ಶಿವರಾಜ್ ಕುಮಾರ್ ಗೀತಾ 39 ವರ್ಷದ ಲವ್ ಸ್ಟೋರಿ
ಅವರಿಬ್ಬರದ್ದೂ ಜನುಮದ ಜೋಡಿ ಕಣ್ರೀ.. ಎನ್ನುವವರು ಒಬ್ಬಿಬ್ಬರಲ್ಲ. ರಾಮನಿಗಾಗಿ ಸೀತಾ.. ಶಿವುಗಾಗಿ ಗೀತಾ.. ಎಂದು ಅಭಿಮಾನಿಗಳು ಸುಮ್ಮನೇ ಹೇಳಿಲ್ಲ. ಶಿವಣ್ಣ, ಕೃಷ್ಣನಂತೆ ತುಂಟನಾದರೂ.. ಪ್ರೀತಿಯಲ್ಲಿ ಶ್ರೀರಾಮಚಂದ್ರ. ಗೀತಾ ಅವರಂತೂ ಸಾಕ್ಷಾತ್ ಸೀತೆಯಂತೆ.. ಶಿವಣ್ಣನ ಸಕಲ ಸುಖ ಕಷ್ಟಗಳಲ್ಲಿಯೂ ಜೊತೆಯಾಗಿ ಸಾಗುತ್ತಿದ್ದಾರೆ. ವಿಶೇಷ ಏನು ಗೊತ್ತೇ..
ಶಿವರಾಜ್ ಕುಮಾರ್ ಅವರಿಗೆ ಮೊದಲು ಮದುವೆ ಇಷ್ಟವೇ ಇರಲಿಲ್ಲವಂತೆ. ಆನಂದ್ ಚಿತ್ರದ ಚಿತ್ರೀಕರಣ ಶುರುವಾಗಿತ್ತು. ಸಿನಿಮಾ, ಶೂಟಿಂಗ್ ಎಂದು ಬ್ಯುಸಿ ಇದ್ದ ಶಿವರಾಜ್ ಕುಮಾರ್, ಮೊದಲ ಚಿತ್ರಕ್ಕೆ ಪ್ರೇಕ್ಷಕ ಯಾವ ರೀತಿಯ ಪ್ರತಿಕ್ರಿಯೆ ಕೊಡಬಹುದು ಎಂಬ ಕುತೂಹಲದಲ್ಲಿದ್ದರು. ಆ ಸಮಯದಲ್ಲೇ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮನವರ ಕಣ್ಣಿಗೆ ಬಿದ್ದಿದ್ದರು ಗೀತಾ.
ಬಂಗಾರಪ್ಪನವರ ಮನೆಗೆ ಹೋಗಿದ್ದಾಗ ಗೀತಾ ಅವರು ಪಾರ್ವತಮ್ಮನವರ ಗಮನ ಸೆಳೆದಿದ್ದರು. ಈ ಹುಡುಗಿಯನ್ನು ಸೊಸೆಯಾಗಿ ತಂದು ಕೊಂಡರೆ ಹೇಗೆ ಎಂದು ಪತಿಯಲ್ಲಿ ಕೇಳಿದ್ದರು. ಡಾ.ರಾಜ್ ವಿಷಯ ಗೊತ್ತಿಲ್ಲದೇ ಏನು.. ಒಪ್ಪಿದ್ರೆ ಜಮಾಯ್ಸಿಬಿಡಿ ಎಂದಿದ್ದರಂತೆ. ಬಂಗಾರಪ್ಪನವರ ಜೊತೆಯಲ್ಲೂ ಮಾತನಾಡಿದ್ದ ಪಾರ್ವತಮ್ಮ, ನಮ್ ಪುಟ್ಟಸ್ವಾಮಿಗೆ ನಿಮ್ಮ ಮಗಳನ್ನು ಕೊಡಬಹುದಾ ಎಂದು ಕೇಳಿದ್ದರಂತೆ. ಅವರೂ ಅಷ್ಟೇ, ಇಬ್ಬರೂ ಒಪ್ಪಿದ್ರೆ, ನೋ ಪ್ರಾಬ್ಲಂ ಎಂದಿದ್ದರಂತೆ.
