ಶಿವರಾಜ್ ಕುಮಾರ್ ಅಭಿನಯದ 130+ ಚಿತ್ರಗಳಲ್ಲಿ ಬ್ಲಾಕ್ ಬಸ್ಟರ್ ಚಿತ್ರಗಳಿವೆ. ಸೂಪರ್ ಹಿಟ್, ಆವರೇಜ್ ಚಿತ್ರಗಳಿವೆ. ಜೊತೆಯಲ್ಲೇ ಶಿವಣ್ಣ ಇರಲಿ, ಅಭಿಮಾನಿಗಳೂ ಮರೆಯಲು ಇಷ್ಟಪಡುವ ಚಿತ್ರಗಳೂ ಇವೆ. ಇವಿಷ್ಟೂ ಚಿತ್ರಗಳಲ್ಲಿ ಶಿವಣ್ಣ ಅಭಿನಯದ ತಾವೇ ಮೆಚ್ಚಿಕೊಂಡ ಚಿತ್ರಗಳ, ತಾವೇ ನಟಿಸಿದ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ ಶಿವಣ್ಣ.
ಶಿವಣ್ಣ ತಾವು ನಟಿಸಿದ ಚಿತ್ರಗಳಲ್ಲಿ ಅತ್ಯಂತ ಹೆಚ್ಚು ಇಷ್ಟಪಡೋದು ಓಂ. ಓಂ ಚಿತ್ರದ ಸತ್ಯ ಪಾತ್ರ, ಶಿವಣ್ಣ ಕೆರಿಯರ್ ಬದಲಿಸಿದ ಚಿತ್ರ. ಉಪೇಂದ್ರ ನಿರ್ದೇಶನದ ಶಿವಣ್ಣ ನಟಿಸಿದ ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಟ್ರೆಂಡ್ ಸೆಟ್ಟರ್ ಕೂಡಾ ಹೌದು. ಓಂ ಚಿತ್ರ ಟೈಟಲ್ಲಿನಿಂದಲೇ ಗಮನ ಸೆಳೆದಿತ್ತು. ಅಲ್ಲದೆ ಆ ಚಿತ್ರದಲ್ಲಿ ರಿಯಲ್ ರೌಡಿಗಳೂ ನಟಿಸಿದ್ದರು. ಅದೂವರೆಗೂ ಆನಂದ್, ರಥಸಪ್ತಮಿ, ಮನ ಮೆಚ್ಚಿದ ಹುಡುಗಿ, ಇನ್ಸ್‌ಪೆಕ್ಟರ್ ವಿಕ್ರಂ, ಸಂಯುಕ್ತ, ರಣರಂಗ.. ದಂತಹ ಸೂಪರ್ ಹಿಟ್ ಕೊಟ್ಟಿದ್ದ ಶಿವಣ್ಣ ಚಾಕೊಲೇಟ್ ಬಾಯ್ ಪಾತ್ರಗಳಲ್ಲೇ ನಟಿಸಿದ್ದರು. ಆಕ್ಷನ್ ಸೀನ್ ಇರುತ್ತಿದ್ದವಾದರೂ, ಓಂ ಚಿತ್ರದ ಸತ್ಯ ಪಾತ್ರ ಶಿವಣ್ಣ ಅವರನ್ನು ಮಾಸ್ ಹೀರೋ ಆಗಿ ಮಾಡಿತ್ತು.
ಓಂ ಮೂಲಕ ಶಿವಣ್ಣ. ಪ್ರೇಮಾ ಜೋಡಿ ಸೂಪರ್ ಜೋಡಿಯಾದರೆ, ಉಪೇಂದ್ರ ಭಾರತೀಯ ಚಿತ್ರರಂಗದಲ್ಲಿ ಹೆಗ್ಗುರುತು ಮೂಡಿಸಿದರು. ಅಂದಹಾಗೆ ಉಪೇಂದ್ರ ನಿರ್ದೇಶನದ ಚಿತ್ರಗಳಲ್ಲಿ ಓಂ ಇವತ್ತಿಗೂ ಕಲ್ಟ್ ಕ್ಲಾಸಿಕ್ ಎಂದೇ ಗುರುತಿಸಿಕೊಳ್ಳುತ್ತದೆ.
