ವಿಜಯಲಕ್ಷ್ಮಿ ದರ್ಶನ್ ಕೆಟ್ಟ ಕಮೆಂಟ್ಸ್ ಕಿರಾತಕರ ವಿರುದ್ಧ ದೂರು ಕೊಟ್ಟ ಹಿನ್ನೆಲೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಕಿಚ್ಚ ಸುದೀಪ್ ಅಭಿಮಾನಿ ಎಂದು ಹೇಳಿಕೊಂಡ ಯುವಕನೊಬ್ಬ ಕ್ಷಮೆ ಕೇಳಿದ್ದಾನೆ. ಅತ್ತ ಶಿವರಾಜ್ ಕುಮಾರ್, ವಿಜಯಲಕ್ಷ್ಮಿ ಬೆಂಬಲಕ್ಕೆ ಬಂದಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಈ ರೀತಿಯದ್ದೊಂದು ದೂರು ಕೊಟ್ಟಿದ್ದಾರೆ ಎಂಬ ಮಾತಿಗೆ ಶಿವರಾಜ್ ಕುಮಾರ್ ಹೇಳಿರುವುದು ಇಷ್ಟು. ವಿಜಯಲಕ್ಷ್ಮಿ ದರ್ಶನ್ ಅವರೇ ಅಲ್ಲ, ಯಾವ ಮಹಿಳೆಯನ್ನು ನಿಂದಿಸಿದರೂ ತಪ್ಪು ತಪ್ಪೇ. ನನ್ನ ಅಭಿಮಾನಿಯೇ ಆಗಿರಲಿ, ಬೇರೊಬ್ಬ ನಟರ ಅಭಿಮಾನಿಗಳೇ ಆಗಿರಲಿ, ಮಹಿಳೆಯರನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು ಎಂದಿದ್ದಾರೆ. ʻʻಫ್ಯಾನ್ಸ್ ವಾರ್‌ನ್ನು ನಿಲ್ಲಿಸಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಎಲ್ಲ ಅಭಿಮಾನಿಗಳಲ್ಲೂ ನಾನು ಕೇಳಿಕೊಳ್ಳುತ್ತೇನೆ. ಒಬ್ಬರಿಂದ ಇನ್ನೊಬ್ಬರಿಗೆ ಕಿಡಿ ಹಾರಬಾರದು. ಅದು ತುಂಬಾ ಅಪಾಯಕಾರಿ. ಅಂಥ ಕಮೆಂಟ್ ಮಾಡಿದರೆ ಪೊಲೀಸ್ ಕೇಸ್ ಆಗುತ್ತದೆ. ಎಲ್ಲರಿಗೂ ಒಂದು ಫ್ಯಾಮಿಲಿ ಇರುತ್ತದೆ. ಯಾವ ಹೆಣ್ಣಿನ ಬಗ್ಗೆ ಆದರೂ ಕೆಟ್ಟ ಕಮೆಂಟ್ ಮಾಡುವುದು ತಪ್ಪು. ಮಹಿಳೆಯರನ್ನು ಗೌರವಿಸಬೇಕುʼʼ ಎಂದು ಬುದ್ದಿವಾದ ಹೇಳಿದ್ದಾರೆ ಶಿವರಾಜ್ ಕುಮಾರ್.
ರಮ್ಯಾ ಅವರಿಗೆ ಕೆಟ್ಟ ಕಮೆಂಟ್ಸ್ ಎದುರಾಗಿ, ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಬಹಿರಂಗವಾಗಿ ರಮ್ಯಾ ಬೆಂಬಲಕ್ಕೆ ಬಂದಿದ್ದ ಶಿವಣ್ಣ, ಈ ಬಾರಿ ವಿಜಯಲಕ್ಷ್ಮಿ ಅವರಿಗೂ ಸಪೋರ್ಟ್ ಮಾಡಿದ್ದಾರೆ. ʻʻಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾರ ಮನೆಯನ್ನೂ ಒಡೆಯೋಕೆ ಹೋಗಬಾರದು. ಯಾರ ಭಾವನೆಗಳ ಜೊತೆಗೂ ಆಟ ಆಡಬಾರದು. ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಬದುಕೋಣ, ಬದುಕೋಕೆ ಬಿಡೋಣ ಎಂಬ ಭಾವನೆ ಎಲ್ಲರಿಗೂ ಇರಬೇಕು. ಸಮಾಜ ಇಷ್ಟೇ. ನಾವು ಎಷ್ಟು ದಿನ ಇರುತ್ತೇವೆ? ಅಷ್ಟು ದಿನ ನಾವೆಲ್ಲರೂ ಅನ್ಯೋನ್ಯವಾಗಿ ಹೊಂದಿಕೊಂಡು ಇರಬೇಕುʼʼ ಎಂದು ವೇದಾಂತದ ಮಾತುಗಳನ್ನು ಆಡಿದ್ದಾರೆ.
ಈ ವೇಳೆ ಸುದೀಪ್ ಅಭಿಮಾನಿಯೊಬ್ಬ ವಿಜಯಲಕ್ಷ್ಮಿ ದರ್ಶನ್ ಕ್ಷಮೆ ಕೇಳಿದ ಪ್ರಕರಣವೂ ನಡೆದಿದೆ. ಕೊಪ್ಪಳ ಮೂಲದ ನಮ್ಮಕೊಪ್ಪಳ್ ಮೀಮ್ಸ್ ಅಡ್ಮಿನ್ ಆಗಿರುವ ಯುವಕ ವಿಜಯಲಕ್ಷ್ಮಿ ದರ್ಶನ್ ಅವರ ಬಳಿ ಕ್ಷಮೆ ಕೇಳಿದ್ದಾನೆ. ವಿಜಯಲಕ್ಷ್ಮಿ ದರ್ಶನ್ ಪೊಲೀಸ್ ಠಾಣೆ ಮೆಟ್ಟಿಲೇರಿ, ಎಫ್‌ಐಆರ್ ಆದ ಬೆನ್ನಲ್ಲೇ ಹಲವು ಅಕೌಂಟ್ಸ್ ಡಿಲೀಟ್ ಆಗಿವೆ. ಫೋನ್ ಸ್ವಿಚ್ ಆಫ್ ಆಗಿದೆ. ಕೊಪ್ಪಳದ ಈ ಹುಡುಗ ಮಾತ್ರ ಸಾರಿ ಕೇಳಿದ್ದಾನೆ. ಹಾಗೆಂದು ಬಹಿರಂಗವಾಗಿ ಕ್ಷಮೆ ಕೇಳಿದ್ದಕ್ಕೆ ಬಚಾವ್ ಆಗಬಹುದಾ.. ಅದನ್ನು ಪೊಲೀಸರು ಡಿಸೈಡ್ ಮಾಡ್ತಾರೆ.
18 ಅಕೌಂಟ್ ಗಳ ಬಗ್ಗೆ ವಿಜಯಲಕ್ಷ್ಮಿ ದೂರಿನಲ್ಲಿ ಉಲ್ಲೇಖ ಮಾಡಿದ್ದರು. ದೂರಿನಲ್ಲಿ ಉಲ್ಲೇಖ ಮಾಡಿದ್ದ ಅಕೌಂಟ್ ಪರಿಶೀಲನೆ ವೇಳೆ ಬಹುತೇಕ ಅಕೌಂಟ್ ಗಳು ಡಿಲೀಟ್ ಆಗಿವೆಯಂತೆ. ದೂರು ದಾಖಲಾಗಿ ಅರ್ಧ ಗಂಟೆ ಒಳಗಾಗಿ ಅಕೌಂಟ್ ಗಳು ಡಿಲೀಟ್ ಆಗಿದ್ದು, ಐಪಿ ಅಡ್ರೆಸ್, ಖಾತೆದಾರರ ಮಾಹಿತಿ ನೀಡುವಂತೆ ಪತ್ರ ಬರೆದಿದ್ದಾರೆ.
ಹಾಗೆಂದು ಟ್ರೋಲ್, ಟೀಕೆ, ವ್ಯಂಗ್ಯಗಳು ನಿಂತಿಲ್ಲ. ಈಗ ದರ್ಶನ್ ಅಭಿಮಾನಿಗಳು ಎಂದು ಕರೆದುಕೊಳ್ಳುವವರು 45, ಮಾರ್ಕ್ ಚಿತ್ರ ಕೆಟ್ಟದಾಗಿದೆ, ಡಬ್ಬಾ ಎಂದು ಪೋಸ್ಟ್ ಹಾಕುತ್ತಿದ್ದರೆ, ಸುದೀಪ್ ಅಭಿಮಾನಿಗಳು ಎಂದು ಗುರುತಿಸಿಕೊಂಡವರು ಡೆವಿಲ್ ಸಿನಿಮಾ ಅಟ್ಟರ್ ಫ್ಲಾಪ್ ಎಂದು ಪೋಸ್ಟ್ ಹಾಕುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ತಂಟೆಗೆ ಹೋಗುತ್ತಿಲ್ಲ, ಅಷ್ಟೇ. ಮಿಕ್ಕಂತೆ ಫ್ಯಾನ್ ವಾರ್ ಕಂಟಿನ್ಯೂ ಆಗಿದೆ.



