ಕಿಮೋಥೆರಪಿ. ಕ್ಯಾನ್ಸರ್ ಇದ್ದವರಿಗೆ ಕ್ಯಾನ್ಸರ್ ಕೋಶಗಳು ಹರಡದಂತೆ ತಡೆಯುವುದಕ್ಕೆ ನೀಡುವ ಚಿಕಿತ್ಸಾ ವಿಧಾನ. ಕಿಮೋಥೆರಪಿಯಲ್ಲಿ ಹಲವು ವಿಧ ಹಾಗೂ ಪ್ರಕ್ರಿಯೆಗಳಿವೆಯಾದರೂ.. ಪರಿಣಾಮ ಮಾತ್ರ ಒಂದೇ. ಈ ಕಿಮೋಥೆರಪಿ ಪಡೆಯುವವರಿಗೆ ಯಾವ ರೀತಿಯ ನೋವು ಇರುತ್ತದೆ ಎಂದರೆ.. ಅಬ್ಬಾ.. ಕಿಮೋಥೆರಪಿ ನಡೆಯುತ್ತಿದ್ದಾಗ ಸರಿಯಾಗಿ ಊಟವೂ ಸೇರುವುದಿಲ್ಲ. ನೀರೂ ಸೇರುವುದಿಲ್ಲ. ಸುಸ್ತು ಕಾಡುತ್ತಲೇ ಇರುತ್ತದೆ. ಅತಿ ಹೆಚ್ಚು ನಿದ್ದೆ ಮಾಡಬೇಕು ಎನಿಸುತ್ತದೆ.. ಹೀಗಿದ್ದರೂ ಶಿವಣ್ಣ ನಿರಂತರವಾಗಿ ಶೂಟಿಂಗ್ ಮಾಡಿದ್ದರು ಎನ್ನುವುದೇ ಒಂದು ಅಚ್ಚರಿ.
ಏಕೆಂದರೆ ಕಿಮೋ ನಡೆಯುವಾಗ ಅಲೋಪೇಸಿಯಾ ಅಂದರೆ ಕೂದಲು ಉದುರುತ್ತದೆ. ರಕ್ತಹೀನತೆ, ಆಯಾಸ ಕಾಡುತ್ತದೆ. ವಿಚಿತ್ರ ಎಂದರೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಬಾಯಿಯಲ್ಲಿ ಹುಣ್ಣುಗಳಾಗುತ್ತವೆ. ವಾಂತಿ, ವಾಕರಿಗೆ, ಅತಿಸಾರ ಭೇದಿ ಎಲ್ಲವೂ ಕಾಡುತ್ತದೆ. ತಲೆನೋವು ಬೇಗನೆ ಹೋಗುವುದಿಲ್ಲ. ಹೊಟ್ಟೆಯಲ್ಲಿ ತಳಮಳ ಇದ್ದೇ ಇರುತ್ತದೆ. ಸ್ನಾಯಗಳು ನೋವಿನಿಂದ ಚೀರುತ್ತಿರುತ್ತವೆ. ಇಂತಹ ಕಿಮೋಥೆರಪಿಯಲ್ಲಿ ಶಿವಣ್ಣ ಶೂಟಿಂಗ್ ಮಾಡಿದ್ದರಂತೆ. ಅವರೇ ಹೇಳಿಕೊಂಡಿರುವ ವಿಡಿಯೋದಲ್ಲಿ ʻʻಅನಾರೋಗ್ಯದ ನಡುವೆಯೇ ಯಾವುದೋ ಜೋಶ್ನಲ್ಲಿ ಶೂಟಿಂಗ್ನಲ್ಲಿ ಭಾಗವಹಿಸಿಬಿಟ್ಟೆ. ಎಲ್ಲರೂ ಜೊತೆಗೆ ಇದ್ದರು ಕೀಮೋ ಮಾಡಿಸುತ್ತಿರಬೇಕಾದರೆ ‘45’ ಸಿನಿಮಾದ ಫೈಟ್ ಸೀನ್ನಲ್ಲಿ ಭಾಗವಹಿಸಿದ್ದೆ, ಅದರ ಶ್ರೇಯ ರವಿವರ್ಮಗೆ ಸಲ್ಲಬೇಕು. ಆದರೆ ಶಸ್ತ್ರಚಿಕಿತ್ಸೆ ದಿನ ಹತ್ತಿರ ಬಂದಂತೆ ತುಸು ಆತಂಕ ಇತ್ತು. ಆದರೆ ಅಭಿಮಾನಿಗಳು, ಗೆಳೆಯರು, ಸಹ ನಟರು, ಬಾಲ್ಯದ ಗೆಳೆಯರು ನೀಡಿದ ಬೆಂಬಲ ಧೈರ್ಯ ತುಂಬಿತು ಇಲ್ಲಿನ ವೈದ್ಯರು, ನರ್ಸ್ಗಳು ಬಹಳ ಚೆನ್ನಾಗಿ ಕಾಳಜಿ ಮಾಡಿದರುʼʼ ಎಂದಿದ್ದಾರೆ ಶಿವಣ್ಣ.
