ಮೈತ್ರಾದೇವಿ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪತ್ನಿ. ಅವರ ಸಾವಿನ ಬಗ್ಗೆ ಸಚಿವ ಭೈರತಿ ಸುರೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಇವತ್ತು ಆಗಿರುವ ಘಟನೆ ಅಲ್ಲ. ಮೈತ್ರಾದೇವಿ ಅವರ ನಿಧನ ಆಗಿದ್ದು ೨೦೦೪ ರ ಅಕ್ಟೋಬರ್ ತಿಂಗಳಲ್ಲಿ. ಶಿವಮೊಗ್ಗ ನಗರದಲ್ಲಿರುವ ಮನೆಯಲ್ಲಿ. ಆಗಿನ್ನೂ ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದರು. ಸಿಎಂ ಆಗಿರಲಿಲ್ಲ. ಆಗ ಮೈತ್ರಾದೇವಿ, ತಮ್ಮ ಮನೆಯಲ್ಲಿ ಇದ್ದ ನೀರಿನ ಸಂಪಿನಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದರು. ನೀರಿನ ಸಂಪ್ 8 ಅಡಿ ಆಳವಿತ್ತು. ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್ ಮಾರ್ಟಂ ರಿಪೋರ್ಟ್ ಹೇಳಿತ್ತು. ಆದರೆ ಅದನ್ನು ಅನೇಕರು ನಂಬಿರಲಿಲ್ಲ. ಇದೊಂದು ನಿಗೂಢ ಸಾವು ಎಂದೇ ಪ್ರಕರಣ ದಾಖಲಾಗಿತ್ತು, ತನಿಖೆಯೂ ನಡೆದಿತ್ತು.
ಆಗ ಕೆ. ಶೇಷಾದ್ರಿ ಎಂಬ ವಕೀಲರೊಬ್ಬರು ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು. ಮೈತ್ರಾದೇವಿ ಸಾವು ನಿಗೂಢವಾಗಿದೆ. ಕೆಲವು ಸಾಕ್ಷಿಗಳನ್ನು ತಿರುಚಿರುವ ಬಗ್ಗೆ ಸಂದೇಹ ಇದೆ. ಇದರ ಬಗ್ಗೆ ಕೂಲಂಕುಷ ತನಿಖೆ ಆಗಬೇಕು ಎಂದು ದೂರು ನೀಡಿದ್ದರು. ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ತನಿಖೆಗೆ ಆದೇಶ ನೀಡಿತ್ತು. ಶೇಷಾದ್ರಿ ಅವರು ಮೈತ್ರಾದೇವಿ ಸಾವಿನ ಹಿಂದೆ ೭ ಮಂದಿಯ ಕೈವಾಡವಿದೆ ಎಂದು ಆರೋಪಿಸಿದ್ದರು. ಯಡಿಯೂರಪ್ಪ, ಮತ್ತು ಅವರ ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ, ಹೆಣ್ಣು ಮಕ್ಕಳಾದ ಅರುಣಾದೇವಿ, ಪದ್ಮಾವತಿ ಮತ್ತು ಉಮಾದೇವಿ ಹಾಗೂ ಇಬ್ಬರು ಮನೆ ಕೆಲಸದವರನ್ನು ಆರೋಪಿಗಳ್ನನಾಗಿ ಮಾಡಿದ್ದರು. ಘಟನೆ ನಡೆದಾಗ ನೀರಿನ ಸಂಪಿನಲ್ಲಿ 4 ಅಡಿಯಷ್ಟೇ ನೀರಿತ್ತು. ಆದರೆ ಮೈತ್ರಾದೇವಿ 5 ಅಡಿ, 5 ಇಂಚು ಎತ್ತರ ಇದ್ದರು. ಇಡೀ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತವಾಗಿದ್ದೇ ಈ ಕಾರಣಕ್ಕೆ. ಆದರೆ ಅಂತಿಮವಾಗಿ ಪೊಲೀಸರು ಸಲ್ಲಿಸಿದ ವರದಿಯಲ್ಲಿ ಇದೊಂದು ಆಕಸ್ಮಿಕ ಎಂದು ಇತ್ತು. ಈಗ ಭೈರತಿ ಸುರೇಶ್ ಪ್ರಶ್ನೆ ಎತ್ತಿರುವುದು ಇದೇ ಘಟನೆಯ ಬಗ್ಗೆ. ವಿಶೇಷ ಅಂದ್ರೆ, ಯಡಿಯೂರಪ್ಪ ಪತ್ನಿ ಮೃತಪಟ್ಟಾಗ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ ಸರ್ಕಾರ.
