ಗಿಲ್ಲಿ ನಟ ಬಿಗ್ ಬಾಸ್ ಶೋ ಗೆಲ್ಲುತ್ತಿದ್ದಂತೆ ಒಂದು ಕಡೆ ಅಭಿಮಾನಿಗಳ ಜನಜಾತ್ರೆ. ಮತ್ತೊಂದೆಡೆ ಸೋತವರ ಟೀಕಾ ಪ್ರಹಾರ. ಒಂದು ಹಂತದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿನಟನ ವಿರುದ್ಧವೂ ಒಂದು ಟ್ರೆಂಡ್ ಕ್ರಿಯೇಟ್ ಆಗುವ ಹಂತದಲ್ಲಿ ʻನನ್ನ ವೋಟು ಗಿಲ್ಲಿಗೆʼ ಎಂಬ ಶಿವಣ್ಣನ ಹೇಳಿಕೆ ಇಡೀ ಆಟವನ್ನೇ ಬದಲಿಸಿದ್ದು ಸತ್ಯ. ಗೆದ್ದಾಯ್ತು.. ಗೆದ್ದ ಮೇಲೆ ಗಿಲ್ಲಿ ಶಿವಣ್ಣ ಮತ್ತು ಸುದೀಪ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಆದರೆ ಅಶ್ವಿನಿಯವರಲ್ಲಿನ ಆಕ್ರೋಶ ಮಾತ್ರ ಕಡಿಮೆಯಾಗಿಲ್ಲ. ಬಡವರ ಮನೆ ಹುಡುಗ ಎಂದು ಗೇಮ್ ಆಡಿ ಗೆದ್ದುಬಿಟ್ಟ ಎಂಬ ಸಿಟ್ಟು ಈಗಲೂ ಕಾಣುತ್ತಿದೆ.
ಬಿಗ್ ಬಾಸ್ ಶೋನಲ್ಲಿ ಗೆದ್ದ ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿಯೂ ಕೂಡಾ ಶಿವಣ್ಣನ ಕುರಿತು ಹೇಳಿಕೊಂಡಿದ್ದರು. ʻʻರಿಯಾಲಿಟಿ ಶೋನಲ್ಲಿ ಶಿವಣ್ಣ ನಾನು ನಿನ್ನ ಫ್ಯಾನ್ ಎಂದು ಹೇಳಿದ್ದರು. ನಾನು ಅವರ ಕಾಲಿನ ದೂಳಿಗೂ ಸಮ ಅಲ್ಲ. ಅಂತಹವರು ನಾನು ನಿನ್ನ ಫ್ಯಾನ್ ಎಂದಾಗ ಆಗಿದ್ದ ಫೀಲಿಂಗೇ ಬೇರೆ. ನನಗೆ ಆಗಲೇ ದೊಡ್ಡ ಅವಾರ್ಡ್ ಬಂದು ಆಗಿದೆʼʼ ಎಂದು ಹೇಳಿದ್ದರು ಗಿಲ್ಲಿ ನಟ. ಅಷ್ಟೇ ಅಲ್ಲ ನಟ ಶರಣ್ ಕೂಡಾ ಗಿಲ್ಲಿ ಜೊತೆಗೆ ಒಂದು ಸೆಲ್ಫಿ ಕೇಳಿ ನಾನು ನಿಮ್ಮ ಅಭಿಮಾನಿ ಎಂದಿದ್ದರು. ಬಿಗ್ ಬಾಸ್ ಗೆದ್ದ ಕೂಡಲೇ ಮಂಡ್ಯದ ಊರಿಗೆ ಹೋದ ಗಿಲ್ಲಿಗೆ ಅಭಿಮಾನಿಗಳು ಮುತ್ತಿಕೊಂಡು ಮೆರೆಸಿದ್ದಾರೆ. ಮೆರವಣಿಗೆ ಮಾಡಿದ್ದಾರೆ. ಅದು ಮುಗಿಯುತ್ತಿದ್ದಂತೆಯೇ ಗಿಲ್ಲಿ ನೇರವಾಗಿ ಹೋಗಿರೋದು ನಟ ಶಿವಣ್ಣ ಅವರ ಮನೆಗೆ.