ಶಿವರಾಜ್ ಕುಮಾರ್ ಒಂದು ಯುದ್ಧ ಗೆದ್ದಂತಾಗಿದೆ. ಕ್ಯಾನ್ಸರ್ ವಿರುದ್ಧ ಶಿವಣ್ಣ ಗೆಲುವು ಸಾಧಿಸಿದ್ದಾರೆ. ಸದ್ಯ ಈಗ ಆರೋಗ್ಯವಾಗಿದ್ದೇನೆ. ವೈದ್ಯರು ಮೊದಲು ಒಂದು ತಿಂಗಳು ನಿಧಾನವಾಗಿ ಇರಬೇಕು ಎಂದು ಹೇಳಿದ್ದಾರೆ. ಆ ಮೇಲೆ ಬೇಕಾದರೆ ನೀವು ಮೊದಲಿನಂತೆ ಏನು ಬೇಕಾದರೂ ಮಾಡಿ ಎಂದಿದ್ದಾರೆ. ಐ ವಿಲ್ ಬಿ ಬ್ಯಾಕ್ ಎಂದಿದ್ದಾರೆ ಶಿವಣ್ಣ. ಅಭಿಮಾನಿಗಳು ಫುಲ್ ಹ್ಯಾಪಿ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಎಲ್ಲ ಟೆಸ್ಟ್ಗಳು ಪಾಸಿಟಿವ್ ಬಂದಿವೆ.
ವಿಡಿಯೋ ರಿಲೀಸ್ ಮಾಡಿರುವ ಶಿವಣ್ಣ ಮತ್ತು ಗೀತಾ, ಆರೋಗ್ಯಕ್ಕಾಗಿ ಚೇತರಿಕೆಗಾಗಿ ಪ್ರಾರ್ಥಿಸಿದ ಸಾವಿರಾರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಫೆತಾಲಜಿ ರಿಪೋರ್ಟ್ ಕೂಡಾ ನೆಗೆಟಿವ್ ಬಂದಾಯ್ತು. ಅದು ಬಂದ ಮೇಲೆ ನೆಮ್ಮದಿಯಾಯ್ತು ಎಂದಿದ್ದಾರೆ ಗೀತಾ. ಇದೇ ವೇಳೆ ಶಿವಣ್ಣ ಹೊಸ ವರ್ಷದ ಶುಭಾಶಯ ಹೇಳಿ ತನಗೆ ಬೆಂಬಲ ನೀಡಿದ ಗೆಳೆಯರು, ಸಹನಟರು, ಸಹ ನಟರು ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಜೊತೆಗೆ ವಿಡಿಯೋ ನೋಡಿದವರಿಗೆ ಶಿವಣ್ಣ ಅದೆಷ್ಟು ದಿನ ನೋವು ಸಹಿಸಿಕೊಂಡಿರಬಹುದು ಎಂಬುದರ ಸ್ಪಷ್ಟ ಸುಳಿವು ಸಿಗುತ್ತದೆ.
ಶಿವಣ್ಣ ಅವರ ಮೂತ್ರಕೋಶವನ್ನು ತೆಗೆದು ಹೊಸದಾಗಿ ಜೋಡಿಸಲಾಗಿದೆ. ಅವರದ್ದೇ ಕರುಳಿನ ಒಂದು ಭಾಗವನ್ನು ಕತ್ತರಿಸಿ ಮೂತ್ರಕೋಶಕ್ಕೆ ಕಸಿ ಮಾಡಲಾಗಿದೆ. ಈ ಹಂತದಲ್ಲಿ ಕ್ಯಾನ್ಸರ್ ಬೆಳೆಯುತ್ತಿದ್ದ ಭಾಗವನ್ನು ಕತ್ತರಿಸಿ ಹಾಕಲಾಗಿದೆ.
ನಾವು ಇಷ್ಟು ದಿನ ಅದರ ಬಗ್ಗೆ ವಿವರವಾಗಿ ಹೇಳಿರಲಿಲ್ಲ, ವಿವರಗಳನ್ನು ಹೇಳಿದರೆ ಆತಂಕ ಪಡುತ್ತಾರೆ ಎಂಬ ಕಾರಣಕ್ಕೆ ಅದನ್ನು ಹೇಳಿರಲಿಲ್ಲ ಎಂದು ಹೇಳಿರುವ ಶಿವಣ್ಣ ತಮ್ಮನ್ನು ಕಾಳಜಿ ಮಾಡಿದ, ಆರೈಕೆ ಮಾಡಿದ ಡಾಕ್ಟರ್ಸ್, ಕಿಮೋ ಮಾಡಿರುವ ಡಾಕ್ಟರ್ ಶಶಿಧರ್, ದಿಲೀಪ್, ಗೀತಾ, ಶ್ರೀನಿವಾಸ್, ನರ್ಸ್ಗಳು, ಸಹನಟರು, ಸಂಬಂಧಿಕರು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಆವಾಗ ಹೇಗಿದ್ದನೋ ಅದಕ್ಕಿಂತ ಡಬಲ್ ಪವರ್ ಜೊತೆ ಬರುತ್ತೇನೆ ಎಂದು ಹೇಳಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.



