ಯಾವುದೋ ಸಿನಿಮಾ ರಿಲೀಸ್ ಆಗುತ್ತದೆ. ಹೀರೋ ಯಾರು ಅನ್ನೋದೇ ಗೊತ್ತಿರಲ್ಲ. ಡೈರೆಕ್ಟರ್ ಹೆಸರು ಕೇಳಿರಲ್ಲ. ಹೀರೋಯಿನ್ ಮುಖವನ್ನೂ ನೋಡಿರಲ್ಲ. ಆದರೆ.. ರಿಲೀಸ್ ಆದ ದಿನ, ಫಸ್ಟ್ ಡೇ.. ಫಸ್ಟ್ ಶೋ ಹೌಸ್ ಫುಲ್.
ಇದೆಲ್ಲ ಹೇಗೆ ಸಾಧ್ಯ..?
ಅತ್ತ ಸ್ಟಾರ್ ಅಲ್ಲದ.. ಆದರೆ ಸಿನಿಮಾ ಪ್ರೇಕ್ಷಕರಿಗೆ ಗೊತ್ತಿರುವ ನಟನ ಸಿನಿಮಾ ರಿಲೀಸ್ ಆಗುತ್ತದೆ. ನೆಟ್ಟಗೆ ಪ್ರಚಾರ ಮಾಡಿರಲ್ಲ. ಹಾಡು, ಟ್ರೇಲರ್ ಕೂಡಾ ಗಮನ ಸೆಳೆದಿರಲ್ಲ. ಆದರೂ.. ಆತನ ಸಿನಿಮಾ ಕೂಡಾ ಫಸ್ಟ್ ಡೇ.. ಫಸ್ಟ್ ಶೋ ಹೌಸ್ ಫುಲ್.
ಇದೆಲ್ಲ ಹೇಗೆ ಸಾಧ್ಯ..?
ಇನ್ನು ಸ್ಟಾರ್ ನಟನ ಸಿನಿಮಾ ಕೂಡಾ ಬರುತ್ತದೆ. ಪ್ರೇಕ್ಷಕರೇನೋ ಭಾರೀ ನಿರೀಕ್ಷೆ ಇಟ್ಟುಕೊಂಡು ಹೋಗುತ್ತಾರೆ. ಕಥೆ ಇರಲ್ಲ. ಡೈಲಾಗ್ ಅರ್ಥವಾಗಲ್ಲ. ಹಾಡು ಇಷ್ಟ ಆಗಲ್ಲ. ಸಿನಿಮಾ ಢಮಾರ್ ಎಂದು ಮೊದಲ ಶೋನಲ್ಲೇ ಗೊತ್ತಾಗಿಬಿಡುತ್ತದೆ. ಫಸ್ಟ್ ಡೇ.. ಫಸ್ಟ್ ಶೋ ಮುಗಿಯುವ ಹೊತ್ತಿಗೆ ಸಿನಿಮಾ ಢುಬಾಕ್ ಎಂದು ಗೊತ್ತಾದ ನಂತರವೂ.. ಒಂದಷ್ಟು ಜನ ಥಿಯೇಟರಿಗೆ ಬರುತ್ತಾರೆ. ಸಿನಿಮಾ ನೋಡ್ತಾರೆ. ಕೆಟ್ಟ ಸಿನಿಮಾಔನ್ನೂ ಮತ್ತೆ ನೋಡ್ತಾರೆ..
ಇದೆಲ್ಲ ಹೇಗೆ ಸಾಧ್ಯ..?
ಸಾಧ್ಯವಿದೆ. ಅದಕ್ಕೆ ಉತ್ತರ ಬಾಡಿಗೆ ಪ್ರೇಕ್ಷಕರು. ಥಿಯೇಟರಿಗೆ ಜನರನ್ನು ತುಂಬಿಸಿ ʻಹೌಸ್ ಫುಲ್ʼ ಮಾಡಿಸುತ್ತಿರುವ ವಿಷಯವೂ ಗೊತ್ತು ಎಂದಿದ್ದಾರೆ ಶಿವಣ್ಣ. ಚಿತ್ರಮಂದಿರಗಳಿಗೆ ಜನರನ್ನು ದುಡ್ಡು ಕೊಟ್ಟು ಕರೆ ತರುವ ವಿಷಯದ ಬಗ್ಗೆಯೂ ಗೊತ್ತಿದೆ ಎಂದಿದ್ದಾರೆ ಶಿವರಾಜ್ ಕುಮಾರ್. ಚಿತ್ರರಂಗದವರೂ ಬೆಚ್ಚಿಬಿದ್ದಿದ್ದಾರೆ. ಹೌದಾ.. ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಅಥವಾ.. ಶಾಕ್ ಆದವರಂತೆ ನಟಿಸಿದ್ದಾರೆ. ಆದರೆ ಇಂಡಸ್ಟ್ರಿಯವರಿಗೆ ಇದು ಗೊತ್ತಿಲ್ಲದೆ ಏನಲ್ಲ.
