ನಟರನ್ನು ಇಂದ್ರ ಚಂದ್ರ ಎಂದೆಲ್ಲ ನಿರ್ದೇಶಕರು ಹೊಗಳುವುದು, ಕಟ್ಟರ್ ಅಭಿಮಾನಿಗಳೂ ನಾಚುವಂತೆ ಚಿತ್ರದ ನಿರ್ದೇಶಕರೇ ಜೈಜೈ ಎನ್ನುವುದು ಇತ್ತೀಚೆಗೆ ಹೊಸದೇನಲ್ಲ. ಆ ನಟರ ವಯಸ್ಸು, ಅನುಭವ ಕೂಡಾ ಹೆಚ್ಚಿದ್ದರೆ ಅದನ್ನು ಜನ ಒಪ್ಪಿಕೊಂಡೂ ಬಿಡುತ್ತಾರೆ. ಈಗ ತಮ್ಮ ಚಿತ್ರದ ಮೂವರು ನಾಯಕ ನಟರನ್ನು ಇಂದ್ರ ಚಂದ್ರ ಬಿಡಿ, ಬ್ರಹ್ಮ ವಿಷ್ಣು ಮಹೇಶ್ವರರಿಗೆ ಹೋಲಿಸಿದ್ದಾರೆ ನಿರ್ದೇಶಕ ಅರ್ಜುನ್ ಜನ್ಯ. ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ 45 ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಅರ್ಜುನ್ ಜನ್ಯ ಅವರಿಂದ ಹೊಗಳಿಸಿಕೊಂಡಿರುವುದು ಹಿರಿಯ ನಟ ಶಿವರಾಜ್ ಕುಮಾರ್, ನಟ, ನಿರ್ದೇಶಕರಾಗಿರುವ ರಿಯಲ್ ಸ್ಟಾರ್ ಉಪೇಂದ್ರ, ಮೊಟ್ಟೆ ಸ್ಟಾರ್ ರಾಜ್ ಬಿ ಶೆಟ್ಟಿ.
ಅರ್ಜುನ್ ಜನ್ಯ ಅವರು ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಈ ಮೂವರು ಬ್ರಹ್ಮ ವಿಷ್ಣು ಮಹೇಶ್ವರ ಇದ್ದ ಹಾಗೆ ಎಂದು ಹೊಗಳಿ, 45 ಚಿತ್ರ ಒಂದು ದೇವಸ್ಥಾನ, ದೇವಸ್ಥಾನ ಕಟ್ಟಿದ್ದು ರಮೇಶ್ ರೆಡ್ಡಿ. ಛಾಯಾಗ್ರಾಹಕ ಸತ್ಯ ಹೆಗಡೆ ಪ್ರಧಾನ ಪುರೋಹಿತ ಎಂದು ಹೊಗಳಿದ್ದಾರೆ. ಚಿತ್ರಕ್ಕೆ 106 ದಿನಗಳ ಚಿತ್ರೀಕರಣ ನಡೆದಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
ಅರ್ಜುನ್ ಜನ್ಯ ಅವರ ಬಗ್ಗೆ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿ ಗೆದ್ದವರು. ನಿರ್ದೇಶಕರಾಗಿ ಮೊದಲ ಚಿತ್ರ ಹೇಗೆ ಮಾಡುತ್ತಾರೆ ಅನ್ನೋ ಆತಂಕ ನನಗೂ ಇತ್ತು. ಹಲವರು ಈ ಬಗ್ಗೆ ನನ್ನ ಬಳಿ ಮಾತನಾಡಿದ್ದರು. ಆದರೆ ಚಿತ್ರ ಹೊರಬಂದ ರೀತಿ ನನಗೆ ಖುಷಿ ಕೊಟ್ಟಿದೆ. ಈ ಚಿತ್ರ ಖಂಡಿತಾ ಭಾರತದಾದ್ಯಂತ ಹೆಸರು ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರ್ಜುನ್ ಜನ್ಯ, ಕನ್ನಡದ ಬಹುಬೇಡಿಕೆಯ ಸಂಗೀತ ನಿರ್ದೇಶಕ. ತಮ್ಮ ಸಂಗೀತದಿಂದಲೇ ಚಿತ್ರಕ್ಕೆ ಭರ್ಜರಿ ಓಪನಿಂಗ್ ಕೊಡಿಸುವ ಶಕ್ತಿ ಅರ್ಜುನ್ ಜನ್ಯ ಅವರಿಗೆ ಇದೆ. ಅಂತಹ ಖ್ಯಾತಿ ಇರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಇದೀಗ 45 ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಮೊದಲ ಚಿತ್ರದಲ್ಲೇ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿಯಂತಹ ತಾರೆಗಳನ್ನು ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ, ಆ ತ್ರಿಮೂರ್ತಿಗಳ ಹೊಗಳಿಕೆಗೂ ಪಾತ್ರರಾಗಿದ್ದಾರೆ. ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಕೂಡಾ ಖುಷ್ ಖುಷಿಯಾಗಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.
