲ.
ಸದ್ಯಕ್ಕೆ ಯಶಸ್ವಿಯಾಗಿ ರನ್ ಆಗುತ್ತಿರುವ ಏಕೈಕ ಗ್ಯಾರಂಟಿ ಎಂದರೆ ಶಕ್ತಿ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಮಾತ್ರ.



