ಶಿವಣ್ಣ ಡಾ.ರಾಜ್ ಹಾಕಿಕೊಟ್ಟಿದ್ದ ಎರಡು ಸಂಪ್ರದಾಯ ಮುರಿದಿದ್ದಾರೆ. ಅದರಲ್ಲಿ ಮೊದಲನೆಯದ್ದು ರಾಜಕೀಯ ಪ್ರಚಾರದ್ದು. ಇನ್ನೊಂದು ಜಾತಿಯದ್ದು. ರಾಜಕೀಯದವರ ಸಹವಾಸವೇ ಬೇಡ ಎಂದಿದ್ದ ಡಾ.ರಾಜಕುಮಾರ್. ಟಿಕೆಟ್ ಕೊಡುವುದಕ್ಕೆ ಜನತಾ ಪಕ್ಷದವರು ಮನೆಗೇ ಬಂದಾಗ.. ನಾಮಪತ್ರ ಸಲ್ಲಿಕೆ ಅವಧಿ ಮುಗಿಯುವವರೆಗೆ ಅಕ್ಷರಶಃ ನಾಪತ್ತೆಯಾಗಿದ್ದ ಡಾ.ರಾಜ್ ಕುಮಾರ್. ಕಟ್ಟಕಡೆಯ ದಿನಗಳವರೆಗಗೂ ಎಲ್ಲ ಪಕ್ಷಗಳ ಜೊತೆಯಲ್ಲೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ರಾಜ್, ಎಲ್ಲರೊಂದಿಗೂ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದರು. ರಾಜ್ಯದ ಸಿಎಂ ಆದವರೆಲ್ಲ ಮೊದಲಿಗೆ ಭೇಟಿ ನೀಡುತ್ತಿದ್ದ ಮನೆಗಳಲ್ಲಿ ರಾಜ್ ನಿವಾಸಕ್ಕೆ ಭೇಟಿ ನೀಡಿವುದು ಕಡ್ಡಾಯವಾಗಿರುತ್ತಿತ್ತು.
ಮಾಜಿ ಸಿಎಂ ಬಂಗಾರಪ್ಪ ಮನೆಯಿಂದ ರಾಜ್ ಮನೆಗೆ ಸೊಸೆಯಾಗಿ ಬಂದ ಗೀತಾ, ರಾಜ್ ಕುಟುಂಬದ ಸೊಸೆಯಾಗಿ ಹಾಗೆಯೇ ನಡೆದುಕೊಂಡರು ಕೂಡಾ.. ಆಮೇಲೆ ಅವರೇ ಅದನ್ನು ಮುರಿದರು. ರಾಜ್ ಮನೆತನದ ರಾಜಕೀಯದಿಂದ ದೂರ ಇರುವ ಸಂಪ್ರದಾಯವನ್ನು ಮೊದಲಿಗೆ ಮುರಿದವರೇ ಶಿವ ರಾಜ್ʻಕುಮಾರ್. ಶಿವಣ್ಣ ಪತ್ನಿ ಗೀತಾ ಆಗಲೂ ಕೂಡಾ ಪುನೀತ್ ರಾಜಕುಮಾರ್, ಅತ್ತಿಗೆಗೆ ಶುಭ ಹಾರೈಸಿದರೇ ಹೊರತು, ಪ್ರಚಾರಕ್ಕೆ ಹೋಗಲಿಲ್ಲ. ರಾಘವೇಂದ್ರ ರಾಜಕುಮಾರ್ ಕೂಡಾ ಅಷ್ಟೆ. ಆದರೆ ಶಿವರಾಜಕುಮಾರ್ ಅವರ ಮಾತುಗಳೇ ಬೇರೆ. ಅವರ ಮಾತಿನಲ್ಲಿ ಅರ್ಥವಿದೆ. ಆದರೆ ಕೆಲವರ ಪಾಲಿಗೆ ಲಾಜಿಕ್ ಕಾಣುತ್ತಿಲ್ಲ.
ಶಿವ ರಾಜ್ʻಕುಮಾರ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಹಾಗಂತ ಗೀತಾ ಅವರ ರಾಜಕೀಯಕ್ಕೆ ಯಾವತ್ತೂ ಅಡ್ಡಿಯಾಗಿಲ್ಲ. ಗೀತಾ ಅವರ ಪರವಾಗಿ ಪ್ರಚಾರಕ್ಕೆ ಬರುವ, ಕಾಂಗ್ರೆಸ್ ಮುಖಂಡರ ಪರವಾಗಿಯೂ ಕ್ಯಾಂಪೇನ್ ಮಾಡುವ ಶಿವಣ್ಣ ನೇರವಾಗಿ ಯಾಕೆ ರಾಜಕೀಯಕ್ಕೆ ಬರಬಾರದು.. ಇಂತಾದ್ದೊಂದು ಪ್ರಶ್ನೆ ಮತ್ತು ಉದ್ದೇಶ ಇಟ್ಟುಕೊಂಡೇ ಡಿಕೆ ಶಿವಕುಮಾರ್ ಅವರು ಶಿವಣ್ಣ ಅವರಿಗೆ ಟಿಕೆಟ್ ಆಫರ್ ಕೊಟ್ಟಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಈಡಿಗ ಸಮುದಾಯದ ಸಮಾವೇಶದಲ್ಲಿ ಭಾಗಿಯಾಗಿದ್ದ ಡಿಕೆ, ಇಂತಾದ್ದೊಂದು ಆಫರ್ ಕೊಟ್ಟರು. ಡಿಕೆಶಿ ರಾಜ್ಯದ ಉಪಮುಖ್ಯಮಂತ್ರಿಯಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷರೂ ಹೌದು. ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಶಿವರಾಜ್ ಕುಮಾರ್ ಅವರಿಗೆ ಲೋಕಸಭೆಯ ಟಿಕೆಟ್ ಆಫರ್ ಕೊಟ್ಟರು.
