ಶಿವಣ್ಣ ಯಾವಾಗ್ಲೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿರ್ತಾರೆ. ವರ್ಷಕ್ಕೆ ಈಗಲೂ ಕನಿಷ್ಠ ಎರಡು ಚಿತ್ರಗಳಲ್ಲಾದರೂ ಕಾಣಿಸಿಕೊಳ್ಳೋ ಶಿವಣ್ಣ, ಈ ವರ್ಷ ಈಗಾಗಲೇ ಒಂದು ಸಿನಿಮಾ ಕೊಟ್ಟಿದ್ದಾರೆ. ಇನ್ನೊಂದು ಸಿನಿಮಾ ರಿಲೀಸ್ ಡೇಟ್ ಘೋಷಿಸಿದ್ಧಾರೆ. ಈ ನಡುವೆಯೇ ಅಭಿಮಾನಿಗಳಿಗೆ ಒಂದಷ್ಟು ಟೆನ್ಷನ್ ಕೂಡಾ ಕೊಟ್ಟಿರೋ ಶಿವಣ್ಣ ದಿಢೀರ್ ಅಂತಾ ಆಸ್ಪತ್ರೆ ಸೇರಿದ್ಧಾರೆ.
ಟೆನ್ಷನ್ ನ್ಯೂಸ್.. ಟೆನ್ಷನ್ ಇಲ್ಲ : ಶಿವರಾಜ್ ಕುಮಾರ್ ಇದ್ದಕ್ಕಿದ್ದಂತೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾದ ಶಿವಣ್ಣ ಅವರನ್ನು ನೋಡುವುದಕ್ಕೆ ಗೆಳೆಯ ಚಿ.ಗುರುದತ್ ಓಡೋಡಿ ಬಂದರು. ಮಧು ಬಂಗಾರಪ್ಪ, ಶಿವಮೊಗ್ಗ ಪ್ರಚಾರ ಬಿಟ್ಟು ಆಸ್ಪತ್ರೆಗೆ ಬಂದರು. ಹೀಗಾಗಿ ಒಂದಷ್ಟು ಟೆನ್ಷನ್ ಆಗಿದ್ದಂತೂ ನಿಜ.
ಆದರೆ.. ಶಿವಣ್ಣ ಅವರ ಅನಾರೋಗ್ಯದ ಸಮಸ್ಯೆಗೆ ಕಾರಣ ಬಿಡುವಿಲ್ಲದ ಓಡಾಟ ಅಷ್ಟೆ. ಒಂದು ಕಡೆ ಸಿನಿಮಾ, ಮತ್ತೊಂದು ಪತ್ನಿ ಗೀತಾ ಪರ ಚುನಾವಣಾ ಪ್ರಚಾರ.. ಈ ನಡುವೆ ಇತ್ತೀಚೆಗೆ ರಿಲೀಸ್ ಆದ ಕರಟಕ ದಮನಕ ಸಿನಿಮಾ ಪ್ರಚಾರ.. ಒಟ್ಟಿನಲ್ಲಿ ಶಿವಣ್ಣ ರೆಸ್ಟ್ ಮಾಡುತ್ತಿಲ್ಲ. ಹೀಗಾಗಿ ಅನಾರೋಗ್ಯ ಕಾಣಿಸಿಕೊಂಡಿದೆ. ವಯಸ್ಸು 61. ಹೀಗಾಗಿ ಶಿವಣ್ಣ ಸುಸ್ತಾಗಿದ್ದಾರೆ, ಅಷ್ಟೇ ಹೊರತು, ಯಾವುದೇ ಸೀರಿಯಸ್ ಪ್ರಾಬ್ಲಂ ಇಲ್ಲ ಎಂದು ಹೇಳಿದ್ದಾರೆ ವೈದ್ಯರು. ಶಿವಣ್ಣ ಆಸ್ಪತ್ರೆಯಿಂದ ಮನೆಗೆ ಹೋಗಿದ್ದು, ರೆಸ್ಟ್ ಮಾಡುತ್ತಿದ್ಧಾರೆ. ವಿಶ್ರಾಂತಿ ಅತಿ ಮುಖ್ಯ ಎಂದಿದ್ದಾರೆ ಡಾಕ್ಟರ್ಸ್.