ಇನ್ನೊಂದು ಶಿವಣ್ಣ ಮೆಚ್ಚಿದ ಶಿವಣ್ಣ ಅಭಿನಯದ ಚಿತ್ರ ಎಂದರೆ ಜೋಗಿ. ಜೋಗಿಯಲ್ಲಿಯೂ ರೌಡಿಸಂ ಕಥೆ ಇತ್ತಾದರೂ, ಚಿತ್ರದಲ್ಲಿ ಅತೀ ಹೆಚ್ಚು ಹೈಲೈಟ್ ಆಗಿದ್ದು ಶಿವಣ್ಣ ಅಭಿನಯದಲ್ಲಿದ್ದ ಮುಗ್ಧತೆ, ತಾಯಿ-ಮಗನ ಸೆಂಟಿಮೆಂಟ್. ಈ ಚಿತ್ರದ ಮೂಲಕ ಪ್ರೇಮ್ ಹ್ಯಾಟ್ರಿಕ್ ಡೈರೆಕ್ಟರ್ ಪಟ್ಟ ದಕ್ಕಿಸಿಕೊಂಡರಷ್ಟೇ ಅಲ್ಲ, ಅದಾದ ಮೇಲೆ ಜೋಗಿ ಪ್ರೇಮ್ ಎಂದೇ ಹೆಸರುವಾಸಿಯಾದರು. ಜೋಗಿಯ ಮಾದೇಶನ ಪಾತ್ರ ಮುಗ್ಧತೆಗೊಂದು ಹೆಸರೇ ಆಗಿ ಹೋಯ್ತು. ರೌಡಿಸಂ ಚಿತ್ರವಾದರೂ, ರೌಡಿಸಂಗಿಂತ ಹೆಚ್ಚು ಹೈಲೈಟ್ ಆಗಿದ್ದು ಮಾದೇಶನ ಮುಗ್ಧತೆ.
ಮತ್ತೊಂದು ಚಿತ್ರ ಎಂದರೆ ಅದು ಟಗರು ಶಿವ. ಟಗರು ಚಿತ್ರಕ್ಕಿಂತಲೂ ಮೊದಲು ಶಿವಣ್ಣ ಕೆಲವು ಚಿತ್ರಗಳಲ್ಲಿ ಪೊಲೀಸ್ ಪಾತ್ರ ಮಾಡಿದ್ದರಾದರೂ, ಟಗರು ಚಿತ್ರದ ಖದರೇ ಬೇರೆ. ಟಗರು ಗಿಂತ ಮೊದಲು ದುನಿಯಾ ಸೂರಿ ಜೊತೆ ಕಡ್ಡಿಪುಡಿ ಚಿತ್ರದಲ್ಲೂ ನಟಿಸಿದ್ದರು ಶಿವಣ್ಣ. ಶಿವಣ್ಣ ಪಾತ್ರ ಮತ್ತು ಕಥೆಯ ಬಗ್ಗೆ ಒಳ್ಳೆಯ ವಿಮರ್ಶೆ ಸಿಕ್ಕಿತಾದರೂ, ಚಿತ್ರ ಅಂದುಕೊಂಡಷ್ಟು ಹಿಟ್ ಆಗಲಿಲ್ಲ. ಹಾಗಂತ ಕಡ್ಡಿಪುಡಿ ಫ್ಲಾಪ್ ಚಿತ್ರವೇನಲ್ಲ. ಟಗರು ಚಿತ್ರದ ಮೂಲಕ ಡಾಲಿ ಧನಂಜಯ ವಿಲನ್ ಆಗಿ ಸ್ಟಾರ್ ಆಗಿ, ಅದಾದ ನಂತರ ಹೀರೋ ಕಂ ಪ್ರೊಡ್ಯೂಸರ್ ಆಗಿಯೂ ಗೆದ್ದರು. ಟಗರು ಚಿತ್ರದ ಕಥೆ ಹೇಳುವ ಶೈಲಿ ಡಿಫರೆಂಟ್ ಆಗಿತ್ತು. ಇವತ್ತಿಗೂ ಶಿವಣ್ಣ ಅವರು ಎಲ್ಲೇ ಹೋಗಲಿ, ಟಗರು ಚಿತ್ರದ ಸಿಗ್ನೇಚರ್ ಸ್ಟೆಪ್ ಎಂದೇ ಹೆಸರಾದ ಟಗರು ಬಂತು ಟಗರು ಹಾಡಿಗೆ ಡ್ಯಾನ್ಸ್ ಮಾಡ್ತಾರೆ.
ಮತ್ತೊಂದು ಚಿತ್ರ ಎಂದರೆ ಅದು ಮಫ್ತಿಯ ಭೈರತಿ ರಣಗಲ್ ಪಾತ್ರ. ಶಿವಣ್ಣ ಅವರ ಕಣ್ಣು, ಮೌನವನ್ನೇ ಹೈಲೈಟ್ ಮಾಡಿದ್ದ ಚಿತ್ರದಲ್ಲಿ ಶಿವಣ್ಣ ಅವರ ಸ್ಟೈಲ್, ನಡಿಗೆ, ಮಾತು.. ಎಲ್ಲವೂ ವಿಭಿನ್ನವಾಗಿತ್ತು. ಚಿತ್ರದ ಹೀರೋ ಶ್ರೀಮುರಳಿ. ತಮ್ಮ ಸೋದರಳಿಯ ಶ್ರೀಮುರಳಿ ಅವರ ಒತ್ತಾಯಕ್ಕೆ ಕಟ್ಟು ಬಿದ್ದು ಮಾಡಿದ್ದ ಸಿನಿಮಾ, ಶಿವಣ್ಣ ವೃತ್ತಿಜೀವನ ಬದಲಿಸಿದ ಚಿತ್ರ ಎಂದೇ ಹೇಳಬಹುದು. ಈಗ ಅದೇ ಚಿತ್ರದ ಪ್ರೀಕ್ವೆಲ್ ಭೈರತಿ ರಣಗಲ್ ಬರುತ್ತಿದೆ.