ಸಿನಮಾ ಥಿಯೇಟರಿಗೆ ಜನರನ್ನು ಕರೆತರಲು ಏಜೆಂಟರೂ ಹುಟ್ಟಿಕೊಂಡಿದ್ದಾರೆ.
ಕನ್ನಡ ಚಿತ್ರಗಳಿಗೆ ಜನ ಬರುತ್ತಿಲ್ಲ ಎನ್ನುವುದು ಬಹುತೇಕರ ದೂರು. ಅದು ವಾಸ್ತವವೂ ಹೌದು. ಆದರೆ, ಇಷ್ಟೆಲ್ಲದರ ನಡುವೆ ಬಹುತೇಕರ ಚಿತ್ರಗಳ ಮಾರ್ನಿಂಗ್ ಶೋಗಳು, ಹೌಸ್ ಫುಲ್ ಆಗುತ್ತವೆ. ಟಿವಿ ಚಾನೆಲ್ಲುಗಳ ಕ್ಯಾಮೆರಾ ಎದುರು ಸೂಪರ್.. ಸಖತ್.. ಬೊಂಬಾಟ್.. 100 ಡೇಸ್ ಗ್ಯಾರಂಟಿ.. ಚಿಂದಿ ಸಿನಿಮಾ.. ಎಂಬೆಲ್ಲ ಡೈಲಾಗುಗಳು ಬರುತ್ತವೆ. ಆದರೆ.. ಅದು ಮ್ಯಾಟ್ನಿ ಹೊತ್ತಿಗೆ ಇರಲ್ಲ. ಕೆಲವು ಸಿನಿಮಾಗಳು ಮ್ಯಾಟ್ನಿಗೂ ಹೌಸ್ ಫುಲ್ ಆಗುತ್ತವೆ. ಆದರೆ, ಫಸ್ಟ್ ಶೋಗೆ ಖಾಲಿ ಹೊಡೆಯುತ್ತವೆ. ಡೌಟೇ ಇಲ್ಲ.. ಇವರು ಪ್ರೇಕ್ಷಕರಲ್ಲ. ಬಾಡಿಗೆ ಪ್ರೇಕ್ಷಕರು. ಸಿನಿಮಾ ನೋಡುವುದಕ್ಕೆಂದೇ ದುಡ್ಡು ಕೊಟ್ಟು ಕರೆತರುವ ಪ್ರೇಕ್ಷಕರು. ರಾಜಕಾರಣಿಗಳ ಸಮಾರಂಭಕ್ಕೆ ಹೋಗುವವರಿಗೆ ಹೇಗೆ ದುಡ್ಡು ಕೊಟ್ಟು ಕರೆದುಕೊಂಡು ಹೋಗ್ತಾರೋ.. ಹಾಗೆಯೇ ಈಗ ಸಿನಿಮಾಗಳಿಗೂ ಜನರಿಗೆ ದುಡ್ಡು ಕೊಟ್ಟು ತರುವ ಪದ್ಧತಿ ಕೆಲ ವರ್ಷಗಳಿಂದ ಶುರುವಾಗಿವೆ. ಅದರಲ್ಲೂ ಸಿನಿಮಾ ನಾಯಕ, ನಾಯಕಿ ಚಿತ್ರಮಂದಿರಕ್ಕೆ ಬರುತ್ತಾರೆಂದರೆ.. ದುಡ್ಡು ಕೊಟ್ಟು ಜನರನ್ನು ತುಂಬಿಸುವ ಪ್ರಯತ್ನವೂ ನಡೆಯುತ್ತದೆ. ಇದು ಚಿತ್ರರಂಗದ ಬಹುತೇಕರಿಗೆ ಗೊತ್ತಿರುವ ಹೌಸ್ ಫುಲ್ ಓಪನ್ ಸೀಕ್ರೆಟ್. ಯಾರೂ ಮಾತನಾಡಲ್ಲ. ಇದಕ್ಕೆ ಶಿವಣ್ಣ ರಿಯಾಕ್ಟ್ ಮಾಡಿದ್ದಾರೆ.