ಬೆಂಗಳೂರಿನ ಶಿವಣ್ಣ ಮನೆಗೆ ಹೋದ ಗಿಲ್ಲಿ ನಟ ಬಿಗ್ ಬಾಸ್ ಅವಾರ್ಡ್ ಟ್ರೋಫಿಯನ್ನು ಶಿವಣ್ಣ ಅವರಿಗೆ ತೋರಿಸಿ ಶಿವಣ್ಣ-ಗೀತಕ್ಕನ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿರುವಾಗ ಶಿವಣ್ಣ ಶುಭ ಹಾರೈಸಿದ್ದರು. ಗಿಲ್ಲಿನೇ ಗೆಲ್ಲೋದು ಎಂದು ಹೇಳಿದ್ದರು. ಹೊರ ಬಂದ ಬಳಿಕ ಗಿಲ್ಲಿಗೆ ಈ ವಿಷಯ ಗೊತ್ತಾಗಿದೆ. ಹೀಗಾಗಿ, ತಕ್ಷಣವೇ ಶಿವಣ್ಣ ಹಾಗೂ ಗೀತಕ್ಕನ ಭೇಟಿ ಮಾಡಿದ್ದಾರೆ. ಸುದೀಪ್ ಅವರನ್ನೂ ಗಿಲ್ಲಿ ಭೇಟಿ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರೋವಾಗ ಎಲ್ಲ ವಿಷಯಗಳನ್ನು ಸುದೀಪ್ ಮನಬಿಚ್ಚಿ ಮಾತನಾಡಲು ಸಾಧ್ಯವಿಲ್ಲ. ಈ ಕಾರಣದಿಂದ ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಗಿಲ್ಲಿ ಹೋಗಿ ಸುದೀಪ್ನ ಭೇಟಿ ಮಾಡಿದ್ದಾರೆ. ಅಂದಹಾಗೆ ಬಿಗ್ ಬಾಸ್ ಗೆಲ್ಲುತ್ತಿದ್ದ ವೇಳೆ ಸುದೀಪ್ ತಾವು ಘೋಷಿಸಿದ್ದ 10 ಲಕ್ಷ ಅವಾರ್ಡ್ ಕೊಟ್ಟರೇ.. ಇಲ್ಲವೇ ಎನ್ನುವುದು ಖಚಿತವಾಗಿಲ್ಲ.
ಆದರೆ ಇತ್ತ ಅಶ್ವಿನಿ ಮತ್ತು ಧ್ರುವಂತ್ ಮಾತ್ರ ತಮ್ಮ ಪಟ್ಟು ಬಿಟ್ಟಿಲ್ಲ. ಗಿಲ್ಲಿ ನಟ ಬಡವ ಅಲ್ಲ. ಬಡವ ಎಂದು ತೋರಿಸಿಕೊಂಡು ಗೆದ್ದ. ಬಡವರ ಮಕ್ಕಳು ಗೆಲ್ಲಬೇಕು. ನಾಟಕ ಆಡುವವರು ಗೆಲ್ಲಬಾರದು ಎಂದೆಲ್ಲ ಹೆಳುವ ಮೂಲಕ ಕಾಂಟ್ರವರ್ಸಿ ಕೆಣಕಿದ್ದಾರೆ. ಇದಕ್ಕೆ ಉತ್ತರ ಕೊಟ್ಟಿರುವ ಗಿಲ್ಲಿ ನಟ ಅಶ್ವಿನಿ ಅವರು ಆ ರೀತಿ ಹೇಳೋಕೆ ಸಾಧ್ಯ ಇಲ್ಲ. ಅವರು ಅಷ್ಟು ಕೆಟ್ಟವರಲ್ಲ ಎಂದು ಉತ್ತರ ಕೊಟ್ಟಿದ್ದಾರೆ.
“ಗಿಲ್ಲಿಯನ್ನು ಬಡವ ಎಂದು ಕರೆಯುವುದು ತಪ್ಪು. ಬಡತನವನ್ನು ಯಾವತ್ತೂ ಸ್ಟ್ರಾಟಜಿ ಕಾರ್ಡ್ ಆಗಿ ಬಳಸಬಾರದು. ಬಹುಶಃ ಗಿಲ್ಲಿಯ ಈ ಗೆಟಪ್ ಮತ್ತು ಅವರ ಆಟ ಜನರಿಗೆ ಇಷ್ಟವಾಗಿರಬಹುದು” ಎನ್ನುವುದು ಅಶ್ವಿನಿ ವಾದವಾದರೆ.. 6ನೇ ಸ್ಥಾನಕ್ಕೆ ಜಾರಿದ ಧ್ರುವಂತ್ ಗಿಲ್ಲಿ ಎಲ್ಲಿಯೂ ತಾನು ಬಡವ ಎಂದು ಹೇಳಿಕೊಂಡಿಲ್ಲ. ಆದರೆ, ತೋರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನಾನು ಬರೀ ಬನಿಯನ್, ಚಡ್ಡಿ ಹಾಕೊಂಡು ಇದ್ರೆ ನೀವೇನು ಶ್ರೀಮಂತ ಅಂತೀರಾ? ಗಿಲ್ಲಿ ಬಳಿ ಎಂಜಿ ಹೆಕ್ಟರ್ ಗಾಡಿ ಇದೆ. ಹೊಸ ಗಾಡಿಗೆ 24 ಲಕ್ಷ ಮೇಲೆ ಇದೆ. ಸೆಕೆಂಡ್ ಹ್ಯಾಂಡ್ ಗಾಡಿ ಅಂದೇ ತಿಳಿದುಕೊಳ್ಳೋಣ 14 ಲಕ್ಷ ಇರಬಹುದು. ಅದರಲ್ಲಿ ಓಡಾಡ್ತಾರೆ ಆತ ಹೆಂಗೆ ಬಡವ ಆಗ್ತಾನೆ ಎಂದು ಪ್ರಶ್ನೆ ಮಾಡಿದ್ದಾರೆ ಧ್ರುವಂತ್.



