ಇಂಡಸ್ಟ್ರಿಯಲ್ಲಿ ಕೆಲವರು ದೊಡ್ಡ ದೊಡ್ಡ ಸ್ಟಾರ್ ನಟರ ಬಗ್ಗೆ ಅಭಿಮಾನದಿಂದ ಮಾತನಾಡುತ್ತಲೇ.. ಇನ್ನೊಬ್ಬ ಸ್ಟಾರ್ ಹೀರೋನನ್ನು ತೆಗಳುವ ಸಂಪ್ರದಾಯ ಜೋರಾಗುತ್ತಿದೆ. ಯಾವ ಮಟ್ಟಿಗೆ ಎಂದರೆ, ಒಬ್ಬ ಸಿನಿಮಾ ಪ್ರೇಮಿಗೆ ಸುದೀಪ್ ಇಷ್ಟ ಎಂದಿಟ್ಟುಕೊಳ್ಳಿ, ಆತ ದರ್ಶನ್ ವಿರೋಧಿ ಆಗಿರಲೇಬೇಕು. ದರ್ಶನ್ ಅಭಿಮಾನಿ ಎಂದ ಮೇಲೆ ಆತ ಡಾ.ರಾಜ್ ಕುಟುಂಬದ ವಿರೋಧಿ ಆಗಿರಲೇಬೇಕು. ಶಿವಣ್ಣನ ಅಭಿಮಾನಿಗಳು ಎಂದರೆ, ಆತನಿಗೆ ದರ್ಶನ್ ಇಷ್ಟವಾಗಬಾರದು. ಪುನೀತ್ ಅಭಿಮಾನಿಗಳು ಇನ್ಯಾವ ನಟರನ್ನೂ ಇಷ್ಟ ಪಡಬಾರದು. ಗಣೇಶ್ ಅಭಿಮಾನಿಗಳು ದುನಿಯಾ ವಿಜಯ್ ಚಿತ್ರಗಳನ್ನು ಇಷ್ಟಪಡುವಂತಿಲ್ಲ. ಯಶ್ ಅಭಿಮಾನಿಗಳು ದರ್ಶನ್ ಅವರನ್ನು ದ್ವೇಷ ಮಾಡಬೇಕು. ಉಪೇಂದ್ರ ಅಭಿಮಾನಿಗಳು ಉಪೇಂದ್ರ ಅವರಂತೆಯೇ ಇರಬೇಕು. ಇಂತಹ ಮನಸ್ಥಿತಿ ಬೆಳೆಯುತ್ತಿದೆ.
ಒಬ್ಬ ನಟ ಇಷ್ಟ ಎಂದರೆ, ಆತ ಇನ್ನೊಬ್ಬ ನಟನನ್ನು ದ್ವೇಷಿಸಬೇಕು ಏಕೆ..? ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಆದರೆ ಮೊದಲೆಲ್ಲ ಹೀಗಿರಲಿಲ್ಲ, ಒಬ್ಬ ನಟ ಇಷ್ಟ ಎಂದರೆ ಇಷ್ಟ ಎಂದರ್ಥ. ಇನ್ನೊಬ್ಬ ನಟನನ್ನು ದ್ವೇಷಿಸುತ್ತೇವೆ ಎಂಬ ಅರ್ಥದಲ್ಲಿ ಇರಲಿಲ್ಲ. ಹೀಗಾಗಿಯೇ ಎಲ್ಲರೂ ಎಲ್ಲ ನಟರ ಚಿತ್ರಗಳನ್ನೂ ನೋಡ್ತಾ ಇದ್ದರು. ಸಿನಿಮಾ ಇಷ್ಟವಾದರೆ ಆಯಿತು. ಈಗ ಅದೇ ಜನ ಯಾರನ್ನೂ ಬಿಡುತ್ತಿಲ್ಲ. ಈಗ ವಿಷ್ಣುವರ್ಧನ್ ಮತ್ತು ಶಿವಣ್ಣನ ಮಧ್ಯೆ ತಂದಿಕ್ಕುವ ಕೆಲಸ ನಡೆದಿದೆ. ವಿಷ್ಣುವರ್ಧನ್ ಈಗ ನಮ್ಮೊಂದಿಗಿಲ್ಲ. ಆದರೆ, ಅಭಿಮಾನಿಗಳಿದ್ದಾರೆ. ಕಾರಣ ಏನು.. ಗೊತ್ತಿಲ್ಲ. ಶುರುವಾಗಿದ್ದು ಯಾಕೆ.. ಗೊತ್ತಿಲ್ಲ.
