ಓಂ (OM) ಚಿತ್ರ ನೆನಪಿದೆ ತಾನೇ.. ಆ ಚಿತ್ರವನ್ನು ಕನ್ನಡಿಗರು ಮರೆಯೋದು ಅಸಾಧ್ಯ. ಕನ್ನಡವೇ ಏಕೆ, ಭಾರತೀಯ ಚಿತ್ರರಂಗದಲ್ಲೇ ಅದೊಂದು ಟ್ರೆಂಡ್ ಸೆಟ್ಟರ್ (Trend setter) ಸಿನಿಮಾ. ಅಂತಹ ಸಿನಿಮಾ ಮುಹೂರ್ತದ ದಿನ ಉಪೇಂದ್ರ (Upendra) ಅವರನ್ನು ಮಣಿರತ್ನಂಗೆ (Manirathnam) ಹೋಲಿಸಿದ್ದರು ಶಿವಣ್ಣ. ಅಷ್ಟೊತ್ತಿಗಾಗಲೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಮಣಿರತ್ನಂ ಅವರಿಗೆ, ಆಗಿನ್ನೂ 3ನೇ ಸಿನಿಮಾ ಡೈರೆಕ್ಟ್ ಮಾಡುತ್ತಿದ್ದ ಹುಡುಗನನ್ನು ಹೋಲಿಸಿದ್ದಕ್ಕೆ ತಮಾಷೆ ಮಾಡಿದವರಿದ್ದರು. ಏಕೆಂದರೆ ಓಂ ಚಿತ್ರಕ್ಕೂ ಮೊದಲು ಉಪೇಂದ್ರ ಮಾಡಿದ್ದುದು ತರ್ಲೆ ನನ್ಮಗ (Tharle nanmaga) ಅನ್ನೋ ಡಬಲ್ ಮೀನಿಂಗ್ ಕಾಮಿಡಿ ಸಿನಿಮಾ ಹಾಗೂ ಶ್ (SHH) ಅನ್ನೋ ಹಾರರ್ ಥ್ರಿಲ್ಲರ್ (Horror Thriller) ಸಿನಿಮಾಗಳನ್ನ.
ಡಬಲ್ ಮೀನಿಂಗ್ ಕಾಮಿಡಿ (Double meaning comedy) ಸಿನಿಮಾ ಮಾಡಿದ ಹುಡುಗನನ್ನ ಮಣಿರತ್ನಂ ಅವರಿಗೆ ಹೋಲಿಸಿದ್ದ ಶಿವಣ್ಣ ಅವರನ್ನೂ ಕಾಮಿಡಿ ಮಾಡಿದ್ದರು. ಅದೇ ಸಮಯಕ್ಕೆ ಉಪೇಂದ್ರ ಶಿವಣ್ಣ (Shiva Rajkumar) ಕಣ್ಣುಗಳನ್ನು ಹೊಗಳಿದ್ದರು.
ಶಿವಣ್ಣ ಕಣ್ಣುಗಳಲ್ಲೇ ಪವರ್ ಇದೆ. ಆ ಕಣ್ಣುಗಳ ಮೂಲಕವೇ ನಟಿಸುತ್ತಾರೆ ಎಂದು ಉಪೇಂದ್ರ ಹೇಳಿದ್ದನ್ನೂ ಚಿತ್ರರಂಗ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಏಕೆಂದರೆ ಆಗ ಕಣ್ಣುಗಳ ರಾಜರೇ ಇದ್ದ ಕಾಲ. ಡಾ.ರಾಜ್ (Dr.Rajkumar), ವಿಷ್ಣು (Vishnuvardhan), ಅನಂತನಾಗ್ (Ananthanag) ಮೊದಲಾದವರೆಲ್ಲ ಕಣ್ಣುಗಳಲ್ಲೇ ನಟಿಸುವ ಶಕ್ತಿ ಹೊಂದಿದ್ದವರು. ಅಲ್ಲದೆ ಅದೂವರೆಗೆ ಶಿವಣ್ಣ ಅವರ ಕಣ್ಣುಗಳ ಬಗ್ಗೆ ಯಾರೂ ಹೇಳಿರಲಿಲ್ಲ. ಈಗ ಇಡೀ ಭಾರತೀಯ ಚಿತ್ರರಂಗ ಈ ಬಗ್ಗೆ ಮಾತನಾಡುತ್ತಿದೆ. ಇಷ್ಟೆಲ್ಲವನ್ನೂ ಹೇಳೋಕೆ ಕಾರಣವಾಗಿದ್ದು ಶಿವಣ್ಣ ಉಪೇಂದ್ರ ಅವರ ಬಗ್ಗೆ ಹೇಳಿದ ಮಾತುಗಳು.
