ಡಾಲಿ ಧನಂಜಯ ಅವರಿಗೆ ಶಿವಣ್ಣ ಗೆಳೆಯನ ಸ್ಥಾನ ನೀಡಿದ್ದಾರಾದರೂ, ಡಾಲಿ ಧನಂಜಯ ಅದಕ್ಕೂ ಮಿಗಿಲಾದ ಸ್ಥಾನ ಕೊಟ್ಟಿದ್ದಾರೆ. ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್ ಗೀತಾ ಶಿವ ರಾಜ್ʻಕುಮಾರ್ ಅವರ ಆಶೀರ್ವಾದದೊಂದಿಗೆ.. ಎಂದೇ ಶುರುವಾಗುತ್ತದೆ. ಟಗರು ಚಿತ್ರದಲ್ಲಿ ವಿಲನ್ ಆಗಿದ್ದ ಡಾಲಿ ಧನಂಜಯ್ ಅವರನ್ನು ಶಿವಣ್ಣ ಪ್ರತಿಸ್ಪರ್ಧಿಯಾಗಿ ನೋಡದೆ ಅದ್ಭುತ ಕಲಾವಿದ ಎಂದು ಪ್ರಮೋಟ್ ಮಾಡಿದ್ದರು. ಸಿನಿಮಾಗಳ ಹೊರತಾಗಿಯೂ ಡಾಲಿ ಧನಂಜಯ ಅವರೊಂದಿಗೆ ನಿಂತಿರುವ ಶಿವಣ್ಣ ಈಗ ಮತ್ತೊಮ್ಮೆ ಜೊತೆಯಾಗಿದ್ಧಾರೆ.
ಉತ್ತರಕಾಂಡ. ಈ ಚಿತ್ರದ ಬಗ್ಗೆ ಬಹಳ ದಿನಗಳಿಂದ ಸುದ್ದಿಯೇನೋ ಚಾಲ್ತಿಯಲ್ಲಿದೆ. ರತ್ನನ್ ಪ್ರಪಂಚ ಸಿನಿಮಾದ ನಂತರ ಡಾಲಿ ಧನಂಜಯ ಮತ್ತೊ ರೋಹಿತ್ ಪದಕಿ ಒಟ್ಟಾಗಿರುವ ಸಿನಿಮಾ ಉತ್ತರಕಾಂಡ. ಈ ಉತ್ತರಕಾಂಡದ ಸೆನ್ಸೇಷನ್ ಸುದ್ದಿ ಅಧಿಕೃತವಾಗಿದ್ದು, ಚಿತ್ರತಂಡಕ್ಕೆ ಶಿವ ರಾಜ್ʻಕುಮಾರ್ ಎಂಟ್ರಿ ಕೊಟ್ಟಿದ್ದಾರೆ.
ಟಗರು ಎಂಬ ಸೂಪರ್ ಡ್ಯೂಪರ್ ಹಿಟ್ ನಂತರ, ಡಾಲಿ ಧನಂಜಯ ಮತ್ತು ಶಿವಣ್ಣ ಬೈರಾಗಿಯಲ್ಲಿ ಮತ್ತೆ ಒಟ್ಟಾಗಿ ನಟಿಸಿದ್ದರು. ಇದೀಗ ಉತ್ತರಕಾಂಡದಲ್ಲಿ ೩ನೇ ಬಾರಿಗೆ ಒಟ್ಟಾಗಿದ್ದಾರೆ. ಉತ್ತರ ಕರ್ನಾಟಕದ ಶೈಲಿಯ ಈ ಸಿನಿಮಾಗೆ ಇಬ್ಬರ ಮುಖಾ ಮುಖಿಯಾಗುತ್ತಾ? ಇಲ್ಲಾ ಒಟ್ಟಿಗೆ ಕಾಣಿಸಿಕೊಳ್ಳುತ್ತಾರಾ? ಅನ್ನೋ ಕುತೂಹಲ ಎಲ್ಲರದ್ದು. ಏಕೆಂದರ ಈಗಾಗಲೇ ಒಂದು ಪುಟ್ಟ ಟೀಸರ್ʻನಲ್ಲಿ ಡಾಲಿ ಧನಂಜಯ ಅವರನ್ನು ಕಬ್ರು ಅವತಾರದಲ್ಲಿ ನೋಡಿರುವ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಅಲ್ಲದೆ ಈ ಚಿತ್ರದ ಮೂಲಕ ಮೋಹಕತಾರೆ ಮತ್ತೆ ನಟಿಯಾಗಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಆದರೆ ರಮ್ಯಾ ಅವರ ಲುಕ್ ಸೇರಿದಂತೆ ಯಾವುದನ್ನೂ ಚಿತ್ರತಂಡ ರಿವೀಲ್ ಮಾಡಿಲ್ಲ. ರಮ್ಯಾ ಉತ್ತರ ಕರ್ನಾಟಕ ಭಾಷೆಯಲ್ಲಿ ಬಿಟ್ಟ ಡೈಲಾಗ್‌ಗಳು ಕುತೂಹಲ ಕೆರಳಿಸಿತ್ತು. ಈಗ ಡಾಲಿ ಧನಂಜಯ್, ರಮ್ಯಾ ಜೊತೆಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಸೇರಿಕೊಂಡಿದ್ದು, ಸಿನಿಮಾಗೆ ಮತ್ತಷ್ಟು ಪವರ್ ಕೊಟ್ಟಂತೆ ಆಗಿದೆ.
ಈ ಚಿತ್ರದಲ್ಲಿ ಶಿವಣ್ಣ ಮತ್ತು ರಮ್ಯಾ ಅವರ ಜೋಡಿಯಾಗಿದ್ದಾರೆ ಎಂಬ ಸುದ್ದಿ ಚಿತ್ರತಂಡದಿಂದ ಬರುತ್ತಿದೆ. ಆದರೆ ಅಧಿಕೃತ ಅಲ್ಲ. ಆರ್ಯನ್ ಚಿತ್ರದಲ್ಲಿ ಶಿವಣ್ಣ ಮತ್ತು ರಮ್ಯಾ ಜೋಡಿಯಾಗಿದ್ದರು. ಆರ್ಯನ್ ಚಿತ್ರ ರಿಲೀಸ್ ಆಗುವ ಹೊತ್ತಿಗೆ ರಮ್ಯಾ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಹಾದಿಯಲ್ಲಿದ್ದರು. ಸಿನಿಮಾ ಕೂಡಾ ಯಾವಾಗಲೋ ಶುರುವಾಗಿ, ಇನ್ಯಾವಾಗಲೋ ರಿಲೀಸ್ ಆಗಿತ್ತು. ಜೋಡಿ ಸದ್ದು ಮಾಡಿದರೂ, ಬಾಕ್ಸಾಫೀಸ್ʻನಲ್ಲಿ ಫ್ಲಾಪ್ ಆಗಿದ್ದ ಸಿನಿಮಾ ಅದು. ಇದೀಗ ಮತ್ತೊಮ್ಮೆ ಉತ್ತರಕಾಂಡದಲ್ಲಿ ರಮ್ಯಾ ಮತ್ತು ಶಿವಣ್ಣ ಜೋಡಿಯಾಗುತ್ತಿದ್ದಾರೆಂಬ ಸುದ್ದಿಯಂತೂ ಇದೆ. ಉತ್ತರಕಾಂಡದಲ್ಲಿ ಕಬ್ರುವಾಗಿ ನಟಿಸುತ್ತಿರೋ ಡಾಲಿ ಧನಂಜಯ, ವಿಲನ್ ಶೇಡ್ʻನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಶಿವಣ್ಣ ಇಲ್ಲಿಯೂ ಪೊಲೀಸ್ ಆಗುತ್ತಿದ್ದಾರಾ.. ಜಸ್ಟ್ ಕುತೂಹಲ.