ಲೋಕಸಭೆ ಚುನಾವಣೆಗೆ ತಯಾರಾಗಿ, ಎಂದರೆ ಐದಾರು ಸಿನಿಮಾ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಸಿನಿಮಾ ಯಾವಾಗ ಬೇಕಾದರೂ ಮಾಡಬಹುದು. ಆದರೆ ಪಾರ್ಲಿಮೆಂಟ್‌ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಹೇಳಿದ್ದೇನೆ ಎಂದು ತುಂಬಿದ ವೇದಿಕೆಯಲ್ಲೇ ಹೇಳಿದರು ಡಿಕೆ.
‘ನಮಗೆ ತಂದೆಯಿಂದ ಬಂದಿರುವ ಬಳುವಳಿ ಬಣ್ಣ ಹಚ್ಚಿ ನಟನೆ ಮಾಡುವುದು. ಬಣ್ಣ ಹಚ್ಚುವುದು, ಆಕ್ಟಿಂಗ್ ಮಾಡುವುದು ಅಷ್ಟೇ ನಮ್ಮ ಕೆಲಸ. ನಾನು ನಾನು ಎಂದಿಗೂ ರಾಜಕಾರಣಕ್ಕೆ ಬರುವುದಿಲ್ಲ. ನಮ್ಮ ತಂದೆ ಕಲಿಸಿದ ನಟನೆಯನ್ನು ಮುಂದುವರೆಸುತ್ತೇನೆ ಎಂದ ಶಿವಣ್ಣ, ಆಫರ್ʻನ್ನು ತಿರಸ್ಕರಿಸಿದರು. ಗೀತಾ ಅವರ ಪರವಾಗಿ ಹೋಗುವುದು ಯಾಕೆ ಎನ್ನುವ ಹಲವರ ಉತ್ತರಕ್ಕೂ ವೇದಿಕೆಯಲ್ಲಿಯೇ ಉತ್ತರ ನೀಡಿದ ಶಿವಣ್ಣ ನಗೆ ರಾಜಕೀಯ ಬೇಡ. ಆದರೆ, ರಾಜ್ಯ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ನಮ್ಮನೆ ಸೊಸೆಯಾಗಿದ್ದಾರೆ. ಗೀತಾಳಿಗೆ ಇಂಟರೆಸ್ಟ್ ಇದೆ. ಗೀತಾ ಅವರ ಪತಿಯಾಗಿ ಆಕೆಯ ಆಸಕ್ತಿಗೆ ಬೆಂಬಲ ನೀಡುವುದು, ಪ್ರೋತ್ಸಾಹ ನೀಡುವುದು ನನ್ನ ಕೆಲಸ. ಗೀತಾ ಅವರು ಚುನಾವಣೆಗೆ ನಿಲ್ಲುತ್ತಾರೆಂದರೆ ನಾನು ಅವರ ಹಿಂದೆಯಿದ್ದು, ಬೆಂಬಲ ನೀಡುತ್ತೇನೆ ಎಂದು ತಮ್ಮ ರಾಜಕೀಯ ಪರ ಪ್ರಚಾರಗಳಿಗೆ ಸಮರ್ಥನೆಯನ್ನೂ ಕೊಟ್ಟಿದ್ಧಾರೆ.
ಶಿವಣ್ಣ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಹಲವರ ನಿರೀಕ್ಷೆಗಳಿಗೆ ಶಿವಣ್ಣ ನೋ ಎನ್ನುವ ಉತ್ತರ ಕೊಟ್ಟಿದ್ದಾರೆ. ಆದರೆ ಗೀತಾ ಅವರಿಗಾಗಿ ನಾನು ಪ್ರಚಾರದಲ್ಲಿರುತ್ತೇನೆ ಎನ್ನುವ ಮೂಲಕ ಹೊಸ ಸಂಪ್ರದಾಯಕ್ಕೂ ನಾಂದಿ ಹಾಡಿದ್ದಾರೆ.
ಎಲ್ಲವೂ ಓಕೆ, ಆದರೆ ರಾಜ್ ಅವರು ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಷ್ಟೇ ಅಲ್ಲ, ಜಾತಿಗಳ ವೇದಿಕೆಯಿಂದಲೂ ದೂರವಿದ್ದರು. ಆದರೆ ಶಿವಣ್ಣ ಆರ್ಯ ಈಡಿಗ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಜಾತಿಯ ವೇದಿಕೆಗೂ ಬಂದಿದ್ದಾರೆ. ಇದು ಕೆಲವರ ಸಿಟ್ಟಿಗೆ ಕಾರಣವಾಗಿದೆ. ನಾನು ಕಲಾವಿದ. ಎಲ್ಲರದ್ದೂ ಒಂದೇ ಜಾತಿ ಎನ್ನುತ್ತಿದ್ದ ರಾಜ್ ಅವರ ದೊಡ್ಡ ಮಗನಾಗಿ, ಒಂದು ಜಾತಿಯ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ, ತಾವು ಈಡಿಗರು ಎಂದು ಅಭಿಮಾನಿಗಳಿಗೆ ನೆನಪಿಸಿದ್ಧಾರೆ. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.



