ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬರೋಬ್ಬರಿ ಮೂರೂವರೆ ವರ್ಷಗಳ ಬಳಿಕ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಅಕ್ಟೋಬರ್ 11ಕ್ಕೆ ಮಾರ್ಟಿನ್ ತೆರೆ ಕಾಣಲಿದೆ. ಆದರೆ ಅದಕ್ಕೂ ಮುನ್ನ ಶಿವಣ್ಣ ಅಭಿನಯದ ಭೈರತಿ ರಣಗಲ್ ರಿಲೀಸ್ ಆಗಬೇಕಿತ್ತು. ಆದರೆ ಶಿವಣ್ಣ ಅವರ ಬಳಿ ಧ್ರುವ ಸರ್ಜಾ ಮಾಡಿಕೊಂಡ ಒಂದೇ ಒಂದು ಮನವಿಗೆ ಶಿವಣ್ಣ ತಮ್ಮ ಚಿತ್ರವನ್ನು ಮುಂದಕ್ಕೆ ಹಾಕಿದ್ದಾರೆ. ಭೈರತಿ ರಣಗಲ್ ಚಿತ್ರಕ್ಕೆ ಶಿವಣ್ಣ ಕೇವಲ ಹೀರೋ ಅಲ್ಲ, ನಿರ್ಮಾಪಕ ಕೂಡಾ. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಎರಡನೇ ಚಿತ್ರವೇ ಭೈರತಿ ರಣಗಲ್.
ಆಗಸ್ಟ್ 15ರಂದೇ ರಿಲೀಸ್ ಆಗಬೇಕಿದ್ದ ಸಿನಿಮಾವನ್ನು ಅಕ್ಟೋಬರ್ 4ಕ್ಕೆ ಬಿಡುಗಡೆ ಮಾಡುವುದಕ್ಕೆ ಗೀತಾ ಶಿವರಾಜ್ ಕುಮಾರ್ ನಿರ್ಧರಿಸಿದ್ದರು. ಆದರೆ ತಾಂತ್ರಿಕ ತೊಂದರೆಗಳಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿತ್ತು. ಅದಾದ ಮೇಲೆ ಅಕ್ಟೋಬರ್ 4ರಂದು ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದರು ಶಿವರಾಜ್ ಕುಮಾರ್. ಆದರೆ ಧ್ರುವ ಸರ್ಜಾ ಅವರ ಒಂದೇ ಒಂದು ಮಾತಿಗೆ ಶಿವಣ್ಣ ತಲೆಬಾಗಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಧ್ರುವ ಸರ್ಜಾ ಅವರು ಹೇಳಿಕೊಂಡಿದ್ದಾರೆ. ಅಕ್ಟೋಬರ್ 11ಕ್ಕೆ ಡೇಟ್ ಫಿಕ್ಸ್ ಮಾಡಿ ಪ್ರಚಾರ ಮಾಡ್ತಾ ಇರುವಾಗಲೇ ಶಿವಣ್ಣ ಅವರ ಭೈರತಿ ರಣಗಲ್ ಕೂಡಾ ಬರುತ್ತದೆ ಎಂಬ ಮಾಹಿತಿ ಸಿಕ್ತು. ಶಿವಣ್ಣ ಸಿನಿಮಾ ಎಂದರೆ ಅದು ದೊಡ್ಡ ಸಿನಿಮಾ. ಒಂದೇ ವಾರದ ಗ್ಯಾಪಲ್ಲಿ ಬಂದರೆ ಥಿಯೇಟರ್ ಪ್ರಾಬ್ಲಂ ಆಗುತ್ತೆ ಎಂದು ಗೊತ್ತಾಯ್ತು. ಕೇಳೋದೋ ಬೇಡ್ವೋ.. ಅಂದ್ಕೊಂಡೇ ಫೋನ್ ಮಾಡಿದೆ. ಅಣ್ಣಾ.. ನನ್ನ ಸಿನಿಮಾ ಅಕ್ಟೋಬರ್ 11ಕ್ಕೆ ರಿಲೀಸ್. ಶಿವಣ್ಣ ನಾನು ಮಾರ್ಟಿನ್‌ಗೆ ಮೂರು ವರ್ಷ ಹಾಕಿದ್ದೀನಿ. ಏನಾದರೂ ನೋಡಬಹುದಲ್ಲ ಎಂದೆ. ತಕ್ಷಣ ಅರ್ಥ ಮಾಡಿಕೊಂಡ ಶಿವಣ್ಣ, ಅಕ್ಟೋಬರ್ ನಾಲ್ಕು ಒಳ್ಳೆ ಟೈಮ್ ಅಂತ ಪ್ಲಾನ್ ಮಾಡಿದ್ವಲ್ಲ ಅಂತ ಅಂದು, ಏನು ಮಾಡುವುದಕ್ಕೆ ಆಗುತ್ತೆ ನೋಡ್ತೇನೆ, ಸ್ವಲ್ಪ ಟೈಂ ಕೊಡು ಹೇಳ್ತೀನಿ ಅಂದ್ರು. ಅದಾದ ನಾಲ್ಕೈದು ಗಂಟೆ ಮೇಲೆ ಅವರೇ ಫೋನ್ ಮಾಡಿದ್ರು. ನಾವು ಮುಂದಕ್ಕೆ ಹೋಗ್ತೀವಿ. ಮಾರ್ಟಿನ್ ಸಿನಿಮಾ ಚೆನ್ನಾಗಿ ಬರ್ತಾ ಇದೆ ಅಂತ ಕೇಳಿದೆ. ಸಿನಿಮಾಗೆ ಒಳ್ಳೇದಾಗ್ಲಿ ಎಂದು ಹಾರೈಸಿದ್ರು ಎಂದು ಹೇಳಿಕೊಂಡಿದ್ದಾರೆ ಧ್ರುವ ಸರ್ಜಾ.