ಒಬ್ಬ ತನ್ನ ಎಕ್ಸ್ ಖಾತೆಯಲ್ಲಿ
“ವಿಷ್ಣುದಾದಗಿಂತ ಹೆಚ್ಚು ಸಕ್ಸಸ್ ಹಾಗೂ ಅಭಿಮಾನಿಗಳನ್ನು ಹೊಂದಿರುವ ನಟ ಶಿವಣ್ಣ” ಎಂದು ಬರೆದು ಪೋಸ್ಟ್ ಮಾಡಿದ್ದ. ಈ ಪೋಸ್ಟ್ ನೋಡುತ್ತಿದ್ದಂತೆ ವಿಷ್ಣುದಾದ ಅಭಿಮಾನಿಗಳು ರೊಚ್ಚಿಗೆದ್ದರು. ತಮ್ಮ ನೆಚ್ಚಿನ ನಟ ಸಾಹಸ ಸಿಂಹ ವಿಷ್ಣುದಾದ ಬಗ್ಗೆ ಪೋಸ್ಟ್ ಮಾಡುತ್ತಿರುವವರ ವಿರುದ್ಧ ಕಿಡಿಕಾರುವುದಕ್ಕೆ ಶುರು ಮಾಡಿದ್ರು. ಇಷ್ಟಕ್ಕೂ ಶಿವಣ್ಣ ಫ್ಯಾನ್ಸ್ ಲೆಕ್ಕ ಹೇಳೋವಾಗ ವಿಷ್ಣುವರ್ಧನ್ ಜೊತೆ ಹೋಲಿಕೆಯಾದರೂ ಏಕೆ ಅಂತಾ ವಿಷ್ಣುವರ್ಧನ್ ಫ್ಯಾನ್ಸ್ ಸುಮ್ಮನಾಗಲಿಲ್ಲ. ಯಾಕೆ ಅವರನ್ನು ಎಳೆದು ತರ್ತೀರಿ ಅಂತಾ ಶಿವಣ್ಣ ಫ್ಯಾನ್ಸ್ ಕೇಳಲಿಲ್ಲ.
“ಇತ್ತೀಚಿಗಿನ ದಿನಗಳಲ್ಲಿ ವಿಷ್ಣುವರ್ಧನ್, ರವಿಚಂದ್ರನ್, ಹಂಸಲೇಖ ಇವರ ಕೊಡುಗೆಗಳೇನು ಅನ್ನೋದೇ ಗೊತ್ತಿರದ ಕೆಲವು ಸ್ಟುಪಿಡ್, ಚೈಲ್ಡಿಶ್, ಜ್ಞಾನವೇ ಇಲ್ಲದ ವೇಸ್ಟ್ ಫಾಲೋವರ್ಸ್, ಅವರನ್ನು ಟ್ರೋಲ್ ಮಾಡುವುದಕ್ಕೆ ಎಳೆದು ತರುತ್ತಿದ್ದಾರೆ. ಜವಾಬ್ದಾರಿ ಹಾಗೂ ಗೌರವ ಇಲ್ಲದವರು. ಇವರು ಇದ್ದ ಸಮಯದಲ್ಲಿ ಅವರಿನ್ನೂ ಹುಟ್ಟಿರಲಿಲ್ಲ ಅಥವಾ ಇನ್ನೂ ಮಕ್ಕಳಾಗಿದ್ದರು” ಎಂದು ಒಬ್ಬರು ಬರೆದುಕೊಂಡಿದ್ದಾರೆ.
“ಕಾಲ ಕಾಲಾದಿಂದನು ಇಂತಹ ಆಟಗಳೇ ಆಡ್ಕೊಂಡು ಬಂದಾಯ್ತು. ಇದ್ರಿಂದ ಸಿಂಪತಿ ಬೆಳಿತೇ ಹೊರತು. ನೀವುಗಳಂತೂ ಬೆಳೆಯಲಿಲ್ಲ. ಇಲ್ಲ ಸಾರಿ, ಹೀಗಂತ ಹೇಳಿಕೊಂಡೆ ಬೆಳೆದು ಬಿಟ್ರಿ. ಅಪ್ಪನ ಹತ್ರ ಹೋಗೋದಿರ್ಲಿ. ಮಗನ್ ಹತ್ರ ಹೋಗೊಕು ಆಗಲ್ಲ. ನೆನಪಿಟ್ಕೋಳಿ” ಅನ್ನೋದು ಶಿವಣ್ಣ ಅಭಿಮಾನಿ ಹಾಕಿರುವ ಪೋಸ್ಟ್ ಸಾರಾಂಶ.
“ಶಿವಣ್ಣನ ಬಗ್ಗೆ ದ್ವೇಷವಿಲ್ಲ. ಆದರೆ, ವಿಷ್ಣುದಾದಗೆ ಅವರದ್ದೇ ಆದ ಪರಂಪರೆಯಿದೆ. ದಾದಾ ಕ್ರೇಜ್, ಫ್ಯಾನ್ ಬೇಸ್ ಮತ್ತು ಸ್ಟಾರ್‌ಢಮ್ ಅದು ಬೇರೆನೇ. ಶಿವಣ್ಣ ಅದರ ಹತ್ತಿರನೂ ಬರುವುದಕ್ಕೂ ಸಾಧ್ಯವಿಲ್ಲ. ವಿಷ್ಣುದಾದ ಕನ್ನಡ ಚಿತ್ರರಂಗದ ಅತ್ಯಂತ ಅಂಡರ್ ರೇಟೆಡ್ ದಂತಕಥೆ. ಈ ನಟ ಎಂತಹದ್ದೇ ಪಾತ್ರಗಳನ್ನು ಆರಾಮಾಗಿ ತರಬಹುದು” ಇದು ವಿಷ್ಣುವರ್ಧನ್ ಅಭಿಮಾನಿಯ ಆಕ್ರಂದನ.
ವಿಚಿತ್ರವೇನು ಗೊತ್ತೇ.. ಇಲ್ಲಿ ಡಾ.ರಾಜ್ ಅವರನ್ನು ಕೂಡಾ ಎಳೆದು ತರಲಾಗಿದೆ. ನಿಮಗೆ ಹಳೆಯ ಸಿನಿಮಾ ನೋಡಿದ್ರೆ, ನೆನಪಿದ್ದರೆ.. ಇವೆಲ್ಲವೂ ಸಿಗುತ್ತೆ. ಅಂದರೆ ಡಾ.ರಾಜ್ ಅವರು ಬದುಕಿದ್ದಾಗಲೇ ಲೆಜೆಂಡ್ ಆಗಿದ್ದವರು. ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್, ಶಂಕರ್ ನಾಗ್ ಸೇರಿದಂತೆ ಎಲ್ಲ ಹೀರೋಗಳು ತಮ್ಮ ತಮ್ಮ ಚಿತ್ರಗಳಲ್ಲಿ ಒಂದಲ್ಲ ಒಂದು ಚಿತ್ರದಲ್ಲಿ ಡಾ.ರಾಜ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ಧಾರೆ. ಆದರೆ.. ಅಭಿಮಾನಿಗಳಿಗೆ ಅತ್ತ ಇತಿಹಾಸವೂ ಗೊತ್ತಿಲ್ಲ. ಅಭಿಮಾನವೂ ಗೊತ್ತಿಲ್ಲ. ಒಬ್ಬ ನಟನ ಮೇಲೆ ಅಭಿಮಾನ ಎಂದರೆ, ಇನ್ನೊಬ್ಬ ನಟನ ಮೇಲೆ ದುರಭಿಮಾನ ಇಟ್ಟುಕೊಳ್ಳೋದಲ್ಲ ಎಂಬ ಕಾಮನ್ ಸೆನ್ಸ್ ಕೂಡಾ ಇಲ್ಲ. ಇಂತಹ ಕೊಳಕು ಮನಸ್ಸಿನವರನ್ನು ಅಭಿಮಾನಿಗಳು ಎಂದು ಕರೆಯುವುದಾದರೂ ಹೇಗೆ..?