ಥಿಯೇಟರುಗಳಿಗೆ ಜನರನ್ನು ಕರೆದು ತಂದು ತುಂಬಿಸುತ್ತಿರುವ ವಿಷಯವೂ ಗೊತ್ತಿದೆ. ಅದೊಂದು ಕೆಟ್ಟ ಟ್ರೆಂಡ್. ಕೃತಕವಾಗಿ ಸಿನಿಮಾ ಗೆದ್ದಿದೆ ಎಂದು ತೋರಿಸುವ ಪ್ರಯತ್ನ. ಅದರಿಂದ ನಷ್ಟವೇ ಹೆಚ್ಚು ಎಂದಿದ್ದಾರೆ ಶಿವಣ್ಣ. ಒಳ್ಳೆಯ ಸಿನಿಮಾ ಮಾಡಬೇಕು. ಥಿಯೇಟರುಗಳಿಗೆ ಕೊಡಬೇಕು. ಸಿನಿಮಾ ಪ್ರಚಾರವನ್ನೂ ಚೆನ್ನಾಗಿ ಮಾಡಬೇಕು. ಅದಾದ ಮೇಲೆ ಸಿನಿಮಾವನ್ನು ಗೆಲ್ಲಿಸುವುದು ಅಥವಾ ಸೋಲಿಸುವುದು ಪ್ರೇಕ್ಷಕರಿಗೆ ಬಿಟ್ಟಿದ್ದು. ಥಿಯೇಟರಿಗೆ ಜನರನ್ನು ತುಂಬಿಸಿ, ಕೃತಕವಾಗಿ ಹಿಟ್ ಎಂದು ತೋರಿಸಿ ಹಣ ವೇಸ್ಟ್ ಮಾಡುವುದು ಬೇಡ ಎಂದಿದ್ದಾರೆ ಶಿವರಾಜ್ ಕುಮಾರ್.
ಇತ್ತೀಚೆಗೆ ಶಿವರಾಜ್ ಕುಮಾರ್ ಮನೆಯಲ್ಲಿ ಚಿತ್ರರಂಗದ ಪ್ರಮುಖರೆಲ್ಲ ಸಭೆ ಸೇರಿದ್ದರು. ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ಶಿವಣ್ಣ ಚಿತ್ರರಂಗದ ಲೀಡರ್ ಆಗಲು ಒಪ್ಪಿದ್ದಾರೆ ಎಂದು ವರದಿಯಾಗಿತ್ತು. ಇವುಗಳ ನಂತರ ಮಾತನಾಡಿರುವ ಶಿವರಾಜ್ ಕುಮಾರ್, ಚಿತ್ರರಂಗಕ್ಕೆ ಮತ್ತೆ ಜೀವ ತುಂಬುವುದು ಹೇಗೆ ಎಂಬ ಬಗ್ಗೆ ಮಾತನಾಡುತ್ತಾ ಈ ಮಾತು ಹೇಳಿದ್ದಾರೆ.
ಆದರೆ ಇದಕ್ಕೆಲ್ಲ ಬ್ರೇಕ್ ಹಾಕುವ ಅಧಿಕಾರ ಶಿವಣ್ಣಂಗೂ ಇಲ್ಲ. ಬುದ್ದಿ ಹೇಳಬಹುದಷ್ಟೇ. ಆದರೆ.. ಇಂತಹ ಅಡ್ನಾಡಿತನ ಮಾಡಿಯೇ ಸಿನಿಮಾದವರು ಇದ್ದ ಬದ್ದ ಅಲ್ಪ ಸ್ವಲ್ಪ ಸಿನಿಮಾ ಪ್ರೇಕ್ಷಕರು ಕೂಡ ಥಿಯೇಟರಿಗೆ ತಲೆ ಹಾಕದಂತೆ ಮಾಡಿಬಿಟ್ಟಿದ್ದಾರೆ.