ಸಂದರ್ಶನವೊಂದರಲ್ಲಿ ಶಿವಣ್ಣಇದೂವರೆಗೂ ನಟಿಸಿದ 130 ಸಿನಿಮಾಗಳಲ್ಲಿ ತಾನು ಇಷ್ಟ ಪಡುವ ನಾಲ್ಕು ಪಾತ್ರಗಳ ಹೆಸರನ್ನೂ ಸೂಚಿಸಿದ್ದಾರೆ.”ಒಂದು ಐಕಾನಿಕ್ ಕ್ಯಾರೆಕ್ಟ್ ಕ್ರಿಯೇಟ್ ಆಯ್ತು. ಅಮೆರಿಕದಿಂದ ಒಬ್ಬರು ಮೆಸೇಜ್ ಮಾಡಿದ್ದರು. ಎಲ್ಲಿವರೆಗೂ ಕನ್ನಡ ಚಿತ್ರರಂಗ ಇರುತ್ತೋ ಅಲ್ಲಿವರೆಗೂ ನಾಲ್ಕೈದು ಪಾತ್ರಗಳು ಎಲ್ಲೂ ಹೋಗುವುದಿಲ್ಲ. ಓಂ ಸತ್ಯ ಇರಬಹುದು, ಇನ್ನೊಂದು ಜೋಗಿ ಮಾದೇಶ ಇರಬಹುದು, ಬೈರತಿ ರಣಗಲ್ ಕ್ಯಾರೆಕ್ಟರ್ ಇರಬಹುದು, ಟಗರು ಶಿವ ಈ ನಾಲ್ಕು ಪಾತ್ರಗಳು ನನ್ನ ಫೇವರಿಟ್” ಎಂದಿದ್ದಾರೆ.
ಆದರೆ ಕ್ರೆಡಿಟ್ ಎಲ್ಲವನ್ನೂ ನಿರ್ದೇಶಕರಿಗೇ ಕೊಡುವ ಶಿವಣ್ಣ, ನಿರ್ದೇಶಕರ ಕಲ್ಪನೆಯಲ್ಲಿ ಶಿವಣ್ಣ ನಟಿಸುತ್ತಾರೆ ಎಂದಿದ್ದಾರೆ. ಹಾಗಂತ ಬೇರೆ ಚಿತ್ರಗಳು ಇಷ್ಟ ಇಲ್ಲ ಎಂದಲ್ಲ. ಹಾಗೆ ನೋಡಿದರೆ ಶಿವಣ್ಣ ಅವರ ವೃತ್ತಿ ಜೀವನದಲ್ಲಿ ಮರೆಯಲಾಗದ ಇನ್ನೊಂದಷ್ಟು ಚಿತ್ರಗಳಿವೆ.
ಟಿಎಸ್ ನಾಗಾಭರಣ ಅವರ ಜನುಮದ ಜೋಡಿ, ಶಿವರಾಮ ಕಾರಂತರ ಕಾದಂಬರಿ ಆಧರಿಸಿದ್ದ ಚಿಗುರಿದ ಕನಸು, ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ನಮ್ಮೂರ ಮಂದಾರ ಹೂವೆ, ಭಕ್ತಿಪ್ರಧಾನ ಚಿತ್ರ ಶಿವ ಮೆಚ್ಚಿದ ಕಣ್ಣಪ್ಪ, ಕನ್ನಡ ಚಿತ್ರ ರಸಿಕರ ಪಾಲಿಗೆ ಶಿವರಾಜ್ ಕುಮಾರ್ ಅವರನ್ನು ಶಿವಣ್ಣ ಎಂಬ ಅಣ್ಣನನ್ನಾಗಿಸಿದ ತವರಿಗೆ ಬಾ ತಂಗಿ.. ಹೀಗೆ ಹಲವು ಚಿತ್ರಗಳಿವೆ. ಕಾಮಿಡಿಯೇ ಇರಲಿ.. ಸೀರಿಯಸ್ ಪಾತ್ರವೇ ಇರಲಿ.. ಪಾತ್ರದೊಳಕ್ಕೆ ಪರಕಾಯ ಮಾಡುವ ಶಿವಣ್ಣ, ತಮ್ಮ ಅಭಿನಯದ 4 ಪಾತ್ರಗಳ ಹೆಸರನ್ನಷ್ಟೇ ಹೇಳಿದ್ದಾರೆ.



