ಕನ್ನಡದ ಬಹುನಿರೀಕ್ಷಿತ ಸಿನಿಮಾ 45. ಈ 45 ಮೆರವಣಿಗೆಗೆ ಡೇಟ್ ಫಿಕ್ಸ್ ಆಗಿರೋದು ಡಿಸೆಂಬರ್ ಅಂತ್ಯಕ್ಕೆ. ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ಸಿನಿಮಾ 45. ಪ್ರೀತ್ಸೆ, ಲವಕುಶ ಹಾಗೂ ಕಬ್ಜ ಚಿತ್ರದ ನಂತರ ಶಿವಣ್ಣ ಮತ್ತು ಉಪ್ಪಿ ಒಟ್ಟಿಗೇ ನಟಿಸಿದ್ದಾರೆ. ಇನ್ನು ರಾಜ್ ಬಿ ಶೆಟ್ಟಿಯವರಿಗೆ ತಮ್ಮ ಇಷ್ಟದ ನಟರ ಜೊತೆ ನಟಿಸಿರುವ ಚಿತ್ರವೂ 45. ಇನ್ನು ಮ್ಯೂಸಿಕ್ ಸೆನ್ಸೇಷನ್ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರ 45.
ತ್ರಿಮೂರ್ತಿಗಳ ಸಂಗಮ ಇರುವ ಚಿತ್ರದಲ್ಲಿ ನಟಿಸುತ್ತಿರುವ ಇನ್ನೊಬ್ಬ ನಟಿ ಕೌಸ್ತುಭಮಣಿ. ನನ್ನರಸಿ ರಾಧೆ ಸೀರಿಯಲ್ ಖ್ಯಾತಿಯ ನಟಿ. ಸಿನಿಮಾ ಶುರುವಾದಾಗ ಮದುವೆಯಾದ ಕೌಸ್ತುಭ ಮಣಿ, ರಿಲೀಸ್ ಆಗುವುದಕ್ಕೂ ಮೊದಲೇ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಕಳೆದ ವರ್ಷವಷ್ಟೇ ಸಿದ್ಧಾಂತ್ ಸತೀಶ್ ಎಂಬುವರನ್ನ ನಟಿ ಕೌಸ್ತುಭ ಮಣಿ ಮದುವೆಯಾಗಿದ್ದರು.
ಇನ್ನು ಚಿತ್ರತಂಡ ಬಹಳಷ್ಟು ವಿಷಯಗಳನ್ನು ಹೇಳಿಕೊಂಡಿಲ್ಲ. ಆದರೆ.. ಸಿನಿಮಾದ ಗ್ರಾಫಿಕ್ಸ್ ಮೇಲೆ ಭಾರೀ ಬಂಡವಾಳ ಹೂಡಲಾಗಿದೆ. 45 ಚಿತ್ರದಲ್ಲಿ ಶಿವಣ್ಣ ಬಿಟ್ಟರೆ.. ಉಪ್ಪಿ, ರಾಜ್ ಬಿ ಶೆಟ್ಟಿ ಕೂಡಾ ಪಳಗಿದ ನಿರ್ದೇಶಕರೇ. ಚಿತ್ರದಲ್ಲಿ ಅರ್ಧಕ್ಕರ್ಧ ಕಥೆಯಲ್ಲಿ ಗ್ರಾಫಿಕ್ಸ್ ಪ್ರಧಾನವಾಗಿದೆಯಂತೆ. ಹೀಗಾಗಿಯೇ.. ನಿರ್ಮಾಪಕ ರಮೇಶ್ ರೆಡ್ಡಿ, ಚಿತ್ರಕ್ಕೆ ಅದ್ಧೂರಿಯಾಗಿಯೇ ಬಂಡವಾಳ ಹಾಕಿದ್ದಾರೆ. ಇದೀಗ ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆಗಸ್ಟ್ 15ರಂದು ತೆರೆಕಾಣಬೇಕಿದ್ದ ’45’ ಸಿನಿಮಾವು ಈಗ ಡಿಸೆಂಬರ್ 25ರಂದು ತೆರೆಗೆ ಬರಲಿದೆ. 45, ಕೇವಲ ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ರಿಲೀಸ್ ಆಗಲಿದೆ.