ನನ್ನ ಜೀವನದಲ್ಲಿ ನೀನು ಫೇವರಿಟ್ ಡೈರೆಕ್ಟರ್. ನನ್ನ ಇಮೇಜ್ ಅನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋದ ನಿರ್ದೇಶಕ ನೀನು ಎಂಬುದನ್ನು ನಾನು ಎಂದಿಗೂ ಮರೆಯಲ್ಲ. ಇಂದು ನಾನು ಕಣ್ಣಿಂದ ಆ್ಯಕ್ಟ್ ಮಾಡ್ತೀನಿ ಅಂತ ಜನರು ಹೇಳ್ತಾರೆ. ಆದರೆ ಅದು ನನಗೆ ಮೊದಲು ಗೊತ್ತಾಗಿದ್ದು ನಿನ್ನಿಂದ. ಇಂದು ನನ್ನ ಕಣ್ಣಿನ ಬಗ್ಗೆ ಇಡೀ ಭಾರತದಲ್ಲಿ ಮಾತಾಡುತ್ತಾರೆ ಎಂದರೆ ಅದರ ಕ್ರೆಡಿಟ್ ನಿನಗೆ ಸಲ್ಲುತ್ತದೆ. ಇದನ್ನು ಹೇಳಿದ್ದು ಸ್ವತಃ ಶಿವಣ್ಣ. ಯುಐ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಶಿವಣ್ಣ, ಉಪೇಂದ್ರ ಅವರನ್ನು ಮೊದಲು ಹೇಗೆ ಪ್ರೀತಿಸುತ್ತಿದ್ದೆನೋ, ಈಗಲೂ ಹಾಗೆಯೇ ಪ್ರೀತಿಸುತ್ತೇನೆ ಎಂದಿದ್ದಾರೆ.
ಉಪೇಂದ್ರ ಮತ್ತು ಶಿವರಾಜ್ಕುಮಾರ್ ನಡುವೆ ಹಲವು ವರ್ಷಗಳ ಒಡನಾಟ ಇದೆ. ‘ಓಂ’ ಸಿನಿಮಾದಲ್ಲಿ ಇವರಿಬ್ಬರು ಮಾಡಿದ ಮೋಡಿಯನ್ನು ಫ್ಯಾನ್ಸ್ ಎಂದಿಗೂ ಮರೆಯುವಂಥದ್ದಲ್ಲ. ಓಂ’ ಸಿನಿಮಾದ ಸಂದರ್ಭವನ್ನು ಶಿವಣ್ಣ ಮತ್ತೆ ನೆನಪು ಮಾಡಿಕೊಂಡಿದ್ದಾರೆ. ‘ರಜನಿಕಾಂತ್ ಅವರು ಓಂ ಸಿನಿಮಾದ ಇಂಟ್ರಡಕ್ಷನ್ ಸೀನ್ ಬಗ್ಗೆ ಈಗಲೂ ಹೇಳುತ್ತಾ ಇರುತ್ತಾರೆ. ಅಂಥ ಇಂಟ್ರಡಕ್ಷನ್ ಸೀನ್ ನಾನು ಈವರೆಗೂ ನೋಡಿಲ್ಲ ಮರಿ ಅಂತ ಹೇಳ್ತಾರೆ. ಆ ಸಿನಿಮಾವನ್ನು ನಾವು ಎಂದಿಗೂ ಮರೆಯೋಕೆ ಆಗಲ್ಲ. ನೀವು ಡೈರೆಕ್ಷನ್ ಮಾಡ್ತೀರಿ ಎಂದಾಗ ಬೇರೆ ರೀತಿಯ ಭರವಸೆ ಮೂಡುತ್ತದೆ. ಮತ್ತೆ ನಾವು-ನೀವು ಜೊತೆಯಾಗಿ ಸಿನಿಮಾ ಮಾಡೋದು ಯಾವಾಗ ಅಂತ ಅಭಿಮಾನಿಗಳು ಕೇಳುತ್ತಾರೆ. ಅದು ಬೇಡಿಕೆ ಕೂಡ ಹೌದು. ನಾನು ಕೂಡ ಅದಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ ಶಿವಣ್ಣ.
ಕನ್ನಡಿಗರಿಗೇನೋ ಉಪೇಂದ್ರ ಓಂ ಸಿನಿಮಾ ಮಾಡಿದ ಮೇಲೆ ಗೊತ್ತಾಯ್ತು. ಆದರೂ ಶಿವಣ್ಣ ಕಣ್ಣುಗಳನ್ನು ಉಪೇಂದ್ರ ಅವರಿಗಿಂತಲೂ ಅದ್ಭುತವಾಗಿ ತೆರೆಯ ಮೇಲೆ ತಂದಿದ್ದ ಮಫ್ತಿಯ ನರ್ತನ್. ಅದಾದ ಮೇಲೆ ಜೈಲರ್ ಚಿತ್ರದಲ್ಲಿ ಒಂದೆರಡು ಸೀನ್ ಬಂದು ಕಣ್ಣುಗಳಲ್ಲೇ ಪ್ರೇಕ್ಷಕರ ಹೃದಯಕ್ಕೆ ಕೈ ಹಾಕಿ ಗೆದ್ದಿದ್ದಾರೆ. ಆದರೆ, ಅದನ್ನು ಆ ಕಾಲಕ್ಕೇ ಹೇಳಿದ್ದು ಹಾಗೂ ಮಾಡಿ ತೋರಿಸಿದ್ದೇ ಉಪೇಂದ್ರ ಎಷ್ಟು ಗ್ರೇಟ್ ಡೈರೆಕ್ಟರ್ ಅನ್ನೋದಕ್ಕೆ ಸಾಕ್ಷಿ.