ಇದೀಗ ಸಚಿವ ಭೈರತಿ ಸುರೇಶ್ ʻʻ20 ವರ್ಷಗಳ ಹಿಂದೆ ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ ಸಾವು ಹೇಗಾಯಿತು ಎಂದು ಕೇಳುತ್ತೇನೆ. ಯಡಿಯೂರಪ್ಪನವರು ಹಾಗೂ ಅವರ ಮಕ್ಕಳು ಒಳ್ಳೆಯವರು. ಆದರೆ ಮೈತ್ರಾದೇವಿ ಸಾವು ಹೇಗಾಯಿತು ಎಂಬ ಬಗ್ಗೆ ಕೂಲಂಕಷ ಚರ್ಚೆ, ತನಿಖೆಯಾಗಬೇಕು. ಮೈತ್ರಾದೇವಿ ಅವರ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ ಎಂದು ಹೇಳುತ್ತೇನೆ. ಕೂಡಲೇ ಶೋಭಾ ಕರಂದ್ಲಾಜೆ ಅವರನ್ನು ಬಂಧಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಗೃಹ ಸಚಿವರು ತೀರ್ಮಾನಿಸಬೇಕು” ಎಂದು ದೂರಿದ್ದಾರೆ.
ಭೈರತಿ ಅವರು ಈ ಆರೋಪವನ್ನು ಮಾಡಿರೋದಕ್ಕೆ ಕಾರಣ ಒನ್ಸ್ ಎಗೇಯ್ನ್ ಮುಡಾ ಹಗರಣ.ಹೌದು, ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.ಮುಡಾ ಕಡತಗಳನ್ನು ಬೈರತಿ ಸುರೇಶ್ ಸುಟ್ಟು ಹಾಕಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ಭೈರತಿ ಸುರೇಶ್ ಈ ಉತ್ತರ ಕೊಟ್ಟಿದ್ದಾರೆ. ಶೋಭಾ ಕರಂದ್ಲಾಜೆ ಅವರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಈ ರೀತಿ ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ. ಆ ರೀತಿ ಮಾತನಾಡುವುದಾದರೆ ನಾನೂ ಹೇಳುತ್ತೇನೆ. 20 ವರ್ಷಗಳ ಹಿಂದೆ ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ ಸಾವು ಹೇಗಾಯಿತು ಎಂದು ಕೇಳುತ್ತೇನೆ ಎಂದಿದ್ದಾರೆ.
ಒಟ್ಟಿನಲ್ಲಿ ನೀವು ನಮ್ಮ ಮೇಲೆ ಆರೋಪ ಮಾಡಿದರೆ, ನಾನೂ ನಿಮ್ಮ ಮೇಲೆ ಆರೋಪ ಮಾಡುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಕ್ಕೆ ಮುಡಾ ಹಗರಣ, ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಪ್ರಕರಣ ಮುಗಿಯುತ್ತಿದೆ.
ಭೈರತಿ ಸುರೇಶ್ ಆರೋಪದ ಬಗ್ಗೆ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಪಷ್ಟನೆ ನೀಡಿದ್ದು ಮುಡಾ ಹಗರಣದ ದಿಕ್ಕು ತಪ್ಪಿಸಲು ಇಲ್ಲಸಲ್ಲದ ಕಥೆ ಸೃಷ್ಟಿಸುತ್ತಿದ್ದಾರೆ. ನೀವು ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರಗಳನ್ನು ಮುಂದೆ ತಂದು ಮಾತನಾಡುತ್ತಿರುವುದು ಅಸಭ್ಯ, ಅಸಹ್ಯ ರಾಜಕಾರಣ ಎಂದು ಟೀಕಿಸಿದ್ದಾರೆ.