ಮನೆಗೆ ಬಂದ ಪಾರ್ವತಮ್ಮ ಬಂಗಾರಪ್ಪನವರ ಮನೆಗೆ ಹೋಗಿ ಹುಡುಗಿ ನೋಡ್ಕೊಂಡು ಬಾ ಎಂದಾಗ ಶಿವಣ್ಣ ಎಲ್ಲ ಹುಡುಗರಂತೆ ನನಗೀಗಲೇ ಮದುವೆ ಬೇಡಮ್ಮಾ.. ಪ್ಲೀಸ್.. ಪ್ಲೀಸ್ ಎಂದು ಗೋಗರೆದಿದ್ದರಂತೆ. ಅಪ್ಪನನ್ನು ಕೇಳಿದರೂ.. ಅಮ್ಮನೇ ಫೈನಲ್ ಎಂದು ಗೊತ್ತಿದ್ದ ಶಿವಣ್ಣ, ಹೋಗಿ ಹೆಣ್ಣು ನೋಡಿ ಬಂದಿದ್ದರಂತೆ.
ಗೀತಾ ಅವರನ್ನು ನೋಡಿದ ತಕ್ಷಣ ಮದುವೆ ಬೇಡಮ್ಮಾ.. ಪ್ಲೀಸ್ ಎನ್ನುತ್ತಿದ್ದವರು.. ಅಲ್ಲೇ ಕ್ಲೀನ್ ಬೌಲ್ಡ್. ಮನಸ್ಸು ಅಲ್ಲಿಯೇ ಟುವ್ವಿ ಟುವ್ವಿ ಹಾಡಿತ್ತು. ಮನೆಗೆ ಬಂದವರೇ ಮದುವೆಗೆ ಎಸ್ ಎಂದಿದ್ದರಂತೆ.
ಶಿವಣ್ಣ ಗೀತಾ ಅವರು ಮದುವೆಯಾಗಿದ್ದು 39 ವರ್ಷಗಳ ಹಿಂದೆ. ಗೀತಾ ಅವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಮಗಳು. ಶಿವರಾಜ್ ಕುಮಾರ್, ಕನ್ನಡಿಗರ ಹೃದಯ ಸಿಂಹಾಸನದ ಅಧಿಪತಿಯ ಮಗಳು. 39 ವರ್ಷದ ಹಿಂದೆ ಗೀತಾ ಶಿವರಾಜ್ ಕುಮಾರ್ ಅವರನ್ನ ವರನಟ ರಾಜ್ ಕುಮಾರ್ ಹಾಗೂ ಪಾರ್ವತಮ್ಮನವರು ಮೆಚ್ಚಿ ನಿಶ್ಚಯಿಸಿದ್ದ ಹುಡುಗಿ ಗೀತಾ. ಇಬ್ಬರದ್ದೂ ಅರೇಂಜ್ ಮ್ಯಾರೇಜ್. 1986ರ ಮೇ 19ರಂದು ಬೆಂಗಳೂರಿನ ಅರಮನೆಯಲ್ಲಿ ಬೆಳಗ್ಗೆ 12-10 ರಿಂದ 1-05 ಗಂಟೆ ನಡುವಿನ ಶುಭ ಮುಹೂರ್ತದಲ್ಲಿ ಗೀತಾ ಅವರು ಶಿವ ರಾಜ್ ಕುಮಾರ್ ಹೃದಯ ಸಿಂಹಾಸನದ ಒಡತಿಯಾಗಿದ್ದರು.
ಆ ಮದುವೆಗೆ ಈಗ 39 ವರ್ಷ. ಅಂದ ಹಾಗೆ ಶಿವಣ್ಣ-ಗೀತಾ ಅವರ ಮದುವೆಯಾದಾಗ ಆನಂದ್ ಚಿತ್ರದ ಚಿತ್ರೀಕರಣ ಮುಗಿದು ರಿಲೀಸ್ ಆಗುವುದಕ್ಕೆ ರೆಡಿಯಾಗಿತ್ತು. ಮೇ 19ಕ್ಕೆ ಮದುವೆ ಮಾಡಿಕೊಂಡಿದ್ದ ಶಿವಣ್ಣ ಅವರಿಗೆ ಅದಾದ ಒಂದೇ ತಿಂಗಳಲ್ಲಿ ಆನಂದ್ ಚಿತ್ರ ರಿಲೀಸ್ ಆಗಿ ಗೆದ್ದಿತ್ತು. ಜೂನ್ 19ಕ್ಕೆ ರಿಲೀಸ್ ಆಗಿದ್ದ ಸಿನಿಮಾ ಆನಂದ್. ರಥಸಪ್ತಮಿ ಸಿನಿಮಾ ಶುರು ಆಗಿದ್ದು ಕೂಡಾ ಜೂನ್ 19ರಂದು.



