ಚಿತ್ರರಂಗ ಎನ್ನುವುದು ಒಂದು ಕುಟುಂಬ ಇದ್ದಂತೆ ಎನ್ನುವುದು ಡಾ.ರಾಜ್, ವಿಷ್ಣು, ಅಂಬರೀಷ್ ಮೊದಲಾದವರಿಂದ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯ. ಆ ಸಂಪ್ರದಾಯ, ಪದ್ಧತಿ ಇತ್ತೀಚೆಗೆ ಯಾಕೋ ಮರೆಯಾಗಿದೆ ಎನ್ನುವ ವಾತಾವರಣ ಇತ್ತು. ಮುಲಾಜಿಲ್ಲದೆ ಹೇಳಬೇಕು ಅಂದರೆ ದೊಡ್ಮನೆಯ ವಿರುದ್ಧ ದರ್ಶನ್ ಅಭಿಮಾನಿಗಳ ತಂಡ, ಸುದೀಪ್ ವಿರುದ್ಧ ದರ್ಶನ್ ಅಭಿಮಾನಿಗಳ ತಂಡ, ಧ್ರುವ ಸರ್ಜಾ ವಿರುದ್ಧ ದರ್ಶನ್ ಫ್ಯಾನ್ಸ್.. ಹೀಗೆ ಒಂದು ಕೆಟ್ಟ ಸಂಪ್ರದಾಯವಂತೂ ಆರಂಭವಾಗಿತ್ತು.
ಶಿವಣ್ಣ, ಪುನೀತ್ ಬಿಟ್ಟರೆ ಉಳಿದವರಿಂದ ಬಾಯ್ತುಂಬಾ ಒಳ್ಳೆ ಮಾತುಗಳು ಬರುತ್ತಿದ್ದರೂ, ಕೊನೆಯದಾಗಿ ಒಂದು ಟಾಂಟ್ ಕೊಡುತ್ತಲೇ ಮಾತು ಮುಗಿಸುತ್ತಿದ್ದರು. ಅಗತ್ಯ ಇಲ್ಲದಿದ್ದರೂ ಮಾತನಾಡಿ ಮಾತನಾಡಿ ನಾನೊಂದು ತೀರ ಅವರೊಂದು ತೀರ ಎನ್ನುವಂತೆ ಬದುಕುತ್ತಿದ್ದರು. ಸಮಸ್ಯೆ ದರ್ಶನ್ ಅವರದ್ದಾ.. ದರ್ಶನ್ ಅಭಿಮಾನಿಗಳದ್ದಾ.. ಅರ್ಥವಾಗದ ವಿಷಯ. ಆದರೆ ಈಗ ಮ್ಯಾಕ್ಸ್ ಗೆದ್ದಿರುವ ಹೊಸ್ತಿಲಲ್ಲಿ ನಟ ಸುದೀಪ್ ಒಂದೊಳ್ಳೆ ಕೆಲಸಕ್ಕೆ ಕೈ ಹಾಕಿದ್ದಾರೆ.
ಏಕೆಂದರೆ.. ಮ್ಯಾಕ್ಸ್ ಗೆದ್ದಿದೆ. ಹಾಗೆ ನೋಡಿದರೆ ಕಿಚ್ಚ ಸುದೀಪ್ ಅವರ ಈ ಹಿಂದಿನ ಚಿತ್ರಗಳಂತೆ ದೊಡ್ಡ ದೊಡ್ಡ ಪ್ಲಾನ್ ಮಾಡಿ ಬಿಡುಗಡೆಯಾದ ಚಿತ್ರವಲ್ಲ ಮ್ಯಾಕ್ಸ್. ಸಡನ್ ಸಡನ್ ಆಗಿ ರೆಡಿಯಾಗಿ ರಿಲೀಸ್ ಆಗಿ ಹಿಟ್ ಆಗಿರೋ ಸಿನಿಮಾ. ಆದರೆ ಎಂದಿನಂತೆ ಈ ಚಿತ್ರದಲ್ಲೂ ವಿವಾದಗಳು ಬೆನ್ನು ಹತ್ತಿದಾಗ, ಅವುಗಳಿಗೆ ಉತ್ತರ ಕೊಡುತ್ತಲೇ ಒಂದೊಳ್ಳೆ ಕೆಲಸ ಆರಂಭಿಸಿದ್ದಾರೆ ಕಿಚ್ಚ ಸುದೀಪ್.
ವಿವಾದ ಶುರುವಾಗಿದ್ದೇ.. ‘ಮ್ಯಾಕ್ಸ್’ ಸಿನಿಮಾ ಯಶಸ್ಸು ಕಂಡ ಬಳಿಕ ಕತ್ತರಿಸಿದ ಕೇಕ್ನಲ್ಲಿ ‘ಬಾಸಿಸಂ ಕಾಲ ಮುಗಿಯಿತು’ ಎಂದು ಬರೆಯುವ ಮೂಲಕ. ದರ್ಶನ್ ಅಭಿಮಾನಿಗಳ ಪ್ರಕಾರ ದರ್ಶನ್ ಹೊರತುಪಡಿಸಿ ಇನ್ಯಾರನ್ನೂ ಬಾಸ್ ಎಂದು ಕರೆಯುವಂತಿಲ್ಲ. ಹೀಗಾಗಿ ಕಾಂಟ್ರವರ್ಸಿ ಸೃಷ್ಟಿಯಾಯ್ತ. ಇದಕ್ಕೆಲ್ಲ ಪ್ರತಿಕ್ರಿಯೆ ನೀಡಿರುವ ಸುದೀಪ್ ʻಯಶ್, ದರ್ಶನ್, ಧ್ರುವ, ಉಪ್ಪಿ, ಶಿವಣ್ಣ ಎಲ್ಲರೂ ಸೇರಿದರೆ ಕನ್ನಡ ಚಿತ್ರರಂಗ. ದರ್ಶನ್ ಫ್ಯಾನ್ಸ್ ವಿಷಯ ಬಂದಾಗ ನಾನೇ ಹೇಳಿದ್ದೆ. ದರ್ಶನ್ ಫ್ಯಾನ್ಸ್ಗೆ ಬೈಯ್ಯಬೇಡಿ. ಅವರು ನೋವಲ್ಲಿ ಇದ್ದಾರೆ ಅಂತ. ಅಭಿಮಾನಿಗಳು ಯಶ್ ಬಾಸ್, ಧ್ರುವ ಬಾಸ್, ಉಪ್ಪಿ ಬಾಸ್, ಶಿವಣ್ಣ ಬಾಸ್ ಅನ್ನೋದಿಲ್ವಾ? ಎಲ್ಲರಿಗೂ ಅವರವರ ಅಭಿಮಾನಿಗಳು ಹಾಗೆಯೇ ಕರೆಯುತ್ತಾರೆʼʼ ಎಂದಿದ್ದಾರೆ.
