ತಡೆ ಒಡೆಯುವುದು ಎಂದರೆ ಅರ್ಥ ಏನು ಎನ್ನುವುದು ಬಹುತೇಕರಿಗೆ ಗೊತ್ತು. ಗೂಗಲ್ʻನಲ್ಲಿ ಹುಡುಕಿದರೆ ಸಿಕ್ಕುವುದಲ್ಲ. ಅದು ಯಂತ್ರ ತಂತ್ರ ಮಂತ್ರಗಳ ಕಥೆ. ಸಾಮಾನ್ಯವಾಗಿ ಯಾರಾದರೂ ತಮ್ಮ ಮೇಲೆ ಮಾಟ ಮಾಡಿಸಿದ್ದಾರೆ ಎಂಬ ಅನುಮಾನ ಬಂದರೆ ಈ ರೀತಿಯ ತಡೆ ಒಡೆಸುವ ಕೆಲಸ ಮಾಡಿಸಲಾಗುತ್ತದೆ.
ಇನ್ನು ದೃಷ್ಟಿ ತೆಗೆಸುವುದು. ಒನ್ಸ್ ಎಗೇನ್, ಇದಕ್ಕೂ ಕೂಡಾ ಉತ್ತರ ಗೂಗಲ್ʻನಲ್ಲಿ ಸಿಕ್ಕುವುದಿಲ್ಲ. ಸಾಮಾನ್ಯವಾಗಿ ಯಾವುದಾದರೂ ಕೆಟ್ಟ ದೃಷ್ಟಿ ಬಿದ್ದಾಗ ಈ ರೀತಿಯ ತಡೆ ನಿವಾರಣೆ ಮಾಡಲಾಗುತ್ತದೆ. ಈ ಎರಡನ್ನೂ ಶಿವಣ್ಣ ದಂಪತಿ ಕಬ್ಬಾಳಮ್ಮನಿಗೆ ಮಾಡಿಸಿದ್ದಾರೆ.
ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದ ಕಬ್ಬಾಳಮ್ಮ ದೇವಾಲಯದಲ್ಲಿ ಶಿವಣ್ಣ ದಂಪತಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಪತ್ನಿ, ಮಕ್ಕಳ ಜೊತೆ ಆಗಮಿಸಿದ್ದ ಶಿವಣ್ಣ ಪತ್ನಿ, ಮಕ್ಕಳು ಮತ್ತು ಕುಟುಂಬದವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಿಗೆ ಸೀರೆ, ಕುಂಕುಮ, ಬಳೆ ಅರ್ಪಿಸಿದ್ದಾರೆ. ವಿಶೇಷ ಎಂದರೆ ಈ ಪೂಜೆಯಲ್ಲಿ ಪ್ರಮುಖವಾಗಿ ತಡೆ ಸೇವೆ ಹಾಗೂ ದೃಷ್ಟಿ ಪೂಜೆ ಮಾಡಿಸಿರುವುದು. ತಡೆ ಸೇವೆ ಎಂದರೆ ತಾಂತ್ರಿಕ ವಿದ್ಯೆಯಲ್ಲಿ ಬೇರೆಯದ್ದೇ ಅರ್ಥವಿದೆ. ಇನ್ನು ಕೆಟ್ಟ ಕಣ್ಣು ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಪೂಜೆಯನ್ನೂ ಮಾಡುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡಿರುವುದರ ಜೊತೆಗೆ ಈ ವಿಶೇಷ ಪೂಜೆಗಳ ಬಗ್ಗೆಯೂ ಚರ್ಚೆಯಾಗುತ್ತಿದೆ.
ಅವುಗಳ ಬಗ್ಗೆ ಏನೊಂದೂ ಮಾತನಾಡದ ಶಿವಣ್ಣ “ಮೇ 12ರಂದು ಬುದ್ಧ ಪೂರ್ಣಿಮಾ ದಿನವಾದ್ದರಿಂದ ಕಬ್ಬಾಳಮ್ಮ ದೇವಿ ದೇಗುಲಕ್ಕೆ, ಪತ್ನಿ ಮತ್ತು ಮಕ್ಕಳ ಸಹಿತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಕಬ್ಬಾಳಮ್ಮ ದೇವಿ ಆಶೀರ್ವಾದ ನಮಗೆ ಸಿಕ್ಕಿದೆ” ಎಂದಿದ್ದಾರೆ.
ದೇವಾಲಯದ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿ ಲಕ್ಷ್ಮೇನಾರಾಯಣ, ದೇವಾಲಯದ ಅರ್ಚಕರಾದ ಮಾರೇಗೌಡ, ಕಬ್ಬಾಳಮ್ಮ ದೇವಿಯ ವಿಶೇಷ ದರ್ಶನ ಮಾಡಿಸಿ, ಪೂಜೆಯ ನಂತರ ಕುಟುಂಬವನ್ನು ಸನ್ಮಾನಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಸಲಹೆಯಂತೆ ಕಬ್ಬಾಳಮ್ಮ ದೇವಿಯ ದರ್ಶನ ಮಾಡಿದ್ದಾರೆ ಎನ್ನಲಾಗುತ್ತಿದೆ.
ಶಿವರಾಜ್ ಕುಮಾರ್ ಅವರ ವಿರುದ್ಧ ಕೆಲವು ನಟರು ಏನೇ ಬೇಸರ ಇಟ್ಟುಕೊಂಡಿದ್ದರೂ, ಅವರನ್ನು ನೋಡಿದ ಮೇಲೆ ಸೈಲೆಂಟ್ ಆಗಿಬಿಡ್ತಾರೆ. ಅರೆ.. ಈ ಮನುಷ್ಯನನ್ನ ನಾನು ದ್ವೇಷ ಮಾಡಿದ್ದು ಎನ್ನುವಂತೆ ಶಿವಣ್ಣ ಅವರ ವ್ಯಕ್ತಿತ್ವ, ಸರಳತೆ, ಆತ್ಮೀಯತೆಗೆ ಶರಣು ಹೋಗಿಬಿಡುತ್ತಾರೆ. ಶಿವಣ್ಣ ಇರೋದೇ ಹಾಗೆ.. ಪ್ರೀತಿ ವಿಪರೀತ. ದ್ವೇಷ ಮಾಡೋದಕ್ಕೆ ಬರೋದಿಲ್ಲ ಎನ್ನುವುದು ಅರ್ಥವಾಗುತ್ತದೆ. ನಂತರ ಶಿವಣ್ಣಂಗೆ ಶರಣು ಹೋಗುತ್ತಾರೆ. ಶಿವಣ್ಣ ಚಿತ್ರರಂಗದಲ್ಲಿ ಇರುವುದೇ ಹಾಗೆ. ಇಂತಹ ಶಿವಣ್ಣ ಈಗ ತಡೆ ಒಡೆಸುವ ಮತ್ತು ದೃಷ್ಟಿ ನಿವಾರಣೆ ಮಾಡುವ ಪೂಜೆ ಮಾಡಿಸಿದ್ದಾರೆ ಎಂದರೆ.. ಅರೆರೆ.. ಶಿವಣ್ಣಂಗೂ ಶತ್ರುಗಳಿದ್ದಾರಾ.. ಎಂದು ಅನಿಸದೇ ಇರದು.