ʻʻಕೆನಡಾದಲ್ಲಿ ನಮ್ಮ ಚಿತ್ರದ ವಿಎಫ್ಎಕ್ಸ್ ಕೆಲಸ ನಡೆಯುತ್ತಿದೆ. ನಮ್ಮ ಚಿತ್ರದಲ್ಲಿ ಸಿಜಿ ವರ್ಕ್ ಮಹತ್ವದ ಪಾತ್ರ ವಹಿಸಲಿದೆ. ಚಿತ್ರದಲ್ಲಿ 40% ಗ್ರಾಫಿಕ್ ಇರುತ್ತದೆ. ಕೆನಡಾದ ಮಾರ್ಜ್ ಸಂಸ್ಥೆಯಲ್ಲಿ ಸಾಕಷ್ಟು ನುರಿತ ಹಾಲಿವುಡ್ ತಂತ್ರಜ್ಞರು ವಿಎಫ್ಎಕ್ಸ್ ಕೆಲಸ ಮಾಡುತ್ತಿದ್ದಾರೆʼʼ ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
ಡಿಸೆಂಬರ್ 25 ರಂದು ’45’ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಡಿ.25ರಂದು ಕ್ರಿಸ್‌ಮಸ್ ಹಬ್ಬದ ರಜೆ ಕೂಡ ಇರುತ್ತದೆ. ಹಾಗಾಗಿ, ಆ ದಿವಸ ನಮ್ಮ ಚಿತ್ರವನ್ನು ಬಿಡುಗಡೆ ರಿಲೀಸ್ ಮಾಡುತ್ತಿದ್ದೇವೆ ಎಂದಿರುವ ನಿರ್ಮಾಪಕ ರಮೇಶ್ ರೆಡ್ಡಿಯವರೇ.. ನನಗೆ ತಿಳಿದಿರುವ ಹಾಗೆ ಈವರೆಗೂ ಕನ್ನಡದ ಯಾವುದೇ ಸಿನಿಮಾದಲ್ಲೂ ಇಷ್ಟೊಂದು ಗ್ರಾಫಿಕ್ ವರ್ಕ್ ಇಲ್ಲ. ನಾವು ಬೇಕೆಂದೇ ಸಿಜಿ ವರ್ಕ್ ಮಾಡಿಸುತ್ತಿಲ್ಲ. ನಮ್ಮ ಸಿನಿಮಾದ ಕಥೆ ಅದನ್ನ ಬೇಡುತ್ತದೆ. ಯಾವುದೇ ಕೊರತೆ ಆಗದಂತೆ ಸಿನಿಮಾ ನಿರ್ಮಾಣ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮಾರ್ಜ್ ಸಂಸ್ಥೆ ಕೆನಡಾ ಮೂಲದ್ದಾಗಿದ್ದು ಈ ಸಂಸ್ಥೆಯ ಮುಖ್ಯ ತಂತ್ರಜ್ಞ ಯಶ್ ಗೌಡ ಸಹ ಈ ಬಗ್ಗೆ ಮಾತನಾಡಿದ್ದು, ‘45’ ನಮ್ಮ ಸಂಸ್ಥೆ ವಿಎಫ್ಎಕ್ಸ್ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಆಗಿದೆ. ಕತೆಯಲ್ಲಿ ವಿಎಫ್ಎಕ್ಸ್ಗೆ ಮಹತ್ವದ ಪಾತ್ರ ಇರುವ ಕಾರಣದಿಂದಾಗಿ ಹೆಚ್ಚಿನ ಜಾಗೃತೆಯಿಂದ ಕೆಲಸ ನಡೆಯುತ್ತಿದೆ. ಸೆಪ್ಟೆಂಬರ್ 16ರ ಒಳಗೆ ಸಿನಿಮಾದ ಎಲ್ಲ ವಿಎಫ್ಎಕ್ಸ್ ಕಾರ್ಯ ಪೂರ್ಣಗೊಳ್ಳಲಿದೆ, ಅದಾದ ಒಂದು ತಿಂಗಳಲ್ಲಿ ಇನ್ನೊಂದಿಷ್ಟು ಕೆಲಸಗಳು ಇರಲಿವೆ. ಸಿನಿಮಾದ ಬಿಡುಗಡೆ ತಡವಾದರೂ ಸಿನಿಮಾದ ಗುಣಮಟ್ಟ ಅತ್ಯದ್ಭುತವಾಗಿರಲಿದೆ’ ಎಂದಿದ್ದಾರೆ.