ಮತ್ತೊಮ್ಮೆ ಮೈಲಾರಿ ಜೋಡಿ : ಇದು ಖುಷಿಯ ವಿಷಯ. ನಿರ್ದೇಶಕ ಆರ್.ಚಂದ್ರು ಇತ್ತೀಚೆಗೆ ಆರಂಭಿಸಿರುವ ಆರ್.ಸಿ. ಸ್ಟುಡಿಯೋಸ್ ಮೂಲಕ 5 ಚಿತ್ರಗಳನ್ನು ಒಟ್ಟಿಗೇ ಘೋಷಿಸಿತ್ತು. ಅದೇ ಆರ್.ಚಂದ್ರು ಈಗ 6ನೇ ಸಿನಿಮಾ ಘೋಷಿಸಿದ್ದು, ಶಿವಣ್ಣನ ಜೊತೆ ಮತ್ತೆ ಕೈ ಜೋಡಿಸಿದ್ದಾರೆ.
5 ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣದಲ್ಲಿ ಬ್ಯುಸಿ ಇರುವ ಚಂದ್ರು, 6ನೇ ಸಿನಿಮಾ ಆಗಿ ಶಿವಣ್ಣ ಜೊತೆ ಕೈಜೋಡಿಸಿದ್ದಾರೆ.
ಚಂದ್ರು ಅವರಿಗೆ ಶಿವಣ್ಣ ಅವರ ಜೊತೆಗಿನ ಕಾಂಬಿನೇಷನ್ ಹೊಸದಲ್ಲ. ತಾಜ್ ಮಹಲ್, ಪ್ರೇಮ್ ಕಹಾನಿ ಚಿತ್ರಗಳ ನಂತರ ಮೂರನೇ ಚಿತ್ರವನ್ನೇ ಶಿವಣ್ಣ ಜೊತೆಗೆ ಮಾಡಿದ್ದರು ಆರ್. ಚಂದ್ರು. ಶಿವಣ್ಣ ಜೊತೆಗೆ ಸದಾ ಹಾಗೂ ಸಂಜನಾ ಗಲ್ರಾನಿ ನಾಯಕಿಯರಾಗಿ ನಟಿಸಿದ್ದ ಮೈಲಾರಿ, 100ಡೇಸ್ ಓಡಿತ್ತು. ಇದಾದ ಮೇಲೆ ಚಂದ್ರು ಜೊತೆಗೆ ಶಿವಣ್ಣ ಜೊತೆಯಾಗಿದ್ದು ಕಬ್ಜ ಚಿತ್ರದಲ್ಲಿ. ಉಪೇಂದ್ರ ಹೀರೋ ಆಗಿದ್ದ ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಕೂಡಾ ಅತಿಥಿ ನಟರಾಗಿ ನಟಿಸಿದ್ದರು. ಇದೀಗ ಶಿವಣ್ಣ ಮತ್ತು ಚಂದ್ರು ಮತ್ತೊಮ್ಮೆ ಜೊತೆಯಾಗಿದ್ಧಾರೆ.
ಸದ್ಯ ಶಿವರಾಜ್‌ಕುಮಾರ್ ಸಖತ್ ಬ್ಯುಸಿ. ‘ಭೈರತಿ ರಣಗಲ್’ ಮತ್ತು ’45’ ಸಿನಿಮಾಗಳ ಶೂಟಿಂಗ್ ಬಿಡುವಿದಲ್ಲದೆ ಸಾಗುತ್ತಿದೆ. ಅದಾದ ಮೇಲೆ ದಿನಕರ್ ತೂಗುದೀಪ ಮತ್ತು ಹೇಮಂತ್ ಎಂ ರಾವ್ ನಿರ್ದೇಶನದ ಚಿತ್ರಗಳಿವೆ. ತೆಲುಗಿನ ರಾಮ್ ಚರಣ್ ಜೊತೆಯಲ್ಲೊಂದು ಸಿನಿಮಾದಲ್ಲೂ ನಟಿಸಲಿದ್ದಾರೆ. ಇನ್ನು ಶಿವಣ್ಣ ಲಿಸ್ಟಿನಲ್ಲಿರುವ ಚಿತ್ರಗಳ ಸಂಖ್ಯೆ 10ನ್ನು ದಾಟುತ್ತದೆ. ಇಷ್ಟೆಲ್ಲ ಬ್ಯುಸಿ ಇರುವ ಶಿವಣ್ಣ, ಆರ್ ಚಂದ್ರು ಜೊತೆಗಿನ ಸಿನಿಮಾವನ್ನು ಯಾವಾಗ ಆರಂಭಿಸಲಿದ್ದಾರೆ. ಅದುವೇ ಈಗಿನ ದೊಡ್ಡ ಕುತೂಹಲ.
ಅಂದಹಾಗೆ ಈ ಚಿತ್ರಕ್ಕೆ ಚಂದ್ರು ನಿರ್ಮಾಪಕ ಮಾತ್ರ. ನಿರ್ದೇಶನವನ್ನು ಹೊಸಬರಿಗೆ ಕೊಡಲಿದ್ಧಾರೆ.



