ಕರುನಾಡ ಚಕ್ರವರ್ತಿ ಶಿವ ರಾಜ್ʻಕುಮಾರ್. ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ.ಶೆಟ್ಟಿ. ಮೂವರೂ ನಟಿಸುತ್ತಿರುವ ಸಿನಿಮಾ 45. ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಡೈರೆಕ್ಟರ್ ಆಗಿದ್ಧಾರೆ ಗಾಳಿಪಟ 2 ಖ್ಯಾತಿಯ ರಮೇಶ್ ರೆಡ್ಡಿ ಪ್ರೊಡ್ಯೂಸರ್. ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರೋ ಅರ್ಜುನ್ ಜನ್ಯ, ತಮ್ಮ ಮೊದಲ ಚಿತ್ರದಲ್ಲೇ ಇಬ್ಬರು ನಿರ್ದೇಶಕರಿಗೆ ಹಾಗೂ 125+ ಚಿತ್ರಗಳಲ್ಲಿ ನಟಿಸಿದ ನಟನಿಗೆ ನಿರ್ದೇಶನ ಮಾಡುತ್ತಿರುವುದೇ ವಿಶೇಷ.
ಇದಷ್ಟೇ ಅಲ್ಲದೆ ಸಂಗೀತ ನಿರ್ದೇಶನ ಮಾಡಿಕೊಂಡು, ಸಿನಿಮಾ ನಿರ್ದೇಶನ ಮಾಡಿದ ಸಾಧು ಕೋಕಿಲ, ವಿ.ಮನೋಹರ್, ಹರಿಕೃಷ್ಣ ಅವರ ಲಿಸ್ಟಿಗೆ ಸೇರಿದ್ಧಾರೆ. ಇನ್ನು ವಿ.ರವಿಚಂದ್ರನ್, ಎಸ್.ನಾರಾಯಣ್, ಟೈಗರ್ ಪ್ರಭಾಕರ್ ಮೊದಲಾದವರು ಕೂಡಾ ಸಂಗೀತ ನಿರ್ದೇಶಕರಾಗಿದ್ದಾರಾದರೂ, ವೃತ್ತಿಯನ್ನು ಸಂಗೀತ ನಿರ್ದೇಶನದಿಂದಲೇ ಆರಂಭಿಸಿದವರಲ್ಲ.
ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಹಾಡೊಂದನ್ನು ಅದ್ಧೂರಿಯಾಗಿ ಅರ್ಜುನ್ ಜನ್ಯ ಸೆರೆಹಿಡಿದಿದ್ದಾರೆ.ಈ ಹಾಡಿನ ಶೂಟಿಂಗ್ʻನಲ್ಲೇ ಒಂದು ಸ್ಪೆಷಲ್ ದಾಖಲೆ ಬರೆಯಲಾಗಿದೆ.
ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಈ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದುಮೋಕೋಬೋಲ್ಟ್, ರೋಪ್ ಕ್ಯಾಮೆರಾ ಸೇರಿದಂತೆ ಇನ್ನೂ ಹಲವು ದುಬಾರಿ ಸಲಕರಣೆಗಳ ಬಳಸಿ ಈ ದೃಶ್ಯವನ್ನು ಚಿತ್ರಿಸಿದ್ದಷ್ಟೇ ಅಲ್ಲ, ಈ ಒಂದು ಸನ್ನಿವೇಶದ ಚಿತ್ರೀಕರಣಕ್ಕಾಗಿ 418 ಕ್ಕೂ ಹೆಚ್ಚು ಕಲರ್ ಬಾಂಬ್ ಗಳನ್ನು ಬಳಸಿರುವುದು ದಾಖಲೆ ಎನ್ನಲಾಗಿದೆ. ಇದಕ್ಕೆ ಯಾವುದೇ ಅಧಿಕೃತ ದಾಖಲೆಗಳಿಲ್ಲ ಆದರೆ ಇಷ್ಟೊಂದು ಅದ್ಧೂರಿತನ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು. ಅದೂ ಒಂದು ಸನ್ನಿವೇಶಕ್ಕೆ ಈ ಪರಿ ಖರ್ಚು ಮಾಡುತ್ತಿರುವುದು ವ್ಹಾವ್ ಎನ್ನಿಸುವಂತಿದೆ.
ಸತ್ಯ ಹೆಗಡೆ ಅವರ ಛಾಯಾಗ್ರಹಣ ಹಾಗೂ ಚಿನ್ನಿಪ್ರಕಾಶ್ ಅವರು ಕೊರಿಯೋಗ್ರಫಿಯಲ್ಲಿ ಸನ್ನಿವೇಶ ಮೂಡಿಬಂದಿದೆ. ಕಬ್ಜ ಚಿತ್ರದ ನಂತರ ಉಪೇಂದ್ರ ಅವರ ಚಿತ್ರದಲ್ಲಿ ಮತ್ತೊಮ್ಮೆ ಶಿವಣ್ಣ ನಟಿಸುತ್ತಿದ್ಧಾರೆ. ಇನ್ನು ರಾಜ್ ಬಿ.ಶೆಟ್ಟಿಯವರಿಗೆ ಶಿವಣ್ಣನ ಜೊತೆ ನಟನೆ ಇದೇ ಮೊದಲು. ಉಪೇಂದ್ರ ಮತ್ತು ರಾಜ್ ಬಿ.ಶೆಟ್ಟಿ ಎಂಬ ಇಬ್ಬರು ಖ್ಯಾತ ನಿರ್ದೇಶಕರನ್ನು ನಿರ್ದೇಶಿಸುತ್ತಿರುವುದು ಇದೇ ಮೊದಲ ಬಾರಿ ಆಕ್ಷನ್ ಕಟ್ ಹೇಳುತ್ತಿರುವ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ.



