ಲೋಕಸಭಾ ಚುನಾವಣೆ ರಣರಂಗವಾಗುತ್ತಿದೆ. ಈಗ ಸೆಲಬ್ರಿಟಿಗಳನ್ನು ಹೇಗಾದರೂ ಮಾಡಿ ತಮ್ಮ ಪ್ರಚಾರ ಮಾಡುವಂತೆ ಸೆಳೆಯುವ ಮಾತುಕತೆ ಶುರುವಾಗಿದೆ. ಅಫ್ʻಕೋರ್ಸ್.. ಕೆಲವು ನಟರು ಈಗಾಗಲೇ ಪಕ್ಷದಲ್ಲಿದ್ದಾರೆ. ಇನ್ನು ಕೆಲವರು ವೈಯಕ್ತಿಕವಾಗಿ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತಾರೆ. ಕೆಲವರು ಸ್ನೇಹ ಸಂಬಂಧವನ್ನಷ್ಟೇ ಉಳಿಸಿಕೊಂಡು ರಾಜಕೀಯದಿಂದ ಅಂತರ ಕಾಯ್ದುಕೊಳ್ತಾರೆ. ಕೆಲವು ವರ್ಷಗಳ ಹಿಂದಿನವರೆಗೂ ಇಂಥದ್ದೇ ಸಂಪ್ರದಾಯ ಹಾಕಿಕೊಂಡಿದ್ದದ್ದು ದೊಡ್ಮನೆ. ಡಾ.ರಾಜ್ ಕುಮಾರ್ ಮನೆಗೆ ಎಲ್ಲ ಪಕ್ಷಗಳ ನಾಯಕರು ಬರುತ್ತಿದ್ದರು. ಮಾಜಿ ಸಿಎಂ ಬಂಗಾರಪ್ಪ ಬೀಗರೇ ಆಗಿದ್ದರೂ.. ರಾಜಕುಮಾರ್ ಪಾಲಿಟಿಕ್ಸಿನಿಂದ ಅಂತರ ಕಾಯ್ದುಕೊಂಡೇ ಇದ್ದರು. ಆದರೆ.. ಅದು ಕೆಲವು ವರ್ಷಗಳ ಹಿಂದಿನವರೆಗೆ ಇತ್ತು. 2014ರಲ್ಲಿ ಆ ಸಂಪ್ರದಾಯ ಮುರಿದವರು ಗೀತಾ ಶಿವ ರಾಜಕುಮಾರ್.
ಈಗ 2024 ಲೋಕಸಭೆ ಚುನಾವಣೆ ಕಿಕ್ ಸ್ಟಾರ್ಟ್ ಆಗಿ ಆಗಿದೆ. ದೊಡ್ಮನೆಯ ದೊಡ್ಡ ಸೊಸೆ ಗೀತಾ ಶಿವ ರಾಜಕುಮಾರ್ ಅವರೂ ಈ ಬಾರಿ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ. ಗೀತಾ ಅವರು ಕಾಂಗ್ರೆಸ್ʻನಿಂದ ಸ್ಪರ್ಧಿಸುತ್ತಿದ್ದರೆ, ಶಿವಣ್ಣ ಕೂಡಾ ಪ್ರಚಾರ ಮಾಡಲಿದ್ದಾರೆ. ಈ ನಡುವೆಯೇ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನೆಗೆ ಶೋಭಾ ಕರಂದ್ಲಾಜೆ ಭೇಟಿ ಮಾಡಿದ್ದಾರೆ. ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ.
ಅಶ್ವಿನಿ ಅವರ ಭೇಟಿ ಬಳಿಕ ಮಾತನಾಡಿರುವ ಶೋಭಾ ಕರಂದ್ಲಾಜೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸಹಕಾರ ಕೇಳಿದ್ದೇವೆ. ಅಶ್ವಿನಿ ಅವರಿಗೆ ರಾಜಕೀಯ ಪಾರ್ಟಿ ಇಲ್ಲ. ಹಾಗಾಗಿ ನಿಮ್ಮ ಸಹಕಾರ, ಬೆಂಬಲ ಬೇಕು ಅಂತ ಕೇಳಿದ್ದೇವೆ. ಅವ್ರು ನಮ್ಮದೇ ಕ್ಷೇತ್ರದಲ್ಲಿದ್ದಾರೆ. ಆದರೆ ಪ್ರಚಾರದ ಬಗ್ಗೆ ಕೇಳಿಲ್ಲ ಎಂದು ತಿಳಿಸಿದ್ಧಾರೆ.
ಅಶ್ವಿನಿ ಪುನೀತ್ ರಾಜಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆಗೆ ಸಿಕ್ಕಿಲ್ಲವಾದರೂ.. ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ಧಾರೆ ಎನ್ನಲಾಗಿದೆ. ಅಲ್ಲದೆ ಗೀತಾ ಅವರ ಪರವೂ ಪ್ರಚಾರ ಮಾಡುವುದಿಲ್ಲ ಎಂದು ತಿಳಿಸಿದ್ಧಾರೆ ಎನ್ನಲಾಗಿದೆ. ಅಶ್ವಿನಿ ಅವರೂ ಕೂಡಾ ಪುನೀತ್ ಅವರಂತೆಯೇ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಜೊತೆ ಉತ್ತಮ ಸ್ನೇಹವನ್ನಷ್ಟೇ ಇಟ್ಟುಕೊಳ್ಳಲು ಬಯಸಿದ್ದು, ಸಕ್ರಿಯ ರಾಜಕಾರಣದಿಂದ ದೂರ ಉಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದರೆ ವಾರಗಿತ್ತಿ, ವರಸೆಯಲ್ಲಿ ಅಕ್ಕನಾಗಿರುವ ಗೀತಾ ಅವರ ಪರವೂ ಪ್ರಚಾರ ಮಾಡಲ್ಲ. ಇನ್ನು ಅಶ್ವಿನಿ ಅವರು ಮೂಲತಃ ಚಿಕ್ಕಮಗಳೂರಿನವರು. ಶೋಭಾ ಕರಂದ್ಲಾಜೆ ಚಿಕ್ಕಮಗಳೂರಿನ ಸಂಸದೆಯಾಗಿದ್ದವರು.
ಹೀಗೆ ಎಲ್ಲ ರೀತಿಯಲ್ಲಿ ಸ್ನೇಹವಿದ್ದರೂ.. ಅಶ್ವಿನಿ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಶ್ವಿನಿ ಅವರಷ್ಟೇ ಅಲ್ಲ, ಶಿವ ರಾಜಕುಮಾರ್ ಮತ್ತು ಗೀತಾ ಅವರ ಹೊರತಾಗಿ ದೊಡ್ಮನೆಯ ರಾಘವೇಂದ್ರ ರಾಜಕುಮಾರ್, ಅವರ ಮಕ್ಕಳಾದ ಯುವ ಮತ್ತು ವಿನಯ್ ಕೂಡಾ ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ. ದೊಡ್ಡಮ್ಮನ ಪರವೂ ಪ್ರಚಾರ ಮಾಡುವುದಿಲ್ಲ ಎನ್ನಲಾಗಿದೆ.