ಶಿವಣ್ಣ ಮತ್ತು ಗೀತಕ್ಕೆ ಇಬ್ಬರೂ ಫೋನ್ ಮಾಡಿ ಮಾತನಾಡಿದ್ರು. ಗೀತಕ್ಕ ಅವ್ರೂ ಕೂಡಾ ನೀವು ನಮ್ಮ ಫ್ಯಾಮಿಲಿ. ಡೋಂಟ್ ವರಿ ನಾನು ಒಂದು ತಿಂಗಳು ಮುಂದಕ್ಕೆ ಹೋಗುತ್ತೀನಿ. ಆಲ್ ದಿ ಬೆಸ್ಟ್, ಸಿನಿಮಾ ಚೆನ್ನಾಗಿ ಮಾಡಿದ್ದೀಯಾ ಅಂತೆಲ್ಲ ಕೇಳ್ಕೊಂಡ್ರು ಎಂದು ಹೇಳ್ಕೊಂಡಿದ್ದಾರೆ ಧ್ರುವ ಸರ್ಜಾ.
ಅಷ್ಟೇ ಅಲ್ಲ, ತಮ್ಮ ಆರಂಭದ ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಅವರು ನೀಡಿದ್ದ ಸಪೋರ್ಟನ್ನೂ ನೆನಪಿಸಿಕೊಂಡಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ ಅಭಿನಯದ ಎರಡನೇ ಚಿತ್ರ ಬಹದ್ದೂರ್ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ವಾಯ್ಸ್ ಕೊಟ್ಟಿದ್ದರು. ಆಗಲೂ ಅಷ್ಟೇ, ರಿಲೀಸ್ ತಡವಾಗಿದ್ದ ಚಿತ್ರಕ್ಕೆ ಪುನೀತ್ ವಾಯ್ಸ್ ಪ್ರಚಾರವನ್ನೂ ಕೊಟ್ಟಿತ್ತು. ಅದಾದ ಮೇಲೆ ಬಹದ್ದೂರ್ ಚಿತ್ರ 100 ದಿನ ಪೂರೈಸುವುದಕ್ಕೆ 5 ದಿನ ಮೊದಲು ಇರುವಾಗ, ಪುನೀತ್ ಅವರ ಅಂಜನಿಪುತ್ರ ರಿಲೀಸ್ ಆಗಿತ್ತು. ಧ್ರುವ ಸರ್ಜಾರ ಚಿತ್ರ 100 ಡೇಸ್ ಪೂರೈಸಲಿ ಎಂಬ ಕಾರಣಕ್ಕೆ, ಪುನೀತ್ ಅದಾಗಲೇ ಘೋಷಣೆಯಾಗಿದ್ದ ತಮ್ಮ ಚಿತ್ರಮಂದಿರವನ್ನು ಬದಲಿಸುವಂತೆ ಮಾಡಿದ್ದರು. ಪುನೀತ್ ಅವರು ತಮ್ಮ ಚಿತ್ರಕ್ಕೆ, ತಮಗೆ ನೀಡಿದ್ದ ಸಪೋರ್ಟ್ ನೆನಪಿಸಿಕೊಂಡಿರುವ ಧ್ರುವ ಸರ್ಜಾ, ಇದೀಗ ಶಿವಣ್ಣ ಕೂಡಾ ಹಾಗೆಯೇ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಹಲವು ವೇದಿಕೆಗಳಲ್ಲಿ ಶಿವಣ್ಣ, ಧ್ರುವ ಸರ್ಜಾ ಅವರ ಡಾನ್ಸ್, ಫೈಟ್ಸ್ ಮತ್ತು ಅಭಿನಯವನ್ನು ಹೊಗಳಿದ್ದಾರೆ. ಧ್ರುವ ಸರ್ಜಾ ಕನ್ನಡ ಚಿತ್ರರಂಗದ ಭವಿಷ್ಯದ ಸ್ಟಾರ್ ಎಂದು ಹೊಗಳಿದ್ದಾರೆ. ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಕಾಂಬಿನೇಷನ್ನಿನ ಮಾರ್ಟಿನ್ ಇದೇ ಅಕ್ಟೋಬರ್ 11ಕ್ಕೆ ರಿಲೀಸ್ ಆಗ್ತಿದೆ.