ನನಗೂ ದರ್ಶನ್ ನಡುವೆ ಏನೂ ಇಲ್ಲ. ಅವರೂ ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ನಾನು ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ. ಪ್ರತಿ ಕಲಾವಿದರ ಪರಿಶ್ರಮ ಹಾಕಿನೇ ಒಂದು ಹಂತಕ್ಕೆ ತಲುಪಿರುತ್ತಾರೆ. ನನ್ನ ಅಭಿಮಾನಿಗಳು ಹೋಗಿ ದರ್ಶನ್ ಸಿನಿಮಾ ನೋಡುತ್ತಾರೆ. ಅವರ ಅಭಿಮಾನಿಗಳು ಬಂದು ನನ್ನ ಸಿನಿಮಾ ನೋಡುತ್ತಾರೆ. ದರ್ಶನ್ ಫ್ಯಾನ್ ಬಗ್ಗೆ ಈ ಮೊದಲೇ ಹೇಳಿದ್ದೆ. ಅವರಿಗೆ ಏನ್ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಅವರೆಲ್ಲಾ ನೋವಲ್ಲಿದ್ದಾರೆ. ಕೆಟ್ಟ ಅಹಂಕಾರ ನಮ್ಮಲ್ಲಿದೆ ಎಂದು ಅಂದುಕೊಂಡಿರುವುದೇ ತಪ್ಪು ಅಲ್ವಾ?. ಹಿರಿಯರು ಸಿನಿಮಾ ರಂಗವನ್ನು ಬೆಳೆಸಿ ನಮ್ಮ ಕೈಯಲ್ಲಿ ಕೊಟ್ಟು ಹೋಗಿದ್ದಾರೆ. ನಾವು ಇನ್ನಷ್ಟು ಬೆಳೆಸಿ ಅದನ್ನು ಮುಂದಿನ ಜನರೇಷನ್ಗೆ ಕೊಡಬೇಕು ಎಂದಿದ್ದಾರೆ.
ಇದು ಹೊಸದೇನಲ್ಲ. ಡಾ.ರಾಜ್ ಚಿತ್ರರಂಗದಲ್ಲಿದ್ದಾಗ ದೊಡ್ಮನೆಯಲ್ಲಿ ವಿವಾದಗಳು ಇತ್ಯರ್ಥವಾಗುತ್ತಿತ್ತು. ಎಷ್ಟೋ ಸಮಸ್ಯೆಗಳು ಹೊರಜಗತ್ತಿಗೆ ಗೊತ್ತೇ ಆಗದಂತೆ ಬಗೆಹರಿಯುತ್ತಿತ್ತು. ಪಾರ್ವತಮ್ಮನವರು ಇರುವಾಗಲೂ ನಡೆಯುತ್ತಿತ್ತು. ಆದರೆ ಪಾರ್ವತಮ್ಮ, ತಮ್ಮ ಜವಾಬ್ದಾರಿಯನ್ನು ಅಂಬರೀಷ್ ಹೆಗಲಿಗೆ ವರ್ಗಾಯಿಸಿದ್ದರು. ವಿಷ್ಣುವರ್ಧನ್ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುತ್ತಲೇ ಇರಲಿಲ್ಲ. ಅಂಬರೀಷ್ ದೂರವಾದ ಮೇಲೆ ನಾಯಕತ್ವದ ಕೊರತೆ ಕಾಡುತ್ತಿದೆ. ರವಿಚಂದ್ರನ್, ಶಿವಣ್ಣ ಅಂತಹವರು ನಾಯಕತ್ವ ವಹಿಸಿಕೊಳ್ಳುವುದಕ್ಕೆ ಮುಂದೆ ಬರುತ್ತಿಲ್ಲ. ಹಾಗೆ ನೋಡಿದರೆ, ಅವರೂ ಕೂಡಾ ಒಮ್ಮೊಮ್ಮೆ ಟಾರ್ಗೆಟ್ ಆಗುತ್ತಿದ್ದಾರೆ. ಹೀಗಾಗಿ, ಚಿತ್ರರಂಗವನ್ನು ಒಂದು ಕುಟುಂಬವನ್ನಾಗಿಸುವ ಹೊಣೆ ಬೇರೆಯವರದ್ದೇ. ಅದನ್ನು ಸುದೀಪ್ ಮಾಡಿದರೆ.. ಚಿತ್ರರಂಗ ದೊಡ್ಡ ಮಟ್ಟಕ್ಕೇರುವುದರಲ್ಲಿ ಅನುಮಾನ ಇಲ್ಲ.



