ಇತ್ತೀಚೆಗೆ ಪ್ರತಿ ಸ್ಟಾರ್ ಸಿನಿಮಾ ರಿಲೀಸ್ ಆದಾಗ್ಲೂ ಈ ಸಿನಿಮಾ ಎಷ್ಟು ಕೋಟಿ ಬಿಸಿನೆಸ್ ಮಾಡುತ್ತೆ ಅನ್ನೋ ಪ್ರಶ್ನೆ ಬರ್ತಾನೇ ಇರುತ್ವೆ. ಅದರಲ್ಲೂ ಈಗ ಪ್ರಾದೇಶಿಕ ಭಾಷೆ ಸಿನಿಮಾ ಎಂದರೆ ಮಿನಿಮಮ್ 100 ಕೋಟಿ ಕಲೆಕ್ಷನ್, ಬಾಲಿವುಡ್ ಸಿನಿಮಾ ಎಂದರೆ ಮಿನಿಮಮ್ 500 ಕೋಟಿ ಕಲೆಕ್ಷನ್ ಅನ್ನೋ ದಾಖಲೆಯನ್ನ ಜನ, ಅಭಿಮಾನಿಗಳು ನಿರೀಕ್ಷೆ ಮಾಡ್ತಾರೆ. ಸಹಜವಾಗಿಯೇ ಅಂತಾದ್ದೊಂದು ಪ್ರಶ್ನೆ ಶಿವಣ್ಣಂಗೂ ಎದುರಾಗಿದೆ. ಕಾರಣ ಇಷ್ಟೆ, ಶಿವಣ್ಣ ಅಭಿನಯದ ವೇದ ಚಿತ್ರ ಸಖತ್ ಸೌಂಡ್ ಮಾಡ್ತು. ವೇದದ ನಂತರ ರಿಲೀಸ್ ಆದ ಜೈಲರ್ ಸಿನಿಮಾ ಕೂಡಾ ಭರ್ಜರಿ ಹಿಟ್ ಆಯ್ತು. 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡ್ತು. ಹೀಗಿರೋವಾಗ ಇದೇ ವಾರ ರಿಲೀಸ್ ಆಗ್ತಿರೋ ಘೋಸ್ಟ್ ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದು ಅನ್ನೋ ಪ್ರಶ್ನೆ ಶಿವಣ್ಣಂಗೆ ಎದುರಾಯ್ತು. ಅದಕ್ಕೆ ಶಿವಣ್ಣ ಕೊಟ್ಟಿರೋ ಉತ್ತರ ಪುನೀತ್ ರಾಜಕುಮಾರ್ ಮತ್ತು ಡಾ.ರಾಜ್ ಕುಮಾರ್.
ಇವತ್ತಿನ ದಿನಗಳಲ್ಲಿ ಒಂದು ‘ಬಂಗಾರದ ಮನುಷ್ಯ’ ಸಿನಿಮಾ ತೋರಿಸಿಬಿಡಿ ನೋಡೋಣ. ‘ಬಂಗಾರದ ಮನುಷ್ಯ’ ಚಿತ್ರವನ್ನು ಎಲ್ಲರೂ ಇಂದಿಗೂ ನೆನೆಪಿಸಿಕೊಳ್ಳುತ್ತಾರೆ. ಅದು ಯಾಕೆ? ಆ ಪಾತ್ರ ಆ ರೀತಿ ಇತ್ತು. ಜನರ ಮನಸ್ಸಿನಲ್ಲಿ ಉಳಿಯುವುದೇ ಸಿನಿಮಾ, ಪಾತ್ರ ಅಲ್ಲವೇ?
ಈಗ ನನ್ನ ತಮ್ಮ ಪುನೀತ್, ಎಷ್ಟು ಕೋಟಿ ಸಿನಿಮಾ ಮಾಡಿದ್ದಾನೆ. ಎಷ್ಟು ಕೋಟಿ ಕಲೆಕ್ಷನ್ ಮಾಡ್ಬೇಕೋ ಅಷ್ಟೇ ಆಗಿರೋದು. ಆದರೆ ಅವನ ಮನುಷತ್ವ, ಗುಣ, ಅವ್ನ ನೇಚರ್ ಎಲ್ಲಿಯವರೆಗೂ ರೀಚ್ ಆಗಿದೆ. ಕರ್ನಾಟಕ ಬಿಡಿ, ಇಡೀ ಭಾರತ, ಇಡೀ ಪ್ರಪಂಚ ರೀಚ್ ಆಗಿದೆ. ಹಣ ಇಲ್ಲಿ ಮುಖ್ಯ ಆಗಲ್ಲ. ಯಾವ ಸಿನಿಮಾ ಮಾಡಿದ್ದೀವಿ ಅನ್ನೋದು ಮುಖ್ಯ. ಒಳ್ಳೆ ಸಿನಿಮಾ ಮಾಡಬೇಕು. ಜನರಿಗೆ ತಲುಪುಬೇಕು ಅನ್ನೋದು ಮುಖ್ಯ ಎಂದಿದ್ದಾರೆ ಶಿವಣ್ಣ.
ಅಂದಹಾಗೆ ಒಬ್ಬ ನಟ ತನ್ನ ಇಡೀ ವೃತ್ತಿ ಜೀವನದಲ್ಲಿ ಒಂದೋ..ಎರಡೋ.. ಸೂಪರ್ ಡ್ಯೂಪರ್ ಇಂಡಸ್ಟ್ರಿ ಹಿಟ್ ಟ್ರೆಂಡರ್ ಸೆಟ್ ಸಿನಿಮಾ ಕೊಡ್ತಾರೆ. ಆದರೆ ಆ ನಿಯಮವನ್ನ ಡಾ.ರಾಜ್ ಅವರಿಗೆ ಅನ್ವಯಿಸೋಕೆ ಆಗಲ್ಲ. ಮಾಡಿದ್ದ 200+ ಸಿನಿಮಾಗಳಲ್ಲಿ ಆ ಲಿಸ್ಟಿಗೆ ಕನಿಷ್ಠ 20ರಿಂದ 30 ಸಿನಿಮಾ ಹೆಸರು ಹೇಳಬಹುದು. ಇನ್ನು ಹಿಟ್ ಲೆಕ್ಕಕ್ಕೆ 150+ ಹಿಟ್ ಚಿತ್ರಗಳಿವೆ.
ಇನ್ನು ಈಗಲೂ ಚಾಲ್ತಿಯಲ್ಲಿರೋ ಹೀರೋಗಳಲ್ಲಿ ಶಿವಣ್ಣ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ನಟ ಅಷ್ಟೇ ಅಲ್ಲ, ಅತೀ ಹೆಚ್ಚು ಹಿಟ್ ಕೊಟ್ಟಿರುವ ನಟ. ಇನ್ನು ಶಿವಣ್ಣ ಹೆಸರಲ್ಲಿ ಓಂ, ಜೋಗಿ, ಜನುಮದ ಜೋಡಿ ಎಂಬ ಮೂರು ಟ್ರೆಂಡ್ ಸೆಟ್ಟರ್ ಹಿಟ್ ಚಿತ್ರಗಳಿವೆ. ಆ ಲೆಕ್ಕಕ್ಕೆ ಬಂದರೆ ಶಿವಣ್ಣಗೆ ಸರಿಸಾಟಿಯಾಗಬಲ್ಲ ಇನ್ನೊಬ್ಬ ಹೀರೋ ಇಲ್ಲ ಎನ್ನಬಹುದು.
ಶಿವಣ್ಣ ಪ್ರಕಾರ ಒಳ್ಳೆ ಸಿನಿಮಾ ಮಾಡಬೇಕು ಎಂದುಕೊಂಡಾಗ ಮೊದಲೇ 1000 ಕೋಟಿ ರೂ. ಕಲೆಕ್ಷನ್ ಮಾಡಬೇಕು ಎಂದುಕೊಂಡರೆ ಕಷ್ಟ. ಒಳ್ಳೆ ಸಿನ್ಮಾ ಆಗಬೇಕು ಅಂತ ಮಾಡ್ಬೇಕು. 1000 ಕೋಟಿ ರೂ. ಬಿಸ್‌ನೆಸ್ ಆಗಬೇಕು ಅಂತ ಮಾಡ್ತೀರಾ? ನಾನು ಒಳ್ಳೆ ಸಿನಿಮಾ ಮಾಡ್ಬೇಕು. ಒಳ್ಳೆ ಪಾತ್ರ ಮಾಡ್ಬೇಕು, ಅದು ಜನಕ್ಕೆ ಇಷ್ಟ ಆಗ್ಬೇಕು. ಸಿನಿಮಾ ಚೆನ್ನಾಗಿ ಇದ್ದಾಗ ಕಲೆಕ್ಷನ್ ಅದಾಗಿಯೇ ಆಗುತ್ತದೆ. ಟಾರ್ಗೆಟ್ ಇಟ್ಟುಕೊಂಡು ಮಾಡೋಕೆ ಹೋದಾಗ ಫೇಲ್ ಆದರೆ ಎಲ್ಲಿರಿಗೂ ಅದೇ ಯೋಚನೆ ಬರುತ್ತದೆ. ಯಾವಾಗಲೂ ಆ ಯೋಚನೆ ಇರಬಾರದು. 1000 ಕೋಟಿ ರೂ. ಇಟ್ಕೊಂಡು ಏನ್ ಮಾಡ್ತೀರಾ? ಅದು ಆಗಬೇಕು ಅಂದ್ರೆ ಆಗಿಯೇ ಆಗುತ್ತದೆ. ನಾವು ತಡೆಯಲು ಸಾಧ್ಯವಿಲ್ಲ. ಸುನಾಮಿನಾ ತಡೆಯೋಕೆ ಆಗುತ್ತಾ? ಆಗಲ್ಲ. ಹಣೆಬರಹ ಹೇಗಿರುತ್ತೋ ಹಾಗೆ ಆಗುತ್ತದೆ ಎಂದಿದ್ದಾರೆ.