ಶಿವರಾಜ್ ಕುಮಾರ್ ಪ್ರಕಾರ, ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ ಎಂದು ಹೇಳೋಕೇ ಆಗ್ತಿಲ್ಲವಂತೆ. ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅದ್ದೂರಿಯಾಗಿ ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ ಎನ್ನುವ ಶಿವಣ್ಣ, ಅವರ ಪ್ರಕಾರ ಚಿತ್ರ ಹಾಗೂ ಅದರಲ್ಲಿ ಬರುವ ರವಿವರ್ಮರ ಸಾಹಸ ನಿರ್ದೇಶನ ಇಡೀ ದೇಶದ ಗಮನ ಸೆಳೆಯುತ್ತದೆ ಎನ್ನುವ ವಿಶ್ವಾಸ ಇದೆ.
ಇನ್ನು ಉಪೇಂದ್ರ ಅವರಿಗೆ ಅರ್ಜುನ್ ಜನ್ಯ ಕಥೆಯನ್ನು ಅನಿಮೇಷನ್ ಮೂಲಕ ಹೇಳಿರುವುದು ಥ್ರಿಲ್ ಕೊಟ್ಟಿದೆ. ಇಂಥದ್ದನ್ನೆಲ್ಲ ನಾನು ಹಾಲಿವುಡ್‌ನಲ್ಲಿ ಕೇಳಿದ್ದೆ. ಆದರೆ ಅರ್ಜುನ್ ಜನ್ಯ ಅದನ್ನು ಕನ್ನಡದಲ್ಲೇ ಮಾಡಿ ತೋರಿಸಿದ್ದಾರೆ. ಅನಿಮೇಷನ್ ಮೂಲಕ ಕಥೆ ಹೇಳಿದ ರೀತಿಯಲ್ಲೇ ಸಿನಿಮಾವನ್ನೂ ಮಾಡಿದ್ದಾರೆ ಎಂದು ಹೊಗಳಿದ್ದಾರೆ.
ಶಿವಣ್ಣ 125+ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ. ಇನ್ನು ಉಪೇಂದ್ರ ತಮ್ಮ ನಿರ್ದೇಶನದ ಪ್ರತೀ ಚಿತ್ರಗಳಲ್ಲೂ ಇಡೀ ಭಾರತದ ಗಮನ ಸೆಳೆದ ಡಿಫರೆಂಟ್ ಡೈರೆಕ್ಟರ್. ಇಬ್ಬರು ಸೀನಿಯರ್ಸ್ ಹೊಗಳಿಕೆ ಅರ್ಜುನ್ ಜನ್ಯ ಅವರಿಗೆ ಖಂಡಿತಾ ಖುಷಿ ಕೊಟ್ಟಿರುತ್ತದೆ.
ಇನ್ನು ಪ್ರಸ್ತುತ ವಿಭಿನ್ನ ಚಿತ್ರಗಳ ನಟನೆ, ನಿರ್ದೇಶನದ ಮೂಲಕ ಗಮನ ಸೆಳೆಯುತ್ತಿರುವ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡಾ 45 ಕನ್ನಡಿಗರು ಹೆಮ್ಮೆಯ ಪಡುವ ಸಿನಿಮಾ ಎಂದು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ 45 ಸಿನಿಮಾ ಬಗ್ಗೆ ಪ್ರತಿಯೊಬ್ಬರೂ ಖುಷಿಯಾಗಿದ್ದಾರೆ. ಶಿವಣ್ಣ ಮತ್ತು ಉಪೇಂದ್ರ ಪ್ರೀತ್ಸೆ ಮತ್ತು ಲವಕುಶ ನಂತರ ಮತ್ತೊಮ್ಮೆ ಒಟ್ಟಿಗೇ ನಟಿಸಿದ್ದಾರೆ. ಶಿವಣ್ಣ ಜೊತೆ ನಟಿಸೋದಕ್ಕೆ ನಾನು ಯಾವಾಗಲೂ ರೆಡಿ ಎಂದು ಉಪೇಂದ್ರ ಹೇಳಿದರೆ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿದ್ದು ಸುಂದರ ಅನುಭವ. ಅವರು ಮುಂದು, ಇವರು ಮುಂದು ಅಂತ ಇಲ್ಲ. ಇಲ್ಲಿ ಎಲ್ಲರು ಒಂದೇ ಎಂದಿದ್ದಾರೆ ಶಿವರಾಜ್ ಕುಮಾರ್. ಶಿವಣ್ಣ ಚಿತ್ರಗಳನ್ನು ನೋಡುತ್ತಾ ವಿಷಲ್ ಹೊಡೆಯುತ್ತಿದ್ದೆ. ಉಪೇಂದ್ರ ಅವರ “A” ಚಿತ್ರದ ಪೋಸ್ಟರ್‌ನ್ನು ಬೆರಗಾಗಿ ನೋಡುತ್ತಿದ್ದೆ. ಅವರಿಬ್ಬರ ಅಭಿಮಾನಿಯಾಗಿರುವ ನಾನು, ಇಂದು ಅವರ ಜೊತೆಗೆ ನಟಿಸಿದ್ದೇನೆ. ಅದು ನನ್ನ ಭಾಗ್ಯ ಎಂದಿದ್ದಾರೆ ರಾಜ್ ಬಿ ಶೆಟ್ಟಿ.
ಈ ಎಲ್ಲ ಭಾಗ್ಯವಂತರು ಎಂತಹ ಚಿತ್ರವನ್ನು ಕೊಟ್ಟಿದ್ದಾರೆ ಅನ್ನೋದು ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತಿಳಿಯಲಿದೆ.



